ಸಾರಾಂಶ
ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರವಾಗಿ ತಂಡವೊಂದು ಬಿಜೆಪಿಯಲ್ಲಿ ಕಾರ್ಯಾಚರಣೆ ಮಾಡುತ್ತಿರುವುದು ನೋವಿನ ಸಂಗತಿಯಾಗಿದ್ದು, ಹೈಕಮಾಂಡ್ ಈ ಸಂಬಂಧ ಮಧ್ಯಪ್ರವೇಶಿಸಬೇಕು ಎಂದು ಮಾಜಿ ಸಂಸದ ಡಿ.ವಿ.ಸದಾನಂದಗೌಡ ಒತ್ತಾಯಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದಲ್ಲಿ ವಿರೋಧಿ ಚಟುವಟಿಕೆ ನಡೆಸುವುದು ಸರಿಯಲ್ಲ. ಬಿಜೆಪಿಯಲ್ಲಿಯೇ ತಂಡವೊಂದು ಡಿ.ಕೆ.ಶಿವಕುಮಾರ್ ಪರ ಕೆಲಸ ಮಾಡುತ್ತಿದೆ ಎಂಬುದು ಬೇಸರದ ವಿಷಯ. ಈ ವಿಚಾರವಾಗಿ ಪಕ್ಷದ ಹೈಕಮಾಂಡ್ ಮಧ್ಯಪ್ರವೇಶಿಸಿ ಸರಿಪಡಿಸಬೇಕು. ಈ ರೀತಿ ರಾಜಕಾರಣ ನಡೆದರೆ ಜನತೆ ನಮ್ಮನ್ನು ಸಂಶಯದಿಂದ ನೋಡುವಂತಾಗುತ್ತದೆ ಎಂದು ತಿಳಿಸಿದರು.
ಪಾದಯಾತ್ರೆ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ವ್ಯಕ್ತಿಯೊಬ್ಬ ಅವರ ಕುಟುಂಬದ ಬಗ್ಗೆ ಮಾಡಿರುವ ಘಟನೆಗೆ ನೋವಿನಿಂದ ನುಡಿದಿದ್ದಾರೆ. ಅವರು ಮಾತನಾಡಿರುವುದು ತಪ್ಪು ಎಂದು ಹೇಳುವುದಿಲ್ಲ. ನೋವಾಗುವುದು ಸಹಜ. ಅವರ ಸ್ಥಾನದಲ್ಲಿ ನಾನು ನಿಂತು ನೋಡಿದಾಗ ನನಗೂ ನೋವಾಗುತ್ತದೆ. ಆದರೆ, ಅದಕ್ಕಿಂತ ಮೇಲಾಗಿ ನಿಂತು ನೋಡಿದರೆ ಜನರ ಹಿತದೃಷ್ಟಿಯಿಂದ ಸರ್ಕಾರ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಸರ್ಕಾರಿ ಖಜಾನೆ ಕೊಳ್ಳೆ ಹೊಡೆದಿರುವ, ಸರ್ಕಾರಿ ಜಾಗ ನುಂಗಿಹಾಕುವ ಭ್ರಷ್ಟ ರಾಜಕಾರಣವನ್ನು ಕೊನೆಗೊಳಿಸಬೇಕಾಗಿದೆ ಎಂದರು.
ಎನ್‌ಡಿಎ ಭಾಗವಾಗಿರುವುದರಿಂದ ಸರ್ಕಾರ ವಿರುದ್ಧ ಒಟ್ಟಾಗಿ ಹೋರಾಟ ನಡೆಸಬೇಕಿದೆ. ಕುಮಾರಸ್ವಾಮಿ ಅವರು ರಾಷ್ಟ್ರೀಯ ನಾಯಕರು, ಪಕ್ಷದ ರಾಜ್ಯಾಧ್ಯಕ್ಷರ ಬಳಿ ಅವರ ನೋವಿನ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಸಮಾಲೋಚನೆ ನಡೆಸಬೇಕಿತ್ತು. ಆದರೆ, ಸಾಮೂಹಿಕ ತೀರ್ಮಾನ ಕೈಗೊಂಡ ಮೇಲೆ ಹಿಂದೆ ಹೋಗುವುದು ಸೂಕ್ತವಲ್ಲ. ಒಟ್ಟಾಗಿ ಹೋರಾಟ ಮಾಡದಿದ್ದರೆ ಜನ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.