ಸಾರಾಂಶ
ಮುಡಾ ಹಗರಣದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗೌರವಯುತವಾಗಿ ರಾಜೀನಾಮೆ ನೀಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂಗೆ ಸಲಹೆ ನೀಡಿದ್ದಾರೆ.
ವಿಜಯಪುರ: ಮುಡಾ ಹಗರಣದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗೌರವಯುತವಾಗಿ ರಾಜೀನಾಮೆ ನೀಡುವ ಮೂಲಕ ರಾಜ್ಯಕ್ಕೆ ಆದರ್ಶವಾಗಬೇಕು. ಇಲ್ಲವಾದರೆ ಯಡಿಯೂರಪ್ಪ ತರ ಆಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂಗೆ ಸಲಹೆ ನೀಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಿರುವುದರಿಂದ ಅಧಿಕಾರಿಗಳಿಗೆ ಪಾರದರ್ಶಕವಾಗಿ ತನಿಖೆ ಮಾಡಲು ಆಗುವುದಿಲ್ಲ. ಹಾಗೆನಾದರೂ ಸಿಎಂ ವಿರುದ್ಧ ವರದಿ ಕೊಟ್ಟರೆ ಅಧಿಕಾರಿಗಳನ್ನು ವರ್ಗಾವಣೆ ಅಥವಾ ಸಸ್ಪೆಂಡ್ ಮಾಡುತ್ತಾರೆ. ಹಾಗಾಗಿ ಭಯದಲ್ಲಿ ಸರಿಯಾಗಿ ತನಿಖೆ ನಡೆಯುವುದಿಲ್ಲ ಎಂದರು.
ಚುನಾವಣಾ ಬಾಂಡ್ ವಿಚಾರದಲ್ಲಿ ಪ್ರಧಾನಿ ಏಕೆ ರಾಜೀನಾಮೆ ನೀಡಿಲ್ಲ ಎಂಬ ಕಾಂಗ್ರೆಸ್ ನಾಯಕರ ಪ್ರಶ್ನೆಗೆ ಕಿಡಿಕಾರಿದ ಯತ್ನಾಳ್ ಅವರು, ಎಲ್ಲ ಪಕ್ಷಗಳು ಚುನಾವಣಾ ಬಾಂಡ್ ತೆಗೆದುಕೊಂಡಿವೆ. ಹಾಗಾದರೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ರಾಜೀನಾಮೆ ಕೊಡುತ್ತಾರಾ? ಎಂದು ಏಕವಚನದಲ್ಲಿ ಪ್ರಶ್ನಿಸಿದ್ದಾರೆ.