ಸಾರಾಂಶ
ಪ್ರಶಾಂತ್ ಕೆಂಗನಹಳ್ಳಿ
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ಗಣಪತಿನಗರದ ರಸ್ತೆಯಿಂದ ತಮ್ಮೇನಹಳ್ಳಿ ಕಡೆಗೆ ಹೋಗುವ ಅಂದಾನಪ್ಪ ಲೇಔಟ್ ರಸ್ತೆ ಗುಂಡಿಮಯವಾಗಿದ್ದು, ಈ ರಸ್ತೆಗೆ ಇದುವರೆಗೂ ರಸ್ತೆಗೆ ಡಾಂಬರೀಕರಣ ಮಾಡದೆ ಅಧಿಕಾರಿಗಳು ಜಾಣ ಕುರುಡುತನ ಎದ್ದು ಕಾಣುತ್ತಿದೆ. ಮಳೆ ಏನಾದರೂ ಬಂದರೆ ಈ ರಸ್ತೆಯಲ್ಲಿ ಪ್ರಾಣವನ್ನು ಕೈಯಲ್ಲಿ ಹಿಡಿದು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಗುಂಡಿಗಳಿಂದ ತುಂಬಿರುವ ಈ ರಸ್ತೆ ಕಾಣದೆ ಹತ್ತಾರು ಜನ ಬಿದ್ದು ಎದ್ದು ಹೋಗುವ ಸನ್ನಿವೇಶಗಳು ಸಾಮಾನ್ಯವಾದರೂ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಚಿಕ್ಕಬಾಣವಾರ ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೇರಿಸಿ ಪುರಸಭೆ ಆಗಿ 2 ವರ್ಷ ಆದರೂ ಅಧಿಕಾರಿಗಳು ಇತ್ತ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಎಡಿಫೈ ಸ್ಕೂಲ್‌ನಿಂದ ತಮ್ಮೆನಹಳ್ಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಸಂಪೂರ್ಣ ಕಿತ್ತುಹೋಗಿದ್ದು, ಶಾಲೆಗಳಿಗೆ ತಿರುಗಾಡುವ ಮಕ್ಕಳ ಸ್ಥಿತಿ ಹೇಳತೀರದು. ಈಗ ರಸ್ತೆಯಲ್ಲಿ ಧೂಳು ತುಂಬಿಕೊಂಡಿದ್ದು, ವಾಹನಗಳು ಸಂಚರಿಸಿದಾಗ ಧೂಳು ತುಂಬಿಕೊಂಡು ಪಾದಚಾರಿಗಳು ಹಾಗೂ ವಾಹನ ಸಂಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.
ಕೆಲವು ದಿನಗಳ ಹಿಂದೆ ಇದೇ ರಸ್ತೆಯ ಗುಂಡಿಗೆ ಟ್ರಾಕ್ಟರ್ ಇಳಿದು ದ್ವಿಚಕ್ರ ವಾಹನ ಸವಾರನ ಮೇಲೆ ನೀಲಗಿರಿ ಮರಗಳು ಬಿದ್ದು ಸವಾರ ಗಾಯಗೊಂಡಿದ್ದ. ಈಗಾಗಲೇ ರಸ್ತೆ ಗುಂಡಿಗೆ ಬಿದ್ದು ಹಲವಾರು ಜನ ಗಾಯಗೊಂಡಿದ್ದಾರೆ. ಈಗಲಾದರೂ ಪುರಸಭೆ ಅಧಿಕಾರಿಗಳು, ಸ್ಥಳೀಯ ಶಾಸಕರು ಎಚ್ಛೆತುಕೊಂಡು ಸಮಸ್ಯೆಯನ್ನು ಬಗೆಹರಿಸುತ್ತಾರೋ ಕಾದು ನೋಡಬೇಕಿದೆ.
ಮುಖ್ಯ ರಸ್ತೆ ಹಾಳಾಗಿದೆ. ಬಿಸಿಲಿದ್ದಾಗ ಧೂಳು, ಮಳೆ ಬಂದರೆ ಕೆಸರು ಗುಂಡಿ ಆಗುತ್ತದೆ. ಈ ರಸ್ತೆ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರು ಬಿದ್ದು ಎದ್ದು ಹೋಗುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಸ್ಥಳೀಯ ನಿವಾಸಿ ಚಿಕ್ಕಣ್ಣ ಬಿ.ಎಂ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಅನುದಾನ ಕೊಡುತ್ತಿಲ್ಲ: ರಸ್ತೆಯ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸುತ್ತೇನೆ. ಅದರೆ ಸರ್ಕಾರ ಅನುದಾನವನ್ನು ನೀಡದೆ ಭಾಗ್ಯಗಳಿಗೆ ಹಣವನ್ನು ನೀಡುತ್ತಿದ್ದಾರೆ. ಮೂಲಭೂತ ಸಮಸ್ಯೆಗಳು ನಮ್ಮ ಕ್ಷೇತ್ರದಲ್ಲಿ ಸಾಕಷ್ಟಿವೆ. ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ. -ಎಸ್.ಮುನಿರಾಜು, ಶಾಸಕ.
ಅಭಿವೃದ್ಧಿ ಪಡಿಸುತ್ತೇವೆ: ಗಣಪತಿನಗರದಿಂದ ತಮ್ಮೇನಹಳ್ಳಿಗೆ ಸಂಪರ್ಕಿಸುವ ಅಂದಾನಪ್ಪ ಲೇಔಟ್‌ಗೆ ಹೋಗುವ ರಸ್ತೆ ಇದಾಗಿದೆ. ಈ ರಸ್ತೆಯ ಸಮಸ್ಯೆ ಸುಮಾರು ದಿನಗಳಿಂದ ಇದ್ದು, ಈಗ ಗಮನಕ್ಕೆ ಬಂದಿದೆ. ಅದನ್ನು ಅಭಿವೃದ್ಧಿ ಮಾಡಲು ಕ್ರಮ ವಹಿಸುತ್ತೇನೆ. -ಕುಮಾರ್, ಚಿಕ್ಕಬಾಣಾವರ ಪುರಸಭೆ ಅಧಿಕಾರಿ
;Resize=(690,390))
;Resize=(128,128))
;Resize=(128,128))
;Resize=(128,128))