ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ (ಪ.ಜಾ.ಮೀಸಲು) ಕಾಂಗ್ರೆಸ್‌ನ ಮುಂಚೂಣಿ ನಾಯಕ, ಅಜಾತಶತ್ರು ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸೋಲಿಸಿ ಬಿಜೆಪಿ ಕಳೆದ ಚುನಾವಣೆಯಲ್ಲಿ ಕಮಲ ಅರಳುವಂತೆ ಮಾಡಿತ್ತು.
ಈ ಕ್ಷೇತ್ರದಲ್ಲಿ ಈವರೆಗೆ ನಡೆದ 19 ಚುನಾವಣೆಗಳ ಪೈಕಿ 2 ಬಾರಿ ಬಿಜೆಪಿ, 1 ಬಾರಿ ಜನತಾ ಪಕ್ಷ ಗೆದ್ದಿದ್ದು ಬಿಟ್ಟರೆ ಉಳಿದಂತೆ 16 ಬಾರಿ ಕಾಂಗ್ರೆಸ್‌ಗೆ ವಿಜಯಲಕ್ಷ್ಮೀ ಒಲಿದಿದೆ.
2019ರಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಡಿ ಬರುವ 8 ಅಸೆಂಬ್ಲಿ ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್, 3ರಲ್ಲಿ ಬಿಜೆಪಿ, 1ರಲ್ಲಿ ಜೆಡಿಎಸ್ ಶಾಸಕರಿದ್ದರು. ಈಗ ಜಿಲ್ಲೆಯ ರಾಜಕೀಯ ನಕಾಶೆ ಅದಲು-ಬದಲಾಗಿದೆ.
ಕಲಬುರಗಿ ಗ್ರಾಮೀಣದಲ್ಲಿ ಬಿಜೆಪಿ, ಗುರುಮಠಕಲ್‌ನಲ್ಲಿ ಜೆಡಿಎಸ್ ಬಿಟ್ಟರೆ, ಉಳಿದಂತೆ ಕಲಬುರಗಿ ಉತ್ತರ, ದಕ್ಷಿಣ, ಅಫಜಲ್ಪುರ, ಚಿತ್ತಾಪುರ, ಸೇಡಂ, ಜೇವರ್ಗಿ ಸೇರಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
ಈ ಬಾರಿ ಹೇಗಾದರೂ ಮಾಡಿ ಮತ್ತೆ ಕಲಬುರಗಿಯನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದ್ದರೆ, ತುಂಬಾ ಪರಿಶ್ರಮದಿಂದ ಅರಳಿದ ಕಮಲವನ್ನು ಯಾವ ಕಾರಣಕ್ಕೂ ಮುದುಡದಂತೆ ಕಾಪಾಡಿಕೊಳ್ಳಲು ಬಿಜೆಪಿ ತಂತ್ರಗಾರಿಕೆಯಲ್ಲಿ ನಿರತವಾಗಿದೆ. ಬಿಜೆಪಿಗೆ ಈ ಬಾರಿಯೂ ಹಾಲಿ ಸಂಸದ ಡಾ.ಉಮೇಶ ಜಾಧವ್ ಫೇವರಿಟ್. ಅವರಿಗೆ ಟಿಕೆಟ್ ಬಹುತೇಕ ನಿಶ್ಚಯವಾದಂತಾಗಿದೆ.
ಈ ಮಧ್ಯೆ, ಕಲಬುರಗಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಅವರು ಅವಕಾಶ ಕೊಟ್ಟಲ್ಲಿ ತಾವೂ ಸ್ಪರ್ಧೆಗೆ ಸಿದ್ಧ ಎಂದಿದ್ದಾರೆ. ಎಸ್ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಕೂಡಾ ಬಿಜೆಪಿ ಟಿಕೆಟ್ ಆಕಾಂಕ್ಷಿ.
ಆದರೆ, ಕಾಂಗ್ರೆಸ್‌ನಿಂದ ಅಭ್ಯರ್ಥಿ ಯಾರು ಎನ್ನುವುದೇ ಕುತೂಹಲದ ವಿಷಯ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಜೊತೆಗೆ, ಕಲಬುರಗಿಯು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ತವರೂರು. ಸಹಜವಾಗಿಯೇ ಕಾಂಗ್ರೆಸ್ ಪಾಲಿನ ಪ್ರತಿಷ್ಠೆಯ ಕಣವಿದು. ಹೀಗಾಗಿ, ಅಳೆದು, ತೂಗಿ ಇಲ್ಲಿ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿದೆ.
1972ರಿಂದ ಸತತ 9 ಬಾರಿ ಅಸೆಂಬ್ಲಿ (ಗುರುಮಠಕಲ್, ಚಿತ್ತಾಪುರ), 2 ಬಾರಿ ಲೋಕಸಭೆ (ಕಲಬುರಗಿ) ಕಣಕ್ಕಿಳಿದು ಗೆದ್ದು, ಸೋಲರಿಯದ ಸರದಾರರೆಂದೇ ಹೆಸರಾಗಿದ್ದ ಡಾ.ಖರ್ಗೆ, 2019ರ ಲೋಕಸಮರದಲ್ಲಿ ಮೊದಲ ಬಾರಿಗೆ ಸೋಲನ್ನು ಅನುಭವಿಸಿದ್ದರು.
ಖರ್ಗೆಯವರು ಮತ್ತೆ ಇಲ್ಲಿಂದಲೇ ಕಣಕ್ಕಿಳಿಯಬೇಕೆಂಬ ಆಗ್ರಹ ಜೋರಾಗಿದೆ. ಆದರೆ, ಎಐಸಿಸಿಯನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಖರ್ಗೆ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಇನ್ನೂ 3 ವರ್ಷವಿದೆ.
ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಂತದಲ್ಲಿ ಕಲಬುರಗಿಯಿಂದ ಮತ್ತೆ ಕಣಕ್ಕಿಳಿತಾರಾ? ಈ ಪ್ರಶ್ನೆಗೆ ಖರ್ಗೆಯವರು ಈವರೆಗೂ ಯಾವುದೇ ಸುಳಿವು ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಖರ್ಗೆ ಸ್ಪರ್ಧೆ ರಹಸ್ಯವಾಗಿಯೇ ಉಳಿದಿದೆ.
ಒಂದು ವೇಳೆ ಖರ್ಗೆ ಕಣಕ್ಕಿಳಿಯದಿದ್ದರೆ ಖರ್ಗೆಯವರ ಅಳಿಯ ರಾಧಾಕೃಷ್ಣ (ಆರ್‌ಕೆ) ಕಣಕ್ಕಿಳಿಯುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಆದರೆ, ತಾವು ಟಿಕೆಟ್ ಆಕಾಂಕ್ಷಿ ಎಂದು ರಾಧಾಕೃಷ್ಣ ಎಲ್ಲಿಯೂ ಹೇಳಿಕೊಂಡಿಲ್ಲ. ಏತನ್ಮಧ್ಯೆ, ಹೈಕಮಾಂಡ್ ಸೂಚಿಸಿದರೆ, ಲೋಕ ಸಮರಕ್ಕೆ ತಾವು ಸಿದ್ಧ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.
ಇನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಂಚೋಳಿಯಿಂದ ಕಣಕ್ಕಿಳಿದು ಕೇವಲ 899 ಮತಗಳಿಂದ ಸೋತಿರುವ ಬಂಜಾರಾ ಸಮಾಜದ ಯುವ ಮುಖಂಡ ಸುಭಾಸ ರಾಠೋಡ ಹೆಸರೂ ಕೇಳಿ ಬರುತ್ತಿದೆ.