ಸಿದ್ದು ಸರ್ಕಾರದ ವಿರುದ್ಧ ಇಂದಿನಿಂದ ರಾಜ್ಯದಲ್ಲಿ ಬಿಜೆಪಿ ಸರಣಿ ಹೋರಾಟ

| Published : Jan 29 2024, 01:30 AM IST

ಸಾರಾಂಶ

ಲೋಕಸಭಾ ಚುನಾವಣೆ ಸಮೀಪಿಸಿದಂತೆ ಪ್ರತಿಪಕ್ಷ ಬಿಜೆಪಿಯು ಆಡಳಿತಾರೂಢ ಕಾಂಗ್ರೆಸ್ ವೈಫಲ್ಯಗಳ ವಿರುದ್ಧ ಸೋಮವಾರದಿಂದಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತನ್ನ ಸರಣಿ ಹೋರಾಟ ಆರಂಭಿಸುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆ ಸಮೀಪಿಸಿದಂತೆ ಪ್ರತಿಪಕ್ಷ ಬಿಜೆಪಿಯು ಆಡಳಿತಾರೂಢ ಕಾಂಗ್ರೆಸ್ ವೈಫಲ್ಯಗಳ ವಿರುದ್ಧ ಸೋಮವಾರದಿಂದಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತನ್ನ ಸರಣಿ ಹೋರಾಟ ಆರಂಭಿಸುತ್ತಿದೆ.‘ರೈತರಿಗೆ ಪರಿಹಾರ ಕೊಡಿ, ಇಲ್ಲ ಕುರ್ಚಿ ಬಿಡಿ’ ಎಂಬ ಘೋಷಣೆಯೊಂದಿಗೆ ಸೋಮವಾರ ಕೋಲಾರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಮಂಗಳವಾರ ವಿದ್ಯುತ್‌ ಕಡಿತ ಹಾಗೂ ಕಾಮಗಾರಿಗಳ ಸ್ಥಗಿತದ ವಿರುದ್ಧ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಈ ವಿಷಯ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಸರಣಿ ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಈ ಕುರಿತು ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಶೋಕ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಾವೇಶದ ಭಾಷಣ ಮಾಡಿ ಅಧಿವೇಶನಕ್ಕೂ ಮುನ್ನ ರೈತರಿಗೆ ಬರ ಪರಿಹಾರ ಘೋಷಿಸಿದ್ದರು. ಇಷ್ಟು ಬಜೆಟ್‌ಗಳನ್ನು ಮಂಡನೆ ಮಾಡಿದ ಇವರು ಜನರಿಗೆ ಟೋಪಿ ಹಾಕುವುದು ಹೇಗೆಂದು ಕಲಿತಿದ್ದಾರೆ. ರೈತರು ಕಣ್ಣೀರು ಹಾಕುತ್ತಿರುವಾಗ ಮುಲ್ಲಾಗಳಿಗೆ 10 ಸಾವಿರ ಕೋಟಿ ರು. ನೀಡುತ್ತೇನೆಂದು ಹೇಳಿ ಒಂದು ಸಾವಿರ ಕೋಟಿ ರು. ಬಿಡುಗಡೆ ಮಾಡಿಬಿಟ್ಟರು. ಆದರೆ ರೈತರಿಗೆ 105 ಕೋಟಿ ರು. ಬಿಡುಗಡೆ ಮಾಡಿಲ್ಲ. ಹೀಗಾಗಿ, ಸೋಮವಾರ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಹೇಳಿದರು.

ಅಲ್ಲದೆ, ವಿದ್ಯುತ್‌ ಕಡಿತ, ಕಾಮಗಾರಿ ಸ್ಥಗಿತದ ವಿರುದ್ಧ ಮಂಗಳ‍ಾರ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟಿಸಲಾಗುವುದು. ಕಾಫಿ ಬೆಳೆಗಾರರಿಗೆ ಸರ್ಕಾರದಿಂದ ಲೀಸ್‌ಗೆ ಜಮೀನು ನೀಡಿರುವ ವಿಷಯದಲ್ಲಿ ಜಿಲ್ಲಾಧಿಕಾರಿಗಳು ರೈತರಿಗೆ ನೆರವಾಗುತ್ತಿಲ್ಲ. ಇದರ ವಿರುದ್ಧವೂ ಕಾಫಿ ಬೆಳೆಗಾರರಿಂದ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ. ಪ್ರತಿ ಜಿಲ್ಲೆಗಳಲ್ಲಿ ನಾನು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಭಟನೆ ನಡೆಸುತ್ತೇವೆ ಎಂದರು.

ಏಳು ಗಂಟೆ ವಿದ್ಯುತ್‌ ಎಂದು ಹೇಳಿ ಮೂರು ಗಂಟೆ ನೀಡುತ್ತಿದ್ದಾರೆ. ಹಿಂದಿನ ಬಿಜೆಪಿ ಅವಧಿಯಲ್ಲಿ ಸರ್‌ಪ್ಲಸ್‌ ನೀರು, ವಿದ್ಯುತ್‌ ನೀಡುತ್ತಿದ್ದರೆ, ಕಾಂಗ್ರೆಸ್‌ ಸರ್ಕಾರದಲ್ಲಿ ಹೋಪ್‌ಲೆಸ್‌, ಹೆಲ್ಪ್‌ಲೆಸ್‌ ಆಗಿದೆ. ಈಗ ಸರ್ಕಾರದಲ್ಲಿ ಹೆಣ ಹೊರುವುದಕ್ಕೂ ಹಣ ಇಲ್ಲ. ಎಲ್ಲರಿಗೂ ಸಂಪುಟ ದರ್ಜೆಯ ಸ್ಥಾನ ನೀಡಿ, ಮೆಡಿಕಲ್‌ ಸಲಹೆಗಾರರು, ಆರ್ಥಿಕ ಸಲಹೆಗಾರರನ್ನು ನೇಮಿಸಿ ಉಡಾಫೆಯಾಗಿ ಹಣ ಖರ್ಚು ಮಾಡುತ್ತಿದ್ದಾರೆ. ದುಂದುವೆಚ್ಚ ಮಾಡಲು, ಮಜಾ ಮಾಡಲು ಹಣ ಇದ್ದರೂ ರೈತರಿಗೆ ಕೊಡಲು ಹಣ ಇಲ್ಲ ಎಂದು ಅಶೋಕ್‌ ದೂರಿದರು.ವಿಜಯೇಂದ್ರ ಜತೆಗೂಡಿ ಎಲ್ಲ ಜಿಲ್ಲೆಯಲ್ಲೂ ಧರಣಿಏಳು ಗಂಟೆ ವಿದ್ಯುತ್‌ ಎಂದು ಹೇಳಿ ಮೂರು ಗಂಟೆ ನೀಡುತ್ತಿದ್ದಾರೆ. ಹಿಂದಿನ ಬಿಜೆಪಿ ಅವಧಿಯಲ್ಲಿ ಸರ್‌ಪ್ಲಸ್‌ ನೀರು, ವಿದ್ಯುತ್‌ ನೀಡುತ್ತಿದ್ದರೆ, ಕಾಂಗ್ರೆಸ್‌ ಸರ್ಕಾರದಲ್ಲಿ ಹೋಪ್‌ಲೆಸ್‌, ಹೆಲ್ಪ್‌ಲೆಸ್‌ ಆಗಿದೆ. ಈಗ ಸರ್ಕಾರದಲ್ಲಿ ಹೆಣ ಹೊರುವುದಕ್ಕೂ ಹಣ ಇಲ್ಲ. ಪ್ರತಿ ಜಿಲ್ಲೆಗಳಲ್ಲಿ ನಾನು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಭಟನೆ ನಡೆಸುತ್ತೇವೆ.- ಆರ್‌.ಅಶೋಕ್‌, ವಿಪಕ್ಷ ನಾಯಕ