ಸಂಸದ ಭಗವಂತ್ ಖೂಬಾ, ಸಂಗಣ್ಣ, ದೇವೇಂದ್ರಪ್ಪ, ಮುನಿಸ್ವಾಮಿ ಸ್ಪರ್ಧೆಗೆ ಬಿಜೆಪಿಗರ ಆಕ್ಷೇಪ

| Published : Jan 11 2024, 01:30 AM IST / Updated: Jan 11 2024, 11:29 AM IST

ಸಂಸದ ಭಗವಂತ್ ಖೂಬಾ, ಸಂಗಣ್ಣ, ದೇವೇಂದ್ರಪ್ಪ, ಮುನಿಸ್ವಾಮಿ ಸ್ಪರ್ಧೆಗೆ ಬಿಜೆಪಿಗರ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯಲ್ಲಿ ಈಗಾಗಲೇ ಸಂಸದರಾಗಿರುವ ಬೀದರ ಸಂಸದ ಭಗವಂತ ಖೂಬ, ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಬಳ್ಳಾರಿ ಸಂಸದ ದೇವೇಂದ್ರಪ್ಪ ಹಾಗೂ ಕೋಲಾರ ಸಂಸದ ಮುನಿಸ್ವಾಮಿ ಅವರ ಸ್ಪರ್ಧೆಗೆ ಬಿಜೆಪಿಯಲ್ಲೇ ಆಕ್ಷೇಪ ವ್ಯಕ್ತವಾಗಿದೆ. 

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಾಲಿ ಸಂಸದರೂ ಆಗಿರುವ ಕೇಂದ್ರ ಸಚಿವ ಭಗವಂತ್ ಖೂಬಾ ಸೇರಿದಂತೆ ಕೆಲವು ಸಂಸದರ ಬಗ್ಗೆ ಬುಧವಾರ ನಡೆದ ವಿವಿಧ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡ ಕ್ಲಸ್ಟರ್‌ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಬೀದರ್‌ನ ಸಂಸದರಾಗಿರುವ ಖೂಬಾ, ಕೊಪ್ಪಳದ ಸಂಸದ ಕರಡಿ ಸಂಗಣ್ಣ, ಬಳ್ಳಾರಿ ಸಂಸದ ದೇವೇಂದ್ರಪ್ಪ, ಕೋಲಾರದ ಸಂಸದ ಮುನಿಸ್ವಾಮಿ ಅವರಿಗೆ ಮತ್ತೆ ಟಿಕೆಟ್ ನೀಡುವುದು ಬೇಡ ಎಂಬ ಅಭಿಪ್ರಾಯ ಸಣ್ಣಗೆ ಹೊರಬೀಳುತ್ತಿದ್ದಂತೆಯೇ ಸಭೆಯಲ್ಲಿದ್ದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರರು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಇಲ್ಲಿ ಚರ್ಚೆ ಬೇಡ. ಅದನ್ನು ವರಿಷ್ಠರಿಗೆ ಬಿಡೋಣ ಎಂದು ಹೇಳಿ ಅಪಸ್ವರಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಲಹಂಕ ಬಳಿಯ ರೆಸಾರ್ಟ್‌ವೊಂದರಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಒಟ್ಟು 13 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡ ಮೂರು ಕ್ಲಸ್ಟರ್‌ಗಳ ಸಭೆ ಪ್ರತ್ಯೇಕವಾಗಿ ನಡೆಯಿತು. 

ಬೆಳಗ್ಗೆ ಮೊದಲಿಗೆ ಬೀದರ್‌, ಕಲಬುರ್ಗಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಕ್ಷೇತ್ರಗಳನ್ನು ಒಳಗೊಂಡ ಕಲ್ಯಾಣ ಕರ್ನಾಟಕ ಕ್ಲಸ್ಟರ್ ಸಭೆ ನಡೆದರೆ, ನಂತರ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಕ್ಷೇತ್ರಗಳನ್ನು ಒಳಗೊಂಡ ಮೈಸೂರು ಕ್ಲಸ್ಟರ್‌ ಸಭೆ ಜರುಗಿತು. ಬಳಿಕ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಒಳಗೊಂಡ ತುಮಕೂರು ಕ್ಲಸ್ಟರ್‌ ಸಭೆ ನಡೆಯಿತು.

ವಿಜಯೇಂದ್ರ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಮಾಜಿ ಸಚಿವ ಸಿ.ಟಿ.ರವಿ ಮತ್ತಿತರರು ಸಭೆಯಲ್ಲಿ ವೇದಿಕೆ ಮೇಲಿದ್ದರು.ಸಭೆಯ ಮುಖ್ಯ ಉದ್ದೇಶ ಆಯಾ ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸುವುದು, ಸಣ್ಣ ಪುಟ್ಟ ಲೋಪಗಳಿದ್ದರೆ ಪರಿಹರಿಸುವುದು ಮತ್ತು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಸಮನ್ವಯತೆ ಹೆಚ್ಚಿಸುವುದಾಗಿತ್ತು.

ಕ್ಲಸ್ಟ್‌ರಗಳಲ್ಲಿ ನಾಲ್ಕು ಐದು ಲೋಕಸಭಾ ಕ್ಷೇತ್ರಗಳ ಮುಖಂಡರ ಸಭೆ ಒಂದೇ ಬಾರಿಗೆ ನಡೆಯುವುದರಿಂದ ಹೆಚ್ಚು ಚರ್ಚೆ ಮಾಡುವುದಕ್ಕೆ ಅವಕಾಶ ಸಿಗುವುದಿಲ್ಲ. ಪ್ರತಿ ಲೋಕಸಭಾ ಕ್ಷೇತ್ರದ ಸಭೆಯನ್ನು ಪ್ರತ್ಯೇಕವಾಗಿ ಕರೆಯಿರಿ ಎಂಬ ಸಲಹೆಯನ್ನು ಹಲವು ಮುಖಂಡರು ಮಾಡಿದರು. ಇದಕ್ಕೆ ಸಮ್ಮತಿಸಿದ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮುಂದಿನ ದಿನಗಳಲ್ಲಿ ಪ್ರತ್ಯೇಕ ಸಭೆ ಕರೆಯುವ ಭರವಸೆ ನೀಡಿದರು ಎನ್ನಲಾಗಿದೆ.

ಫೆಬ್ರವರಿಯಲ್ಲಿ ಅಮಿತ್ ಶಾ, ನಡ್ಡಾ, ರಾಜನಾಥ್‌ ಪ್ರವಾಸ: ಬರುವ ಫೆಬ್ರವರಿ ತಿಂಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ರಾಜನಾಥ್ ಸಿಂಗ್ ಅವರು ಕರ್ನಾಟಕದಲ್ಲಿ ಪ್ರವಾಸ ಕೈಗೊಂಡು ಕ್ಲಸ್ಟರ್‌ವಾರು ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ ಎಂದು ವಿಜಯೇಂದ್ರ ಅವರು ಸಭೆಯಲ್ಲಿ ಮಾಹಿತಿ ನೀಡಿದರು ಎಂದು ತಿಳಿದು ಬಂದಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಕಾರ್ಯತಂತ್ರ ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಈ ಸಭೆಯಿಂದ ಅಲ್ಲಲ್ಲಿ ಇದ್ದ ಸಣ್ಣಪುಟ್ಟ ವ್ಯತ್ಯಾಸಗಳು ಹಾಗೂ ಚಿಕ್ಕಪುಟ್ಟ ಗೊಂದಲಗಳು ಇವತ್ತು ನಾಳೆಯೊಳಗೆ ಮುಗಿದುಹೋಗಲಿವೆ. ಸಭೆ ನಮಗೆ ಶಕ್ತಿ ನೀಡಲಿದೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಕಾರ್ಯಾಚರಣೆ, ಯೋಚನೆ, ಯೋಜನೆಗಳು ಹೇಗೆ ಇರಬೇಕೆಂಬ ಬಗ್ಗೆ ಅಡಿಪಾಯ ಹಾಕಲಿದೆ. 

ಇವತ್ತು ಕ್ಲಸ್ಟರ್ ಮಟ್ಟದಲ್ಲಿ ಸಭೆ ಕರೆಯಲಾಗಿದೆ. ಮುಂದೆ ಜಿಲ್ಲಾ ಮಟ್ಟದಲ್ಲೂ ಸಭೆ ಕರೆಯಲಿದ್ದೇವೆ ಎಂಬ ಮಾತನ್ನು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ ಎಂದರು.ಒಂದು ಹೊಸ ಮಾದರಿಯ ಚಟುವಟಿಕೆ ನಮ್ಮ ಪಕ್ಷದಲ್ಲಿ ಆರಂಭವಾಗಿದೆ. 

ಇದೊಂದು ಹೊಸ ರೀತಿಯ ಶಕ್ತಿಯನ್ನು ನಮ್ಮ ಕೆಳಗಿನ ಹಂತದ, ಬೂತ್ ಮಟ್ಟದ ಕಾರ್ಯಕರ್ತರಿಗೆ ನೀಡಲಿದೆ. ಇವತ್ತು ಬಂದ ಪ್ರಮುಖರೆಲ್ಲರೂ ತಮ್ಮ ತಮ್ಮ ಜಿಲ್ಲೆ, ಮಂಡಲಗಳಿಗೆ ತೆರಳಿ ಎಲ್ಲ ವಿಷಯಗಳನ್ನು ತಿಳಿಸಿಕೊಡಲಿದ್ದಾರೆ. ಎಲ್ಲ ಸಲಹೆ ಸೂಚನೆಗಳನ್ನು ಕ್ರೋಡೀಕರಿಸಿ ತಮಗೆ ಕೊಡಬಹುದೆಂದು ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಇದು ಹೊಸ ಕಾರ್ಯತಂತ್ರ ರೂಪಿಸಲು ಪೂರಕ ಎಂದು ತಿಳಿಸಿದರು.

ಇಂದು ಇನ್ನುಳಿದ 15 ಕ್ಷೇತ್ರಗಳ ಸಭೆ: ಗುರುವಾರ ಇನ್ನುಳಿದ 15 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡ ನಾಲ್ಕು ಕ್ಲಸ್ಟರ್‌ಗಳ ಸಭೆ ನಡೆಯಲಿದೆ.ಬೆಳಗ್ಗೆ ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗ‍ಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಕ್ಷೇತ್ರಗಳನ್ನು ಒಳಗೊಂಡ ಮಂಗಳೂರು ಕ್ಲಸ್ಟರ್‌ ಸಭೆ, ನಂತರ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ ಹಾಗೂ ವಿಜಯಪುರ ಕ್ಷೇತ್ರಗಳನ್ನು ಒಳಗೊಂಡ ಕಿತ್ತೂರು ಕ್ಲಸ್ಟರ್‌ ಸಭೆ ನಡೆಯಲಿದೆ. 

ಬಳಿಕ ಧಾರವಾಡ, ಹಾವೇರಿ, ದಾವಣಗೆರೆ ಮತ್ತು ಚಿತ್ರದುರ್ಗ ಕ್ಷೇತ್ರಗಳನ್ನು ಒಳಗೊಂಡ ಧಾರವಾಡ ಕ್ಲಸ್ಟರ್‌ ಸಭೆ, ಕೊನೆಯಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಉತ್ತರ ಕ್ಷೇತ್ರಗಳನ್ನು ಒಳಗೊಂಡ ಬೆಂಗಳೂರು ಕ್ಲಸ್ಟರ್‌ ಸಭೆ ನಡೆಯಲಿದೆ.