ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಲೋಕಸಭಾ ಚುನಾವಣೆ ವೇಳೆ ಕ್ಷೇತ್ರದ ಜವಾಬ್ದಾರಿಯನ್ನು ಸಚಿವರಿಗೆ ವಹಿಸಿರುವ ಹೈಕಮಾಂಡ್ ಚುನಾವಣೆ ನಂತರ ಸಚಿವರ ಮೌಲ್ಯಮಾಪನಕ್ಕೂ ನಡೆಸಲು ಮುಂದಾಗಿದೆ. ಅಷ್ಟೇ ಅಲ್ಲ, ಹೈಕಮಾಂಡ್ ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸದಿದ್ದರೆ ಸಚಿವ ಸಂಪುಟ ಪುನರ್ ರಚನೆಗೂ ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆಯನ್ನೂ ರವಾನಿಸಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬುಧವಾರ ನಡೆದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಸಭೆಯಲ್ಲಿ ಸುರ್ಜೆವಾಲ ಈ ಎಚ್ಚರಿಕೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 28 ಮಂದಿ ಸಚಿವರನ್ನು ಸಂಯೋಜಕರನ್ನಾಗಿ ನೇಮಿಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ಇಲಾಖಾ ನಿರ್ವಹಣೆಯ ಸಾಮರ್ಥ್ಯ ಅಲ್ಲದೆ ಲೋಕಸಭೆ ಚುನಾವಣೆ ಚುನಾವಣೆಯಲ್ಲಿ ವಹಿಸಿರುವ ಜವಾಬ್ದಾರಿಗಳನ್ನು ಯಾವ ರೀತಿಯಲ್ಲಿ ನಿಭಾಯಿಸಿದ್ದಾರೆ ಎಂಬುದನ್ನೂ ಮೌಲ್ಯಮಾಪನ ವೇಳೆ ಪರಿಗಣಿಸಲಾಗುವುದು ಎಂದು ಅವರು ಸಭೆಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.
ಅಲ್ಲದೆ, ಜಿಲ್ಲಾ ಉಸ್ತುವಾರಿ ಉಸ್ತುವಾರಿ ಸಚಿವರು ತಿಂಗಳಲ್ಲಿ ಎರಡು ಬಾರಿ ಜಿಲ್ಲಾ ಕಾಂಗ್ರಸ್ ಕಚೇರಿಗೆ ಬರಲೇಬೇಕು. ತಿಂಗಳಿಗೊಮ್ಮೆ ಕೆಪಿಸಿಸಿ ಕಚೇರಿಗೆ ತೆರಳಿ ಕಾರ್ಯಕರ್ತರ ಆಹವಾಲು ಆಲಿಸಬೇಕು ಎಂದು ಅವರು ಇದೇ ವೇಳೆ ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.
ಪಕ್ಷದ ಶಾಸಕರಿಗೂ ಮೌಲ್ಯಮಾಪನ ಬಿಸಿ: ಸರ್ಕಾರದ ಅನುದಾನದ ಜತೆಗೆ ಆಡಳಿತ ಪಕ್ಷದ ಶಾಸಕರಿಗೆ 25 ಕೋಟಿ ರು. ವಿಶೇಷ ಅನುದಾನ ನೀಡಲಾಗುವುದು. ಇದಕ್ಕೆ ಕ್ರಿಯಾಯೋಜನೆ ರೂಪಿಸಲು ಸೂಚನೆ ನೀಡಲಾಗಿದೆ. ಅಲ್ಲದೆ, ಸರ್ಕಾರಿ ಯೋಜನೆಗಳನ್ನು ಶಾಸಕರು ಹೇಗೆ ತಮ್ಮ ಕ್ಷೇತ್ರದಲ್ಲಿ ಜಾರಿಗೆ ತಂದಿದ್ದಾರೆ ಎಂಬ ಬಗ್ಗೆ ಶಾಸಕರ ಮೌಲ್ಯಮಾಪನವನ್ನೂ ಮಾಡಲಾಗುವುದು ಎಂದು ತಿಳಿದುಬಂದಿದೆ.
;Resize=(128,128))
;Resize=(128,128))
;Resize=(128,128))
;Resize=(128,128))