ಸಾರಾಂಶ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಎಚ್ಚರಿಕೆಗೂ ಕ್ಯಾರೆ ಎನ್ನದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.
ಹುಬ್ಬಳ್ಳಿ : ‘ಪಕ್ಷ ಹಾಗೂ ಪಕ್ಷದ ಅಧ್ಯಕ್ಷರ ವಿರುದ್ಧ ಬಹಿರಂಗ ಹೇಳಿಕೆ ನೀಡಬೇಡಿ, ವರಿಷ್ಠರ ಬಳಿ ಹೋಗಿ ಮಾತನಾಡಿ’ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಎಚ್ಚರಿಕೆಗೂ ಕ್ಯಾರೆ ಎನ್ನದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ್, ಯಡಿಯೂರಪ್ಪ ಅವರನ್ನು ಲಿಂಗಾಯತರ ಪ್ರಭಾವಿ ನಾಯಕ ಎಂದುಕೊಂಡಿದ್ದಾರೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡದಿದ್ದರೆ ಬಿಜೆಪಿ ನೆಲಕಚ್ಚುತ್ತೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ಅವರ ಜೊತೆ ಯಾವುದೇ ಲಿಂಗಾಯತರು ಇಲ್ಲ. ಬಿಜೆಪಿ ವರಿಷ್ಠರು ಯಾವ ಉದ್ದೇಶ ಇಟ್ಟುಕೊಂಡು ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದಾರೋ ಗೊತ್ತಿಲ್ಲ ಎಂದರು.
ಭಾನುವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಪ್ರಹ್ಲಾದ್ ಜೋಶಿ, ಪಕ್ಷದ ಅಧ್ಯಕ್ಷರು, ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ. ಅವರ ವಿರುದ್ಧ ಯಾವುದಾದರೂ ಅಸಮಾಧಾನವಿದ್ದರೆ ವರಿಷ್ಠರ ಗಮನಕ್ಕೆ ತರಲಿ ಎಂದು ಕಿವಿಮಾತು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ, ನಾವು ಬಹಿರಂಗವಾಗಿಯೇ ಮಾತನಾಡುತ್ತೇವೆ ಎಂದು ತಿರುಗೇಟು ನೀಡಿದರು.
ನಕಲಿ ಸಹಿ ಬಗ್ಗೆ ತನಿಖೆ ಆಗಲಿ:
ಇದೇ ವೇಳೆ, ವಿಜಯೇಂದ್ರ ವಿರುದ್ಧವೂ ವಾಗ್ಧಾಳಿ ನಡೆಸಿದ ಯತ್ನಾಳ, ವಿಜಯೇಂದ್ರ ಅವರು ಯಡಿಯೂರಪ್ಪನವರ ನಕಲಿ ಸಹಿ ಮಾಡಿ ರಾಜ್ಯವನ್ನು ಲೂಟಿ ಹೊಡೆದಿಲ್ಲವೇ?. ಕಾಂಗ್ರೆಸ್ ಸರ್ಕಾರಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಾಕತ್ ಇದ್ದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಎಷ್ಟು ಸಹಿ ಮಾಡಿದ್ದಾರೆ. ಅದರಲ್ಲಿ ನಕಲಿ ಎಷ್ಟು?, ಅಸಲಿ ಎಷ್ಟು? ಎಂಬುದರ ಬಗ್ಗೆ ಸಮಗ್ರ ತನಿಖೆ ಮಾಡಲಿ ಎಂದು ಸವಾಲೆಸೆದರು.
ಇದೇ ವೇಳೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾವು ಈಗಾಗಲೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿದ್ದೇವೆ. ಹೈಕಮಾಂಡ್ ಮಧ್ಯ ಪ್ರವೇಶಿಸಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.
ನಮ್ಮದೇ ಕೋರ್ ಕಮಿಟಿ ಇದೆ. ಅಲ್ಲಿ ನಾವು ಅಭ್ಯರ್ಥಿಯನ್ನು ತೀರ್ಮಾನ ಮಾಡಿ ಕಣಕ್ಕಿಳಿಸುತ್ತೇವೆ. ರಾಜ್ಯಾಧ್ಯಕ್ಷರ ಚುನಾವಣೆಗೆ ನಮ್ಮ ಟೀಂನಿಂದ ಏನೇನು ತಯಾರಿ ಮಾಡಿಕೊಳ್ಳಬೇಕೋ ಅದನ್ನು ಮಾಡಿಕೊಂಡಿದ್ದೇವೆ. ರಮೇಶ ಜಾರಕಿಹೊಳಿ ಸೇರಿದಂತೆ ಹಲವರೊಂದಿಗೆ ಚರ್ಚಿಸಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದರು.
ರೇಣುಗೆ ತಿರುಗೇಟು:ಯತ್ನಾಳ ಅವರನ್ನು ಬಿಜೆಪಿಗೆ ಕರೆ ತಂದಿದ್ದು ಯಡಿಯೂರಪ್ಪ ಎಂಬ ರೇಣುಕಾಚಾರ್ಯ ಹೇಳಿಕೆಗೆ ತಿರುಗೇಟು ನೀಡಿದ ಯತ್ನಾಳ, ನನ್ನನ್ನು ಬಿಜೆಪಿಗೆ ಮರಳಿ ಕರೆದಿದ್ದು ಅಮಿತ್ ಶಾ. ಅಮಿತ್ ಶಾ ಕರೆದಿದ್ದರಿಂದ ಬಿಜೆಪಿಗೆ ಬಂದೆ. ಯಡಿಯೂರಪ್ಪ ಬಳಿ ನಾನು ಯಾವತ್ತೂ ಮಂತ್ರಿ ಮಾಡಿ ಎಂದು ಕೇಳಿಕೊಂಡಿಲ್ಲ ಎಂದರು.
ಯತ್ನಾಳ ವಿರೋಧಿ ಬಣ ದೆಹಲಿಗೆ ಹೋಗಲಿ, ವಾಷಿಂಗ್ಟನ್‌ಗೆ ಹೋಗಲಿ, ಎಲ್ಲಿ ಬೇಕಾದಲ್ಲಿ ಹೋಗಿ ಆರೋಪಿಸಲಿ. ಸತ್ಯ ಸತ್ಯವೇ. ಮಾಧ್ಯಮದವರು ಒಳ್ಳೆಯವರನ್ನು ಮಾತನಾಡಿಸಬೇಕು. ಕಿಸೆಗಳ್ಳರನ್ನು, ದಲಿತರ ಮೀಸಲಾತಿ ಕಸಿದುಕೊಂಡ ನಾಲಾಯಕರನ್ನು ಬಿಡಬೇಕು ಎಂದು ಪರೋಕ್ಷವಾಗಿ ರೇಣುಕಾಚಾರ್ಯ ವಿರುದ್ಧವೂ ವಾಗ್ದಾಳಿ ನಡೆಸಿದರು.
ನನ್ನ ವಿರುದ್ಧ ಕೊಟ್ಟಿರುವ ದೂರಿನ ಪ್ರತಿಗಳಿಂದ ಬಿಜೆಪಿಯ ಕಾರ್ಯಾಲಯದ ಒಂದು ರೂಮ್ ತುಂಬಿದೆ. ಇದೊಂದು ದೂರು ಕೊಟ್ಟಲ್ಲಿ ಅದು ಅಲ್ಲಿಗೇ ಹೋಗಿ ಬೀಳುತ್ತದೆ. ಈಗಾಗಲೇ ನೋಟೀಸ್‌ಗೆ ಉತ್ತರ ಕೊಟ್ಟಿದ್ದೇನೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.