ಇಂದು, ನಾಳೆ ಶಾಸಕರಿಗೆ ಕಾಂಗ್ರೆಸ್‌ನಿಂದ ವಿಪ್‌ ಜಾರಿ

| Published : Jul 25 2024, 01:19 AM IST

ಸಾರಾಂಶ

ರಾಜ್ಯ ಸರ್ಕಾರ ಪ್ರಮುಖ ವಿಧೇಯಕಗಳನ್ನು ಮಂಡಿಸಿ ಒಪ್ಪಿಗೆ ಪಡೆಯಬೇಕಾಗಿರುವ ಹಿನ್ನೆಲೆಯಲ್ಲಿ ಜು. 25 ಮತ್ತು 26ರಂದು ಪರಿಷತ್ತಿನ ಕಾಂಗ್ರೆಸ್‌ ಪಕ್ಷದ ಎಲ್ಲ ಸದಸ್ಯರು ಕಡ್ಡಾಯವಾಗಿ ಹಾಜರಿರುವಂತೆ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌ ವಿಪ್‌ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಳೆಗಾಲದ ಅಧಿವೇಶನ ಮುಗಿಯಲು 2 ದಿನ ಬಾಕಿ ಇರುವಂತೆ ರಾಜ್ಯ ಸರ್ಕಾರ ಪ್ರಮುಖ ವಿಧೇಯಕಗಳನ್ನು ಮಂಡಿಸಿ ಒಪ್ಪಿಗೆ ಪಡೆಯಬೇಕಾಗಿರುವ ಹಿನ್ನೆಲೆಯಲ್ಲಿ ಜು. 25 ಮತ್ತು 26ರಂದು ಪರಿಷತ್ತಿನ ಕಾಂಗ್ರೆಸ್‌ ಪಕ್ಷದ ಎಲ್ಲ ಸದಸ್ಯರು ಕಡ್ಡಾಯವಾಗಿ ಹಾಜರಿರುವಂತೆ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌ ವಿಪ್‌ ನೀಡಿದ್ದಾರೆ.

ಇನ್ನೆರಡು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಸರ್ಕಾರ ಸುಮಾರು 10 ವಿಧೇಯಕಗಳನ್ನು ಮಂಡಿಸಿ ಒಪ್ಪಿಗೆ ಪಡೆಯಬೇಕಾಗಿರುವುದರಿಂದ ಸದಸ್ಯರ ಹಾಜರಾತಿ ಕಡ್ಡಾಯಗೊಳಿಸಿ ವಿಪ್‌ ನೀಡಲಾಗಿದೆ.

ಗುರುವಾರದ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ನೇ ಸಾಲಿನ ‘ ಕರ್ನಾಟಕ ಧನವಿನಿಯೋಗ (ಸಂಖ್ಯೆ-4) ವಿಧೇಯಕ, ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಅವರು ‘ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ (ಎರಡನೇ ತಿದ್ದುಪಡಿ) ವಿಧೇಯಕ ಹಾಗೂ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ‘ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ ಮಂಡಿಸಲಿದ್ದಾರೆ. ಈ ಮೂರು ವಿಧೇಯಕಗಳಿಗೆ ಈಗಾಗಲೇ ಕೆಳಮನೆ ಅಂಗೀಕಾರ ನೀಡಿದೆ. ಇದರ ಜೊತೆಗೆ ಸಿಎಂ ಇನ್ನೂ ಎರಡು ಮಹತ್ವದ ನಿರ್ಣಯ ಮಂಡಿಸಲಿದ್ದಾರೆ.2026ರಲ್ಲಿನ ಅಥವಾ ನಂತರ ನಡೆಸುವ ಹೊಸ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ನಡೆಸಬಾರದು, ಲೋಕಸಭೆ ಹಾಗೂ ರಾಜ್ಯವಿಧಾನಸಭೆಗೆ ನಿಗದಿಪಡಿಸಬೇಕಾದ ಒಟ್ಟು ಸಂಖ್ಯೆಯನ್ನು 1971ರ ಜನಗಣತಿ ಆಧರಿಸಿ ನಿರ್ಧರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಮಂಡಿಸಲಿದ್ದಾರೆ. ಇದರ ಜೊತೆಗೆ ಒಂದು ರಾಷ್ಟ್ರ ಒಂದು ಚುನಾವಣೆ ನೀತಿ ಅನುಷ್ಠಾನಗೊಳಿಸಬಾರದೆಂಬ ನಿರ್ಣಯ ಮಂಡಿಸುವ ಸಾಧ್ಯತೆಗಳಿವೆ.

ಪ್ರತಿಪಕ್ಷದ ಬಲ ಹೆಚ್ಚು:

ಪ್ರಸ್ತುತ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ಬಲ ಹೆಚ್ಚಿದೆ. ಒಟ್ಟು 75 ಸದಸ್ಯರ ಪೈಕಿ ಬಿಜೆಪಿ 29, ಜೆಡಿಎಸ್‌ 8 (ಎನ್‌ಡಿಎ 37), ಕಾಂಗ್ರೆಸ್‌ 35 ಸದಸ್ಯರಿದ್ದಾರೆ. ಜತೆಗೆ ಸಭಾಪತಿ 1, ಸ್ವತಂತ್ರ 1 ಸ್ಥಾನಗಳಿವೆ ಹಾಗೂ ಒಂದು ಸ್ಥಾನ ಖಾಲಿ ಇದೆ.