ಸಾರಾಂಶ
ರಾಜ್ಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದ ಧಾರವಾಡ ಜಿಪಂ ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆಗೆ ಶಾಸಕ ವಿನಯ್ ಕುಲಕರ್ಣಿಯೇ ಪ್ರಮುಖ ಕಾರಣ. ಆತನ ಸೂಚನೆ ಮೇರೆಗೆ ಬೆಂಗಳೂರಿನಿಂದ ಕೆಲವರನ್ನು ಕರೆಸಿ ಸಂಚು ರೂಪಿಸಿ ಹತ್ಯೆ ನಡೆಸಲಾಗಿದೆ ಎಂಬ ವಿಚಾರ ಆಪ್ತನಿಂದಲೇ ಬಯಲಾಗಿದೆ.
ಪ್ರಭುಸ್ವಾಮಿ ನಟೇಕರ್
ಬೆಂಗಳೂರು : ರಾಜ್ಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದ ಧಾರವಾಡ ಜಿಪಂ ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆಗೆ ಶಾಸಕ ವಿನಯ್ ಕುಲಕರ್ಣಿಯೇ ಪ್ರಮುಖ ಕಾರಣ. ಆತನ ಸೂಚನೆ ಮೇರೆಗೆ ಬೆಂಗಳೂರಿನಿಂದ ಕೆಲವರನ್ನು ಕರೆಸಿ ಸಂಚು ರೂಪಿಸಿ ಹತ್ಯೆ ನಡೆಸಲಾಗಿದೆ ಎಂಬ ವಿಚಾರ ಆಪ್ತನಿಂದಲೇ ಬಯಲಾಗಿದೆ.
ಪ್ರಕರಣದಲ್ಲಿ ಮೊದಲ ಆರೋಪಿ ಮತ್ತು ವಿನಯ್ ಕುಲಕರ್ಣಿ ಆಪ್ತನಾಗಿದ್ದ ಬಸವರಾಜ ಮುತ್ತಗಿ ಜನಪ್ರತಿನಿಧಿ ನ್ಯಾಯಾಲಯದಲ್ಲಿ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ವಿನಯ್ ಕುಲಕರ್ಣಿ ಪಾತ್ರದ ಕುರಿತು ವಿಸ್ತೃತವಾಗಿ ಮಾಹಿತಿ ನೀಡಿದ್ದಾರೆ. ಈ ಹೇಳಿಕೆಯಿಂದ ವಿನಯ್ ಕುಲಕರ್ಣಿ ಮೇಲಿನ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗುವ ಸಾಧ್ಯತೆಯಿದೆ.
ಯೋಗೇಶ್ ಗೌಡ ಹತ್ಯೆಗೆ ಧಾರವಾಡದ ಯುವಕರು ಒಪ್ಪಿಗೆ ಸೂಚಿಸದಿದ್ದಾಗ ಬೆಂಗಳೂರಿನಿಂದ ಒಂದಷ್ಟು ಮಂದಿಯನ್ನು ಕರೆಸಿ ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿ ಹತ್ಯೆ ನಡೆಸಲಾಗಿದೆ ಎಂಬ ಮಾಹಿತಿಯನ್ನು ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.
ಯೋಗೇಶ್ ಗೌಡ ಧಾರವಾಡ ಜಿ.ಪಂ.ಸದಸ್ಯರಾಗಿದ್ದನ್ನು ಸಹಿಸದ ವಿನಯ್ ಕುಲಕರ್ಣಿ ದ್ವೇಷ ಸಾಧಿಸಲಾರಂಭಿಸಿದರು. ಅವರ ಹತ್ಯೆಗೆ ಮೊದಲು ತಮಗೆ ಹೇಳಿದ್ದರು. ಈ ಬಗ್ಗೆ ತನಗೆ ಪರಿಚಯಸ್ಥ ಧಾರವಾಡದ ಹುಡುಗರಾದ ವಿಕಾಸ್ ಕಲಬುರಗಿ, ಕೀರ್ತಿ ಕುಮಾರ್ ಕುರಹಟ್ಟಿ, ವಿಕ್ರಂ ಬಳ್ಳಾರಿ, ಸಂದೀಪ್ ಸವದತ್ತಿ, ಮಹಾಬಲೇಶ್ವರ ಅವರನ್ನು ಭೇಟಿಯಾಗಿ ವಿನಯ್ ಕುಲಕರ್ಣಿ ವಿಚಾರ ಪ್ರಸ್ತಾಪಿಸಲಾಯಿತು. ಆದರೆ, ಅವರು ತಿರಸ್ಕರಿಸಿದರು. ಅದನ್ನು ವಿನಯ್ ಕುಲಕರ್ಣಿ ಅವರಿಗೆ ತಿಳಿಸಲಾಯಿತು. ಆದರೂ ಹತ್ಯೆಗೆ ತೀವ್ರ ಒತ್ತಡ ಹೇರಲಾಗಿದ್ದು, ಬೆಂಗಳೂರಿನಿಂದ ಯುವಕರನ್ನು ಕರೆಸಿಯಾದರೂ ಕೆಲಸ ಮಾಡಿಕೊಡುವಂತೆ ಕುಲಕರ್ಣಿ ಒತ್ತಾಯ ಮಾಡಿದ್ದರು ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಎಂಟನೇ ಆರೋಪಿ ದಿನೇಶ್ ನನ್ನು ಭೇಟಿಯಾಗಿ ವಿನಯ್ ಕುಲಕರ್ಣಿ ಪ್ರಸ್ತಾಪ ಮುಂದಿಡಲಾಯಿತು. ಇದಕ್ಕೆ ಎರಡು ದಿನಗಳ ಕಾಲಾವಕಾಶ ಕೋರಿದ್ದರಿಂದ ಶಿವಾನಂದ ವೃತ್ತದ ಬಳಿ ಇರುವ ಅಮೆರಿಕ ಕಾಲೋನಿಯ ಹೈಲ್ಯಾಂಡ್ ಸೂಟ್‌ನಲ್ಲಿ ಉಳಿದಿದ್ದೆವು. ಬಳಿಕ ತಮ್ಮನ್ನು ಭೇಟಿಯಾದ ದಿನೇಶ್ ಈ ಹತ್ಯೆಗೆ ಒಪ್ಪಿಗೆ ಸೂಚಿಸಿ, 20 ಲಕ್ಷ ರು. ಬೇಡಿಕೆ ಇಟ್ಟ, ಪ್ರಕರಣದಲ್ಲಿ ತನ್ನ ಹೆಸರು ಬರಬಾರದು, ಬಂಧನವಾಗದಂತೆ ನೋಡಿಕೊಳ್ಳಬೇಕು, ಜತೆಗೆ ಶರಣಾಗುವುದಿಲ್ಲ ಎಂಬ ಷರತ್ತು ವಿಧಿಸಿದ. ಆತ ಯೋಗೇಶ್ ಗೌಡನ ಹತ್ಯೆಗೆ ಒಪ್ಪಿಗೆ ನೀಡಿದ್ದು ಅಚ್ಚರಿಯಾಯಿತು. ಈ ಮಾಹಿತಿಯನ್ನು ವಿನಯ್ ಕುಲಕರ್ಣಿಗೆ ತಲುಪಿಸಲಾಯಿತು ಎಂಬ ಅಂಶ ತಪ್ಪೊಪ್ಪಿಗೆಯಲ್ಲಿದೆ.
ಧಾರವಾಡ ಹುಡುಗರ ಶರಣಾಗಿಸುವ ತಂತ್ರ:
ಬೆಂಗಳೂರು ಹುಡುಗರ ಷರತ್ತಿಗೆ ಒಪ್ಪಿದ ವಿನಯ್ ಕುಲಕರ್ಣಿ, ಬೆಂಗಳೂರು ಹುಡುಗರು ಹತ್ಯೆಗೆ ಬದ್ಧವಾಗಲಿ, ಪ್ರಕರಣದಲ್ಲಿ ಧಾರವಾಡ ಹುಡುಗರನ್ನು ಪೊಲೀಸರಿಗೆ ಶರಣಾಗಿಸೋಣ ಎಂದು ತೀರ್ಮಾನಿಸಿದರು. ಬೆಂಗಳೂರಲ್ಲಿ ಈ ಕುರಿತು ಮಾತುಕತೆ ನಡೆಸಿ, ಧಾರವಾಡಕ್ಕೆ ಹಿಂತಿರುಗಿದ ಬಳಿಕ ಈ ವಿಚಾರವನ್ನು ತಮ್ಮ ಪರಿಚಯಸ್ಥ ಧಾರವಾಡದ ಹುಡುಗರಿಗೆ ತಿಳಿಸಲಾಯಿತು. ಶರಣಾಗಲು ಧಾರವಾಡದ ಹುಡುಗರು ಒಪ್ಪಿದ್ದು, ಅಂತೆಯೇ ಹತ್ಯೆಗೆ ಸಂಚು ರೂಪಿಸಲಾಯಿತು. ಈ ವೇಳೆ 2016ರ ಏಪ್ರಿಲ್-ಮೇ ತಿಂಗಳಲ್ಲಿ ಹಲವು ಬಾರಿ ಬೆಂಗಳೂರು ಮತ್ತು ಧಾರವಾಡ ನಡುವೆ ಓಡಾಟ ನಡೆಯಿತು. ವಿನಯ್ ಕುಲಕರ್ಣಿ ಅವರನ್ನು ಪದೇ ಪದೆ ಭೇಟಿಯಾಗಿ ಇದೇ ವಿಚಾರವಾಗಿ ಚರ್ಚೆ ನಡೆಸಲಾಯಿತು. ಈ ನಡುವೆ, ಪೊಲೀಸ್ ಹಿರಿಯ ಅಧಿಕಾರಿಗಳ ಭೇಟಿಯೂ ನಡೆದಿತ್ತು ಎಂದು ಹೇಳಲಾಗಿದೆ.
ಜೂನ್ ತಿಂಗಳ ಮೊದಲ ವಾರದಲ್ಲಿ ಬೆಂಗಳೂರಿನಿಂದ ಹುಡುಗರು ಧಾರವಾಡಕ್ಕೆ ಆಗಮಿಸಿದ್ದರು. ಬೆಂಗಳೂರು ಹುಡುಗರ ತಂಡದಲ್ಲಿ ದಿನೇಶ್, ಅಶ್ವತ್ಥ, ಸುನೀಲ್, ನಜೀರ್ ಸೇರಿ ಇತರರು ಇದ್ದರು. ಒಮ್ಮೆ ವಿಫಲ ಪ್ರಯತ್ನ ನಡೆಯಿತಾದರೂ ನಂತರ ಮತ್ತೊಮ್ಮೆ ಸಂಚು ರೂಪಿಸಿ ಜೂನ್ ಎರಡನೇ ವಾರದಲ್ಲಿ ಹತ್ಯೆ ನಡೆಸಲಾಯಿತು ಎಂದು ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಉಲ್ಲೇಖ ಇದೆ.
ಕೊಲೆ ಮಾಡಿಸಿದ್ದೇ ಶಾಸಕ ವಿನಯ್ ಕುಲಕರ್ಣಿ: ಮುತ್ತಗಿ
- ಬಿಜೆಪಿ ನಾಯಕ ಯೋಗೇಶಗೌಡ ಕೊಲೆ ಪ್ರಕರಣ
- ಕೋರ್ಟಲ್ಲಿ ಕಾಂಗ್ರೆಸ್ ಶಾಸಕನ ಆಪ್ತನ ‘ತಪ್ಪೊಪ್ಪಿಗೆ’
- ಹತ್ಯೆ ಕೇಸಲ್ಲಿ ವಿನಯ್‌ಗೆ ಇದರಿಂದ ಸಂಕಷ್ಟ ಹೆಚ್ಚಳ?
ಬಸವರಾಜ ಮುತ್ತಗಿ ಹೇಳಿದ್ದೇನು?
- ಬಿಜೆಪಿಗ ಯೋಗೇಶಗೌಡ ಗೌಡರ ಧಾರವಾಡ ಜಿಪಂ ಸದಸ್ಯರಾದರು
- ಅವರ ಏಳಿಗೆ ಸಹಿಸದೇ ಹತ್ಯೆಗೆ ವಿನಯ ಕುಲಕರ್ಣಿ ಸಂಚು ರೂಪಿಸಿದರು
- ಮೊದಲು ಧಾರವಾಡದ ಕೆಲರಿಗೆಗೆ ಹತ್ಯೆಗೆ ಸುಪಾರಿ ನೀಡಲು ನಿರ್ಧರಿಸಿದ್ದರು
- ಆದರೆ ಅವರು ಒಪ್ಪದ ಕಾರಣ ಬೆಂಗಳೂರು ಯುವಕರಿಗೆ ಹತ್ಯೆ ಸುಪಾರಿ
- ದಿನೇಶ್ ಎಂಬಾತ ಹತ್ಯೆಗೆ ಒಪ್ಪಿ 20 ಲಕ್ಷ ರು.ಗೆ ಬೇಡಿಕೆ ಇರಿಸಿದ
- 2016ರಲ್ಲಿ ಮೊದಲ ಬಾರಿ ಒಮ್ಮೆ ವಿಫಲ ಯತ್ನ, ನಂತರ ಜೂನ್‌ನಲ್ಲಿ ಕೊಲೆ
- ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹೇಳಿಕೆ ಮುತ್ತಗಿ ಹೇಳಿಕೆ