‘ಕನ್ನಡ ಭಾಷೆಯ ಅಸ್ಮಿತೆ ಸದಾಕಾಲ ಜೀವಂತ’

| Published : Nov 04 2023, 12:32 AM IST

ಸಾರಾಂಶ

ನ್ನಡ ಭಾಷೆಯ ಅಸ್ಮಿತೆಯು ಎಲ್ಲ ಕಾಲದಲ್ಲೂ ತನ್ನ ಜೀವಂತಿಕೆಯನ್ನು ಕಾಯ್ದುಕೊಂಡಿದ್ದು, ಆಯಾ ಕಾಲದ ಬಿಕ್ಕಟ್ಟುಗಳೊಂದಿಗೆ ಅನುಸಂಧಾನಗೊಂಡು ತನ್ನತನವನ್ನು ಕಾಯ್ದುಕೊಂಡಿದೆ‌ ಎಂದು ಕವಿ ಅಂಬಳೆ ನಾಗೇಶ ಅವರು ಹೇಳಿದರು.
ದೊಡ್ಡರಾಯನ ಪೇಟೆಯ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಸಾಚರಣೆ 2023 ಕಾರ್ಯಕ್ರಮ । ಕವಿ ಅಂಬಳೆ ನಾಗೇಶ್ ಅಭಿಮತ ಕನ್ನಡಪ್ರಭ ವಾರ್ತೆ ಚಾಮರಾಜನಗರ ಕನ್ನಡ ಭಾಷೆಯ ಅಸ್ಮಿತೆಯು ಎಲ್ಲ ಕಾಲದಲ್ಲೂ ತನ್ನ ಜೀವಂತಿಕೆಯನ್ನು ಕಾಯ್ದುಕೊಂಡಿದ್ದು, ಆಯಾ ಕಾಲದ ಬಿಕ್ಕಟ್ಟುಗಳೊಂದಿಗೆ ಅನುಸಂಧಾನಗೊಂಡು ತನ್ನತನವನ್ನು ಕಾಯ್ದುಕೊಂಡಿದೆ‌ ಎಂದು ಕವಿ ಅಂಬಳೆ ನಾಗೇಶ ಅವರು ಹೇಳಿದರು. ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಜೆಎಸ್ ಬಿ ಪ್ರತಿಷ್ಠಾನ ಆಯೋಜಿಸಿದ್ದ ''''''''ಕನ್ನಡ ಮಾಸಾಚರಣೆ ೨೦೨೩'''''''' ಕಾರ್ಯಕ್ರಮದಲ್ಲಿ ಕನ್ನಡತಾಯಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಆದಿಕವಿ ಪಂಪನಿಂದ ಆಧುನಿಕ ಚಂಪಾ ವರೆಗೆ ಹಲವಾರು ಕವಿ,ಸಾಹಿತಿಗಳು ಕನ್ನಡದ ಸಾಹಿತ್ಯ ಲೋಕದ ಶ್ರೀಮಂತಿಕೆಗಾಗಿ ಶ್ರಮಿಸಿದ್ದರ ಫಲವಾಗಿ ಇಂದು ಕನ್ನಡ ಭಾಷೆಯು ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕನ್ನಡಕ್ಕಿರುವ ಶಕ್ತಿ ಹಾಗೂ ಸತ್ವದ ಫಲವಾಗಿ ಶಾಸ್ತ್ರೀಯ ಸ್ಥಾನಮಾನ‌ ಪಡೆದುಕೊಂಡು ವಿಜೃಂಭಿಸುತ್ತಿದೆ. ಶಾಸ್ತ್ರೀಯ ಭಾಷೆಯ ಸ್ಥಾನವನ್ನು ಪಡೆದಿರುವ ಕನ್ನಡ ಭಾಷೆಯು ಹಲವು ಸವಾಲುಗಳನ್ನು ಎದುರಿಸಿ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿಸಿಕೊಂಡು ನಿಂತಿದೆ. ಇದಕ್ಕೆ ಮೂಲ ಕಾರಣ, ಕನ್ನಡ ನಾಡಿನ ಜನತೆ, ಕಾಯಕ ಜೀವಿಗಳು ತಮ್ಮ ದಿನನಿತ್ಯದ ಬದುಕಿನಲ್ಲಿ ಕನ್ನಡ ಭಾಷೆಯನ್ನು ಬಳಸುತ್ತಿರುವುದೇ ಹೊರತು ಬೇರೇನೂ ಅಲ್ಲ. ನಮ್ಮ ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನು ಬಳಸಿ, ಬೆಳೆಸಿದರೆ ಮಾತ್ರ ಕನ್ನಡ ಭಾಷೆ, ಸಂಸ್ಕ್ರತಿ ಉಳಿಯುತ್ತದೆ ಎಂದು ಹೇಳಿದರು. ಮುಖ್ಯ ಶಿಕ್ಷಕ ಮಹೇಶ ಮಾತನಾಡಿ, ಸ್ವಾಭಿಮಾನದ ಜೊತೆಗೆ ಸಹೋದರ ಭಾಷೆಗಳನ್ನು ಗೌರವಿಸುವ ವಿಶಾಲ ಭಾವನೆ ನಮ್ಮೆಲ್ಲರದ್ದಾಗಿದ್ದು, ಈ ಮೂಲಕ ಭಾಷಾ ಸಾಮರಸ್ಯ, ಸಾಂಸ್ಕೃತಿಕ ಸಾಮರಸ್ಯ ರೂಪಿತವಾಗಿರುವುದು ಕನ್ನಡ ನಾಡಿನ ಹಿರಿಮೆಯಾಗಿದೆ. ಕನ್ನಡ ಸಾರಸ್ವತ ಲೋಕವು ೮ ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವುದು ಕನ್ನಡ ಭಾಷೆಯ ಉತ್ಕೃಷ್ಟತೆ ಹಾಗೂ ಗರಿಮೆಯನ್ನು ಬಿಂಬಿಸುತ್ತದೆ. ಈ ಮಣ್ಣಿಗೊಂದು, ಈ ನುಡಿಗೊಂದು ಸೊಗಸಿದೆ, ಸೌಂದರ್ಯವಿದೆ, ಬೆಡಗಿದೆ. ಹಾಗೆಯೇ ಪ್ರಾದೇಶಿಕವಾಗಿ ವಿಭಿನ್ನ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಾರ್ಯವನ್ನು ಮಾಡಬೇಕಿದೆ. ಗಡಿನಾಡ ಕನ್ನಡಿಗರು ಹಾಗೂ ಅವರ ಭಾಷಾ ಬೆಳವಣಿಗೆಗೆ ಸರ್ಕಾರಗಳು ವಿಶೇಷ ಉತ್ತೇಜನ‌ ನೀಡಬೇಕು. ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಹಾಗೂ ಕನ್ನಡಿಗರ ಹಿತವನ್ನು ಕಾಪಾಡಬೇಕಿದೆ ಎಂಬುದಾಗಿ ತಿಳಿಸಿದರು. ಜೆಎಸ್ ಬಿ ಪ್ರತಿಷ್ಠಾನದ ಎಸ್. ಶಶಿಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಮಹೇಶ, ಕೆಂಪಣ್ಣ, ಸವಿತಾ, ಅಭಿದರ್ಶಿನಿ, ನಾಗರಾಜು, ಜಗನ್ಮೋಹನ, ನವೀನಕುಮಾರ, ರತ್ನಮ್ಮ ಹಾಗೂ ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು. -------------- 3ಸಿಎಚ್‌ಎನ್‌12 ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಜೆ. ಎಸ್ ಬಿ ಪ್ರತಿಷ್ಠಾನದ ವತಿಯಿಂದ ''''''''ಕನ್ನಡ ಮಾಸಾಚರಣೆ ೨೦೨೩'''''''' ಕಾರ್ಯಕ್ರಮ ನಡೆಯಿತು.