ಸಾರಾಂಶ
ಶ್ರೀಕಾಂತ್ ಎನ್. ಗೌಡಸಂದ್ರ
ಸುವರ್ಣ ವಿಧಾನಸೌಧ : ಬಳ್ಳಾರಿ ಬಾಣಂತಿಯರ ಸರಣಿ ಸಾವು ಹೊರತಾಗಿ ರಾಜ್ಯದಲ್ಲಿ ಕಳೆದ ಏಳು ತಿಂಗಳಲ್ಲಿ ಬರೋಬ್ಬರಿ 326 ಬಾಣಂತಿಯರ ಸಾವು ಸಂಭವಿಸಿದ್ದು, ಕಳೆದ ಮೂರೂವರೆ ವರ್ಷದಲ್ಲಿ ಎರಡು ಸಾವಿರ ಬಾಣಂತಿಯರು ಬಲಿಯಾಗಿದ್ದಾರೆ!
ರಾಜ್ಯದಲ್ಲಿ ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಏಳು ತಿಂಗಳಲ್ಲೇ 326 ಬಾಣಂತಿಯರು ಸಾವನ್ನಪ್ಪಿದ್ದಾರೆ. ಈ ಪೈಕಿ ಬೆಂಗಳೂರು ನಗರ ಒಂದರಲ್ಲೇ 51 ಮಂದಿ ಮೃತಪಟ್ಟಿದ್ದು, ಇದರಲ್ಲಿ 50 ಮಂದಿ ಸರ್ಕಾರಿ ಆಸ್ಪತ್ರೆಯಲ್ಲೇ ಸಾವನ್ನಪ್ಪಿರುವುದು ಆತಂಕ ಉಂಟು ಮಾಡಿದೆ.
ಉಳಿದಂತೆ 326 ಸಾವು ಪೈಕಿ ಶೇ.80ರಷ್ಟು ಮರಣ ಸರ್ಕಾರಿ ಆಸ್ಪತ್ರೆಗಳಲ್ಲೇ ಸಂಭವಿಸಿದೆ. 64 ಸಾವು (ಶೇ.20) ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಉಂಟಾಗಿದೆ.
ನವೆಂಬರ್ ತಿಂಗಳಲ್ಲಿ ಬಳ್ಳಾರಿ ಒಂದರಲ್ಲೇ ಹನ್ನೊಂದು ಮಂದಿ, ಬೆಂಗಳೂರು ನಗರದಲ್ಲಿ 15 ಮಂದಿ ಸಾವನ್ನಪ್ಪಿದ್ದು, ರಾಜ್ಯಾದ್ಯಂತ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಸಾವು ಹೆಚ್ಚಳ:
ಬೆಂಗಳೂರು ನಗರದಲ್ಲಿ 2021-22ರಲ್ಲಿ ಕೇವಲ 9 ಮಂದಿ ಬಾಣಂತಿಯರು ಸಾವನ್ನಪ್ಪಿದ್ದರು. 2022-23ರಲ್ಲಿ 24 ಮಂದಿ, 2023-24ರಲ್ಲಿ 30 ಮಂದಿ ಮೃತಪಟ್ಟಿದ್ದರು. ಇದೀಗ ಕಳೆದ ಏಳು ತಿಂಗಳಲ್ಲೇ 51 ಮಂದಿ ಸಾವನ್ನಪ್ಪಿದ್ದು, ಈ ಪೈಕಿ 50 ಮಂದಿ ಸರ್ಕಾರಿ ಆಸ್ಪತ್ರೆಗಳಲ್ಲೇ ಸಾವನ್ನಪ್ಪಿರುವುದು ಪ್ರಸಕ್ತ ಸಾಲಿನ ವೈದ್ಯಕೀಯ ಸೇವೆ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.
ಮೂರೂವರೆ ವರ್ಷದಲ್ಲಿ 2000 ಸಾವು:
2021-22 ರಲ್ಲಿ ಧಾರವಾಡ 71, ಕಲಬುರಗಿ 54, ರಾಯಚೂರು 46, ಬೆಳಗಾವಿ 46, ತುಮಕೂರು 37 ಸೇರಿ ಒಟ್ಟು 595 ಮಂದಿ ಮೃತಪಟ್ಟಿದ್ದಾರೆ. 2022-23ರಲ್ಲಿ ಬೆಳಗಾವಿಯಲ್ಲಿ 57, ಕಲಬುರಗಿಯಲ್ಲಿ 37, ಧಾರವಾಡದಲ್ಲಿ 34, ಬೆಂಗಳೂರು ನಗರದಲ್ಲಿ 26, ರಾಯಚೂರಿನಲ್ಲಿ 25 ಮಂದಿ ಸೇರಿ ಒಟ್ಟು 527 ಮಂದಿ ಮೃತಪಟ್ಟಿದ್ದಾರೆ. 2023-24ರಲ್ಲಿ ಬೆಳಗಾವಿಯಲ್ಲಿ 44, ಕಲಬುರಗಿಯಲ್ಲಿ 39, ತುಮಕೂರಿನಲ್ಲಿ 35, ಬೆಂಗಳೂರು ನಗರದಲ್ಲಿ 30, ವಿಜಯಪುರದಲ್ಲಿ 28 ಸೇರಿ 518 ಮಂದಿ ಬಾಣಂತಿಯರು ಸಾವನ್ನಪ್ಪಿದ್ದಾರೆ.
2024-25ನೇ ಸಾಲಿನಲ್ಲಿ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 326 ಮಂದಿ ಸಾವನ್ನಪ್ಪಿದ್ದು, ನವೆಂಬರ್‌ನಿಂದ ಡಿಸೆಂಬರ್ ಮೊದಲ ವಾರದ ವೇಳೆಗೆ 35ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ರಿಂಗರ್ ಲ್ಯಾಕ್ಟೇಟ್ ಐಪಿ ದ್ರಾವಣದಿಂದ ಮೃತಪಟ್ಟಿದ್ದಾರೆ ಎನ್ನಲಾಗಿರುವ 5 ಸಾವು ಸೇರಿದೆ. ತನ್ಮೂಲಕ 2021-22ರಿಂದ ಈವರೆಗೆ 2,001 ಮಂದಿ ಗರ್ಭಿಣಿಯರು ಸಾವನ್ನಪ್ಪಿದಂತಾಗಿದೆ.
ಟಾಪ್-10
ಪ್ರಸಕ್ತ ಸಾಲಿನ ಜಿಲ್ಲಾವಾರು ಸಾವಿನ ವಿವರ (2024ರ ಏಪ್ರಿಲ್‌ನಿಂದ ಅಕ್ಟೋಬರ್)
ಜಿಲ್ಲೆಸರ್ಕಾರಿ ಆಸ್ಪತ್ರೆಖಾಸಗಿ ಆಸ್ಪತ್ರೆ ಒಟ್ಟು ಸಾವು
ಬೆಂಗಳೂರು ನಗರ 50151
ದಾವಣಗೆರೆ22 628
ಕಲಬುರಗಿ17926
ಧಾರವಾಡ230124
ಬಳ್ಳಾರಿ22022
ಕೊಪ್ಪಳ18018
ಮೈಸೂರು61218
ರಾಯಚೂರು14317
ಶಿವಮೊಗ್ಗ13114
ಗದಗ10212
ಚಾಮರಾಜನಗರ, ಚಿಕ್ಕಮಗಳೂರು ಶೂನ್ಯ
2024ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ತುಮಕೂರು 11, ವಿಜಯಪುರ 11, ಬೀದರ್ 10, ದಕ್ಷಿಣ ಕನ್ನಡ 9, ಬೆಳಗಾವಿ, ಹಾಸನ, ಹಾವೇರಿ, ಯಾದಗಿರಿ ತಲಾ 7, ಉತ್ತರ ಕನ್ನಡ 5, ಚಿತ್ರದುರ್ಗ, ರಾಮನಗರ ತಲಾ 4, ಬಾಗಲಕೋಟೆ, ವಿಜಯನಗರ ತಲಾ 3, ಮಂಡ್ಯ, ಉಡುಪಿ ತಲಾ 2, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೊಡಗು ತಲಾ 1 ಹಾಗೂ ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶೂನ್ಯ ಸಾವು ವರದಿಯಾಗಿದೆ.