ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆ ‘ಇನ್ನಷ್ಟು ಬೇಕೆನ್ನ’ ಹಾಡು ಪ್ರಸಾರ!

| Published : Jan 11 2024, 01:30 AM IST / Updated: Jan 11 2024, 02:35 PM IST

ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆ ‘ಇನ್ನಷ್ಟು ಬೇಕೆನ್ನ’ ಹಾಡು ಪ್ರಸಾರ!
Share this Article
  • FB
  • TW
  • Linkdin
  • Email

ಸಾರಾಂಶ

ಗೀತೆ ರಚನೆಗಾರ ಡಾ.ಗಜಾನನ ಶರ್ಮ ರಚಿಸಿರುವ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ’ ಹಾಡು ಅಯೋಧ್ಯೆಯಲ್ಲಿ ಜ.22ರಂದು ರಾಮಮಂದಿರ ಉದ್ಘಾಟನೆ ವೇಳೆ ಪ್ರಸಾರವಾಗಲಿದೆ.

ಕನ್ನಡಪ್ರಭ ವಾರ್ತೆ ಭಟ್ಕಳ

ಗೀತೆ ರಚನೆಗಾರ ಡಾ.ಗಜಾನನ ಶರ್ಮ ರಚಿಸಿರುವ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ’ ಹಾಡು ಅಯೋಧ್ಯೆಯಲ್ಲಿ ಜ.22ರಂದು ರಾಮಮಂದಿರ ಉದ್ಘಾಟನೆ ವೇಳೆ ಪ್ರಸಾರವಾಗಲಿದೆ.

ಭಟ್ಕಳದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಶರ್ಮ, ಈ ಕುರಿತು ರಾಮಮಂದಿರ ಟ್ರಸ್ಟ್‌, ಎಕ್ಸ್‌ (ಟ್ವೀಟ್‌) ಮೂಲಕ ಖಚಿತಪಡಿಸಿದೆ. ನಾನು ರಚಿಸಿದ ಹಾಡನ್ನು ಕನ್ನಡದಲ್ಲಿಯೇ ಪ್ರಸಾರ ಮಾಡುವ ನಿರ್ಧಾರವನ್ನು ಶ್ರೀರಾಮ ಮಂದಿರ ಟ್ರಸ್ಟ್ ತೆಗೆದುಕೊಂಡಿರುವುದು ಖುಷಿಯ ವಿಚಾರವಾಗಿದೆ ಎಂದರು.

ನಾನು ರಾಮಚಂದ್ರಾಪುರ ಮಠದ ಶಿಷ್ಯನಾಗಿದ್ದು, ಶ್ರೀಗಳು ಚಾತುರ್ಮಾಸದ ವೇಳೆ ಒಂದು ಉತ್ತಮವಾದ ಹಾಡು ರಚಿಸಿಕೊಡುವಂತೆ ಹೇಳಿದ್ದರು. ಬಹಳ ಸಮಯವಾದರೂ ನನ್ನ ಕಾರ್ಯ ಒತ್ತಡದಿಂದಾಗಿ ಅದನ್ನು ರಚಿಸಲು ಸಾಧ್ಯವಾಗಿರಲಿಲ್ಲ. 

ಒಮ್ಮೆ ಕಾರ್ಯದ ನಿಮಿತ್ತ ಕೇರಳಕ್ಕೆ ಹೋದಾಗ ಅಲ್ಲಿನ ಫಲಕದಲ್ಲಿ ದಿಲ್ ಮಾಂಗೇ ಮೋರ್ ಎನ್ನುವ ತಂಪು ಪಾನೀಯದ ಜಾಹೀರಾತು ನನ್ನ ಅಂತರಂಗದ ತುಡಿತ ಹೆಚ್ಚಿಸಿತ್ತು. 

ಅದು ಶ್ರೀರಾಮನ ಕುರಿತು ಯಾಕಾಗಬಾರದು ಎಂದು ಅಲ್ಲಿಯೇ ಎರಡು ವಾಕ್ಯ ರಚಿಸಿ ಶ್ರೀಗಳಲ್ಲಿ ಬಂದು ಅದನ್ನು ಹೇಳಿದಾಗ ಅವರು ಒಪ್ಪಿ ಅದನ್ನೇ ಮುಂದುವರಿಸುವಂತೆ ಸೂಚಿಸಿದರು. ನಂತರ ಒಂದೊಂದೇ ವಾಕ್ಯ ರಚಿಸಿ ಹಾಡನ್ನು ರಚಿಸಿದ್ದೆ ಎಂದು ಹಾಡಿನ ರಚನೆಯ ಹಿಂದಿರುವ ಸೂಕ್ಷ್ಮತೆ ತಿಳಿಸಿದರು.

ರಾಮ ಎನ್ನುವುದು ತ್ರೇತಾಯುಗದ ವ್ಯಕ್ತಿತ್ವ ಮಾತ್ರವಲ್ಲ, ನಮಗದೊಂದು ಚೈತನ್ಯ ಪೂರ್ಣ ನೆಮ್ಮದಿ ಕೊಡುವ ಶಕ್ತಿ. ಅದೇ ಕಲ್ಪನೆಯಿಂದಲೇ ಮುಂದಿನ ಸಾಲು ಬರೆದೆ. ದೇವರ ಆಶೀರ್ವಾದ, ಗುರುಗಳ ಕೃಪೆಯಿಂದ ಇಂದು ಈ ಹಾಡು ಪ್ರಸಿದ್ಧಿ ಪಡೆದು ಎಲ್ಲೆಡೆ ಹಾಡಲ್ಪಡುತ್ತಿದೆ. 

ಈ ಹಾಡನ್ನು ಕೂಡಾ ಅಯೋಧ್ಯೆಯಲ್ಲಿ ಪ್ರಸಾರ ಮಾಡುತ್ತಿರುವುದು ನನ್ನ ಪುಣ್ಯ. ಹಾಡಿನ ರಾಗ ಸಂಯೋಜನೆ ಬಗ್ಗೆ ನನ್ನ ಪತ್ನಿಗೆ ತಿಳಿಸಿದೆ. ನನ್ನ ಮಗ ಪ್ರಥಮವಾಗಿ ಅದನ್ನು ಹಾಡಿದ್ದಾನೆ. ಶ್ರೀಗಳ ಸಮ್ಮುಖದಲ್ಲಿಯೂ ಕೂಡಾ ಹಾಡಿದ್ದು, ಅದೇ ರಾಗದಲ್ಲಿಯೇ ಇಂದಿಗೂ ಕೂಡಾ ಹಾಡಲ್ಪಡುತ್ತಿರುವುದು ತುಂಬಾ ಸಂತಸದ ವಿಚಾರ ಎಂದರು.ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ ಹಾಡನ್ನು ಯ್ಯೂಟ್ಯೂಬ್‌ ನಲ್ಲಿ ಈಗಾಗಲೇ 5 ಕೋಟಿ ಜನರು ಕೇಳಿದ್ದಾರೆ.