ಸಾರಾಂಶ
ಬಿಜೆಪಿಯ ಎರಡನೇ ಪಟ್ಟಿ ಬುಧವಾರ ಅಥವಾ ಗುರುವಾರ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿರುವ ನಾಲ್ವರನ್ನು ಹೊರತುಪಡಿಸಿ ಇತರ ಹಾಲಿ ಸಂಸದರ ಪೈಕಿ ಅರ್ಧಕ್ಕಿಂತ ಹೆಚ್ಚು ಮತ್ತೊಮ್ಮೆ ಟಿಕೆಟ್ ಸಿಗುತ್ತಾ ಎಂಬುದನ್ನು ಕಾದು ನೋಡಬೇಕು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಕಷ್ಟು ಕುತೂಹಲ ಮೂಡಿಸಿರುವ ರಾಜ್ಯದ ಅಭ್ಯರ್ಥಿಗಳನ್ನು ಒಳಗೊಳ್ಳಲಿರುವ ಬಿಜೆಪಿಯ ಎರಡನೇ ಪಟ್ಟಿ ಬುಧವಾರ ಅಥವಾ ಗುರುವಾರ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿರುವ ನಾಲ್ವರನ್ನು ಹೊರತುಪಡಿಸಿ ಇತರ ಹಾಲಿ ಸಂಸದರ ಪೈಕಿ ಅರ್ಧಕ್ಕಿಂತ ಹೆಚ್ಚು ಅಂದರೆ, ಸುಮಾರು 12 ಮಂದಿಗೆ ಮತ್ತೊಮ್ಮೆ ಟಿಕೆಟ್ ಸಿಗುತ್ತಾ ಎಂಬುದನ್ನು ಕಾದು ನೋಡಬೇಕು.
ರಾಜ್ಯದ ಒಟ್ಟು 28 ಹಾಲಿ ಸಂಸದರ ಪೈಕಿ 25 ಮಂದಿ ಬಿಜೆಪಿಯ ಸಂಸದರಿದ್ದಾರೆ. ಇವರಲ್ಲಿ ಚಾಮರಾಜನಗರ ಕ್ಷೇತ್ರದ ವಿ.ಶ್ರೀನಿವಾಸ ಪ್ರಸಾದ್, ಚಿಕ್ಕಬಳ್ಳಾಪುರ ಕ್ಷೇತ್ರದ ಬಿ.ಎನ್.ಬಚ್ಚೇಗೌಡ ಹಾಗೂ ತುಮಕೂರು ಕ್ಷೇತ್ರದ ಜಿ.ಎಸ್.ಬಸವರಾಜು ಅವರು ವಯೋ ಕಾರಣದಿಂದ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುುವುದಾಗಿ ಈಗಾಗಲೇ ಘೋಷಿಸಿದ್ದಾರೆ.
ಇನ್ನು ಹಾವೇರಿಯ ಶಿವಕುಮಾರ್ ಉದಾಸಿ ಅವರಿಗೆ ವಯಸ್ಸು ಇದ್ದರೂ ಕೂಡ ವೈಯಕ್ತಿಕ ಕಾರಣದಿಂದಾಗಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಿಕೆಟ್ ಕುತೂಹಲ: ಇನ್ನುಳಿಯುವ 21 ಸಂಸದರ ಪೈಕಿ 12 ಮಂದಿಗೆ ಟಿಕೆಟ್ ಸಿಗುತ್ತಾ ಎಂಬುದರ ಬಗ್ಗೆ ಚರ್ಚೆ ಬಿಜೆಪಿ ಪಾಳೆಯದಲ್ಲಿ ಗಂಭೀರವಾಗಿ ಕೇಳಿಬರುತ್ತಿದೆ.
ಹೀಗೆ ಚರ್ಚೆಗೆ ಒಳಪಟ್ಟವರೆಂದರೆ ಮೈಸೂರಿನ ಪ್ರತಾಪ್ ಸಿಂಹ, ಬೆಂಗಳೂರು ಉತ್ತರದ ಡಿ.ವಿ.ಸದಾನಂದಗೌಡ, ಕೋಲಾರದ ಮುನಿಸ್ವಾಮಿ, ದಕ್ಷಿಣ ಕನ್ನಡದ ನಳಿನ್‌ಕುಮಾರ್ ಕಟೀಲ್, ಕೇಂದ್ರ ಸಚಿವರಾಗಿರುವ ಚಿತ್ರದುರ್ಗದ ಎ.ನಾರಾಯಣಸ್ವಾಮಿ, ದಾವಣಗೆರೆಯ ಜಿ.ಎಂ.ಸಿದ್ದೇಶ್ವರ್, ಉತ್ತರ ಕನ್ನಡದ ಅನಂತಕುಮಾರ್ ಹೆಗಡೆ, ಬೆಳಗಾವಿಯ ಮಂಗಳಾ ಅಂಗಡಿ, ವಿಜಯಪುರದ ರಮೇಶ್ ಜಿಗಜಿಣಗಿ, ಕೇಂದ್ರ ಸಚಿವರಾಗಿರುವ ಬೀದರ್‌ನ ಭಗವಂತ ಖೂಬಾ, ಬಳ್ಳಾರಿಯ ದೇವೇಂದ್ರಪ್ಪ ಹಾಗೂ ಕೊಪ್ಪಳದ ಕರಡಿ ಸಂಗಣ್ಣ.
ಹೊಸ ಪ್ರಯೋಗ: ಬಿಜೆಪಿ ವರಿಷ್ಠರು ಸಂಸದರ ಸಾಧನೆಯನ್ನು ಪರಿಗಣಿಸುವುದರ ಜತೆಗೆ ಕೆಲವು ಕ್ಷೇತ್ರಗಳಲ್ಲಿ ಹೊಸ ಪ್ರಯೋಗದ ಮೂಲಕ ಹೊಸಬರಿಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಸಿದೆ.
ಆದರೆ, ಕಳೆದ ವಿಧಾನಸಭಾ ಚುನಾವಣೆಯ ಅನುಭವದ ಆಧಾರದ ಮೇಲೆ ಈ ಬಾರಿ ಹೊಸ ಪ್ರಯೋಗ ಮಾಡುವುಡು ಬೇಡ ಎಂಬ ಅಭಿಪ್ರಾಯವನ್ನು ಪಕ್ಷದ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ವರಿಷ್ಠರಿಗೆ ತಿಳಿಸಿದ್ದಾರೆ.
ಆದರೂ, ಹಾಲಿ ಸಂಸದರ ಪೈಕಿ ಬಹುತೇಕರಿಗೆ ಟಿಕೆಟ್ ಸಿಗುತ್ತಾ ಎಂಬುದರ ಬಗ್ಗೆ ಖಾತರಿಯಿಲ್ಲ.ರಾಜ್ಯ ಬಿಜೆಪಿಯ ನಾಯಕರನ್ನು ಒಳಗೊಂಡಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ದೆಹಲಿಯಲ್ಲಿ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆದಿದ್ದರೂ ಕೆಲವು ಕ್ಷೇತ್ರಗಳ ಬಗ್ಗೆ ಒಮ್ಮತಾಭಿಪ್ರಾಯಕ್ಕೆ ಬರಲು ಸಾಧ್ಯವಾಗಲಿಲ್ಲ.
ಹೀಗಾಗಿಯೇ ಈ ಪಟ್ಟಿಯಲ್ಲಿ ಸುಮಾರು 18ರಿಂದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿ ಇನ್ನುಳಿಯುವ ಕ್ಷೇತ್ರಗಳಿಗೆ ಮುಂದಿನ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಗೆ ತೆರಳಿದ್ದ ರಾಜ್ಯ ನಾಯಕರ ಪೈಕಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಮಂಗಳವಾರ ಬೆಂಗಳೂರಿಗೆ ವಾಪಸಾದರು.
ಆದರೆ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದೆಹಲಿಯಲ್ಲೇ ವಾಸ್ತವ್ಯ ಮುಂದುವರೆಸಿ ಕೊನೆ ಕ್ಷಣದ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.
ಯಾರ್‍ಯಾರು ನಿವೃತ್ತಿ?
ಶ್ರೀನಿವಾಸಪ್ರಸಾದ್ - ಚಾಮರಾಜನಗರ
ಬಿ.ಎನ್. ಬಚ್ಚೇಗೌಡ - ಚಿಕ್ಕಬಳ್ಳಾಪುರ
ಜಿ.ಎಸ್.ಬಸವರಾಜು - ತುಮಕೂರು
ಶಿವಕುಮಾರ್ ಉದಾಸಿ - ಹಾವೇರಿ
ಯಾರ್‍ಯಾರ ಸ್ಪರ್ಧೆ ಬಗ್ಗೆ ಚರ್ಚೆ: 1. ಡಿ.ವಿ.ಸದಾನಂದಗೌಡ - ಬೆಂಗಳೂರು ಉತ್ತರ 2. ರಮೇಶ್ ಜಿಗಜಿಣಗಿ - ವಿಜಯಪುರ 3. ಅನಂತಕುಮಾರ್ ಹೆಗಡೆ - ಉತ್ತರ ಕನ್ನಡ 4. ಪ್ರತಾಪ್ ಸಿಂಹ - ಮೈಸೂರು 5. ನಳಿನ್ ಕುಮಾರ್ ಕಟೀಲು - ದಕ್ಷಿಣ ಕನ್ನಡ 6. ಜಿ.ಎಂ.ಸಿದ್ದೇಶ್ವರ್ - ದಾವಣಗೆರೆ7. ನಾರಾಯಣಸ್ವಾಮಿ - ಚಿತ್ರದುರ್ಗ 8. ಭಗವಂತ ಖೂಬಾ - ಬೀದರ್ 9. ದೇವೇಂದ್ರಪ್ಪ - ಬಳ್ಳಾರಿ 10. ಕರಡಿ ಸಂಗಣ್ಣ - ಕೊಪ್ಪಳ 11. ಮಂಗಳಾ ಅಂಗಡಿ - ಬೆಳಗಾವಿ 12. ಮುನಿಸ್ವಾಮಿ - ಕೋಲಾರ