ಜೆಡಿಎಸ್ ಪಕ್ಷದಿಂದ ರಾಜಕೀಯ ಬೆಳವಣಿಗೆ ಸಾಧಿಸಿ ಶಾಸಕರು, ಸಚಿವರಾಗಿ ಇದೀಗ ಅದೇ ಪಕ್ಷವನ್ನು ಕಿತ್ತೆಸೆಯುವ ಮಾತನಾಡುತ್ತಿರುವ ಚಲುವರಾಯಸ್ವಾಮಿ ಕೃತಜ್ಞತೆ ಇಲ್ಲದ ಮನುಷ್ಯ. ನಾನೂ ಕಾಂಗ್ರೆಸ್ ಪಕ್ಷದಲ್ಲಿದ್ದೆ. ನಾನು ಪಕ್ಷದ ನಡವಳಿಕೆ ಟೀಕಿಸಿದ್ದೇನೆ. ಆದರೆ, ಪಕ್ಷವನ್ನು ಎಂದಿಗೂ ನಾನು ಟೀಕಿಸಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಿಂದ ಜೆಡಿಎಸ್ ಪಕ್ಷವನ್ನು ಬುಡಸಹಿತ ಕಿತ್ತೊಗೆಯುವ ತಾಕತ್ತು ನಿಮಗಿದೆಯಾ. ಈಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದು ಚುನಾವಣೆ ಎದುರಿಸಿ. ಯಾರ ಬುಡವನ್ನು ಜನರು ಕಿತ್ತೆಸೆಯುತ್ತಾರೆಂದು ಗೊತ್ತಾಗುತ್ತದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆಗೆ ಮಾಜಿ ಶಾಸಕ ಕೆ.ಸುರೇಶ್‌ಗೌಡ ತಿರುಗೇಟು ನೀಡಿದರು.

ಜೆಡಿಎಸ್ ಪಕ್ಷದಿಂದ ರಾಜಕೀಯ ಬೆಳವಣಿಗೆ ಸಾಧಿಸಿ ಶಾಸಕರು, ಸಚಿವರಾಗಿ ಇದೀಗ ಅದೇ ಪಕ್ಷವನ್ನು ಕಿತ್ತೆಸೆಯುವ ಮಾತನಾಡುತ್ತಿರುವ ಚಲುವರಾಯಸ್ವಾಮಿ ಕೃತಜ್ಞತೆ ಇಲ್ಲದ ಮನುಷ್ಯ. ನಾನೂ ಕಾಂಗ್ರೆಸ್ ಪಕ್ಷದಲ್ಲಿದ್ದೆ. ನಾನು ಪಕ್ಷದ ನಡವಳಿಕೆ ಟೀಕಿಸಿದ್ದೇನೆ. ಆದರೆ, ಪಕ್ಷವನ್ನು ಎಂದಿಗೂ ನಾನು ಟೀಕಿಸಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜೆಡಿಎಸ್ ಬುಡ ಕಿತ್ತೆಸೆಯುವ ಮೊದಲು ಮುಂದಿನ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಬುಡ ಇರುವುದೇ ಎಂಬುದನ್ನು ನೋಡಿಕೊಳ್ಳಿ. ಇಡೀ ರಾಷ್ಟ್ರದಲ್ಲಿ ಎರಡು-ಮೂರು ರಾಜ್ಯಗಳಲ್ಲಷ್ಟೇ ಕಾಂಗ್ರೆಸ್ ಅಧಿಕಾರದಲ್ಲಿದೆ. ಅದನ್ನೂ ಕಳೆದುಕೊಳ್ಳುವ ಕಾಲವೇನೂ ದೂರವಿಲ್ಲ. ೨೦೨೮ರ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರ ಇರಬೇಕೋ, ಕಾಂಗ್ರೆಸ್ ಸರ್ಕಾರ ಇರಬೇಕೋ ಎನ್ನುವುದನ್ನು ಜನರು ತೀರ್ಮಾನ ಮಾಡುತ್ತಾರೆ. ಹಣಕ್ಕಾಗಿ ಅಧಿಕಾರವನ್ನೇ ಮಾರಿಕೊಂಡರು. ಜೆಡಿಎಸ್‌ನಲ್ಲಿದ್ದಾಗ ಕಾಂಗ್ರೆಸ್ ವಿರುದ್ಧ ಕೆಂಡ ಕಾರುತ್ತಿದ್ದವರು ಈಗ ಆ ಪಕ್ಷದ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಈ ಢೋಂಗಿತನವನ್ನು ಬಿಟ್ಟು ರಾಜಕಾರಣ ಮಾಡಲಿ ಎಂದು ಕುಟುಕಿದರು.