ಸಾರಾಂಶ
ಬೆಂಗಳೂರು : ಯುದ್ಧಪೀಡಿತ ಇರಾನ್‌ನಲ್ಲಿ ಸಿಲುಕಿದ್ದ ಚಿಕ್ಕಬಳ್ಳಾಪುರ ಮೂಲದ 16 ಮಂದಿ ಶನಿವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದ 16 ಮಂದಿ ಇರಾನ್‌ನಲ್ಲಿ ಪ್ರವಾಸ ಮತ್ತು ವ್ಯಾಪಾರಕ್ಕೆಂದು ತೆರಳಿದ್ದವರು ಇಸ್ರೇಲ್-ಇರಾನ್ ನಡುವಿನ ಯುದ್ಧದಲ್ಲಿ ಸಿಲುಕಿದ್ದರು. ಇವರೆಲ್ಲರೂ ಶನಿವಾರ ಬೆಳಗ್ಗೆ ಇರಾನ್‌ನಿಂದ ದೆಹಲಿಗೆ ಆಗಮಿಸಿದ್ದು, ದೆಹಲಿಯಿಂದ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದವರಿಗೆ ಗೌರಿಬಿದನೂರಿನ ಶಾಸಕ ಪುಟ್ಟಸ್ವಾಮಿ ಗೌಡ ಅವರು ಹಾರ, ಶಾಲು ಹಾಕಿ ಸ್ವಾಗತಿಸಿದರು. ಈ ವೇಳೆ ಕುಟುಂಬದವರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಬೆಂಗಳೂರಿಗೆ ವಾಪಸಾದವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಇರಾನ್‌ನಲ್ಲಿ ಪ್ರವಾಸ, ವ್ಯಾಪಾರಕ್ಕೆಂದು ಹೋಗಿದ್ದೆವು. ಆದರೆ, ಅಲ್ಲಿ ಯುದ್ಧ ಆರಂಭವಾಗಿದ್ದು, ಭಯ ಭೀತರಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಲ್ಲೆಡೆ ಬಾಂಬ್‌ಗಳ ಸದ್ದು ಕೇಳಿಸುತ್ತಿತ್ತು. ಕರ್ನಾಟಕಕ್ಕೆ ವಾಪಸ್ ಬರುತ್ತೇವೋ ಇಲ್ಲವೋ ಎಂಬ ಆತಂಕ ಉಂಟಾಗಿತ್ತು. ಆದರೆ, ಭಾರತೀಯ ರಾಯಭಾರಿ ಅಧಿಕಾರಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯದಿಂದ ವಾಪಸ್ ಬಂದಿದ್ದೇವೆ. ನಮ್ಮವರನ್ನು ಸೇರಿಕೊಂಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.