ಮಕ್ಕಳಿಗಾಗಿ ಪರಿಗಣಿಸಬಹುದಾದ 5 ಅತ್ಯುತ್ತಮ ಹೂಡಿಕೆಗಳು

| N/A | Published : Nov 18 2025, 12:47 PM IST

 Investment
ಮಕ್ಕಳಿಗಾಗಿ ಪರಿಗಣಿಸಬಹುದಾದ 5 ಅತ್ಯುತ್ತಮ ಹೂಡಿಕೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಮಗುವಿನ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಇಂದಿನ ಪೋಷಕರ ಪ್ರಮುಖ ಆದ್ಯತೆ. ವಿಶೇಷವಾಗಿ ಶಿಕ್ಷಣ, ಆರೋಗ್ಯ ಮತ್ತು ಉನ್ನತ ಅಧ್ಯಯನಗಳಂತಹ ಪ್ರಮುಖ ವೆಚ್ಚಗಳನ್ನು ಸರಿದೂಗಿಸಲು ಹೂಡಿಕೆ ಅನಿವಾರ್ಯ. ಸರ್ಕಾರಿ ಬೆಂಬಲಿತ, ಮಾರ್ಕೆಟ್‌ ಲಿಂಕಿನ ಪ್ಲಾನ್‌ಗಳ ತನಕ ಮಕ್ಕಳಿಗಾಗಿ ಹಲವು ಹೂಡಿಕೆ ಯೋಜನೆಗಳಿವೆ

ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ಐದು ದೀರ್ಘಾವಧಿ ಹೂಡಿಕೆ ಪ್ಲಾನ್‌ ವಿವರ ಇಲ್ಲಿದೆ.

ಮಗುವಿನ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಇಂದಿನ ಪೋಷಕರ ಪ್ರಮುಖ ಆದ್ಯತೆ. ವಿಶೇಷವಾಗಿ ಶಿಕ್ಷಣ, ಆರೋಗ್ಯ ಮತ್ತು ಉನ್ನತ ಅಧ್ಯಯನಗಳಂತಹ ಪ್ರಮುಖ ವೆಚ್ಚಗಳನ್ನು ಸರಿದೂಗಿಸಲು ಹೂಡಿಕೆ ಅನಿವಾರ್ಯ. ಸರ್ಕಾರಿ ಬೆಂಬಲಿತ ಪ್ಲಾನ್‌ಗಳಿಂದ ಹಿಡಿದು ಮಾರ್ಕೆಟ್‌ ಲಿಂಕಿನ ಪ್ಲಾನ್‌ಗಳ ತನಕ ಮಕ್ಕಳಿಗಾಗಿ ಹಲವು ಹೂಡಿಕೆ ಯೋಜನೆಗಳಿವೆ. ಅದರಲ್ಲಿ ಸೂಕ್ತವಾದುದನ್ನು ಆರಿಸಿ ಅದರಲ್ಲಿ ಸಣ್ಣ ಮೊತ್ತ ಹೂಡಿಕೆ ಮಾಡುತ್ತಾ ಬಂದರೆ ಮಕ್ಕಳ ಭವಿಷ್ಯಕ್ಕೆ ಅತ್ಯುತ್ತಮ ಕೊಡುಗೆಗಳಾಗಬಹುದು.

1. ಸುಕನ್ಯಾ ಸಮೃದ್ಧಿ ಯೋಜನೆ

ಹೆಣ್ಣುಮಕ್ಕಳ ಸಬಲತೆಗೆ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆ. ಮಗಳ ವಿದ್ಯಾಭ್ಯಾಸ ಅಥವಾ ಭವಿಷ್ಯದ ಜೀವನಕ್ಕಾಗಿ ಪೋಷಕರು ಇದರಲ್ಲಿ ಹೂಡಿಕೆ ಮಾಡಿದರೆ ಶೇ.8.2 ಬಡ್ಡಿ ಸಿಗುತ್ತದೆ. ವಾರ್ಷಿಕವಾಗಿ ಕನಿಷ್ಠ 250 ರು. ಹಾಗೂ ಗರಿಷ್ಠ 1.5 ಲಕ್ಷ ರು.ಗಳವರೆಗೆ ಉಳಿತಾಯ ಮಾಡಬಹುದು. ಅಕೌಂಟ್‌ ಆರಂಭಿಸಿದಂದಿನಿಂದ 21 ವರ್ಷಕ್ಕೆ ಈ ಸ್ಕೀಮ್‌ನ ಕಾಲಾವಧಿ ಮುಕ್ತಾಯಗೊಳ್ಳುತ್ತದೆ.

2. ಎನ್‌ಪಿಎಸ್‌ ವಾತ್ಸಲ್ಯ ಯೋಜನೆ

ನ್ಯಾಷನಲ್‌ ಪೆನ್ಶನ್‌ ಸಿಸ್ಟಮ್‌ (ಎನ್‌ಪಿಎಸ್‌)ನಿಂದ 18 ವರ್ಷ ಕೆಳಗಿನ ಕಿರಿಯರಿಗೆಂದು ರೂಪಿಸಿರುವುದು ಎನ್‌ಪಿಎಸ್‌ ವಾತ್ಸಲ್ಯ ಯೋಜನೆ. ಇದರಲ್ಲಿ ಪೋಷಕರು ಮಕ್ಕಳ ಹೆಸರಿನಲ್ಲಿ ಸೇವಿಂಗ್ಸ್‌ ಅಕೌಂಟ್‌ ತೆರೆಯಬಹುದು. ಇದರಲ್ಲಿ ವಾರ್ಷಿಕವಾಗಿ ಹೂಡಿಕೆ ಮಾಡಬೇಕಾದ ಕನಿಷ್ಠ ದರ 1000 ರು. ಗರಿಷ್ಠ ದರಕ್ಕೆ ಮಿತಿಗಳಿಲ್ಲ. ಶೇ.9 ರಿಂದ ಶೇ.10ರಷ್ಟು ಬಡ್ಡಿದರ ಇರುತ್ತದೆ. ಮಕ್ಕಳಿಗೆ 18 ವರ್ಷ ವಯಸ್ಸಾಗುವ ತನಕ ಇದರಲ್ಲಿ ಹಣ ಹೂಡಿಕೆ ಮಾಡಬಹುದು. ಬಳಿಕ ಇದು ಎನ್‌ಪಿಎಸ್‌ ಟೈರ್‌ 1 ಅಕೌಂಟ್‌ ಆಗಿ ಪರಿವರ್ತನೆ ಆಗುತ್ತದೆ. ಅದಕ್ಕೆ ಬೇರೆಯದೇ ನಿಯಮಾವಳಿಗಳಿವೆ.

3. ಕಿರಿಯರ ಪಿಪಿಎಫ್‌ ಯೋಜನೆ

ಮಕ್ಕಳ ಹೆಸರಲ್ಲಿ ದೀರ್ಘಕಾಲಿಕ ಹೂಡಿಕೆಗೆ ಪಿಪಿಎಫ್‌ ಯೋಜನೆ ಆಯ್ಕೆ ಮಾಡಬಹುದು. ಮಕ್ಕಳ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ಗೆ 15 ವರ್ಷ ಲಾಕ್‌ ಇನ್‌ ಅವಧಿ ಇರುತ್ತದೆ. ಷರತ್ತುಬದ್ಧ ನಿಯಮಗಳೊಂದಿಗೆ ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಈ ಹಣ ತೆಗೆಯಬಹುದು, ಆಗಲೂ ಇದನ್ನು ಕಡ್ಡಾಯವಾಗಿ ಕಿರಿಯರಿಗೆ ಮಾತ್ರ ಬಳಸಬೇಕು. ತೆರಿಗೆ ಉಳಿತಾಯ ಸೌಲಭ್ಯ ಇರುವ ಈ ಪ್ಲಾನ್‌ನಲ್ಲಿ ಶೇ. 7.1ರಷ್ಟು ಬಡ್ಡಿದರವಿರುತ್ತದೆ.

4. ಬ್ಯಾಂಕ್‌ ಆರ್‌ಡಿ

ಸಾಮಾನ್ಯವಾಗಿ ಬ್ಯಾಂಕ್‌ಗಳಲ್ಲಿ ಮಕ್ಕಳಿಗಾಗಿ ಆರ್‌ಡಿ ಸೌಲಭ್ಯಗಳಿರುತ್ತವೆ. ಇಲ್ಲಿ ಕಡಿಮೆ ಮೊತ್ತ ಹೂಡಿಕೆ ಮಾಡಬಹುದು. ಬಡ್ಡಿದರ ಹೆಚ್ಚಿರುತ್ತದೆ. ಕೆಲವೊಮ್ಮೆ ನಿಗದಿತ ಅವಧಿಗೆ ತಿಂಗಳಿಗೆ ಒಂದಿಷ್ಟು ಮೊತ್ತವನ್ನು ಬ್ಯಾಂಕ್ ಹಾಕುವ ಸೌಲಭ್ಯವೂ ಇದೆ. ಫಿಕ್ಸ್ಡ್‌ ಬಡ್ಡಿ ಮೊತ್ತ ಇರುತ್ತದೆ. ಶೇ 6.5 ರಿಂದ ಶೇ8ರಷ್ಟು ಬಡ್ಡಿದರವಿರುತ್ತದೆ. ಬ್ಯಾಂಕಿಂದ ಬ್ಯಾಂಕಿಗೆ ಇದು ಬದಲಾಗುತ್ತದೆ.

5. ಮಕ್ಕಳಿಗಾಗಿ ಮ್ಯೂಚುವಲ್‌ ಫಂಡ್‌

ಪೋಷಕರು ಮಕ್ಕಳ ಹೆಸರಲ್ಲಿ ಮ್ಯೂಚುವಲ್‌ ಫಂಡ್‌ಗಳಲ್ಲೂ ಹೂಡಿಕೆ ಮಾಡಬಹುದು. ಮಕ್ಕಳಿಗೆಂದೇ ಪ್ರತ್ಯೇಕ ವಿಭಾಗಗಳಿವೆ. ಹೆಚ್‌ಡಿಎಫ್‌ಸಿ ಚಿಲ್ಡ್ರನ್ಸ್‌ ಫಂಡ್‌, ಐಸಿಐಸಿಐ ಪ್ರುಡೆನ್ಶಿಯನ್‌ ಚೈಲ್ಡ್‌ ಕೇರ್‌ ಫಂಡ್‌, ಟಾಟಾ ಯಂಗ್‌ ಸಿಟಿಜನ್‌ ಫಂಡ್‌, ಯುಟಿಐ ಚಿಲ್ಡ್ರನ್‌ ಈಕ್ವಿಟಿ ಫಂಡ್‌ ಇವುಗಳಲ್ಲಿ ಪ್ರಮುಖವಾದವು.

 

Read more Articles on