ಸಾರಾಂಶ
ಬೆಂಗಳೂರು : ವಚನಕಾರರ ಪಥದಂತೆ ಪಕ್ಕವಾದ್ಯಗಾರರನ್ನು ಗೌರವಿಸಿರುವುದು ಮಾದರಿ ಕಾರ್ಯ ಎಂದು ಬೇಲಿಮಠದ ಶಿವರುದ್ರಸ್ವಾಮಿಗಳು ಹೇಳಿದ್ದಾರೆ.
ವಚನಜ್ಯೋತಿ ಬಳಗವು ಸಂಸ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಬಳಗದ ಸಂಸ್ಥಾಪಕ ಪಂಡಿತ್ ಕೆ.ಪಿ.ಶಿವಲಿಂಗಯ್ಯ ಅವರ ದಿನಾಚರಣೆ ಮತ್ತು ‘ಶಿವಲಿಂಗ ಪ್ರಶಸ್ತಿ’ ಪ್ರದಾನ ಕಾಯಕ್ರಮದಲ್ಲಿ ಅವರು ಮಾತನಾಡಿದರು.
ವಚನಜ್ಯೋತಿ ಬಳಗದ ಸಂಸ್ಥಾಪಕರಾದ ಪಂಡಿತ ಕೆ.ಪಿ.ಶಿವಲಿಂಗಯ್ಯ ಅವರು ತಮಗೆ 60ರ ದಶಕದಲ್ಲಿ ನನಗೆ ಹಳಗನ್ನಡ ಕಾವ್ಯಗಳನ್ನು ಪರಿಚಯ ಮಾಡಿಕೊಟ್ಟಿದ್ದರು. ಶಿವಲಿಂಗಯ್ಯನವರು ನಾಡಿನುದ್ದಕ್ಕೂ ಪ್ರವಚನಗಳನ್ನು ಮಾಡಿ ವ್ಯಾಖ್ಯಾನ ವಿಭೂಷಣರಾದರು. ಪಕ್ಕ ಎಂದರೆ ಪರಿಪೂರ್ಣ ಅರ್ಥವಿವೆ. ಪ್ರಶಸ್ತಿ ಸ್ವೀಕರಿಸಿರುವ ಕೀಬೋರ್ಡ್ ವಾದಕ ಪುಣ್ಯೇಶ್, ತಬಲ ವಾದಕ ಗುರುರಾಜ ಆಚಾರ್ಯ ಮತ್ತು ರಿದಂಪ್ಯಾಡ್ ಮಹೇಂದ್ರ ಅವರು ಪರಿಪೂರ್ಣ ವಾದ್ಯಕಾರರಾಗಿದ್ದಾರೆ. ಅವರನ್ನು ಸತ್ಕರಿಸಿ ಮಾದರಿ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ ಎಂದು ಶ್ಲಾಘಿಸಿದರು.
ವಚನಜ್ಯೋತಿ ಬಳಗ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ಹಣ ಮತ್ತು ಅಧಿಕಾರದ ಬಲವಿಲ್ಲದೆ ಕೇವಲ ಪ್ರೀತಿ ಅಭಿಮಾನದಿಂದ ಬಳಗುವ ನಿರಂತರ ಚಟುವಟಿಕೆಗಳನ್ನು ನಡೆಸುತ್ತಿದೆ. ಬಳಗದ ಸಂಸ್ಥಾಪಕರಾದ ಪಂಡಿತ್ ಕೆ.ಪಿ. ಶಿವಲಿಂಗಯ್ಯ ಅವರು ತಮ್ಮ ಹುಟ್ಟುಹಬ್ಬದಲ್ಲಿ ಕವಿಗೋಷ್ಠಿಯನ್ನು ನಡೆಸುತ್ತಿದ್ದರು. ಗಮಕಿ- ವ್ಯಾಖ್ಯಾನಕಾರರನ್ನು ಪ್ರತಿವರ್ಷ ಸನ್ಮಾನಿಸುತ್ತಿದ್ದರು. ಅದುವೇ ಇಂದು ಶಿವಲಿಂಗ ಪ್ರಶಸ್ತಿಯಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರವೀಂದ್ರ ಭಟ್, ವೀರಲೋಕ ಪುಸ್ತಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್, ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ವಚನಜ್ಯೋತಿ ಬಳಗದ ಗೌರವಾಧ್ಯಕ್ಷ ಮಹೇಶ್ ಬೆಲ್ಲದ್ ಹಾಗೂ ಪ್ರಶಸ್ತಿ ಪುರಸ್ಕೃತರಾದ ವಾದ್ಯಗಾರ ಪುಣ್ಯೇಶ್, ಗುರುರಾಜ ಆಚಾರ್ಯ, ಮಹೇಂದ್ರ ಉಪಸ್ಥಿತರಿದ್ದರು.