ಪ್ರತಾಪ ಸಿಂಹ ಬಕೆಟ್‌ ಹಿಡಿಯುವುದು ಯಾವ ಉದ್ದೇಶಕ್ಕೆ : ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ

| Published : Dec 27 2024, 12:49 AM IST / Updated: Dec 27 2024, 04:14 AM IST

ಪ್ರತಾಪ ಸಿಂಹ ಬಕೆಟ್‌ ಹಿಡಿಯುವುದು ಯಾವ ಉದ್ದೇಶಕ್ಕೆ : ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸಿದ್ದರಾಮಯ್ಯ ಅವರ ಮೇಲೆ ಈಗ ಕಳಂಕವಿದೆ. ಇಂತಹ ಸಂದರ್ಭದಲ್ಲಿ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ರಸ್ತೆ ಎಂದು ಹೆಸರಿಡಲು ಮುಂದಾಗಿರುವುದು ಸರಿಯಲ್ಲ. ಸದ್ಯಕ್ಕೆ ನಗರ ಪಾಲಿಕೆ ಸದಸ್ಯರು ಇಲ್ಲ. ಮಹಾನಗರ ಪಾಲಿಕೆ ಕೌನ್ಸಿಲ್ ಸಭೆ ನಿರ್ಣಯ ಕೈಗೊಳ್ಳದೇ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ.  

 ಮೈಸೂರು : ಮಾಜಿ ಸಂಸದ ಪ್ರತಾಪ ಸಿಂಹ ನೀಡಿರುವ ಹೇಳಿಕೆ ಬಕೆಟ್ ಹಿಡಿದಂತೆಯೇ ಇದೆ. ಯಾವ ಉದ್ದೇಶಕ್ಕಾಗಿ ಬಕೆಟ್ ಹಿಡಿಯುತ್ತಿದ್ದಾರೋ, ಯಾರನ್ನು ಓಲೈಕೆ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸರು ನಾಮಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್‌ ಸಿಂಹ ಸಹಮತ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಮೇಲೆ ಈಗ ಕಳಂಕವಿದೆ. ಇಂತಹ ಸಂದರ್ಭದಲ್ಲಿ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ರಸ್ತೆ ಎಂದು ಹೆಸರಿಡಲು ಮುಂದಾಗಿರುವುದು ಸರಿಯಲ್ಲ. ಸದ್ಯಕ್ಕೆ ನಗರ ಪಾಲಿಕೆ ಸದಸ್ಯರು ಇಲ್ಲ. ಮಹಾನಗರ ಪಾಲಿಕೆ ಕೌನ್ಸಿಲ್ ಸಭೆ ನಿರ್ಣಯ ಕೈಗೊಳ್ಳದೇ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವರು ಓಲೈಕೆಗಾಗಿ ಸಿದ್ದರಾಮಯ್ಯ ರಸ್ತೆ ಎಂದು ಹೆಸರಿಡಲು ಮುಂದಾಗಿದ್ದಾರೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದರು.

ಹೆಸರು ನಾಮಕರಣ ಹಾಸ್ಯಾಸ್ಪದ:

ಪ್ರಿನ್ಸೆಸ್‌ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದು ಹಾಸ್ಯಾಸ್ಪದ ಎಂದು ಬಿಜೆಪಿ ವಕ್ತಾರ ಎಂ.ಜಿ.ಮಹೇಶ್‌ ಟೀಕಿಸಿದರು. ಸಿದ್ದರಾಮಯ್ಯ, ಮುಡಾ ಹಗರಣದಲ್ಲಿ ಮೊದಲ ಆರೋಪಿ. ಅವರ ಮೇಲೆ ಲೋಕಾಯುಕ್ತಾದಲ್ಲಿ 116 ಕೇಸ್ ಗಳಿವೆ. ಸಿದ್ದರಾಮಯ್ಯ ಗುರುತರ ಆರೋಪ ಹೊತ್ತಿದ್ದಾರೆ. ನೂರಾರು ವರ್ಷಗಳ ಇತಿಹಾಸ ಇರುವ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ರಸ್ತೆ ಎಂದು ಮರುನಾಮಕರಣ ಮಾಡಲು ಕೆಲವರು ಮುಂದಾಗಿದ್ದಾರೆ. ಇದು ಹಾಸ್ಯಾಸ್ಪದ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ರಿಂಗ್‌ ರಸ್ತೆಗೆ ಕೃಷ್ಣ ಹೆಸರಿಡಲು ಆಗ್ರಹ:

ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಮೈಸೂರಿನ ರಿಂಗ್ ರಸ್ತೆಗೆ ಎಸ್.ಎಂ.ಕೃಷ್ಣ ಹೆಸರಿಡಬೇಕು. ರಿಂಗ್ ರಸ್ತೆ ನಿರ್ಮಾಣಕ್ಕೆ ಎಸ್.ಎಂ ಕೃಷ್ಣ ಅವರ ಕೊಡುಗೆ ಅಪಾರ. ಹಾಗಾಗಿ ಅವರ ಹೆಸರಿಡಬೇಕು ಎಂದು ನಾವು ನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡುತ್ತೇವೆ ಎಂದರು.

ಕೆ.ಆರ್.ಎಸ್ ರಸ್ತೆಗೆ( ಪ್ರಿನ್ಸಸ್ ರಸ್ತೆ) ಸಿಎಂ ಸಿದ್ದರಾಮಯ್ಯ ಹೆಸರಿಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಲ್.ನಾಗೇಂದ್ರ, ಈ ಹಿಂದೆ ಪ್ರಿನ್ಸೆಸ್ ರಸ್ತೆ ಅಂತ ಇತ್ತು. ರಾಜಕುಮಾರಿ ಟಿಬಿ ಕಾಯಿಲೆಯಿಂದ ತೀರಿ ಹೋದ ಕಾರಣ ಯಾರು ಇನ್ನೂ ಈ ಕಾಯಿಲೆಯಿಂದ ಸಾಯಬಾರದು ಎಂದು ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ 100 ಎಕರೆ ಜಾಗದಲ್ಲಿ ಪಿಕೆಟಿಬಿ ಆಸ್ಪತ್ರೆ ಕಟ್ಟಿಸಿದರು. ರಾಜಕುಮಾರಿ ನೆನಪಿಗೆ ಆಸ್ಪತ್ರೆಯಿರುವ ರಸ್ತೆಗೆ ಪ್ರಿನ್ಸೆಸ್ ರಸ್ತೆ ( ರಾಜಕುಮಾರಿ ರಸ್ತೆ) ಎಂದು ನಾಮಕರಣ ಮಾಡಿದರು. ಈಗ ಅದೇ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಅಂತ ಹೆಸರಿಡಲು ಹೊರಟಿದ್ದಾರೆ. ಇಲ್ಲಿನ ಸ್ಥಳೀಯ ಶಾಸಕರೇ ಸಿದ್ದರಾಮಯ್ಯ ಹೆಸರನ್ನು ಸೂಚಿಸಿದ್ದಾರೆ.

ಸಿದ್ದರಾಮಯ್ಯ ಮೈಸೂರಿನವರು 2 ಬಾರಿ ಸಿಎಂ ಆಗಿರುವವರು ಅವರ ಬಗ್ಗೆ ಗೌರವಿದೆ. ಮೈಸೂರಿನಲ್ಲಿ ಸಾಕಷ್ಟು ಬೇರೆ ಬೇರೆ ರಸ್ತೆಗಳಿವೆ, ಬಡಾವಣೆಗಳಿವೆ. ಅಲ್ಲಿಗೆ ಸಿದ್ದರಾಮಯ್ಯ ಹೆಸರು ಇಡಲಿ ನಮ್ಮ ಅಭ್ಯಂತರ ಇಲ್ಲ. ಸಾಮಾನ್ಯವಾಗಿ ಸಾಧನೆ ಮಾಡಿದ ವ್ಯಕ್ತಿಗೆ ಮರಣ ನಂತರ ಹೆಸರು ಇಡ್ತಾರೆ. ಹೆಸರು ಬದಲಾವಣೆ ವಿಚಾರ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ ಅನ್ನಿಸುತ್ತೆ. ಈ ವಿಚಾರ ಗೊತ್ತಾದರೆ ಅವರೇ ಒಪ್ಪಲ್ಲ ಅನ್ನಿಸುತ್ತದೆ. ನಮ್ಮ ಒತ್ತಾಯ ಇಷ್ಟೇ ಆ ರಸ್ತೆಗೆ ಸಿದ್ದರಾಮಯ್ಯ ಹೆಸರು ಬೇಡ ಬೇರೆ ಯಾವುದೇ ರಸ್ತೆಗಾದರೂ ಹೆಸರಿಡಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೇಬಲ್ಮಹೇಶ್, ರಘು, ಮಾಧ್ಯಮ ಸಂಚಾಲಕ ಮಹೇಶ್‌ ರಾಜ್ಅರಸ್‌ ಇದ್ದಾರೆ.