ಸಾರಾಂಶ
ಕುಮಾರಸ್ವಾಮಿಗಾಗಲಿ ಇನ್ಯಾರಿಗಾಗಲಿ ಕ್ಷೇತ್ರದ ಅಭಿವೃದ್ಧಿ ಮಾಡಬೇಡಿ ಎಂದು ಹೇಳಿದ್ದೇವಾ?. ಅವರಿಗೆ ಮಾಡುವ ಅವಕಾಶ ಇತ್ತು ಮಾಡಲಿಲ್ಲ. ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾಯಿಸಲು ಕ್ಯಾಬಿನೆಟ್‌ನಲ್ಲಿ ಅಂಗೀಕಾರ ಪಡೆಯಲಾಗಿದೆ.
ಚನ್ನಪಟ್ಟಣ : ಕುಮಾರಸ್ವಾಮಿಗಾಗಲಿ ಇನ್ಯಾರಿಗಾಗಲಿ ಕ್ಷೇತ್ರದ ಅಭಿವೃದ್ಧಿ ಮಾಡಬೇಡಿ ಎಂದು ಹೇಳಿದ್ದೇವಾ?. ಅವರಿಗೆ ಮಾಡುವ ಅವಕಾಶ ಇತ್ತು ಮಾಡಲಿಲ್ಲ. ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾಯಿಸಲು ಕ್ಯಾಬಿನೆಟ್‌ನಲ್ಲಿ ಅಂಗೀಕಾರ ಪಡೆಯಲಾಗಿದೆ. ಶೀಘ್ರದಲ್ಲೇ ಹೆಸರು ಬದಲಾವಣೆ ಆಗಲಿದೆ. ಇದು ದೊಡ್ಡ ಪರಿವರ್ತನೆಯ ಸಂದರ್ಭ. ನಮ್ಮ ಕೈ ಬಲಪಡಿಸಿ ನಿಮ್ಮ ಋಣ ತೀರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ತಾಲೂಕಿನ ಬೆಳಕೆರೆ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಚನ್ನಪಟ್ಟಣ ಉಪಚುನಾವಣೆ ಬರುತ್ತದೆ. ಚುನಾವಣೆ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಜನರು ತೀರ್ಮಾನಿಸುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಇಲ್ಲಿ ಶಾಸಕ ಸ್ಥಾನ ಖಾಲಿ ಇದ್ದು, ಕುರ್ಚಿ ಖಾಲಿ ಇರುವ ಕಾರಣ ಕುಳಿತುಕೊಳ್ಳಲು ನಾವು ಬಂದಿದ್ದೇವೆ. ನಾವು ಇಲ್ಲಿ ಯಾರನ್ನೇ ಅಭ್ಯರ್ಥಿ ಮಾಡಿದರೂ ನಾನೇ ಅಭ್ಯರ್ಥಿ ಎಂದು ಭಾವಿಸಿ ಮತ ನೀಡಿ. ಈ ಸರ್ಕಾರ ಬೀಳಿಸಲು ಯಾರಿಂದಲೂ ಆಗುವುದಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಹಾಯ ಮಾಡಿ ಎಂದು ಹೇಳಿದರು.
ನಾವು ಯಾರಿಗಾದರೂ ಮಾತು ಕೊಟ್ಟರೆ ನುಡಿದಂತೆ ನಡೆಯುತ್ತೇವೆ. ಇದಕ್ಕೆ ಇಡೀ ರಾಜ್ಯ ಒಪ್ಪಿ ನಮಗೆ ವಿಧಾನಸಭೆ ಚುನಾವಣೆಯಲ್ಲಿ 136 ಸೀಟ್ ನೀಡಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಿದೆ. ಜನರಿಗೆ ನೀಡಿದ್ದ ಆಶ್ವಾಸನೆಯಂತೆ ಐದು ಗ್ಯಾರಂಟಿಗಳನ್ನು ನೀಡಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗಿದೆ. ಹೆಣ್ಣು ಮನೆಯ ಕಣ್ಣು ಎಂದು ಹೆಣ್ಣುಮಕ್ಕಳ ಖಾತೆಗೆ ಹಣ ನೀಡುತ್ತಿದ್ದೇವೆ. ಕ್ಷೇತ್ರದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿದ್ದು, ಅದರಲ್ಲಿ 22 ಸಾವಿರ ಮಂದಿ ವಿವಿಧ ಸಮಸ್ಯೆ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಸುಮಾರು ೯ ಸಾವಿರ ಮಂದಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಬಡವರಿಗೆ ನಿವೇಶನ ನೀಡಲು ಈಗಾಗಲೇ ಕೆಲವು ಕಡೆ ಜಾಗ ಗುರುತಿಸಲಾಗಿದ್ದು ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಇದರ ಜತೆಗೆ ಇಂದು ಉದ್ಯೋಗ ಮೇಳ ಸಹ ನಡೆಸಲಾಗಿದೆ. ಚನ್ನಪಟ್ಟಣಕ್ಕೆ 150 ಕೋಟಿ ರು. ವಿಶೇಷ ಅನುದಾನ ಮಂಜೂರಾಗಿದ್ದು, ಹೆಚ್ಚು ಕಡಿಮೆ ಕ್ಷೇತ್ರಕ್ಕೆ 500 ಕೋಟಿ ರು. ಅನುದಾನ ಹರಿದುಬರಲಿದೆ ಎಂದು ತಿಳಿಸಿದರು.
ಒಂದು ಊರಿನಲ್ಲಿ ಶುಭಕಾರ್ಯ ನಡೆಸಲು ಸಮುದಾಯದ ಭವನಗಳು ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಇಲ್ಲಿ ಸಮುದಾಯ ನಿರ್ಮಾಣಕ್ಕೆ ಮುಂದಾಗಿದ್ದೇವೆ. ನಮ್ಮ ನಾಲ್ಕು ಜನ ಎಂಎಲ್‌ಸಿಗಳು 15 ಲಕ್ಷ ರು. ಅನುದಾನ ಒದಗಿಸಲಿದ್ದಾರೆ ಎಂದರು.