ಸಂವಿಧಾನ ಬದಲಿಸಿದ್ರೆ ರಕ್ತಪಾತವಾಗುತ್ತೆ: ಸಿದ್ದು

| Published : Mar 12 2024, 02:04 AM IST / Updated: Mar 12 2024, 07:46 AM IST

Siddaramaiah

ಸಾರಾಂಶ

ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುವ ಒಳಸಂಚು ರೂಪಿಸಿದ್ದಾರೆ. ಬಿಜೆಪಿಯವರಿಗೆ ದೇಶ ಹಾಗೂ ಬಡವರ ಏಳಿಗೆಗಿಂತ ಸಂವಿಧಾನ ಬದಲಿಸಲು ಬಹುಮತ ಬೇಕಾಗಿದೆ. ಒಂದು ವೇಳೆ ಸಂವಿಧಾನ ಬದಲಾವಣೆ ಮಾಡಿದರೆ ದೇಶದಲ್ಲಿ ರಕ್ತಪಾತ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುವ ಒಳಸಂಚು ರೂಪಿಸಿದ್ದಾರೆ. ಬಿಜೆಪಿಯವರಿಗೆ ದೇಶ ಹಾಗೂ ಬಡವರ ಏಳಿಗೆಗಿಂತ ಸಂವಿಧಾನ ಬದಲಿಸಲು ಬಹುಮತ ಬೇಕಾಗಿದೆ. 

ಒಂದು ವೇಳೆ ಸಂವಿಧಾನ ಬದಲಾವಣೆ ಮಾಡಿದರೆ ದೇಶದಲ್ಲಿ ರಕ್ತಪಾತ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ಬದಲಾವಣೆ ಮಾಡುವುದು ಬಿಜೆಪಿಯ ಹಿಡನ್‌ ಅಜೆಂಡಾ. ಹೀಗಾಗಿ ನರೇಂದ್ರ ಮೋದಿ ಅವರು ತಮ್ಮ ಯೋಜನೆಯನ್ನು ಅನಂತಕುಮಾರ್‌ ಹೆಗಡೆ ಮೂಲಕ ಹೇಳಿಸುತ್ತಿದ್ದಾರೆ ಎಂದೂ ಅವರು ದೂರಿದರು.

ಸಂವಿಧಾನ ಬದಲಿಸಲು 400ಕ್ಕೂ ಹೆಚ್ಚು ಸ್ಥಾನ ನೀಡುವಂತೆ ಸಂಸದ ಅನಂತಕುಮಾರ್‌ ಹೆಗಡೆ ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿ ಈ ಪ್ರತಿಕ್ರಿಯೆ ನೀಡಿದರು.

ಅನಂತ್‌ ವಜಾಗೊಳಿಸಿ, ಇಲ್ಲ ಸಮ್ಮತಿ ಇದೆ ಅಂತ ಹೇಳಿ

ಸಂವಿಧಾನ ಬದಲಾವಣೆ ವಿಚಾರದಲ್ಲಿ ಹೆಗಡೆ ಅಭಿಪ್ರಾಯಕ್ಕಿಂತ ಭಿನ್ನ ಆಲೋಚನೆ ಇದ್ದರೆ ಅದನ್ನು ಪ್ರಧಾನ ಮಂತ್ರಿ ಹಾಗೂ ಬಿಜೆಪಿ ಸ್ಪಷ್ಟಪಡಿಸಬೇಕು. 

ಹೀಗಾಗಿ ನರೇಂದ್ರ ಮೋದಿಯವರೂ ಸೇರಿದಂತೆ ಬಿಜೆಪಿ ನಾಯಕರ ಮುಂದೆ ಈಗ ಇರುವುದು ಎರಡೇ ಆಯ್ಕೆ. ಒಂದೋ ಹೆಗಡೆಯನ್ನು ತಕ್ಷಣ ಪಕ್ಷದಿಂದ ವಜಾಗೊಳಿಸಬೇಕು. 

ಇಲ್ಲವೇ ಅವರ ಹೇಳಿಕೆಗೆ ತಮ್ಮ ಸಹಮತ ಇದೆ ಎಂದು ಘೋಷಿಸಬೇಕು. ಇದೇ ವಿಷಯದ ಮೇಲೆ ಈ ಬಾರಿಯ ಲೋಕಸಭಾ ಚುನಾವಣೆ ನಡೆಯಲಿ ಎಂದು ಸವಾಲು ಎಸೆದಿದ್ದಾರೆ.

ಸಂವಿಧಾನದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ತರಬೇಕಾದರೆ ಸರ್ಕಾರಕ್ಕೆ ಮೂರನೇ ಎರಡರಷ್ಟು ಬಹುಮತವಿರಬೇಕು. ಹೀಗಾಗಿ ಸಂವಿಧಾನ ಬದಲಾಯಿಸಲು ಬಿಜೆಪಿ ಬಹುಮತ ಕೇಳುತ್ತಿದೆ. 

ಮನುಸ್ಮೃತಿಗೆ ಅನುಗುಣವಾಗಿ ಸಂವಿಧಾನವಿರಬೇಕೆಂಬುದು ಬಿಜೆಪಿಯ ಒಳಸಂಚು. ಆದ್ದರಿಂದ ಇಡೀ ದೇಶದ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು ಬಿಜೆಪಿಯ ಈ ಯೋಚನೆಯನ್ನು ವಿರೋಧಿಸಬೇಕು ಎಂದು ಕರೆ ನೀಡಿದರು.

ವೈಯಕ್ತಿಕ ಹೇಳಿಕೆ ಎಂಬುದು ನಾಚಿಕೆಗೇಡು: ಅನಂತಕುಮಾರ್ ಅವರ ಹೇಳಿಕೆ ವೈಯಕ್ತಿಕ ಎಂಬ ಬಿಜೆಪಿ ಸ್ಪಷ್ಟನೆಗೆ, ‘ಮಂತ್ರಿಮಂಡಲದಲ್ಲಿದ್ದಂತಹವರು ಹಾಗೂ ಹಾಲಿ ಸಂಸದರಾಗಿರುವ ಹಿರಿಯ ನಾಯಕರಾದ ಅನಂತಕುಮಾರ್ ಹೇಳಿಕೆ ವೈಯಕ್ತಿಕವಾಗುತ್ತದೆಯೇ? ಸಂವಿಧಾನದ ವಿರುದ್ಧದ ಹೇಳಿಕೆ ವೈಯಕ್ತಿಕ ಎಂದಿರುವ ಬಿಜೆಪಿ ನಾಯಕರ ನಡೆ ನಾಚಿಕೆಗೇಡು. 

ಈ ಹೇಳಿಕೆ ಹೆಗಡೆ ತಮ್ಮ ಅಡುಗೆ ಕೋಣೆಯಲ್ಲಿ ನೀಡಿಲ್ಲ. ಸಾರ್ವಜನಿಕ ಸಮಾರಂಭದಲ್ಲಿ ನೀಡಿದ್ದಾರೆ. ಈ ವ್ಯತ್ಯಾಸ ತಿಳಿಯದಷ್ಟು ಬಿಜೆಪಿ ನಾಯಕರು ಮೂರ್ಖರಲ್ಲ, ಇವರಿಗೆ ಆರ್‌ಎಸ್‌ಎಸ್‌ ಬೆಂಬಲದ ಅನಂತಕುಮಾರ ಹೆಗಡೆ ವಿರುದ್ಧ ಕ್ರಮಕೈಗೊಳ್ಳುವ ದಮ್ಮು ಹಾಗೂ ತಾಕತ್ತು ಇಲ್ಲ ಅಷ್ಟೆ ಎಂದು ಕಿಡಿಕಾರಿದರು.

ಹೆಗಡೆ ಮೋದಿಯನ್ನೇ ಲೆಕ್ಕಕ್ಕಿಟ್ಟಿಲ್ಲ: ಅನಂತಕುಮಾರ ಹೆಗಡೆ ನಿರಂತರವಾಗಿ ಸಂವಿಧಾನ ಹಾಗೂ ಮೀಸಲಾತಿ ವಿರುದ್ಧ ಹೇಳಿಕೆ ನೀಡಿದ್ದಾರೆ. ದಲಿತರನ್ನು ನಾಯಿಗಳು ಎಂದು ದೂಷಿಸಿದ್ದರು. ಆಗಲೂ ಬಿಜೆಪಿ ಹೆಗಡೆ ವಿರುದ್ಧ ಕ್ರಮ ಕೈಗೊಂಡಿಲ್ಲ. 

ಯಾಕೆಂದರೆ ಹೆಗಡೆ ಮಾತುಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಮನದ ಮಾತುಗಳೂ ಆಗಿದ್ದವು. ಅವರಿಗೆ ಬಿಜೆಪಿಯ ನಿಜವಾದ ಹೈಕಮಾಂಡ್‌ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪೂರ್ಣ ಬೆಂಬಲ ಇದೆ. ಹೆಗಡೆ ಒಂದು ಮುಖವಾಡ ಅಷ್ಟೆ, ನಿಜವಾದ ಮುಖ ಆರ್‌ಎಸ್‌ಎಸ್‌ ಎಂದು ಟೀಕಾಪ್ರಹಾರ ನಡೆಸಿದರು.

ನಯಾಪೈಸೆ ಕೆಲಸ ಮಾಡದ ಅನಂತ್ ಕುಮಾರ್ ಹೆಗಡೆ ವಿರುದ್ಧ ಉತ್ತರ ಕನ್ನಡದಾದ್ಯಂತ ಜನರಲ್ಲಿ ಆಕ್ರೋಶವಿದೆ. ಇದಕ್ಕಾಗಿ ಹಿಂದುತ್ವ ಅಪಾಯದಲ್ಲಿದೆ ಎಂಬ ಹುಸಿಭೀತಿಯನ್ನು ಜನರಲ್ಲಿ ಹುಟ್ಟಿಸಿ ಕೋಮುಭಾವನೆಯನ್ನು ಕೆರಳಿಸಿ ಮತಗಳ ಧ್ರುವೀಕರಣಗೊಳಿಸಲು ಯತ್ನಿಸುತ್ತಿದ್ದಾರೆ. 

ಇವರಿಗೆ ಆರ್‌ಎಸ್‌ಎಸ್‌ ಬೆಂಬಲ ಇರುವುದರಿಂದ ಬಿಜೆಪಿಯನ್ನೇ ಯಾಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಅವರು ಲೆಕ್ಕಕ್ಕಿಟ್ಟಿಲ್ಲ. ಇಂತಹ ಮನುಷ್ಯ ವಿರೋಧಿಗೆ ಸರಿಯಾದ ಪಾಠ ಕಲಿಸಬೇಕಿದೆ ಎಂದು ಹೇಳಿದರು.