ಸಾರಾಂಶ
ಜ.22ರಂದು ನಡೆಯಲಿರುವ ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಚುನಾವಣಾ ಯೋಜನೆ ಎಂದು ಟೀಕಿಸಿರುವ ಕಾಂಗ್ರೆಸ್, ಸಮಾರಂಭದಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದೆ.
ನವದೆಹಲಿ: ಜ.22ರಂದು ನಡೆಯಲಿರುವ ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಚುನಾವಣಾ ಯೋಜನೆ ಎಂದು ಟೀಕಿಸಿರುವ ಕಾಂಗ್ರೆಸ್, ಸಮಾರಂಭದಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಮಗೆ ನೀಡಲಾಗಿದ್ದ ಆಹ್ವಾನವನ್ನು ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಹಾಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಗೌರವಪೂರ್ವಕವಾಗಿ ತಿರಸ್ಕರಿಸಿದ್ದಾರೆಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.
ಈ ನಡುವೆ ಕಾಂಗ್ರೆಸ್ ನಿರ್ಧಾರವನ್ನು ಟೀಕಿಸಿರುವ ಬಿಜೆಪಿ ‘ತ್ರೇತಾಯುಗದಲ್ಲಿ ರಾವಣ ತನ್ನ ಬುದ್ಧಿ ಕಳೆದುಕೊಂಡಿದ್ದ ರೀತಿ ಈಗ ಕಾಂಗ್ರೆಸ್ ತನ್ನ ಬುದ್ಧಿ ಕಳೆದುಕೊಂಡಿದೆ. ಕಾಂಗ್ರೆಸ್ ನಿರ್ಧಾರದಲ್ಲಿ ಆಶ್ಚರ್ಯವೇನೂ ಇಲ್ಲ. ಹಿಂದೆ ರಾಮನ ಅಸ್ತಿತ್ವವನ್ನೇ ನಿರಾಕರಿಸಿ ಎಂದು ಕೋರಿ ಯುಪಿಎ ಅಫಿಡವಿಟ್ ಸಲ್ಲಿಸಿತ್ತು’ ಎಂದು ಕಿಡಿಕಾರಿದೆ.
ಕಾರ್ಯಕ್ರಮಕ್ಕೆ ಗೈರು: ರಾಮಮಂದಿರ ವಿಷಯದಲ್ಲಿ ಪಕ್ಷದ ನಿಲುವಿನ ಕುರಿತು ಬುಧವಾರ ಹೇಳಿಕೆ ನೀಡಿರುವ ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್, ‘ನಮ್ಮ ದೇಶದಲ್ಲಿ ಲಕ್ಷಾಂತರ ಜನರು ರಾಮನನ್ನು ಪೂಜಿಸುತ್ತಾರೆ. ಧರ್ಮವು ವೈಯಕ್ತಿಕ ವಿಷಯವಾಗಿದೆ.
ಆದರೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಬಹಳ ಹಿಂದಿನಿಂದಲೂ ಅಯೋಧ್ಯೆ ರಾಮ ಮಂದಿರದ ಕುರಿತು ರಾಜಕೀಯ ಮಾಡಿದೆ. ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಕೇವಲ ರಾಜಕೀಯ ಮತ್ತು ಚುನಾವಣಾ ಲಾಭಕ್ಕಾಗಿ ಇನ್ನೂ ಕೂಡ ಪೂರ್ಣವಾಗಿ ನಿರ್ಮಾಣವಾಗದ ಅಪೂರ್ಣ ದೇವಸ್ಥಾನದ ಉದ್ಘಾಟನೆ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ’ ಎಂದು ಕಿಡಿಕಾರಿದ್ದಾರೆ.
ಜೊತೆಗೆ, ‘ಮಂದಿರ ಕುರಿತಾದ 2019ರ ಸುಪ್ರೀಂಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳುತ್ತಾ ಮತ್ತು ಶ್ರೀರಾಮ ಹಾಗೂ ಸೀತೆಯನ್ನು ಪೂಜಿಸುವ ಲಕ್ಷಾಂತರ ಭಕ್ತರ ಭಾವನೆಗಳನ್ನು ಗೌರವಿಸುತ್ತಲೇ, ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಅಧೀರ್ ರಂಜನ್ ಚೌಧರಿ ಅವರು ಮಂದಿರ ಉದ್ಘಾಟನೆಯ ಆಹ್ವಾನವನ್ನು ಗೌರವಯುತವಾಗಿ ತಿರಸ್ಕರಿಸಿದ್ದಾರೆ’ ಎಂದು ಜೈರಾಂ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಟೀಕೆ: ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ನಳಿನ್ ಕೊಹ್ಲಿ ‘ಕಾಂಗ್ರೆಸ್ ನಿರ್ಧಾರದಿಂದ ಆಶ್ಚರ್ಯವಿಲ್ಲ. ಕಳೆದ ದಶಕಗಳಲ್ಲಿ ಮಂದಿರ ನಿರ್ಮಾಣಕ್ಕೆ ಅದು ಯಾವುದೇ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್‌ಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಬೇಕಿಲ್ಲ. ಬಿಜೆಪಿ ಮತ್ತು ಆರೆಸ್ಸೆಸ್ ಮೇಲಿನ ಆರೋಪ ಕಾಂಗ್ರೆಸ್‌ನ ಮಂದಿರ ಬಹಿಷ್ಕಾರಕ್ಕೆ ನೆಪವಷ್ಟೆ’ ಎಂದಿದ್ದಾರೆ.
ಇನ್ನು ‘ಮಂದಿರ ಉದ್ಘಾಟನೆಯನ್ನು ಬಹಿಷ್ಕರಿಸುವ ಮೂಲಕ ಸೋನಿಯಾ, ರಾಮನ ಮೇಲಿನ ತಮ್ಮ ನಂಬಿಕೆಯ ಕೊರತೆಯನ್ನು ತೋರಿಸಿದ್ದಾರೆ. ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನೀಡಿದ ಕಾರಣವೇನು?
- ಆರೆಸ್ಸೆಸ್ ಮತ್ತು ಬಿಜೆಪಿ ಬಹಳ ಹಿಂದಿನಿಂದಲೂ ಅಯೋಧ್ಯೆ ರಾಮ ಮಂದಿರದ ಕುರಿತು ರಾಜಕೀಯ ಮಾಡಿವೆ
- ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ರಾಜಕೀಯ ಮತ್ತು ಚುನಾವಣಾ ಲಾಭಕ್ಕಾಗಿ ಮಂದಿರ ಬಳಸಿಕೊಳ್ಳುತ್ತಿದ್ದಾರೆ
- ಇನ್ನೂ ಮಂದಿರ ನಿರ್ಮಾಣ ಪೂರ್ಣಗೊಂಡಿಲ್ಲ. ಅಪೂರ್ಣ ದೇವಸ್ಥಾನದ ಉದ್ಘಾಟನೆ ಮಾಡುತ್ತಿದ್ದಾರೆ
- ನಮ್ಮ ದೇಶದಲ್ಲಿ ಲಕ್ಷಾಂತರ ಜನರು ರಾಮನನ್ನು ಪೂಜಿಸುತ್ತಾರೆ. ಧರ್ಮವು ವೈಯಕ್ತಿಕ ವಿಷಯವಾಗಿದೆ
- ಮಂದಿರ ಕುರಿತಾದ 2019ರ ಸುಪ್ರೀಂಕೋರ್ಟ್ ತೀರ್ಪನ್ನು ಒಪ್ಪುತ್ತೇವೆ, ರಾಮ-ಸೀತೆಯನ್ನು ಗೌರವಿಸುತ್ತೇವೆ