ಬಿವೈವಿ ಬದಲಾವಣೆಗಾಗಿ ಮತ್ತೆ ಯತ್ನಾಳ್‌ ಬಣ ಸಭೆ : ಪಕ್ಷದಲ್ಲಿ ಮತ್ತೆ ಭಿನ್ನ ಚಟುವಟಿಕೆ ಶುರು ಸಂಭವ

| N/A | Published : Mar 24 2025, 01:16 AM IST / Updated: Mar 24 2025, 04:08 AM IST

ಸಾರಾಂಶ

ವಿಧಾನಮಂಡಲದ ಅಧಿವೇಶನ ಮುಗಿದ ಬೆನ್ನಲ್ಲೇ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಮತ್ತೆ ಚಟುವಟಿಕೆಗಳು ಗರಿಗೆದರುವ ನಿರೀಕ್ಷೆಯಿದೆ.

 ಬೆಂಗಳೂರು :  ವಿಧಾನಮಂಡಲದ ಅಧಿವೇಶನ ಮುಗಿದ ಬೆನ್ನಲ್ಲೇ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಮತ್ತೆ ಚಟುವಟಿಕೆಗಳು ಗರಿಗೆದರುವ ನಿರೀಕ್ಷೆಯಿದೆ.

ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಯಾವುದೇ ಕಾರಣಕ್ಕೂ ಮುಂದುವರೆಸಬಾರದು ಎಂದು ಪಟ್ಟು ಹಿಡಿದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಣ ಮುಂದಿನ ವಾರದಲ್ಲಿ ಮತ್ತೆ ಸಭೆ ಸೇರುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ಅಧಿವೇಶನದ ಹಿನ್ನೆಲೆಯಲ್ಲಿ ವಿಜಯೇಂದ್ರ ಬದಲಾವಣೆ ಬಗ್ಗೆ ಸತತ ಒತ್ತಡ ಹೇರುವ ತಂತ್ರ ನಡೆಸಿದ್ದ ಯತ್ನಾಳ್ ಬಣದ ಮುಖಂಡರು ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಅಧಿವೇಶನ ಮುಗಿದ ಹಿನ್ನೆಲೆಯಲ್ಲಿ ತಮ್ಮ ಪ್ರಯತ್ನವನ್ನು ಮುಂದುವರೆಸಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಯತ್ನಾಳ್ ಮತ್ತು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಬಣಗಳ ನಡುವೆ ವೀರಶೈವ ಲಿಂಗಾಯತ ಸಮುದಾಯದ ಬೆಂಬಲ ಪ್ರದರ್ಶಿಸಲು ಸಮಾವೇಶ ನಡೆಸುವ ಸಂಬಂಧ ಪೈಪೋಟಿ ಏರ್ಪಟ್ಟಿತ್ತು. ಇದಕ್ಕೆ ಸಂಬಂಧಿಸಿ ಪೂರ್ವಸಿದ್ಧತಾ ಸಭೆಗಳನ್ನೂ ನಡೆಸತೊಡಗಿದ್ದವು. ಬಳಿಕ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಮತ್ತು ಅಧಿವೇಶನದ ಪ್ರಯುಕ್ತ ಪೂರ್ವಸಿದ್ಧತಾ ಸಭೆಗಳಿಗೆ ಎರಡೂ ಬಣಗಳು ಬ್ರೇಕ್ ಹಾಕಿದ್ದವು. ಇದೀಗ ಮತ್ತೆ ಸಭೆಗಳಿಗೆ ಚಾಲನೆ ನೀಡುವರೋ ಅಥವಾ ಕೈಬಿಡುವುರೋ ಎಂಬುದನ್ನು ಕಾದು ನೋಡಬೇಕು.

ಇನ್ನು ಪಕ್ಷದ ರಾಜ್ಯ ಘಟಕದ ಚುನಾವಣೆಯ ಸಂಚಾಲಕರಾಗಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಪುತ್ರನ ವಿವಾಹ ಸಮಾರಂಭದ ಕಾರಣಕ್ಕಾಗಿ ವ್ಯಸ್ತರಾಗಿದ್ದರು. ಇದೀಗ ವಿವಾಹ ಸಮಾರಂಭವೂ ಮುಗಿದಿದೆ. ಹೀಗಾಗಿ, ಇನ್ನು ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಚೌಹಾಣ್ ಗಮನಹರಿಸಲಿದ್ದಾರೆ. ಶೀಘ್ರದಲ್ಲೇ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.

ಬದಲಾವಣೆಗೆ ಪಟ್ಟು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆಗೆ ಪಟ್ಟ ಹಿಡಿದಿರುವ  ಯತ್ನಾಳ್‌ ನೇತೃತ್ವದ ಬಿಜೆಪಿ ಶಾಸಕರ ತಂಡ

ರಾಜ್ಯ ವಿಧಾನ ಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಬದಲಾವಣೆ ಕುರಿತ ಸಭೆಗೆ ಸ್ಥಗಿತಗೊಳಿಸಿದ್ದ ನಾಯಕರು

ವಿಧಾನಮಂಡಲ ಅಧಿವೇಶನ ಮುಗಿದ ಬೆನ್ನಲ್ಲೇ ಮತ್ತೆ ಬಿವೈವಿ ಬದಲಾವಣೆ ಪ್ರಯತ್ನ ಮುಂದುವರೆಸಲು ಯತ್ನಾಳ್‌ ತಂಡದ ನಿರ್ಧಾರ

ಒಂದೆರೆಡು ದಿನದಲ್ಲೇ ಆಪ್ತರ ಸಭೆ ನಡೆಸಿ ಮುಂದಿನ ಹೋರಾಟರ ರೂಪುರೇಷೆ ರಚಿಸಲು ಯತ್ನಾಳ್‌ ತಂಡದ ಹಿರಿಯರ ನಾಯಕರ ಪ್ಲ್ಯಾನ್‌