ಸಾರಾಂಶ
ನವದೆಹಲಿ: ರಾಜ್ಯ ಸರ್ಕಾರದ ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲು ನೀಡುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಅಸಾಂವಿಧಾನಿಕ ಎಂದು ಆರೋಪಿಸಿರುವ ಬಿಜೆಪಿ, ಇದರ ವಿರುದ್ಧ ಎಲ್ಲಾ ಹಂತದಲ್ಲೂ ಹೋರಾಟ ನಡೆಸಲಾಗುವುದು ಮತ್ತು ನ್ಯಾಯಾಲಯದ ಮೆಟ್ಟಿಲನ್ನೂ ಏರುವುದಾಗಿ ಘೋಷಿಸಿದೆ.
ಈ ಕುರಿತು ಸೋಮವಾರ ಇಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ.ಎನ್,. ಮಂಜುನಾಥ್ ಮತ್ತು ದಕ್ಷಿಣ ಕನ್ನಡದ ಸಂಸದ ಕ್ಯಾ.ಬ್ರಿಜೇಶ್ ಚೌಟ ‘ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲು ನೀಡುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದ ನಿಲುವು ಅಸಾಂವಿಧಾನಿಕ. ಇದನ್ನು ಕೂಡಲೇ ಹಿಂಪಡೆಬೇಕೆಂದು ನಾವು ಆಗ್ರಹಿಸುತ್ತೇವೆ. ಇದೊಂದು ಮುಸ್ಲಿಮರ ತುಷ್ಟೀಕರಣದ ನಿಟ್ಟಿನಲ್ಲಿ ಪಕ್ಷದ ಅತ್ಯುನ್ನತ ನಾಯಕರ ಸೂಚನೆಯಂತೆ ನಡೆದ ಯೋಜಿತ ಸಂಚು. ಅದರಲ್ಲೂ ವಿಶೇಷವಾಗಿ ರಾಹುಲ್ ಸೂಚನೆಯಂತೆ ನಡೆದುಕೊಂಡ ಘಟನೆ’ ಎಂದು ಆರೋಪಿಸಿದರು.
ಜೊತೆಗೆ, ‘ಮೇಲ್ನೋಟಕ್ಕೆ ಇದೊಂದು ಸಾಂವಿಧಾನಿಕ ವಿರೋಧಿ ಬೆಳವಣಿಗೆ ಎಂದು ಸ್ಪಷ್ಟವಾಗುತ್ತದೆ. ಕರ್ನಾಟಕ ಸರ್ಕಾರದ ಈ ನಡೆ ದೇಶದ ಸಮಗ್ರತೆ, ಏಕತೆಗೆ ಧಕ್ಕೆ ತರುವ ಪ್ರಯತ್ನವಾಗಿದೆ. ಇದನ್ನು ಪಕ್ಷ ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ. ಇದರ ವಿರುದ್ಧ ಕರ್ನಾಟಕ ವಿಧಾನಸಭೆಯ ಒಳಗೆ ಮತ್ತು ಬೀದಿಗಳಲ್ಲೂ ಬಿಜೆಪಿ ಹೋರಾಟ ನಡೆಸಲಿದೆ. ಜೊತೆಗೆ ಸಂಸತ್ತಿನ ಒಳಗೂ ವಿಷಯ ಪ್ರಸ್ತಾಪ ಮಾಡಲಿದ್ದೇವೆ, ಅದೇ ರೀತಿಯಲ್ಲಿ ಸಂಸತ್ತಿನ ಹೊರಗೂ ಪ್ರತಿಭಟನೆ ನಡೆಸಲಿದ್ದೇವೆ. ಕರ್ನಾಟಕ ಸರ್ಕಾರದ ತನ್ನ ನಿಲುವಿನಿಂದ ಹಿಂದೆ ಸರಿಯುವವರೆಗೂ ನಮ್ಮ ಹೋರಾಟ ಮುಂದುವರೆಯಲಿವೆ’ ಎಂದು ಬಿಜೆಪಿ ನಾಯಕರು ಹೇಳಿದರು.
ಮುಸ್ಲಿಂ ಮೀಸಲು ಜಾರಿಗೆ ಬಿಡಲ್ಲ: ವಿಜಯೇಂದ್ರ ಬೆಂಗಳೂರು: ಮುಸ್ಲಿಂ ಸಮುದಾಯದವರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ಶೇ.4 ಮೀಸಲಾತಿ ನೀಡುವುದರ ವಿರುದ್ಧ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹಿಂದುಗಳೇನು ಅಪರಾಧ ಮಾಡಿದ್ದಾರೆ? ಹಿಂದುಗಳಲ್ಲಿ ಬಡವರಿಲ್ಲವೇ ಎಂದು ಹರಿಹಾಯ್ದಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವರ್ಗದಲ್ಲೂ ಬಡವರಿದ್ದಾರೆ. ಈ ಮೀಸಲಾತಿ ಕುರಿತ ಮಸೂದೆಯನ್ನು ಸದನದಲ್ಲಿ ತಂದಾಗ ಸದನದ ಒಳಗೆ ಮತ್ತು ಹೊರಗಡೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ. ಇದನ್ನು ಅನುಷ್ಠಾನಗೊಳಿಸಲು ನಾವು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.