ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಲೋಕಸಭಾ ಚುನಾವಣೆಗೆ ಈಗಿಂದಲೇ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಪಕ್ಷವು ಕ್ಷೇತ್ರವಾರು ಸಂಯೋಜಕರಾಗಿ ನೇಮಕಗೊಂಡಿರುವ ರಾಜ್ಯದ 28 ಸಚಿವರುಗಳಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ನಡೆಸಿದ ಸಭೆಯಲ್ಲಿ ಹಲವು ಟಾಸ್ಕ್‌ಗಳನ್ನು ನೀಡಿದೆ.
ಪ್ರಮುಖ ಟಾಸ್ಕ್- ವಹಿಸಿರುವ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ಸಂಪೂರ್ಣ ಜವಾಬ್ದಾರಿ ಹೊರಬೇಕು. ಜವಾಬ್ದಾರಿ ನೀಡಲಾಗಿರುವ ಕ್ಷೇತ್ರದಲ್ಲಿ ಪಕ್ಷಕ್ಕೆ ಗೆಲುವು, ಸೋಲು ಯಾವುದೇ ಫಲಿತಾಂಶ ಬಂದರೂ ಅದಕ್ಕೆ ಸದರಿ ಸಚಿವರನ್ನು ಹೊಣೆಗಾರರನ್ನಾಗಿಸಲಾಗುವುದು.
ಇತರ ಟಾಸ್ಕ್‌ಗಳು
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಿಂದಿನ ಉದ್ದೇಶವನ್ನು ಜನರ ಮುಂದೆ ಬಿಚ್ಚಿಡಬೇಕು: ಜೆಡಿಎಸ್‌ನವರು ತಮ್ಮ ಜಾತ್ಯತೀತ ತತ್ವ, ಸಿದ್ಧಾಂತಗಳನ್ನು ಬಿಟ್ಟು ಕೋಮುವಾದಿ ಪಕ್ಷದೊಂದಿಗೆ ಕೈಜೋಡಿಸಿರುವುದನ್ನು ಜನರ ಬಳಿ ಒತ್ತಿ ಹೇಳಬೇಕು.
ಈ ಕಾರ್ಯವನ್ನು ಈಗಾಗಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಮಾಡುತ್ತಿದ್ದಾರೆ. ಸಚಿವರುಗಳು ಮಾತನಾಡುತ್ತಿಲ್ಲ ಏಕೆ? ನೀವೂ ಕೂಡ ಈ ಬಗ್ಗೆ ಬಹಿರಂಗವಾಗಿ ಮಾತನಾಡಿ ಎರಡೂ ಪಕ್ಷಗಳ ನಿಜ ಬಣ್ಣವನ್ನು ಬಯಲುಮಾಡಬೇಕು.
ಹೊಂದಾಣಿಕೆ ರಾಜಕೀಯ ಮಾಡಬಾರದು: ಸ್ಥಳೀಯವಾಗಿ ಹೊಂದಾಣಿಕೆ ರಾಜಕಾರಣವನ್ನು ಈ ಬಾರಿ ಯಾವ ಕಾರಣಕ್ಕೂ ಮಾಡಬಾರದು. ಭವಿಷ್ಯದ ಚುನಾವಣೆಗಳಲ್ಲಿ ನೆರವು ಪಡೆಯುವ ಉದ್ದೇಶದಿಂದ ಹೊಂದಾಣಿಕೆ ರಾಜಕಾರಣ ನಡೆಸುವುದು ಕಂಡು ಬಂದರೆ ಅದನ್ನು ಪಕ್ಷ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿ: ಬಿಜೆಪಿಯವರು ಹಿಂದುತ್ವದ ಮೇಲೆ ಚುನಾವಣೆಗೆ ಹೋಗುತ್ತಾರೆ. ಇದಕ್ಕೆ ಪ್ರತಿಯಾಗಿ ನಾವು ನಮ್ಮ ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಕಾರ್ಯಕ್ರಮಗಳ ಮೇಲೆ ಚುನಾವಣೆ ಎದುರಿಸಬೇಕು.
ಈ ನಿಟ್ಟಿನಲ್ಲಿ ಕೊಟ್ಟ ಮಾತಿನಂತೆ ಐದೂ ಗ್ಯಾರಂಟಿ ಯೋಜನೆಗಳ ಜಾರಿ, ಇದಕ್ಕೆ ಸರ್ಕಾರ ವಾರ್ಷಿಕ ಎಷ್ಟು ಅನುದಾನ ಖರ್ಚು ಮಾಡುತ್ತಿದೆ. ಎಷ್ಟು ಫಲಾನುಭವಿಗಳಿಗೆ ಯೋಜನೆಗಳು ತಲುಪುತ್ತಿವೆ. ಜನರ ಆರ್ಥಿಕ ಸ್ಥಿತಿ ವೃದ್ಧಿಗೆ ಇದು ಎಷ್ಟು ಅನುಕೂಲವಾಗಿದೆ ಎಂಬುದನ್ನು ಮನೆ ಮನೆಗೂ ತಲುಪಿಸುವ ಕೆಲಸ ಮಾಡಬೇಕು.
ಶಾಸಕರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು: ಪ್ರತಿ ಕ್ಷೇತ್ರದಲ್ಲೂ ಸಂಯೋಜಕರು ಸ್ಥಳೀಯ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯಲ್ಲಿ ಗೆಲುವಿಗೆ ತಂತ್ರಗಾರಿಕೆ ರೂಪಿಸಬೇಕು.
ಮೋದಿ ಹವಾ ಎಂಬ ನೆಪ ನೀಡಬೇಡಿ. ಗ್ಯಾರಂಟಿಯ ಲಾಭ ಪಡೆಯಿರಿ: ಸಂಸತ್ತಿಗೆ ನಡೆಯುವ ಚುನಾವಣೆಗೆ ಜನರು ಮೋದಿ ಮುಖ ನೋಡಿ ಮತ ಹಾಕುತ್ತಾರೆ ಎಂಬ ಕುಂಟು ನೆಪ ನೀಡಿದರೆ ಒಪ್ಪುವುದಿಲ್ಲ.
ಈ ಬಾರಿ ಸುಮಾರು 4 ಕೋಟಿ ಜನರಿಗೆ ನೇರ ಲಾಭದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ ಎಂದು ನೀವೇ ಹೇಳುತ್ತಿರಿ. ಹೀಗಿರುವಾಗ ಜನರಲ್ಲಿ ಪಕ್ಷದ ಬಗ್ಗೆ ಸದಭಿಪ್ರಾಯವಿರುತ್ತದೆ. ಇದನ್ನು ಬಳಸಿ ಗೆಲುವಿಗೆ ಕಾರ್ಯತಂತ್ರ ರೂಪಿಸಿ ಎಂದು ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.
ಸಚಿವರಿಗೆ ಕಿರು ಹೊತ್ತಿಗೆ: ಇದೇ ವೇಳೆ ಎಲ್ಲ ಸಚಿವರಿಗೆ ಕಿರು ಹೊತ್ತಿಗೆಯೊಂದನ್ನು ಹೈಕಮಾಂಡ್ ನೀಡಿದ್ದು, ಇದರಲ್ಲಿ ಕಳೆದ ಮೂರು ಚುನಾವಣೆಯಲ್ಲಿ ಏನು ಫಲಿತಾಂಶ ಬಂದಿದೆ? ಅಲ್ಲದೆ, ಪಕ್ಷವು ಈ ಹಿಂದಿನ ಚುನಾವಣೆಗಳಲ್ಲಿ ಜವಾಬ್ದಾರಿ ವಹಿಸಿ ಸಚಿವರಿಗೆ ನೀಡಿದ್ದ ಕ್ಷೇತ್ರಗಳಲ್ಲಿ ಫಲಿತಾಂಶ ಏನು ಬಂದಿದೆ? ಸೋಲಾಗಿರುವ ಕಡೆ ಎಲ್ಲಿ ಎಡವಲಾಗಿದೆ, ಅದನ್ನು ಹೇಗೆ ಈ ಚುನಾವಣೆಯಲ್ಲಿ ಸರಿಪಡಿಸಿಕೊಳ್ಳಬೇಕು ಎಂಬ ಮಾಹಿತಿಯಿದೆ.
ಎಲ್ಲದೆ ಕ್ಷೇತ್ರದ ಜನಸಂಖ್ಯೆ, ಜಾತಿ ಲೆಕ್ಕಾಚಾರ ಹಾಗೂ ಪ್ರಭಾವ ಬೀರುವ ಅಂಶಗಳ ಬಗ್ಗೆ ಸ್ಥೂಲ ಚಿತ್ರಣವನ್ನೂ ಈ ಕಿರು ಹೊತ್ತಿಗೆ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
1. ಜವಾಬ್ದಾರಿ ಹೊತ್ತ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಂಡು ಬರಬೇಕು
2. ಬಿಜೆಪಿ- ಜೆಡಿಎಸ್ ಮೈತ್ರಿ ಬಗ್ಗೆ ಸಚಿವರು ಬಹಿರಂಗ ಟೀಕೆ ಮಾಡಬೇಕು
3. ಯಾವುದೇ ಕಾರಣಕ್ಕೂ ಹೊಂದಾಣಿಕೆ ರಾಜಕಾರಣ ಮಾಡಬಾರದು
4. ಗ್ಯಾರಂಟಿ ಯೋಜನೆಯಿಂದಾದ ಲಾಭವನ್ನು ಮನೆಮನೆಗೂ ಮುಟ್ಟಿಸಬೇಕು
5. ಶಾಸಕರು, ಕಾರ್ಯಕರ್ತರನ್ನು ಸಚಿವರು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕು
6. ಮೋದಿ ಹವಾ, ಮೋದಿ ಮುಖ ನೋಡಿ ಮತ ಹಾಕುತ್ತಾರೆಂಬ ಕುಂಟು ನೆಪ ಒಪ್ಪಲ್ಲ