ಸಾರಾಂಶ
ಮೈಸೂರಿನ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಷ್ಟೇ ವೇದಿಕೆಯಿಂದ ನಿರ್ಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸಲೂ ಹಿಂಜರಿದಿದ್ದು ಇದೀಗ ತೀವ್ರ ಚರ್ಚೆ ಹುಟ್ಟುಹಾಕಿದೆ
ಬೆಂಗಳೂರು : ಮೈಸೂರಿನ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಷ್ಟೇ ವೇದಿಕೆಯಿಂದ ನಿರ್ಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸಲೂ ಹಿಂಜರಿದಿದ್ದು ಇದೀಗ ತೀವ್ರ ಚರ್ಚೆ ಹುಟ್ಟುಹಾಕಿದ್ದು, ಇಬ್ಬರ ನಡುವೆ ಬಿರುಕು ಇದೆ ಎಂಬುದನ್ನು ಮತ್ತೊಮ್ಮೆ ಪುಷ್ಟೀಕರಿಸಿದೆ ಎನ್ನಲಾಗುತ್ತಿದೆ.
ಎರಡು ವಾರಗಳ ಹಿಂದೆ ದೆಹಲಿಯಲ್ಲಿ ಕುಳಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ಸಿದ್ದರಾಮಯ್ಯ, ‘ಐದು ವರ್ಷ ನಾನೇ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕರ ಬೆಂಬಲವಿಲ್ಲ’ ಎಂಬಂತಹ ದೃಢ ಹೇಳಿಕೆ ನೀಡಿದ್ದರು.
ಇದೀಗ ಸರ್ಕಾರ ಸಾಧನಾ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸಲೂ ನಿರಾಕರಿಸಿರುವುದು ಚರ್ಚೆ ಹುಟ್ಟು ಹಾಕಿದೆ. ಈ ಮೂಲಕ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ತನಗೆ ಪರ್ಯಾಯವಲ್ಲ ಎಂಬ ಸಂದೇಶ ರವಾನಿಸಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಹುಟ್ಟಿಕೊಂಡಿವೆ.
ರಾಜ್ಯ ಸರ್ಕಾರದ ಎರಡು ವರ್ಷ ಪೂರೈಸಿದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರ ಬಣವು ಸರ್ಕಾರ 2.5 ವರ್ಷ ಪೂರೈಸಿದ ಬಳಿಕ ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂಬಂತಹ ಚರ್ಚೆ ಹುಟ್ಟುಹಾಕಿತ್ತು. ಶಾಸಕರು, ಸ್ವಾಮೀಜಿಗಳು, ಧಾರ್ಮಿಕ ಸಂಸ್ಥೆಗಳ ಕಾರ್ಯದರ್ಶಿಗಳು ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೇಳಿಕೆ ನೀಡತೊಡಗಿದ್ದರು.
ಇದರ ಬೆನ್ನಲ್ಲೇ ದೆಹಲಿಯಲ್ಲಿ, ಅಧಿಕಾರ ಹಂಚಿಕೆ ಒಪ್ಪಂದವೇ ಆಗಿಲ್ಲ ಎಂದಿದ್ದ ಸಿದ್ದರಾಮಯ್ಯ ಅವರು, ಶನಿವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಎದುರೇ ಡಿ.ಕೆ.ಶಿವಕುಮಾರ್ ಹೆಸರು ಹೇಳಲು ನಿರಾಕರಿಸುವ ಮೂಲಕ ಪರೋಕ್ಷ ಸಂದೇಶ ನೀಡಿದರು ಎಂದು ಹೇಳಲಾಗುತ್ತಿದೆ.
ಡಿಕೆಶಿಗೆ ಮಾಡಿದ ಅವಮಾನ-ಬಿಜೆಪಿ:
ಇದು ಡಿ.ಕೆ.ಶಿವಕುಮಾರ್ ಅವರಿಗೆ ಮಾಡಿದ ಅವಮಾನ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಹೇಳಲು ನಿರಾಕರಿಸುವ ಮೂಲಕ ರಾಜ್ಯದಲ್ಲಿ ನಾನೇ ಕಾಂಗ್ರೆಸ್ ಶಕ್ತಿ ಕೇಂದ್ರ ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಹೇಳಿದ್ದಾರೆ. ಇದು ನನ್ನ ನೇತೃತ್ವದ ಸರ್ಕಾರ, ನಾನೇ ಸರ್ಕಾರದ ಪೂರ್ಣಾವಧಿ ಪೂರೈಸುತ್ತೇನೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ವಾಸ್ತವದಲ್ಲಿ ಆಗಿದ್ದೇನು?:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆ ಮೇಲಿದ್ದವರನ್ನು ಉಲ್ಲೇಖಿಸಿ ಸ್ವಾಗತ ಕೋರುತ್ತಿದ್ದರೆ ವೇದಿಕೆ ಮೇಲಿದ್ದ ವಕೀಲರೊಬ್ಬರು ಡಿ.ಕೆ.ಶಿವಕುಮಾರ್ ಹೆಸರು ಹೇಳುವಂತೆ ಸಿದ್ದರಾಮಯ್ಯ ಅವರ ಕಿವಿಯಲ್ಲಿ ಪಿಸುಗುಟ್ಟಿದ್ದರು. ಈ ವೇಳೆ ಡಿ.ಕೆ.ಶಿವಕುಮಾರ್ ಭಾಷಣ ಮುಗಿಸಿ ದೆಹಲಿಗೆ ತೆರಳುವ ಸಲುವಾಗಿ ಹೊರಟು ಹೋಗಿದ್ದರು.
ಇದಕ್ಕೆ ಗರಂ ಆದ ಸಿದ್ದರಾಮಯ್ಯ ಅವರು ವೇದಿಕೆಯತ್ತ ತಿರುಗಿ, ‘ಎಲ್ಲಿ ಇಲ್ವಲ್ರೀ.. ಅವರು ಹೊರಟು ಹೋಗಿದ್ದಾರೆ ಕೂತ್ಕೊಳ್ಳಿ. ಯಾವಾಗಲೂ ಇರೋರ ಹೆಸರು ಹೇಳಬೇಕೇ ಹೊರತು ಹೊರಟೋದವರ ಹೆಸರು ಹೇಳೋಕೆ ಆಗಲ್ಲ. ಸ್ವಾಗತ ಕೋರುವುದು ಇಲ್ಲಿರುವವರಿಗೆ ಮನೆಯಲ್ಲಿ ಕೂತಿರೋರಿಗೆಲ್ಲ ಅಲ್ಲ’ ಎಂದು ಹೇಳಿದರು.
ಅಷ್ಟಕ್ಕೆ ನಿಲ್ಲಿಸದೆ ಸಭಿಕರ ಕಡೆಗೆ ತಿರುಗಿ, ‘ಅವರು ಪಾಪ ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳಿ ಎಂದು ಹೇಳ್ತಿದಾರೆ. ಬೇರೆ ಕೆಲಸ ಇದೆ ಎಂದು ಅವರು ಹೊರಟು ಹೋದರು. ಆದ್ದರಿಂದ ಅವರ ಹೆಸರು ಪ್ರಸ್ತಾಪ ಮಾಡಲಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದರು.
ತಿರುಗೇಟಿಗೆ ಹವಣಿಸುತ್ತಿದೆಯೇ ಡಿಕೆಶಿ ಬಣ?:
ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಾಲು-ಸಾಲು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕರ ಬೆಂಬಲವಿಲ್ಲ ಎಂದೆಲ್ಲ ನೀಡುತ್ತಿರುವ ಹೇಳಿಕೆಗಳಿಂದ ಸಹಜವಾಗಿಯೇ ಅಸಮಾಧಾನಗೊಂಡಿದ್ದಾರೆ. ಇದಕ್ಕೆ ಶನಿವಾರದ ಹೇಳಿಕೆ ಜತೆಗೂಡಿದೆ. ಈ ಬೆಳವಣಿಗೆಗಳ ಬಗ್ಗೆ ರಾಜ್ಯಮಟ್ಟದಲ್ಲಿ ತಿರುಗೇಟು ನೀಡುವ ಜತೆಗೆ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ದೆಹಲಿಯ ಹೈಕಮಾಂಡ್‌ಗೂ ದೂರು ನೀಡಲು ಸಜ್ಜಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಹೆಸರು ಪ್ರಸ್ತಾಪಿಸದೆ ಡಿಕೆಗೆ ಅಪಮಾನ ಮಾಡಿಲ್ಲ: ಸಿದ್ದು
ಮೈಸೂರು : ಡಿ.ಕೆ.ಶಿವಕುಮಾರ್‌ಗೆ ಮೈಸೂರು ಸಮಾರಂಭದಲ್ಲಿ ಯಾವ ಅವಮಾನವನ್ನೂ ನಾನು ಮಾಡಿಲ್ಲ. ನನಗೆ ಹೇಳಿ, ಡಿ.ಕೆ. ಶಿವಕುಮಾರ್ ಸಭೆಯಿಂದ ಅರ್ಧಕ್ಕೆ ಎದ್ದು ಹೋದರು. ಹೀಗಾಗಿ, ನನ್ನ ಭಾಷಣದಲ್ಲಿ ಅವರ ಹೆಸರು ಹೇಳಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು ವೇದಿಕೆ ಮೇಲೆ ಇಲ್ಲದವರನ್ನು ಸ್ವಾಗತ ಮಾಡಲು ಆಗುತ್ತಾ? ನನ್ನ ಡಿಕೆಶಿ ನಡುವೆ ಒಡಕು ಮೂಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ತನ್ಮೂಲಕ ರಾಜಕೀಯ ಲಾಭ ಪಡೆಯುವ ಭ್ರಮೆಯಲ್ಲಿದೆ. ಅವರು ಭ್ರಮೆಯಲ್ಲೇ ಇರುತ್ತಾರೆ ಎಂದು ತಿರುಗೇಟು ನೀಡಿದರು.
ಎಲ್ಲದಕ್ಕೂ ಸಿಎಂ ಉತ್ತರ ನೀಡಿದ್ದಾರೆಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. ಅದರ ಬಗ್ಗೆ ನಾನೇನೂ ಮಾತನಾಡುವ ಅಗತ್ಯವಿಲ್ಲ. ಬಿಜೆಪಿಯವರಿಗೆ ಯಾವಾಗಲೂ ನನ್ನ ಮೇಲೆ ಪ್ರೀತಿ ಜಾಸ್ತಿ. ನಾನು ಹೆಚ್ಚು ಬಲಿಷ್ಠವಾಗಿರುವುದಕ್ಕೆ ನನ್ನ ಮೇಲೆ ಪ್ರೀತಿ ಜಾಸ್ತಿ.
- ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ