ಕಾಂಗ್ರೆಸ್-ಬಿಜೆಪಿಗಳೆರಡರಲ್ಲೂ ರಾಜ್ಯ ರಾಜಕಾರಣದಲ್ಲಿ ಡಿಸೆಂಬರ್‌ಗೆ ಕ್ರಾಂತಿ ಆಗುತ್ತಾ?

| Published : Sep 28 2024, 01:22 AM IST / Updated: Sep 28 2024, 05:08 AM IST

Siddaramaiah

ಸಾರಾಂಶ

ರಾಜ್ಯ ರಾಜಕಾರಣದಲ್ಲಿ ಸುನಾಮಿಯ ಮುನ್ಸೂಚನೆ ಕಾಣಿಸುತ್ತಿದೆ. ಕಾಂಗ್ರೆಸ್-ಬಿಜೆಪಿಗಳೆರಡರಲ್ಲೂ ರಾಜಕೀಯ ಧ್ರುವೀಕರಣ ನಡೆಯುವುದು ಬಹುತೇಕ ಖಚಿತವಾಗಿದೆ.

 ಬೆಂಗಳೂರು  : ರಾಜ್ಯ ರಾಜಕಾರಣದಲ್ಲಿ ಸುನಾಮಿಯ ಮುನ್ಸೂಚನೆ ಕಾಣಿಸುತ್ತಿದೆ. ಕಾಂಗ್ರೆಸ್-ಬಿಜೆಪಿಗಳೆರಡರಲ್ಲೂ ರಾಜಕೀಯ ಧ್ರುವೀಕರಣ ನಡೆಯುವುದು ಬಹುತೇಕ ಖಚಿತವಾಗಿದೆ. ವರ್ಷಾಂತ್ಯದ ತಿಂಗಳಾದ ಡಿಸೆಂಬರ್ ಕೆಲವು ರಾಜಕೀಯಕ್ಕೆ ಅಂತ್ಯ ಹಾಡಿದರೆ, ಮತ್ತಷ್ಟು ರಾಜಕೀಯ ಚಟುವಟಿಕೆಗೆ ಆರಂಭವೂ ಡಿಸೆಂಬರ್‌ನಲ್ಲೇ ಆಗುವುದು ಬಹುತೇಕ ನಿಶ್ಚಿತವಾಗಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಪ್ರಕರಣದ ಕುರಿತು ಅಂತಿಮ ವರದಿ ಸಲ್ಲಿಸಲು ಡಿಸೆಂಬರ್ ಗಡುವು ನೀಡಿದೆ. ಇಲ್ಲಿಯ ತನಕ ಸಿದ್ದರಾಮಯ್ಯ ಜೊತೆಗೆ ನಿಂತಿದ್ದ ಇಡೀ ಕಾಂಗ್ರೆಸ್ ಒಳಗಡೆ ಇದೀಗ ಸಣ್ಣ ಪಿಸು ಪಿಸು ಆರಂಭವಾಗಿದೆ. ಇದರ ಮುಂದುವರೆದ ಭಾಗವಾಗಿ ಮಾಜಿ ಸಚಿವ, ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಮುಖ್ಯಮಂತ್ರಿ ವಿರುದ್ಧ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇತ್ತ ಬಿಜೆಪಿ ಪಾಳೆಯದಲ್ಲಿ ಆಗಲೇ ಕುದಿಯುತ್ತಿರುವ ಬೇಗುದಿಯೂ ಡಿಸೆಂಬರ್‌ನಲ್ಲೇ ಸ್ಫೋಟಿಸುವ ಇಲ್ಲವೇ ನಾಯಕತ್ವ ಬದಲಿಸುವ ಕಾರ್ಯವೂ ಡಿಸೆಂಬರ್‌ನಲ್ಲೇ ಆಗುವ ಲಕ್ಷಣಗಳಿವೆ. ನವೆಂಬರ್ 15ಕ್ಕೆ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಒಂದು ವರ್ಷ ಪೂರೈಸುತ್ತಿದ್ದಾರೆ. ಡಿಸೆಂಬರ್‌ನಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷರ ಬದಲಾವಣೆಯೂ ಇದೆ. ಇದೇ ಸಂದರ್ಭ ಬಳಸಿ ಭಿನ್ನಮತದ ಹಿನ್ನೆಲೆಯಲ್ಲಿ ಡಿಸೆಂಬರ್‌ನಲ್ಲೇ ವಿಜಯೇಂದ್ರ ಅವರನ್ನು ಬದಲಿಸುತ್ತಾರೆ ಎಂಬ ಮಾತು ಬಿಜೆಪಿಯಲ್ಲಿ ದಟ್ಟವಾಗಿದೆ.

ಮುನಿಸಿಗೆ ಮದ್ದೆರೆಯಲು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ಮಧ್ಯಸ್ಥಿಕೆ ವಹಿಸಿದರೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧದ ಅಸಮಾಧಾನ ಶಮನವಾಗಿಲ್ಲ. ಒಂದು ಕಡೆ ಪಕ್ಷದಿಂದ ಹೊರಗಿರುವ ಕೆ.ಎಸ್ ಈಶ್ವರಪ್ಪ, ರಾಯಣ್ಣ ಚನ್ನಮ್ಮ ಬ್ರಿಗೇಡ್ ಕಟ್ಟಲು ಸಭೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್‌ ಬಂಗಾರಪ್ಪ ತಂಡವು ಸಭೆ ನಡೆಸುವುದನ್ನು ನಿಲ್ಲಿಸಿಲ್ಲ. ಗುರುವಾರ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗವಹಿಸಿಲ್ಲ. ಮಾಧ್ಯಮಕ್ಕೆ ಮುಟ್ಟಿಸಿರುವ ‘ಅನಾರೋಗ್ಯ ಕಾರಣ’ ಎಂಬ ಮಾಹಿತಿ ಕೇವಲ ನೆಪ ಎಂಬುದು ಎಲ್ಲರಿಗೂ ಗೊತ್ತಾಗಿದೆ.

ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಮತ್ತಷ್ಟು ಕೇಸುಗಳನ್ನು ದಾಖಲಿಸಿ, ವಿಜಯೇಂದ್ರ ಅವರನ್ನು ಹಿಮ್ಮೆಟ್ಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಂಡ ಚುರುಕಾಗಿ ಕೆಲಸ ಮಾಡುತ್ತಿದೆ. ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಕೇಸುಗಳನ್ನು ದಾಖಲಿಸಿ ವಿಜಯೇಂದ್ರ ಕಟ್ಟಿ ಹಾಕುವ ಜೊತೆಗೆ ಬಿಜೆಪಿ ಒಳಗೆ ಬಿರುಕು ಮೂಡಿಸುವ ಸರ್ಕಾರದ ತಂತ್ರ ಯಶಸ್ವಿಯಾಗುವ ಲಕ್ಷಣಗಳು ದಟ್ಟವಾಗಿವೆ.

ಸದ್ಯಕ್ಕೆ ಭಿನ್ನಮತೀಯ ಚಟುವಟಿಕೆ ಕಾಂಗ್ರೆಸ್ಸಿಗಿಂತ ವಿಪಕ್ಷವಾಗಿರುವ ಬಿಜೆಪಿಯಲ್ಲೇ ಜೋರಿದ್ದರೂ ಡಿಸೆಂಬರ್ ಹೊತ್ತಿಗೆ ಕಾಂಗ್ರೆಸ್ ಒಳಗೂ ಭಿನ್ನರಾಗ ತಾರಕಕ್ಕೇರಲಿದೆ ಎಂದು ಕಾಂಗ್ರೆಸ್ ಮೂಲಗಳು ಖಚಿತಪಡಿಸುತ್ತಿವೆ. ಸಿದ್ದರಾಮಯ್ಯ ಜೊತೆಗೆ ಹೈಕಮಾಂಡ್ ಇದೆ ಎಂಬ ಕಾರಣಕ್ಕೆ ಭಿನ್ನಮತ ಬಹಿರಂಗಕ್ಕೆ ಬರುವುದು ತಡವಾಗುತ್ತಿದೆ. ಹೈಕಮಾಂಡ್‌ಗೆ ಅರಿವು ಮಾಡಿಸುವ ತಂಡವೊಂದು ರೆಡಿಯಾಗುತ್ತದೆ. ಡಿಸೆಂಬರ್ ಹೊತ್ತಿಗೆ ಇದಕ್ಕೆ ಶಕ್ತಿ ಬರಲಿದೆ ಎನ್ನಲಾಗಿದೆ.

ಸ್ವಪಕ್ಷೀಯರಿಂದ ಭಿನ್ನಮತ ಎದುರಿಸುವ ಸಿಎಂ ಸಿದ್ದರಾಮಯ್ಯ ಮತ್ತು ವಿಜಯೇಂದ್ರ ಅವರ ಮುಂದಿನ ನಡೆ ಏನಾಗಬಹುದು ಎಂಬ ಕುತೂಹಲವಿದೆ. ಏನೇ ಎದುರಾದರೂ ಇಬ್ಬರೂ ಸುಮ್ಮನೆ ಸೋಲೊಪ್ಪಿ ಕೂರುವ ಜಾಯಮಾನದವರಲ್ಲ. ಈ ಹಿನ್ನೆಲೆಯಲ್ಲಿ ಈ ವರ್ಷಾಂತ್ಯದ ಡಿಸೆಂಬರ್‌ನಲ್ಲಿ ರಾಜ್ಯ ರಾಜಕಾರಣವು ಕೆಲವು ಅಂತ್ಯ ಮತ್ತು ಆರಂಭಗಳಿಗೆ ರಾಜ್ಯ ಸಾಕ್ಷಿಯಾಗುವುದು ಬಹುತೇಕ ನಿಚ್ಚಳವಾಗಿದೆ.