ಸಾರಾಂಶ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಸಚಿವರ ಹೇಳಿಕೆ ಮುಂದುವರಿದಿದ್ದು, ಲೋಕಸಭೆ ಚುನಾವಣೆ ನಂತರ ಅಧ್ಯಕ್ಷರ ಬದಲಾವಣೆ ಕುರಿತಂತೆ ಹೈಕಮಾಂಡ್ ನಾಯಕರು ಈ ಹಿಂದೆ ನೀಡಿದ್ದ ಭರವಸೆಯಿಂದ ಉಂಟಾಗಿರುವ ಗೊಂದಲ ನಿವಾರಿಸುವಂತೆ ಗುರುವಾರವೂ ಆಗ್ರಹಿಸಿದ್ದಾರೆ.
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಸಚಿವರ ಹೇಳಿಕೆ ಮುಂದುವರಿದಿದ್ದು, ಲೋಕಸಭೆ ಚುನಾವಣೆ ನಂತರ ಅಧ್ಯಕ್ಷರ ಬದಲಾವಣೆ ಕುರಿತಂತೆ ಹೈಕಮಾಂಡ್ ನಾಯಕರು ಈ ಹಿಂದೆ ನೀಡಿದ್ದ ಭರವಸೆಯಿಂದ ಉಂಟಾಗಿರುವ ಗೊಂದಲ ನಿವಾರಿಸುವಂತೆ ಗುರುವಾರವೂ ಆಗ್ರಹಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರವಾಗಿ ಸಚಿವರಾದ ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಹಾಗೂ ಕೆ.ಎನ್.ರಾಜಣ್ಣ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಬದಲಾಗುತ್ತಾರೋ ಅಥವಾ ಅವರೇ ಮುಂದುವರಿಯುತ್ತಾರೋ ಎಂಬುದನ್ನು ಹೈಕಮಾಂಡ್ ನಾಯಕರು ಸ್ಪಷ್ಟಪಡಿಸಬೇಕು. ಪಕ್ಷ ಸಂಘಟನೆ ಮತ್ತು ಬೆಳವಣಿಗೆ ದೃಷ್ಟಿಯಿಂದ ಈಗಿರುವ ಗೊಂದಲ ನಿವಾರಿಸುವಂತೆ ಕೋರಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್ ಅವರು, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿಗಳಾಗಿದ್ದು, ಎರಡು ದೊಡ್ಡ ಇಲಾಖೆಗಳನ್ನು ನಿರ್ವಹಿಸುತ್ತಿದ್ದಾರೆ. ಇದರಿಂದ ಅವರಿಗೆ ಹೊರೆಯಾಗಬಹುದು ಎಂಬ ಕಾರಣಕ್ಕಾಗಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಚಿವರು ಸಹಜವಾಗಿ ಕೇಳುತ್ತಿದ್ದಾರೆ.
ನಾನು ಈ ಹಿಂದೆ ಕೆಪಿಸಿಸಿ ಅಧ್ಯಕ್ಷನಾಗಿದ್ದಾಗಲೇ ಸಚಿವನಾಗಿದ್ದೆ. ಆಗ ನನಗೆ ಎರಡು ಸ್ಥಾನಗಳಲ್ಲಿ ಒಂದನ್ನು ಆಯ್ಕೆ ಮಾಡುವಂತೆ ವರಿಷ್ಠರು ಹೇಳಿದ್ದರು. ನಾನು ಪಕ್ಷಕ್ಕೆ ಪ್ರಾಮುಖ್ಯತೆ ನೀಡಿ ಸಚಿವ ಸ್ಥಾನ ತ್ಯಜಿಸಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದೆ. ಈಗ ಡಿ.ಕೆ.ಶಿವಕುಮಾರ್ ಅವರಿಗೂ ಅದೇ ಪರಿಸ್ಥಿತಿಯಿದ್ದು, 2 ದೊಡ್ಡ ಖಾತೆ ನಿಭಾಯಿಸುವ ಮೂಲಕ ಅವರಿಗೆ ಕೆಲಸ ಒತ್ತಡ ಹೆಚ್ಚಿದೆ. ಪಕ್ಷ ಸಂಘಟನೆಯೂ ಮುಖ್ಯವಾಗಿದ್ದು, ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕು. ನಾವು ಒಂದು ಸಮುದಾಯದ ಸಭೆ ಮಾಡುತ್ತೇವೆ ಎನ್ನುವುದನ್ನೇ ಗಮನಿಸುವ ಹೈಕಮಾಂಡ್, ಇದನ್ನೆಲ್ಲ ಗಮನಿಸಿರುವುದಿಲ್ಲವೇ ಎಂದು ಹೇಳಿದರು.
ಹೈಕಮಾಂಡ್ ಸಚಿವರ ವರದಿ ಕೇಳಿದೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿಕೆಗೆ ಪ್ರತಿಕ್ರಿಯಿಸಿ, ವರದಿ ತೆಗೆದುಕೊಳ್ಳಲು ಹೈಕಮಾಂಡ್ ಇದ್ದಾರೆ. ಕೊಡುವುದಕ್ಕೆ ಇವರಿದ್ದಾರೆ. ವರದಿ ಕೊಡುವುದನ್ನು ಯಾರು ಬೇಡ ಎನ್ನುತ್ತಾರೆ. ಕೊಡಲಿ ಬಿಡಿ ಎಂದರು.
ಚುನಾವಣೆಗಳಿಗೆ ಅನುಕೂಲ:
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ನಾವು ಅಧ್ಯಕ್ಷರನ್ನು ಬದಲಿಸುವಂತೆ ಎಲ್ಲೂ ಹೇಳುತ್ತಿಲ್ಲ. ಆದರೆ, ಲೋಕಸಭೆ ಚುನಾವಣೆ ನಂತರ ಅಧ್ಯಕ್ಷರನ್ನು ಬದಲಿಸುತ್ತೇವೆ ಎಂದು ವರಿಷ್ಠರೇ ತಿಳಿಸಿದ್ದರು. ಅದರಿಂದಾಗಿ ಗೊಂದಲ ಸೃಷ್ಟಿಯಾಗಿದ್ದು, ಅದನ್ನು ಹೈಕಮಾಂಡ್ ನಾಯಕರು ನಿವಾರಿಸಬೇಕು. ಡಿ.ಕೆ. ಶಿವಕುಮಾರ್ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸುತ್ತೇವೆ ಎನ್ನುವುದನ್ನಾದರೂ ಹೈಕಮಾಂಡ್ ಸ್ಪಷ್ಟಪಡಿಸಲಿ ಎಂದರು.
ಪಕ್ಷಕ್ಕೆ ಪೂರ್ಣ ಪ್ರಮಾಣದ ಅಧ್ಯಕ್ಷರಿದ್ದರೆ ಅನುಕೂಲವಾಗಲಿದೆ. ಪಕ್ಷ ಸಂಘಟನೆ ಸೇರಿ ಎಲ್ಲ ವಿಚಾರಗಳಿಗೂ ಪೂರಕವಾಗಲಿದೆ. ಮುಂದೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಬರಲಿದ್ದು, ಪೂರ್ಣ ಪ್ರಮಾಣದ ಅಧ್ಯಕ್ಷರಿದ್ದರೆ ಪಕ್ಷದ ಕೆಲಸ ಇನ್ನಷ್ಟು ವೇಗವಾಗಿ ನಡೆಯಲಿದೆ ಎಂಬುದು ನಮ್ಮ ಅಭಿಪ್ರಾಯ ಎಂದು ಹೇಳಿದರು.
ನೋಟಿಸ್ ಕೊಟ್ಟರೆ ಉತ್ತರಿಸುತ್ತೇನೆ: ವಿಧಾನಸೌಧದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ನೀಡಿರುವ ಹೇಳಿಕೆಗೆ ಬದಲಾಗಿ ನನಗೆ ನೋಟಿಸ್ ನೀಡಿದರೆ ಅದಕ್ಕೆ ಉತ್ತರಿಸುತ್ತೇನೆ. ನೋಟಿಸ್ ನೀಡಿದ ಕೂಡಲೇ ಯಾವುದೇ ಅನಾಹುತವೂ ಆಗುವುದಿಲ್ಲ. ನಾನು ನೀಡಿರುವ ಹೇಳಿಕೆ ಸ್ಪಷ್ಟವಾಗಿದೆ. ಅಧ್ಯಕ್ಷರು ನೋಟಿಸ್ ನೀಡಿದರೆ ಅದಕ್ಕೆ ಪ್ರತಿಕ್ರಿಯಿಸುತ್ತೇನೆ. ಮಾಧ್ಯಮಗಳ ಮುಂದೆ ನೀಡಿದ ಹೇಳಿಕೆಯನ್ನು ತಿರುಚಲಾಗಿದೆ. ಮಾಧ್ಯಮಗಳಿಂದ ನನಗೂ ಮತ್ತು ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ ಎಂದರು.