ಸಿ.ಪಿ.ಯೋಗೇಶ್ವರ್ ಮೊದಲು ಕಾಂಗ್ರೆಸ್ ಶಾಸಕರ ಬಗ್ಗೆ ಗಮನಹರಿಸಲಿ : ಸಾ. ರಾ.ಮಹೇಶ್

| Published : Nov 26 2024, 09:38 AM IST

Sa Ra Mahesh

ಸಾರಾಂಶ

ನೂತನ ಶಾಸಕ ಸಿ.ಪಿ.ಯೋಗೇಶ್ವರ್ ಮೊದಲು ಕಾಂಗ್ರೆಸ್ ಪಕ್ಷದ ಶಾಸಕರ ಬಗ್ಗೆ ಗಮನಹರಿಸಲಿ. ಆಮೇಲೆ ಬೇಕಿದ್ದರೆ ಜೆಡಿಎಸ್ ಶಾಸಕರ ಖರೀದಿ ಬಗ್ಗೆ ಮಾತನಾಡಲಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಕುಟುಕಿದರು.

ಮೈಸೂರು : ನೂತನ ಶಾಸಕ ಸಿ.ಪಿ.ಯೋಗೇಶ್ವರ್ ಮೊದಲು ಕಾಂಗ್ರೆಸ್ ಪಕ್ಷದ ಶಾಸಕರ ಬಗ್ಗೆ ಗಮನಹರಿಸಲಿ. ಆಮೇಲೆ ಬೇಕಿದ್ದರೆ ಜೆಡಿಎಸ್ ಶಾಸಕರ ಖರೀದಿ ಬಗ್ಗೆ ಮಾತನಾಡಲಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಕುಟುಕಿದರು.

ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಕರೆ ತರುತ್ತೇನೆ ಎಂಬ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಚನ್ನಪಟ್ಟಣ ಕ್ಷೇತ್ರದ ಜನರು ಯೋಗೇಶ್ವರ್ ಗೆ ಆಶೀರ್ವಾದ ಮಾಡಿದ್ದಾರೆ. ಇನ್ನು ಮೂರು ವರ್ಷ ಜನರ ಸೇವೆ ಮಾಡುವ ಅವಕಾಶವಿದೆ. ಅದನ್ನು ಮಾಡಲಿ ಎಂದರು.

ಕಾಂಗ್ರೆಸ್ ನಲ್ಲಿ 30 ರಿಂದ 35 ಶಾಸಕರು ಅಸಮಾಧಾನಿತರಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್ ಹೇಳಿದ್ದರು. ಅವರು ಯಾರ್ಯಾರು ಅಂತ ಯೋಗೇಶ್ವರ್ ಗೆ ಚೆನ್ನಾಗಿ ಗೊತ್ತು. ಮೊದಲು ಕಾಂಗ್ರೆಸ್ ನ ಅಸಮಾಧಾನಿತ ಶಾಸಕರ ಹೆಸರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಗೆ ಕೊಡಲಿ. ಆಮೇಲೆ ಜೆಡಿಎಸ್ ಶಾಸಕರ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.

ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವುದರಲ್ಲಿ ಯೋಗೇಶ್ವರ್‌ ಅವರ ಪಾತ್ರವೂ ಪ್ರಮುಖವಾಗಿದೆ. ಇವರೇನು ಅಂತ ನಮಗೂ ಗೊತ್ತಿದೆ. ಜೆಡಿಎಸ್ ಪ್ರಾದೇಶಿಕ ಪಕ್ಷವಾದರೂ ನಮ್ಮ ಶಾಸಕರು ದೇವೇಗೌಡರು, ಕುಮಾರಸ್ವಾಮಿ ಜೊತೆ ವಿಶ್ವಾಸದಲ್ಲಿದ್ದಾರೆ. ಯೋಗೇಶ್ವರ್ ತಮ್ಮ ಸರ್ಕಾರ ಉಳಿಸಿಕೊಳ್ಳುವ ಕೆಲಸ ಮಾಡಲಿ ಎಂದು ಅವರು ಸಲಹೆ ನೀಡಿದರು.