ಸಾರಾಂಶ
ಬೆಂಗಳೂರಿನ ದಿ ಲೀಲಾ ಭಾರತೀಯ ಸಿಟಿಯಲ್ಲಿ ಫೆ.1ರ ಮುಂಜಾನೆ 6 ಗಂಟೆಗೆ ಡ್ರಿವನ್ 5.0 ರ್‍ಯಾಲಿಗೆ ಚಾಲನೆ ನೀಡಲಾಯಿತು. ಈ ರ್‍ಯಾಲಿಯಲ್ಲಿ 80 ಮಹಿಳೆಯರು ಪಾಲ್ಗೊಂಡರು.
ಕನ್ನಡಪ್ರಭವಾರ್ತೆ ಬೆಂಗಳೂರು
ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹಿಸುವ ಡ್ರಿವನ್ 5.0 ಕಾರ್ಯಕ್ರಮದ ಭಾಗವಾಗಿ ಸುಮಾರು 80 ಮಹಿಳಾ ಚಾಲಕರು ಕಾರು ಮತ್ತು ಬೈಕ್‌ಗಳ ಮೂಲಕ ಬೆಂಗಳೂರಿನಿಂದ ಹಂಪಿಗೆ ಕಾರು ರ್‍ಯಾಲಿ ಮಾಡಿದ್ದಾರೆ.ಝೆರಾಯಿನ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಈ ರ್‍ಯಾಲಿಯನ್ನು ಆಯೋಜಿಸಿದ್ದು, ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಫೆಬ್ರವರಿ 1 ಮತ್ತು 2ರಂದು ನಡೆದ 2 ದಿನಗಳ ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಹಿನ್ನೆಲೆಯ ಸುಮಾರು 80 ಮಹಿಳೆಯರು ಪಾಲ್ಗೊಂಡರು.ಬೆಂಗಳೂರಿನ ದಿ ಲೀಲಾ ಭಾರತೀಯ ಸಿಟಿಯಲ್ಲಿ ಫೆ.1ರ ಮುಂಜಾನೆ 6 ಗಂಟೆಗೆ ಈ ರ್‍ಯಾಲಿಗೆ ಚಾಲನೆ ನೀಡಲಾಯಿತು. ಅಲ್ಲಿಂದ ಹಂಪಿಗೆ ಸಾಗುವ ರಸ್ತೆಯ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಸಾಗಿದ ಮಹಿಳಾ ಚಾಲಕರು ಡ್ರೈವ್ ಅನ್ನು ಆನಂದಿಸಿದರು. ಕಡೆಗೆ ಹಂಪಿಯ ಹಯಾತ್ ಪ್ಲೇಸ್ ತಲುಪಿದ ಬಳಿಕ ಅಲ್ಲಿ ದೊಡ್ಡ ಮಟ್ಟದ ಸಂಭ್ರಮಾಚರಣೆ ನಡೆಯಿತು.
ಎಲ್ಲಾ ಮಹಿಳಾ ಚಾಲಕರು ತಮ್ಮ ಅನುಭವವನ್ನು ಹಂಚಿಕೊಂಡರು. ರ್‍ಯಾಲಿಯ ಯಶಸ್ಸಿನ ಕುರಿತು ಮಾತನಾಡಿದ ಝೆರಾಯಿನ್ ಸಂಸ್ಥೆಯು ವ್ಯವಸ್ಥಾಪಕ ನಿರ್ದೇಶಕರಾದ ಅರವಿಂದ್ ಜೆ ಸಭಾನೆ ಅವರು, “ಡ್ರಿವನ್ 5.0 ರ್‍ಯಾಲಿಯು ಬರೀ ಒಂದು ರ್‍ಯಾಲಿ ಮಾತ್ರವೇ ಅಲ್ಲ. ಬದಲಿಗೆ ಮಹಿಳೆಯರ ಶಕ್ತಿ, ಏಕತೆಯ ಪ್ರದರ್ಶನವಾಗಿತ್ತು” ಎಂದರು.ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಗೆದ್ದಿರುವ ನಿಶಾ ಜೋಸ್ ಅವರೂ ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಫೆಡರೇಷನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಲ್ ಆಫ್ ಇಂಡಿಯಾ(ಎಫ್ಎಂಎಸ್‌ಸಿಐ) ನಿಗದಿಪಡಿಸಿರುವ ಮಾರ್ಗಸೂಚಿಗಳಿಗೆ ಅನುಸಾರವಾಗಿ ಸುರಕ್ಷಿತವಾಗಿ ಡ್ರಿವನ್ 5.0 ರ್‍ಯಾಲಿಯನ್ನು ಆಯೋಜಿಸಲಾಗಿತ್ತು. ಡ್ರಿವನ್ ರ್‍ಯಾಲಿಯ ಮುಂದಿನ ಆವೃತ್ತಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ 2025ರ ಮಾರ್ಚ್ 8ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್‌ಸೈಟ್ ನೋಡಬಹುದು.