ನಾವು ನಂಬಿಕೊಂಡು ಬಂದ ಜಾಗತಿಕ ವ್ಯವಸ್ಥೆ ನಿಜವಾಗಿಯೂ ಕುಸಿಯುವ ಹಂತದಲ್ಲಿದೆಯೇ? ಯುದ್ಧ, ಶಾಂತಿ, ಮಾನವ ಹಕ್ಕುಗಳು ಮತ್ತು ನ್ಯಾಯ ಎಂಬ ಪದಗಳು ಇಂದು ಕೇವಲ ಭಾಷಣಗಳ ಅಲಂಕಾರವಾಗಿಬಿಟ್ಟಿವೆಯೇ?
ವೆನೆಜುವೆಲಾ ಸೇರಿದಂತೆ ಇತ್ತೀಚಿನ ಅನೇಕ ಅಂತಾರಾಷ್ಟ್ರೀಯ ರಾಜಕೀಯ- ಬೆಳವಣಿಗೆಗಳ ನಂತರ, ವಿಶ್ವಸಂಸ್ಥೆ ಬಗೆಗಿನ ಪ್ರಶ್ನೆ ಇಂದು ಕೇವಲ ಅಂತಾರಾಷ್ಟ್ರೀಯ ರಾಜತಾಂತ್ರಿಕ ವಲಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನ ಪ್ರತಿಯೊಬ್ಬ ಸಂವೇದನಾಶೀಲ ನಾಗರಿಕನ ಮನಸ್ಸನ್ನೂ ಕಾಡಲೇಬೇಕಾದ ಪ್ರಶ್ನೆಯಾಗಿದೆ- ನಾವು ನಂಬಿಕೊಂಡು ಬಂದ ಜಾಗತಿಕ ವ್ಯವಸ್ಥೆ ನಿಜವಾಗಿಯೂ ಕುಸಿಯುವ ಹಂತದಲ್ಲಿದೆಯೇ? ಯುದ್ಧ, ಶಾಂತಿ, ಮಾನವ ಹಕ್ಕುಗಳು ಮತ್ತು ನ್ಯಾಯ ಎಂಬ ಪದಗಳು ಇಂದು ಕೇವಲ ಭಾಷಣಗಳ ಅಲಂಕಾರವಾಗಿಬಿಟ್ಟಿವೆಯೇ?
-ಅಜಿತ್ ಶೆಟ್ಟಿ ಹೆರಂಜೆ,
ರಾಜ್ಯ ಸಹ ಸಂಚಾಲಕರು, ಬಿಜೆಪಿ ಪ್ರಕಾಶನ ಪ್ರಕೋಷ್ಠ
---
ಇತಿಹಾಸವು ಕೆಲವೊಮ್ಮೆ ಅತ್ಯಂತ ಸರಳವಾದ ಪಾಠವನ್ನು ಅತ್ಯಂತ ಕ್ರೂರ ರೀತಿಯಲ್ಲಿ ಕಲಿಸುತ್ತದೆ. ಮೊದಲನೇ ವಿಶ್ವಯುದ್ಧದ ಭೀಕರ ವಿನಾಶದ ನಂತರ ಮಾನವಕುಲ ‘ಇನ್ನು ಯುದ್ಧ ಬೇಡ’ ಎಂಬ ಗಟ್ಟಿ ನಿರ್ಧಾರದೊಂದಿಗೆ ‘ಲೀಗ್ ಆಫ್ ನೇಷನ್ಸ್’ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಹುಟ್ಟು ಹಾಕಿತು. ಯುದ್ಧವನ್ನು ತಡೆಯುವ ನೈತಿಕ ಶಕ್ತಿ, ರಾಷ್ಟ್ರಗಳ ನಡುವಿನ ವಿವಾದಗಳನ್ನು ಸಂವಾದದ ಮೂಲಕ ಬಗೆಹರಿಸುವ ವೇದಿಕೆ ಆಗಬೇಕು ಎನ್ನುವುದು ಇದರ ಆಶಯವಾಗಿತ್ತು. ಆದರೆ ವಾಸ್ತವದಲ್ಲಿ, ಆ ಸಂಸ್ಥೆ ವಿಶ್ವದ ಬಲಾಢ್ಯ ರಾಷ್ಟ್ರಗಳ ಸ್ವಾರ್ಥ, ಅಹಂಕಾರ ಮತ್ತು ರಾಜಕೀಯ ದ್ವಂದ್ವಗಳ ಮುಂದೆ ಸಂಪೂರ್ಣವಾಗಿ ಮಂಡಿಯೂರಿತು. ಫಲಿತಾಂಶ ಒಂದೇ-ಲೀಗ್ ಆಫ್ ನೇಷನ್ಸ್ ವಿಫಲವಾಯಿತು ಮತ್ತು ಜಗತ್ತು ಮತ್ತೊಮ್ಮೆ ಎರಡನೇ ಮಹಾಯುದ್ಧದ ಮಹಾವಿನಾಶಕ್ಕೆ ತಳ್ಳಲ್ಪಟ್ಟಿತು.
ಆ ಮಹಾಯುದ್ಧದ ಬೂದಿಯ ಮೇಲೆ, ಜಗತ್ತು ಮತ್ತೊಮ್ಮೆ ಹೊಸ ಆಶಯದೊಂದಿಗೆ ಯುನೈಟೆಡ್ ನೇಷನ್ಸ್ (ವಿಶ್ವಸಂಸ್ಥೆ) ಅನ್ನು ಸ್ಥಾಪಿಸಿತು. ಮುಂದೆ ಯುದ್ಧಗಳಿಗೆ ಅವಕಾಶವಿಲ್ಲ, ವಿಶ್ವಶಾಂತಿಯೇ ಸರ್ವೋನ್ನತ ಎಂಬ ಘೋಷಣೆಗಳು ಮತ್ತೆ ಮೊಳಗಿದವು. ಜಾಗತಿಕ ಶಾಂತಿ, ನ್ಯಾಯ, ಸಮಾನತೆ-ಇವೆಲ್ಲವೂ ವಿಶ್ವಸಂಸ್ಥೆಯ ಅಡಿಪಾಯದ ಘೋಷವಾಕ್ಯಗಳಾದವು. ಆದರೆ ಇಂದು, ಎಂಬತ್ತಕ್ಕೂ ಹೆಚ್ಚು ವರ್ಷಗಳ ನಂತರ, ಅದೇ ಪ್ರಶ್ನೆ ಮತ್ತೆ ನಮ್ಮ ಮುಂದೆ ನಿಂತಿದೆ.
ರಾಷ್ಟ್ರಗಳ ನಡುವಿನ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಿ, ಜಗತ್ತಿನಲ್ಲಿ ಸ್ಥಿರತೆ ಮತ್ತು ಶಾಂತಿಯನ್ನು ಕಾಪಾಡಬೇಕಿದ್ದ ಸಂಸ್ಥೆ ಇಂದು ಯುದ್ಧಗಳ ಪಟ್ಟಿ ಓದುವ ವೇದಿಕೆಯಾಗಿಬಿಟ್ಟಿದೆ. ಗಾಜಾ, ಉಕ್ರೇನ್, ಆಫ್ರಿಕಾ, ಲ್ಯಾಟಿನ್ ಅಮೆರಿಕ, ಕಾಂಬೋಡಿಯಾ, ತೈವಾನ್, ಯೆಮೆನ್ - ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುವ ಸಂಘರ್ಷಗಳು ವಿಶ್ವಸಂಸ್ಥೆಯ ಸಭಾಂಗಣದಲ್ಲಿ ಕೇವಲ ಚರ್ಚಾ ವಿಷಯಗಳಾಗಿವೆ. ಮಾನವ ಹಕ್ಕುಗಳ ರಕ್ಷಣೆಯ ಹೊಣೆಗಾರಿಕೆಯನ್ನು ಹೊತ್ತ ಸಂಸ್ಥೆ ಇವತ್ತು ಅದರ ಹೆಸರಿನಲ್ಲಿ ಕೇವಲ ಸೆಲೆಕ್ಟಿವ್ ಆಕ್ಟಿವಿಸಂ ಪ್ರದರ್ಶಿಸುವ ಸ್ಥಿತಿಗೆ ಇಳಿದಿದೆ.
ವೀಟೋ ರಾಜಕಾರಣದ ಕಟು ಸತ್ಯ
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ವೀಟೋ ರಾಜಕಾರಣವು ಒಂದು ಕಟುವಾದ ಸತ್ಯವನ್ನು ಜಗತ್ತಿನ ಮುಂದೆ ಇಟ್ಟಿದೆ- ಇಂದಿನ ಜಾಗತಿಕ ವ್ಯವಸ್ಥೆ ನೈತಿಕ ಮೌಲ್ಯಗಳ ಆಧಾರದ ಮೇಲೆ ನಡೆಯುವುದಿಲ್ಲ; ಅದು ಬಲಿಷ್ಠ ರಾಷ್ಟ್ರಗಳ ಸ್ವಾರ್ಥ ಮತ್ತು ಶಕ್ತಿ ಸಮೀಕರಣದ ಅನುಕೂಲಕ್ಕೆ ತಕ್ಕಂತೆ ನಡೆಯುತ್ತದೆ. ಐದು ಶಕ್ತಿಯುತ ರಾಷ್ಟ್ರಗಳಿಗೆ ನೀಡಲಾದ ವಿಶೇಷ ಹಕ್ಕು ವೀಟೊ ಇಂದು ಜಗತ್ತಿನ ಬಹುಪಾಲು ರಾಷ್ಟ್ರಗಳಿಗೆ ಅನ್ಯಾಯದ ಸ್ಮಾರಕದಂತೆ ಕಾಣಿಸುತ್ತಿದೆ. ಇದು ಕೇವಲ ಯುನೈಟೆಡ್ ನೇಷನ್‌ನ ವೈಫಲ್ಯವಲ್ಲ; ಇದು ಇಡೀ ಜಾಗತಿಕ ರಾಜಕಾರಣದ ಮೂಲಭೂತ ದೌರ್ಬಲ್ಯದ ಪ್ರತಿಬಿಂಬವಾಗಿದೆ.
1945ರ ವಿಶ್ವ ವ್ಯವಸ್ಥೆ ದ್ವಿಧ್ರುವೀಯ ಜಗತ್ತಿನ ಹಿನ್ನೆಲೆಯಲ್ಲಿಯೇ ರೂಪಿತವಾಗಿತ್ತು. ಆದರೆ ಇಂದಿನ ಜಗತ್ತು ಸಂಪೂರ್ಣವಾಗಿ ಬಹುಧ್ರುವೀಯವಾಗಿದೆ. ಹೊಸ ಶಕ್ತಿಕೇಂದ್ರಗಳು ಉದಯಿಸಿವೆ, ಪ್ರಾದೇಶಿಕ ಪ್ರಭಾವ ವಿಸ್ತರಿಸುತ್ತಿದೆ, ತಂತ್ರಜ್ಞಾನಾಧಾರಿತ ಯುದ್ಧಗಳು ರಾಜತಾಂತ್ರಿಕತೆಯ ಅರ್ಥವನ್ನೇ ಬದಲಾಯಿಸುತ್ತಿವೆ. ಸೈಬರ್ ಯುದ್ಧ, ಆರ್ಥಿಕ ನಿರ್ಬಂಧಗಳು, ಮಾಹಿತಿ ಯುದ್ಧ- ಇವುಗಳ ಮುಂದೆ ಹಳೆಯ ವ್ಯವಸ್ಥೆ ಹೊಂದಿಕೊಳ್ಳಲಾಗದೆ ಹೆಣಗಾಡುತ್ತಿದೆ. ಪರಿಣಾಮವಾಗಿ, ನಿರ್ಣಯಗಳು ವಿಳಂಬಗೊಳ್ಳುತ್ತಿವೆ; ನ್ಯಾಯವು ರಾಜಕೀಯದ ಕೈದಿಯಾಗುತ್ತಿದೆ.
ನೈತಿಕತೆಯ ಹೊಯ್ದಾಟ
ಇನ್ನೊಂದು ಅತ್ಯಂತ ಗಂಭೀರ ಸಮಸ್ಯೆ ಎಂದರೆ ಸೆಲೆಕ್ಟೀವ್ ಮೊರಾಲಿಟಿ- ಆಯ್ಕೆ ಮಾಡಿದ ನೈತಿಕತೆ. ಕೆಲ ರಾಷ್ಟ್ರಗಳಲ್ಲಿ ನಡೆದ ದೌರ್ಜನ್ಯಗಳು ತಕ್ಷಣ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಗಳಿಗೆ ಕಾರಣವಾಗುತ್ತವೆ; ಆದರೆ ಇನ್ನೂ ಕೆಲವೆಡೆ ನಡೆದ ಭೀಕರ ಮಾನವೀಯ ದುರಂತಗಳು ವರದಿಗಳ ಸಾಲಿನಲ್ಲಿ ಮೌನವಾಗಿ ಕಳೆದುಹೋಗುತ್ತವೆ. ಇದೇ ದ್ವಂದ್ವ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಯನ್ನು ಒಳಗಿನಿಂದಲೇ ಕುಸಿತಗೊಳಿಸಿದೆ. ಜಾಗತಿಕ ಸಂಸ್ಥೆಯೊಂದು ನೈತಿಕತೆಯ ಮಾನದಂಡವಾಗಬೇಕಾದರೆ, ಅದು ಎಲ್ಲೆಡೆ ಒಂದೇ ಧ್ವನಿಯಲ್ಲಿ ಮಾತನಾಡಬೇಕು. ಆದರೆ ಇಂದು ಆ ಧ್ವನಿ ಬಲಿಷ್ಠ ರಾಷ್ಟ್ರಗಳ ರಾಜಕೀಯ ಇಚ್ಛಾಶಕ್ತಿಯ ಕಾಲಡಿಯ ದೂಳಾಗಿ ಪರಿಣಮಿಸಿದೆ.
ಹಾಗಾದರೆ ಮುಂದೇನು? ಇತಿಹಾಸ ಇಲ್ಲಿ ಮತ್ತೆ ಎಚ್ಚರಿಕೆಯ ಪ್ರಶ್ನೆ ಎತ್ತುತ್ತದೆ. ಲೀಗ್ ಆಫ್ ನೇಷನ್ಸ್ ವಿಫಲವಾದಾಗ, ಜಗತ್ತು ಯುದ್ಧದ ಮೂಲಕವೇ ಹೊಸ ವ್ಯವಸ್ಥೆಯನ್ನು ಕಂಡಿತು. ಯುನೈಟೆಡ್ ನೇಷನ್ಸ್ ಕೂಡ ಅದೇ ದಾರಿಯತ್ತ ಸಾಗುತ್ತಿದೆಯೇ? ಇದು ಅತ್ಯಂತ ಅಪಾಯಕಾರಿ ಸಾಧ್ಯತೆ. ಏಕೆಂದರೆ ಇಂದಿನ ಯುದ್ಧಗಳು ಕೇವಲ ಸೇನೆಗಳ ನಡುವೆ ಸೀಮಿತವಾಗಿಲ್ಲ; ಅವು ಆರ್ಥಿಕತೆ, ತಂತ್ರಜ್ಞಾನ, ಆಹಾರ ಭದ್ರತೆ, ಮಾಹಿತಿ ವ್ಯವಸ್ಥೆ ಮತ್ತು ನಾಗರಿಕ ಜೀವನವನ್ನೇ ನೇರವಾಗಿ ಗುರಿಯಾಗಿಸುತ್ತವೆ. ಜೊತೆಗೆ ಪರಮಾಣು ಯುದ್ಧದ ಅಪಾಯವು ಹೆಚ್ಚಾಗಿದೆ.
ಒಂದು ಸಾಧ್ಯತೆ ಎಂದರೆ ವಿಶ್ವಸಂಸ್ಥೆ ಒಳಗೆ ದೊಡ್ಡ ಪ್ರಮಾಣದ ಅರ್ಥಪೂರ್ಣ ಸುಧಾರಣೆ. ಭದ್ರತಾ ಮಂಡಳಿಯ ವಿಸ್ತರಣೆ, ವೀಟೋ ಶಕ್ತಿಗೆ ಮಿತಿಗಳು, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನ್ಯಾಯಸಮ್ಮತ ಪ್ರತಿನಿಧಿತ್ವ-ಇವೆಲ್ಲವೂ ಅನಿವಾರ್ಯ. 2014ರ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸೇರಿದಂತೆ ಅನೇಕ ಜಾಗತಿಕ ವೇದಿಕೆಗಳಲ್ಲಿ ಈ ಸುಧಾರಣೆಗಳ ಅಗತ್ಯವನ್ನು ಸ್ಪಷ್ಟವಾಗಿ ಆಗ್ರಹಿಸಿದ್ದಾರೆ. ಆದರೆ ಶಕ್ತಿಶಾಲಿ ರಾಷ್ಟ್ರಗಳು ತಮ್ಮ ವಿಶೇಷಾಧಿಕಾರ ತ್ಯಜಿಸುತ್ತವೆಯೇ? ಪ್ರಸ್ತುತ ಜಾಗತಿಕ ರಾಜಕೀಯ ವಾತಾವರಣ ಅಷ್ಟೊಂದು ಆಶಾದಾಯಕವಾಗಿಲ್ಲ.
ಇನ್ನೊಂದು ಸಾಧ್ಯತೆ- ವಿಶ್ವಸಂಸ್ಥೆ ಕ್ರಮೇಣ ಅಪ್ರಸ್ತುತವಾಗುವುದು. ಪ್ರಾದೇಶಿಕ ಒಕ್ಕೂಟಗಳು, ದ್ವೈಪಕ್ಷೀಯ ಮತ್ತು ಬಹುಪಕ್ಷೀಯ ಮೈತ್ರಿಗಳು, ತಾತ್ಕಾಲಿಕ ಒಪ್ಪಂದಗಳು-ಇವೆಲ್ಲವೂ ಜಾಗತಿಕ ರಾಜಕಾರಣದ ಹೊಸ ವಾಸ್ತವ್ಯವಾಗುತ್ತಿವೆ. ಇಂದು ಜಗತ್ತಿನಲ್ಲಿ ಜಿ20, ಜಿ7, ಬ್ರಿಕ್ಸ್, ಸಾರ್ಕ್, ಎಸ್‌ಸಿಒ, ಕ್ವಾಡ್, ನ್ಯಾಟೋ ಮುಂತಾದ 100ಕ್ಕೂ ಹೆಚ್ಚು ವಿಶ್ವಸಂಸ್ಥೆ ಹೊರಗಿನ ಬಹುಪಕ್ಷೀಯ ಒಕ್ಕೂಟಗಳು ಸಕ್ರಿಯವಾಗಿವೆ. ಇಂತಹ ಸಂದರ್ಭದಲ್ಲಿ ವಿಶ್ವಸಂಸ್ಥೆ ಒಂದು ಚರ್ಚಾ ವೇದಿಕೆಯಾಗಬಹುದು; ಆದರೆ ಜಾಗತಿಕ ಹಿತದ ದೃಷ್ಟಿಯಿಂದ ಗಟ್ಟಿಯಾದ ಸಮರ್ಥ ನಿರ್ಣಯಗಳ ತೆಗೆದುಕೊಳ್ಳಬಲ್ಲ ಸ್ಥಾನವನ್ನು ಕಳೆದುಕೊಳ್ಳುವ ಅಪಾಯ ಸ್ಪಷ್ಟವಾಗಿದೆ.
ಇತಿಹಾಸದಿಂದ ಪಾಠ ಕಲಿಯುವುದಾ?
ಅತ್ಯಂತ ಭಯಾನಕ ಸಾಧ್ಯತೆ ಎಂದರೆ- ಯಾವತ್ತೂ ಹೊಸ ಜಾಗತಿಕ ವ್ಯವಸ್ಥೆ ಮತ್ತೊಂದು ಮಹಾ ಸಂಘರ್ಷದ ಗರ್ಭದಿಂದಲೇ ಹುಟ್ಟುವುದು. ಇತಿಹಾಸದ ಈ ಪುನರಾವರ್ತನೆ ಮಾನವಕುಲಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು. ನಾವು ಮತ್ತೆ ಅದೇ ತಪ್ಪನ್ನು ಮರುಕಳಿಸುವುದಾ ಅಥವಾ ಇತಿಹಾಸದಿಂದ ಪಾಠ ಕಲಿಯುವುದಾ ಎಂಬ ಆಯ್ಕೆ ಇಂದು ನಮ್ಮ ಮುಂದೆ ನಿಂತಿದೆ.
ವಿಶ್ವಸಂಸ್ಥೆ ಸಂಪೂರ್ಣ ನಿರರ್ಥಕವಾಗಿದೆ ಎಂದು ತಳ್ಳಿ ಹಾಕುವುದು ಸುಲಭ. ಆದರೆ ಅದು ಇನ್ನೂ ಜಗತ್ತಿನ ಕೊನೆಯ ಸಂಯುಕ್ತ ವೇದಿಕೆ. ಪ್ರಶ್ನೆ ಅದು ಉಳಿಯುತ್ತದೆಯೇ ಎಂಬುದಲ್ಲ; ಅದು ಹೇಗೆ ಉಳಿಯುತ್ತದೆ ಎಂಬುದಾಗಿದೆ. ಶಾಂತಿ ಕೇವಲ ಬಾಯಿ ಮಾತಿನಿಂದ ಉಳಿಯುವುದಿಲ್ಲ; ಅದಕ್ಕೆ ಬಲಿಷ್ಠ ರಾಷ್ಟ್ರಗಳ ಸ್ಪಷ್ಟ, ಪ್ರಾಮಾಣಿಕ ರಾಜಕೀಯ ಇಚ್ಛಾಶಕ್ತಿ ಬೇಕು.
ಇಂದು ಜಗತ್ತು ಒಂದು ಸಂಧಿಕಾಲದಲ್ಲಿದೆ. ವಿಶ್ವಸಂಸ್ಥೆ ಈ ಸಂಧಿಕಾಲವನ್ನು ಸುಧಾರಣೆಯ ಮೂಲಕ ದಾಟಿಸಿಕೊಳ್ಳುತ್ತದೆಯೇ ಅಥವಾ ಇತಿಹಾಸದ ಮತ್ತೊಂದು ಅಧ್ಯಾಯದಲ್ಲಿ ವಿಫಲ ಪ್ರಯೋಗವೆಂದು ಗುರುತಿಸಿಕೊಳ್ಳುತ್ತದೆಯೇ- ಇದು ಇವತ್ತು ಜಗತ್ತನ್ನೇ ಕಾಡುತ್ತಿರುವ ಪ್ರಶ್ನೆ. ಆದರೆ ಒಂದು ಮಾತ್ರ ಸತ್ಯ ಅಚಲ: ಇತಿಹಾಸವನ್ನು ಮರೆತವರನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ; ಅದು ಮತ್ತೆ ಮರುಕಳಿಸಿ ಪಾಠ ಕಲಿಸುತ್ತದೆ.
