ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಿ

| Published : Nov 09 2023, 01:00 AM IST

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ನಿಗದಿತ ಕಾಲಮಿತಿಯೊಳಗಾಗಿ ಸಾರ್ವಜನಿಕರಿಗೆ ತಲುಪಿಸುವಲ್ಲಿ ಅಧಿಕಾರಿಗಳು ನಿಗಾವಹಿಸಿ ಕೆಲಸ ಮಾಡಬೇಕು ಎಂದು ಗೃಹ ಸಚಿವ ಡಾ: ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ನಿಗದಿತ ಕಾಲಮಿತಿಯೊಳಗಾಗಿ ಸಾರ್ವಜನಿಕರಿಗೆ ತಲುಪಿಸುವಲ್ಲಿ ಅಧಿಕಾರಿಗಳು ನಿಗಾವಹಿಸಿ ಕೆಲಸ ಮಾಡಬೇಕು ಎಂದು ಗೃಹ ಸಚಿವ ಡಾ: ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.

ಶಿರಾ ತಾಲೂಕಿನ ಮಿನಿ ವಿಧಾನಸೌಧದ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ‘ಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯಗಳ ಕುರಿತ ಸಭೆ ಉದ್ದೇಶಿಸಿ ಮಾತನಾಡಿದ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.

ಶಿರಾ ತಾಲೂಕಿಗೆ ಸಂಬಂಧಿಸಿದ ಕೃಷಿ, ತೋಟಗಾರಿಕೆ, ಸಣ್ಣ ನೀರಾವರಿ ಸೇರಿದಂತೆ ಎಲ್ಲಾ ಇಲಾಖೆಗಳ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿ ವಿವಿಧ ಅಧಿಕಾರಿಗಳಿಂದ ಪ್ರಗತಿ ವರದಿ ಪಡೆದು ಮಾತನಾಡಿದ ಅವರು, ಬರ ಪರಿಸ್ಥಿತಿಯ ನಿರ್ವಹಣೆಗಾಗಿ ಎಲ್ಲಾ ಜಿಲ್ಲೆಗಳಿಗೂ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಜಿಲ್ಲೆಗೆ 15 ಕೋಟಿ ಬಿಡುಗಡೆ ಮಾಡಲಾಗಿದೆ, ಸರ್ಕಾರದಲ್ಲಿ ಹಣದ ಕೊರತೆ ಇಲ್ಲ ಎಂದರು.

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಂದಿನ ಜನವರಿ ನಂತರದ ನಾಲ್ಕು ಮಾಹೆಗಳಲ್ಲಿ ಕುಡಿಯುವ ನೀರು ಹಾಗೂ ಪಶುಗಳಿಗೆ ಮೇವಿನ ತೊಂದರೆಯಾಗದಂತೆ ಬರ ನಿರ್ವಹಣೆ ಮಾಡುವ ಸಂಬಂಧ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಹಾಗೂ ಶಾಸಕರಾದ ಟಿ.ಬಿ. ಜಯಚಂದ್ರ ಮಾತನಾಡಿ, ಶಿರಾ ತಾಲೂಕಿನಲ್ಲಿ ರಾಸುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನೀರಿರುವ ಕೆರೆಗಳ ಸದ್ಬಳಕೆ ಮಾಡಿಕೊಂಡು, ಪಶುಗಳಿಗಾಗಿ ಮೇವು ಬೆಳೆಸಿ, ಮುಂದಿನ ಬೇಸಿಗೆಯಲ್ಲಿ ಪಶುಗಳಿಗೆ ಮೇವು ಕೊರತೆಯಾಗದಂತೆ ವಿವಿಧ ಹಂತಗಳಲ್ಲಿ ಮೇವು ಸಂಗ್ರಹಿಸಬೇಕು ಎಂದರು.

ತಾಲೂಕಿನಲ್ಲಿ 270 ಆರ್.ಒ ಪ್ಲಾಂಟ್‌ಗಳಿದ್ದು, ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಸಮಗ್ರ ನಿರ್ವಹಣೆ ಮಾಡಿ ಕ್ರಮವಹಿಸುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಜಿ. ಪ್ರಭು ಅವರು, ಜಿ.ಪಂ.ಸೇರಿದ ಶುದ್ಧ ಕುಡಿವ ನೀರಿನ ಘಟಕಗಳನ್ನು ಸಮರ್ಪಕ ನಿರ್ವಹಣೆ ಮಾಡಲಾಗುತ್ತಿದ್ದು, ದುರಸ್ತಿಗೆ ಬಂದಿರುವ ಖಾಸಗಿ ಘಟಕಗಳನ್ನು ಸಹ ಸರಿಪಡಿಸಲು ಕ್ರಮವಹಿಸಲಾಗುತ್ತಿದೆ.500 ಕೋಟಿ ವೆಚ್ಚದ ನರೇಗಾ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಅನುಷ್ಟಾನಗೊಳಿಸಲಾಗುತ್ತಿದೆ ಎಂದರು.

ಪ್ರತಿ ಗ್ರಾ.ಪಂ. ವ್ಯಾಪ್ತಿಯ 300 ರಿಂದ 500 ಜನ ಹಾಗೂ ಪ್ರತಿ ರೈತನಿಗೆ 30ರಿಂದ 50 ಸಾವಿರದ ವರೆಗಿನ ಕಾಮಗಾರಿಯಂತೆ ಜಿಲ್ಲೆಯ ಒಂದು ಲಕ್ಷ ರೈತರನ್ನು ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಅಂಗನವಾಡಿ ಶಾಲೆ, ಆಸ್ಪತ್ರೆ, ಇತರೆ ಸರ್ಕಾರಿ ಕಟ್ಟಡ, ರಸ್ತೆ ಮೊದಲಾದ ಸಮುದಾಯ ಆಧಾರಿತ ಕಾಮಗಾರಿಗಳ ಅನುಷ್ಟಾನಗೊಳಿಸಲಾಗುತ್ತಿದೆ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪವಿಭಾಗಾಧಿಕಾರಿ ರಿಷಿ ಆನಂದ್, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.