ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳ ಹಾಗೂ ಪಾದಚಾರಿ ಜಾಗಗಳನ್ನು ಮಾರಾಟ ಹಾಗೂ ಬಾಡಿಗೆ ಕೊಟ್ಟು ಹಣ ಮಾಡುವ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರಿ ಸೌಲಭ್ಯಗಳು ಈ ದಂಧೆ ನಡೆಸುವವರ ಪಾಲಾಗುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ರಸ್ತೆಯ ಬದಿಯ ಖಾಲಿ ಜಾಗ, ವಾಹನ ನಿಲುಗಡೆ ಸ್ಥಳ, ಪಾದಚಾರಿ ಮಾರ್ಗ ಸೇರಿ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ದಂಧೆಕೋರರು ವ್ಯಾಪಾರಿ ಸರಹದ್ದು ಸೃಷ್ಟಿಸಿಕೊಂಡು ತಾತ್ಕಾಲಿಕ ವ್ಯಾಪಾರ ಆರಂಭಿಸುತ್ತಾರೆ. ದಿನ ಕಳೆದಂತೆ ತಮ್ಮದಲ್ಲದ ಆ ಸ್ಥಳವನ್ನು ಅಮಾಯಕ ವ್ಯಾಪಾರಿಗಳಿಗೆ ಹಸ್ತಾಂತರಿಸಿ ದಿನ ಅಥವಾ ಮಾಸಿಕ ಬಾಡಿಗೆ ರೂಪದಲ್ಲಿ ಹಣ ವಸೂಲಿ ಮಾಡಲು ಆರಂಭಿಸುತ್ತಿದ್ದಾರೆ.
ಇನ್ನೂ ಕೆಲವರು ಆ ವ್ಯಾಪಾರಿ ಸ್ಥಳವನ್ನು ಶಾಶ್ವತವಾಗಿ ಮಾರಾಟದ ರೂಪದಲ್ಲಿ ಬಿಟ್ಟುಕೊಟ್ಟು ಲಕ್ಷಗಟ್ಟಲೆ ಹಣ ಪಡೆದು ಮತ್ತೊಂದು ವಸಾಹತು ಸ್ಥಾಪಿಸುತ್ತಾರೆ. ಇದೇ ಇವರ ಕಾಯಕವಾಗಿದೆ.
ಈ ರೀತಿಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ನಗರದ ಮೆಜೆಸ್ಟಿಕ್, ಜಯನಗರ, ವಿಜಯನಗರ, ಮಲ್ಲೇಶ್ವರ, ಶಿವಾಜಿನಗರ, ಗಾಂಧಿನಗರ, ಗಾಂಧಿ ಬಜಾರ್, ಬನಶಂಕರಿ, ಶಿವಾಜಿನಗರ, ಕೆ.ಆರ್.ಮಾರುಕಟ್ಟೆಯಂಥ ವ್ಯಾಪಾರಿ ಸ್ಥಳಗಳಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಈ ಎಲ್ಲ ವಿಚಾರಗಳು ಸ್ಥಳೀಯ ರಾಜಕಾರಣಿಗಳು, ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ಗೊತ್ತಿದ್ದರೂ ಯಾವುದೇ ಕ್ರಮವಾಗುತ್ತಿಲ್ಲ ಎಂಬುದು ಅಚ್ಚರಿಯ ಸಂಗತಿ.
ಬೀದಿ ಬದಿ ವ್ಯಾಪಾರಿ ಪಟ್ಟಿಯಲ್ಲಿ ಹೆಸರು:
ಇತ್ತಿಚಿಗೆ ಬಿಬಿಎಂಪಿಯು ಬೀದಿ ಬದಿ ವ್ಯಾಪಾರಿಗಳ ಸರ್ವೇ ಕಾರ್ಯ ನಡೆಸಿದ್ದು, ಸುಮಾರು 27 ಸಾವಿರ ಮಂದಿ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಈ ಸರ್ವೇ ಪಟ್ಟಿಯಲ್ಲಿ ಈ ರೀತಿ ಅಕ್ರಮವಾಗಿ ಸ್ಥಳ ಮಾರಾಟ ಮಾಡಿದವರು ಮತ್ತು ಬಾಡಿಗೆ ರೂಪದಲ್ಲಿ ಹಣ ವಸೂಲಿ ಮಾಡುತ್ತಿರುವವರ ಹೆಸರುಗಳಿವೆ ಎಂದು ಬಿಬಿಎಂಪಿಯ ದಕ್ಷಿಣ ವಲಯದ ಕಲ್ಯಾಣಧಿಕಾರಿ ಅವರಿಗೆ ದೂರು ಸಲ್ಲಿಕೆಯಾಗಿದೆ.
ದೂರಿನಲ್ಲಿ ವಿಜಯನಗರದ ಸರ್ವೀಸ್ ರಸ್ತೆಯಲ್ಲಿ ಬರೋಬ್ಬರಿ 14 ಮಂದಿ ಈ ರೀತಿ ದಂಧೆ ನಡೆಸುತ್ತಿದ್ದಾರೆ. ಆವರ ಹೆಸರುಗಳನ್ನು ಬೀದಿ ಬದಿ ವ್ಯಾಪಾರಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರು ದಿನಕ್ಕೆ ₹250ರಿಂದ ₹300 ರವರೆಗೆ ಬಾಡಿಗೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು 1 ರಿಂದ 2 ಲಕ್ಷ ರು.ಗೆ ಸ್ಥಳ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ನೈಜ ವ್ಯಾಪಾರಿಗಳಿಗೆ ಮೋಸ:
ಬಿಸಿಲು, ಗಾಳಿ, ಮಳೆಯಲ್ಲಿ ನಿಂತು ನೈಜವಾಗಿ ಬೀದಿ ಬದಿ ವ್ಯಾಪಾರ ಮಾಡುತ್ತಿರುವರಿಗೆ ಸರ್ಕಾರಿ ಸೌಲಭ್ಯಗಳು ಸಿಗದಂತಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರ ಬ್ಯಾಂಕ್ ಸಾಲ, ಸಬ್ಸಿಡಿಯಲ್ಲಿ ವಾಹನ, ತಳ್ಳುವ ಗಾಡಿ ಮತ್ತಿತರ ಸೌಲಭ್ಯಗಳನ್ನು ನೀಡುತ್ತಿದೆ. ಈ ಎಲ್ಲ ಸೌಲಭ್ಯಗಳು ಈ ದಂಧೆ ನಡೆಸುವವರ ಪಾಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ರೀತಿ ದಂಧೆ ನಡೆಸುವವರಿಗೆ ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿ ನೀಡಬಾರದು. ನೈಜವಾಗಿ ವ್ಯಾಪಾರ ಮಾಡುತ್ತಿರುವವರಿಗೆ ನೀಡಬೇಕು ಎಂಬ ಆಗ್ರಹ ಬೀದಿ ಬದಿ ವ್ಯಾಪಾರಿಗಳ ಸಂಘಟನೆಯ ಪ್ರತಿನಿಧಿಗಳಿಂದ ವ್ಯಕ್ತವಾಗಿದೆ.
ಸರ್ಕಾರದಿಂದ ರಕ್ಷಣೆ, ಜಾಗೃತಿ ಬೇಕು:
ಈ ರೀತಿ ಖಾಸಗಿ ವ್ಯಕ್ತಿಗಳಿಗೆ ಸಾರ್ವಜನಿಕ ಸ್ಥಳಗಳ ಬಾಡಿಗೆ ಮತ್ತು ಮಾರಾಟ ನಿಲ್ಲಬೇಕಾದರೆ, ನೈಜವಾಗಿ ಬೀದಿ ಬದಿ ವ್ಯಾಪಾರ ನಡೆಸುತ್ತಿರುವವರಿಗೆ ರಕ್ಷಣೆ ನೀಡಬೇಕಾಗಿದೆ. ಜತೆಗೆ, ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳಿಗೆ ಬಾಡಿಗೆ ನೀಡದಂತೆ ಹಾಗೂ ಖರೀದಿ ರೂಪದಲ್ಲಿ ಪಡೆಯದಂತೆ ಸರ್ಕಾರ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿ ಸರ್ಕಾರ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ.
)
;Resize=(128,128))
;Resize=(128,128))
;Resize=(128,128))