ಸಾರಾಂಶ
- ಶೇ.90ರಷ್ಟು ನೀರು ಸಹ ಉಳಿತಾಯ
- ಟಿ.ನರಸೀಪುರ ತಾ. ಮಾಡ್ರಹಳ್ಳಿಯ ಎಂ.ಕೆ.ಕೈಲಾಸಮೂರ್ತಿ ಈ ಸಾಧಕಕೆಎಐಎಲ್ಎಎಸ್ಎಚ್ 3 ರಿಂದ 10ಅಂಶಿ ಪ್ರಸನ್ನಕುಮಾರ್
ಕನ್ನಡಪ್ರಭ ವಾರ್ತೆ ಮೈಸೂರುಈ ಬಾರಿ ರಾಜ್ಯದಲ್ಲಿ ಬರಗಾಲ. ಮಳೆಯ ಕೊರತೆಯಿಂದಾಗಿ ರೈತರು ಬೆಳೆ ಬೆಳೆಯಲಾಗಿಲ್ಲ. ಹೀಗಿರುವಾಗ ರೈತರೊಬ್ಬರು ಶೇ.90,ರಷ್ಟು ನೀರು ಉಳಿತಾಯ ಮಾಡಿ, ಬಂಪರ್ ಭತ್ತ ಬೆಳೆದಿದ್ದಾರೆ.
ಟಿ.ನರಸೀಪುರ ತಾಲೂಕು ಮಾಡ್ರಹಳ್ಳಿಯ ಎಂ.ಕೆ.ಕೈಲಾಸಮೂರ್ತಿ ಈ ಸಾಧಕ. ಅವರು ನಾಲ್ಕು ಎಕರೆಯಲ್ಲಿ ಬೆಳೆದಿರುವ ಈ ಭತ್ತದ ಬೆಳೆಗೆ ಕೇವಲ ನಾಲ್ಕು ಬಾರಿ ಮಾತ್ರ ನೀರು ನೀಡಿ, ಶೇ,10 ರಷ್ಟು ಮಾತ್ರ ನೀರು ಬಳಕೆ ಮಾಡಿದ್ದಾರೆ. ಪ್ರತಿ ಎಕರೆಗೆ 25-30 ಕ್ವಿಂಟಲ್ ಭತ್ತ ಬೆಳೆದಿದ್ದು, ತಮ್ಮ ಮಿಲ್ನಲ್ಲಿ ಅಕ್ಕಿ ಮಾಡಿ, ಕಡಿಮೆ ಪಾಲಿಶ್ ಇರುವ ಅಕ್ಕಿ ಮಾರಾಟದಿಂದ ಒಂದು ಕ್ವಿಂಟಲ್‌ಗೆ ₹5,000 ಗಳಿಸುತ್ತಿದ್ದಾರೆ.ಸಾಮಾನ್ಯವಾಗಿ ಕಬ್ಬು, ಭತ್ತ ಬೆಳೆಯಬೇಕಾದರೆ ಹೆಚ್ಚು ನೀರು ಬೇಕು ಎಂಬ ನಂಬಿಕೆ. ಅದರಲ್ಲೂ ಭತ್ತ ಬೆಳೆಯಬೇಕಾದರೆ ಯಾವಾಗಲೂ ಗದ್ದೆಗಳಲ್ಲಿ ನೀರು ನಿಂತಿರಬೇಕು ಎಂಬಂತೆ ರೈತರು ವರ್ತಿಸುತ್ತಿದ್ದಾರೆ. ಆದರೆ 120 ದಿನಗಳಲ್ಲಿ ನಾಲ್ಕು ಬಾರಿ ನೀರು ನೀಡಿದರೆ ಸಾಕು. ಅದರಲ್ಲೂ ಮಳೆ ಬಿದ್ದರೆ ಇನ್ನೊಂದು ಬಾರಿ ಕಡಿಮೆ ನೀರು ನೀಡಬಹುದು. ಒಂದು ಎಕರೆಗೆ ಬಳಸುವ ನೀರಿನಲ್ಲಿ ಹತ್ತು ಎಕರೆಯಲ್ಲಿ ಭತ್ತ ಬೆಳೆಯಬಹುದು. ಆಗ ಮೇಕೆದಾಟು ಯೋಜನೆ ಬೇಕಾಗಿಲ್ಲ. ಕುಡಿಯುವ ನೀರು ಮತ್ತಿತರ ಕಾರ್ಯಗಳಿಗೆ ನೀರಿನ ಸಂರಕ್ಷಣೆಯೂ ಆಗುತ್ತದೆ. ಕೃಷಿ ಇಲಾಖೆಯವರು ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕಾಗಿದೆ.
ಶಿಸ್ತು ಪದ್ಧತಿ ಎಂಬ ಹೆಸರು ಏಕೆ?ಅವರು ಈ ಪದ್ಧತಿಗೆ ಶಿಸ್ತು ಎಂದು ಹೆಸರಿಸಿದ್ದಾರೆ. ಶಿ ಎಂದರೇ ಶಿವಾಂಕ್, ಸ್ತು ಎಂದರೇ ಸ್ತುತಿ. ಅವರ ಪುತ್ರಿ ಸ್ಫೂರ್ತಿ ಗಿರೀಶ್ ಅಮೆರಿಕೆಯಲ್ಲಿದ್ದು, ಅಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಏಳು ವರ್ಷದ ಶಿವಾಂಕ್ ಮೃತಪಟ್ಟಿದ್ದಾನೆ. ಹನ್ನೆರಡು ವರ್ಷದ ಸ್ತುತಿ ತೀವ್ರವಾಗಿ ಗಾಯಗೊಂಡು ವ್ಹೀಲ್ ಚೇರ್ನಲ್ಲಿ ಸಮಯ ಕಳೆಯುತ್ತಿದ್ದಾರೆ. ಇದರಿಂದ ಆಗಿರುವ ಆಘಾತ ಮರೆಯಲು ಕಡಿಮೆ ನೀರು ಬಳಸಿ, ನಾಟಿ ಮಾಡದೇ, ಯಾವುದೇ ರಾಸಾಯನಿಕ ಗೊಬ್ಬರ, ಕ್ರಿಮಿ ಹಾಗೂ ಕೀಟ ನಾಶಕ ಹಾಕದೇ ಬೆಳೆಯುವ ಈ ಪದ್ಧತಿಗೆ ಶಿಸ್ತು ಎಂದು ಹೆಸರಿಸಿದ್ದಾರೆ.
ನಾಟಿ ಮಾಡುವುದು ಹೇಗೆ?ಸಾಮಾನ್ಯವಾಗಿ ಭತ್ತದ ನಾಟಿ ಮಾಡಬೇಕಾದರೆ ಮೊದಲು ಭತ್ತದ ಸಸಿಮಡಿ ಸಿದ್ಧ ಮಾಡಬೇಕು. ನಂತರ ಪೈರುಗಳನ್ನು ಕಿತ್ತು, ನಾಟಿ ಮಾಡಬೇಕು. ಆದರೆ ಕೈಲಾಸಮೂರ್ತಿ ಅವರು 75 ಸಾವಿರ ರು. ವೆಚ್ಚದಲ್ಲಿ ಮಿನಿ ಟ್ರ್ಯಾಕ್ಟರ್ಗೆ ಹೂಡಿಸಿರುವ ಯಂತ್ರದ ಮೂಲಕ ಚೆಲ್ಲು ಪದ್ಧತಿಯಲ್ಲಿ ನಾಟಿ ಮಾಡುತ್ತಾರೆ. ಸಣ್ಣ ಯಂತ್ರದ ಮೂಲಕ ಕಳೆಯನ್ನು ಕೂಡ ಕೀಳುತ್ತಾರೆ.
ಈ ಪದ್ಧತಿಯ ಉಪಯೋಗಗಳೇನು?ಕೈಲಾಸಮೂರ್ತಿ ಅವರ ಪ್ರಕಾರ, ಈ ಪದ್ಧತಿಯಲ್ಲಿ ಭತ್ತ ಬೆಳೆಯುವುದರಿಂದ ಶೇ.90 ರಷ್ಟು ನೀರು ಉಳಿತಾಯವಾಗುತ್ತದೆ. 10-15 ಕಾರ್ಮಿಕರು ಸಾಕು. ನಾಟಿ ಮಾಡಬೇಕಾಗಿಲ್ಲ. ಗೊರೆ ಕದರಬೇಕಾಗಿಲ್ಲ. ಮಣ್ಣಿನ ಜೀವವೈವಿಧ್ಯತೆ ಸಂರಕ್ಷಣೆಯಾಗುತ್ತದೆ. ಜೊತೆಗೆ ಮಣ್ಣಿನ ಫಲವತ್ತತೆ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತದೆ. ಮೀಥೇನ್ ಮತ್ತು ನೈಟ್ರಸ್ ಆಕ್ರೈಡ್ ಉತ್ತತ್ಪಿಯಾಗುವುದಿಲ್ಲ. ಕಳೆ ನಾಶಕ ಬಳಸಬೇಕಾಗಿಲ್ಲ. ಪ್ರತಿ ಎಕರೆಗೆ ಹದಿನೈದು ಸಾವಿರ ರು. ಖರ್ಚು ಉಳಿತಾಯವಾಗುತ್ತದೆ. ರೈತರ ಆರ್ಥಿಕತೆ ದ್ವಿಗುಣವಾಗುತ್ತದೆ. ಜೊತೆಗೆ ಶ್ರಮ ಕಡಿಮೆಯಾಗಿ, ಹೆಚ್ಚು ಭೂಮಿಯನ್ನು ಸಾಗುವಳಿ ಮಾಡಬಹುದು. ಭೂಮಿಯ ತಾಪಮಾನ ಕೂಡ ನಿಯಂತ್ರಣವಾಗುತ್ತದೆ. ಪ್ರಕೃತಿದತ್ತ ಜಲಮೂಲಗಳ ಹೂಳು ತುಂಬುವಿಕೆ ನಿಯಂತ್ರಣವಾಗುತ್ತದೆ. ಒಂದು ವೇಳೆ ಒಂದೆರಡು ನೀರು ಕೊಟ್ಟ ನಂತರ ಮಳೆ ಕೈಕೊಟ್ಟರೆ, ನಾಲೆಯಲ್ಲಿ ನೀರು ಬಾರದಿದ್ದರೂ ಎಕರೆಗೆ 25-30 ಕ್ವಿಂಟಲ್ ಬದಲು15-20 ಕ್ವಿಂಟಲ್ ಇಳುವರಿ ಗ್ಯಾರಂಟಿ ಬರುತ್ತದೆ.
--ಸಣ್ಣ ಸಣ್ಣ ಬಾಕ್ಸ್ಗಳು...
ಬೆಂಗಳೂರು ಕೃಷಿ ವಿವಿ ತಂಡ ಭೇಟಿಬೆಂಗಳೂರು ಕೃಷಿ ವಿವಿಯ ಡಾ.ಎಸ್,ಎನ್. ವಾಸುದೇವನ್, ಡಾ.ಜಿ.ಆರ್. ದಿನೇಶ್, ಡಾ.ಬಿ.ಎಸ್. ಚೇತನಾ, ಡಾ.ಎಚ್.ಆರ್. ಉಮೇಶ್, ಡಾ.ಎಂ.ಎಸ್. ಕಿತ್ತೂರುಮಠ್ ಅವರು ಕೈಲಾಸಮೂರ್ತಿ ಅವರಿಗೆ ಸೇರಿದ ದೊಡ್ಡಿಂದುವಾಡಿ ಹಾಗೂ ಮಾಡ್ರಹಳ್ಳಿಯ ಜಮೀನಿಗೆ ಭೇಟಿ ನೀಡಿ, ಪೂರಕವಾದ ವರದಿ ನೀಡಿದ್ದಾರೆ.
---ಕೃಷಿ ಇಲಾಖೆಯವರು ಸ್ಪಂದಿಸಿಲ್ಲ
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಹತ್ತಾರು ಬಾರಿ ಮನವಿ ಮಾಡಿದ್ದರೂ ಸಹ ಸೂಕ್ತವಾಗಿ ಸ್ಪಂದಿಸಿಲ್ಲ. ಅಲ್ಲಿ ಕ್ಷೇತ್ರೋತ್ಸವ ಮಾಡಿ, ಜಿಲ್ಲೆಯ ರೈತರನ್ನು ಕರೆತಂದು ಮಾಹಿತಿ ನೀಡಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರೂ ಇದು ಕೃಷಿ ವಿವಿಯ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು. ಈವರೆಗೆ ಏನೂ ಮಾಡಿಲ್ಲ ಎಂಬುದು ಕೈಲಾಸಮೂರ್ತಿ ಅವರ ನೋವಿನ ಮಾತು.---
ನೀರಾವರಿ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆಆದರೆ ನೀರಾವರಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಂಕರೇಗೌಡರು, ಅಧೀಕ್ಷಕ ಎಂಜಿನಿಯರ್ ಆಗಿದ್ದ ಮಹೇಶ್ ಅವರು ಸೂಕ್ತವಾಗಿ ಸ್ಪಂದಿಸಿ, ಸುಮಾರು ₹70 ಲಕ್ಷ ವೆಚ್ಚದಲ್ಲಿ ಸೀಮೆಂಟ್‌ನ ಕಿರುನಾಲೆ ನಿರ್ಮಿಸಿಕೊಟ್ದಿದ್ದಾರೆ. ಇದರಿಂದ ನಾನು ಕಡಿಮೆ ನೀರು ಬಳಸಿ, ಪ್ರಾಯೋಗಿಕವಾಗಿ ಭತ್ತ ಬೆಳೆಯಲು ಸಾಧ್ಯವಾಗಿದೆ. ಇದಲ್ಲದೇ ನೀರು ವ್ಯರ್ಥವಾಗುವುದು ತಪ್ಪಿ, ಮುಂದಿನ ನಾಲಾ ಬಯಲಿನವರಿಗೆ ಅನುಕೂಲವಾಗಿದೆ ಎನ್ನುತ್ತಾರೆ ಕೈಲಾಸಮೂರ್ತಿ.