ಸಾರಾಂಶ
ಹಾಕಬೇಕು ಎಂಬ ಚುನಾವಣಾ ಆಯೋಗದ ಸೂಚನೆಯನ್ನು ಪಾಲಿಸುವುದಿಲ್ಲ ಎಂದು ಉದ್ಧವ್ ಠಾಕ್ರೆ ಸಡ್ಡು ಹೊಡೆದಿದ್ದಾರೆ.
ಮುಂಬೈ: ತಮ್ಮ ಪಕ್ಷ ಹೊರತಂದಿರುವ ನೂತನ ಧ್ಯೇಯಗೀತೆಯಿಂದ ‘ಹಿಂದೂ’ ಮತ್ತು ‘ಜೈ ಭವಾನಿ’ ಎಂಬ ಪದಗಳನ್ನು ತೆಗೆದು ಹಾಕಬೇಕು ಎಂಬ ಚುನಾವಣಾ ಆಯೋಗದ ಸೂಚನೆಯನ್ನು ಪಾಲಿಸುವುದಿಲ್ಲ ಎಂದು ಶಿವಸೇನೆ (ಉದ್ಧವ್ ಬಣ) ನಾಯಕ ಉದ್ಧವ್ ಠಾಕ್ರೆ ಸಡ್ಡು ಹೊಡೆದಿದ್ದಾರೆ.
‘ತುಳಜಾ ಭವಾನಿ ಆಶೀರ್ವಾದದಿಂದ ಛತ್ರಪತಿ ಶಿವಾಜಿ ಮಹಾರಾಜರು, ಹಿಂದವೀ ಸಮಾಜ ಸ್ಥಾಪಿಸಿದ್ದರು. ಹೀಗಿರುವಾಗ ಹಿಂದೂ ಮತ್ತು ಜೈ ಭವಾನಿ ಎಂಬ ಪದ ತೆಗೆಯುವಂತೆ ನೀಡಿದ ನೋಟಿಸ್ ಮಹಾರಾಷ್ಟ್ರಕ್ಕೆ ಮಾಡಿದ ಅವಮಾನ. ನಾವೇನು ಹಿಂದೂ ಧರ್ಮ ಅಥವಾ ದೇವರ ಹೆಸರಲ್ಲಿ ಮತ ಕೇಳುತ್ತಿಲ್ಲ. ಹೀಗಾಗಿ ಧ್ಯೇಯ ಗೀತೆಯಿಂದ ಆ ಎರಡೂ ಪದಗಳನ್ನು ತೆಗೆಯುವುದಿಲ್ಲ’ ಎಂದಿದ್ದಾರೆ.
‘ಒಂದು ವೇಳೆ ನಮ್ಮ ನಿರ್ಧಾರದ ವಿರುದ್ಧ ಆಯೋಗ ಕ್ರಮ ಕೈಗೊಂಡಿದ್ದೇ ಆದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಜೈ ಬಜರಂಗ ಬಲಿ ಎಂದು ಇವಿಎಂ ಬಟನ್ ಒತ್ತಿ ಎಂದು ಹೇಳಿದ್ದರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂಬುದನ್ನು ತಿಳಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.