ಬಿಜೆಪಿಯಲ್ಲಿ ಜೆ.ಪಿ. ನಡ್ಡಾ ಅವರ ನಂತರ ಅಧ್ಯಕ್ಷ ಸ್ಥಾನಕ್ಕೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವಲ್ಲಿ ಮೋದಿ, ಅಮಿತ್ ಶಾ ಮತ್ತು ಆರ್‌ಎಸ್‌ಎಸ್ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಈ ಲೇಖನದಲ್ಲಿ, ಆರ್‌ಎಸ್‌ಎಸ್‌ನ ಪಾತ್ರ ಮತ್ತು ಬಿಜೆಪಿಯ ಮೇಲೆ ಅದರ ಪ್ರಭಾವದ ಬಗ್ಗೆ ವಿಶ್ಲೇಷಿಸಲಾಗಿದೆ.
ಪ್ರಶಾಂತ್ ನಾತು
ಎಲ್ಲವೂ ಸರಿ ಇದ್ದರೆ ಬಿಜೆಪಿಗೆ ಇಷ್ಟು ಹೊತ್ತಿಗೆ ಜೆ.ಪಿ.ನಡ್ಡಾ ಬದಲಿಗೆ ಒಬ್ಬ ಕಾರ್ಯಾಧ್ಯಕ್ಷರ ನೇಮಕ ಆಗಬೇಕಿತ್ತು. ಏಕೆಂದರೆ ಬಿಜೆಪಿ ಸಂವಿಧಾನದಲ್ಲಿ ಒಬ್ಬ ವ್ಯಕ್ತಿ ಎರಡು ಹುದ್ದೆಗಳಲ್ಲಿ ಮುಂದುವರೆಯುವ ಅವಕಾಶ ಇಲ್ಲ. 2019ರಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಶಾ ಕೇಂದ್ರ ಗೃಹ ಮಂತ್ರಿಯಾದ ಬಳಿಕ ಕೂಡಲೇ ಜೆ.ಪಿ.ನಡ್ಡಾರನ್ನು ತಾತ್ಕಾಲಿಕವಾಗಿ ಕಾರ್ಯಾಧ್ಯಕ್ಷರಾಗಿ ನೇಮಿಸಿ ಮುಂದೆ 1 ವರ್ಷದ ಬಳಿಕ ಪೂರ್ಣ ಪ್ರಮಾಣದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಆದರೆ ಈಗ ನೋಡಿ ಜೆ.ಪಿ.ನಡ್ಡಾ ಕೇಂದ್ರ ಆರೋಗ್ಯ ಸಚಿವರಾಗಿ 3 ತಿಂಗಳಾಯಿತು. ಇನ್ನೂ ಕೂಡ ಕಾರ್ಯಾಧ್ಯಕ್ಷರನ್ನಾಗಿ ಯಾರನ್ನು ಮಾಡಬೇಕೆನ್ನುವ ಬಗ್ಗೆ ಸರ್ವಸಮ್ಮತಿ ಬರುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಮೋದಿ ಮತ್ತು ಅಮಿತ್ ಶಾ ಒಂದು ಕಡೆ, ಆರ್‌ಎಸ್‌ಎಸ್ ಇನ್ನೊಂದು ಕಡೆಯಿಂದ ನಡೆಸಿರುವ ಹಗ್ಗಜಗ್ಗಾಟ. ಮೋದಿ ಮತ್ತು ಅಮಿತ್ ಶಾ ಸೂಚಿಸುವ ಹೆಸರನ್ನು ಆರ್‌ಎಸ್‌ಎಸ್ ಒಪ್ಪುತ್ತಿಲ್ಲ. ಇನ್ನೊಂದು ಕಡೆ ಆರ್‌ಎಸ್‌ಎಸ್ ಸೂಚಿಸುವ ಹೆಸರಿಗೆ ಮೋದಿ ಮತ್ತು ಅಮಿತ್ ಶಾ ಒಪ್ಪುತ್ತಿಲ್ಲ. ಅದೇ ಕಾರಣದಿಂದ ಅನಿವಾರ್ಯವಾಗಿ ಕಾರ್ಯಾಧ್ಯಕ್ಷರ ನೇಮಕ ಆಗದೇ ಸದಸ್ಯತ್ವ ಅಭಿಯಾನ ಶುರು ಮಾಡಲಾಯಿತು. ಬಿಜೆಪಿಗೆ ನಡ್ಡಾ ನಂತರ ಯಾರು ಎನ್ನುವ ಚರ್ಚೆಗೆ ಅಂತಲೇ ಅಮಿತ್ ಶಾ, ರಾಜನಾಥ್ ಸಿಂಗ್, ಜೆ.ಪಿ ನಡ್ಡಾ, ಬಿ.ಎಲ್.ಸಂತೋಷ್, ನಿತಿನ್ ಗಡ್ಕರಿ ಜೊತೆಗೆ ಆರ್‌ಎಸ್‌ಎಸ್‌ನ ಹಿರಿಯರು ಎರಡು ಬಾರಿ ಸೇರಿದರೂ ಕೂಡ ಕಗ್ಗಂಟು ಬಗೆಹರಿಯುತ್ತಿಲ್ಲ. ಬಹುತೇಕ ಹೊರಗಿನಿಂದ ನೋಡಿದರೆ ಮೋದಿ ನಂತರ ಬಿಜೆಪಿ ಯಾರ ಕೈಯಲ್ಲಿ ಇರಬೇಕು ಎನ್ನುವ ಬಗ್ಗೆ ಆರ್‌ಎಸ್‌ಎಸ್ ಮತ್ತು ಅಮಿತ್ ಶಾ ನಡುವೆ ಮೈಂಡ್ ಗೇಮ್‌ಗಳು ಭರಪೂರ ಶುರುವಾಗಿರುವಂತೆ ಕಾಣುತ್ತಿದೆ. ಅಧಿಕಾರ ರಾಜಕಾರಣ ಒಂದು ಹುಲಿ ಸವಾರಿ. ಸದಾ ಓಡುತ್ತಿರಬೇಕು. ನೀವು ಎಲ್ಲಿಯಾದರೂ ನಿಂತಿರೋ ಅದೇ ಹುಲಿ ನಿಮ್ಮನ್ನು ತಿನ್ನಲು ಬರುತ್ತದೆ. ಇದು ವಾಸ್ತವ.
ಬಿಜೆಪಿಯಲ್ಲಿನ ಪ್ರಕ್ರಿಯೆ ಏನು?
ಬಿಜೆಪಿಯ ನಿಯಮಗಳ ಪ್ರಕಾರ ಯಾವುದೇ ಕಾರ್ಯಕರ್ತ ಚುನಾಯಿತ ರಾಷ್ಟ್ರೀಯ ಅಧ್ಯಕ್ಷರಾಗಿ 3 ವರ್ಷಗಳ ಎರಡು ಅವಧಿಯವರೆಗೆ ಮುಂದುವರೆಯಬಹುದು. ಅಟಲ್, ಅಡ್ವಾಣಿ ಕಾಲದಲ್ಲಿ ಇದು 2 ವರ್ಷವಿತ್ತು. 2012ರಲ್ಲಿ ಇದಕ್ಕೆ ತಿದ್ದುಪಡಿ ತರಲಾಯಿತು. 2020ರಲ್ಲಿ ಪೂರ್ಣ ಪ್ರಮಾಣದ ಅಧ್ಯಕ್ಷರಾಗಿದ್ದ ಜೆ.ಪಿ.ನಡ್ಡಾ ಅವಧಿ 2023ರಲ್ಲಿ ಕೊನೆಗೊಂಡಿತ್ತು. ಆದರೆ 2024ರಲ್ಲಿ ಚುನಾವಣೆಯಿದ್ದ ಕಾರಣದಿಂದ 1 ವರ್ಷದ ಹೆಚ್ಚುವರಿ ಸಮಯ ಕೊಡಲಾಯಿತು. ಬಿಜೆಪಿ ನಿಯಮಗಳ ಪ್ರಕಾರ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಗಿಂತ ಮುಂಚೆ ಸದಸ್ಯತ್ವ ಅಭಿಯಾನ, ಮಂಡಲ ಪದಾಧಿಕಾರಿಗಳ ಆಯ್ಕೆ ಹಾಗೂ 50 ಪ್ರತಿಶತಕ್ಕೂ ಹೆಚ್ಚು ರಾಜ್ಯಗಳ ಅಧ್ಯಕ್ಷರ ಆಯ್ಕೆ ಮುಗಿದಿರಬೇಕು. ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತದೆ. ಆದರೂ ಕೂಡ ಹಿರಿಯ ನಾಯಕರು ಮತ್ತು ಆರ್‌ಎಸ್‌ಎಸ್ ನಡುವಿನ ಮಾತುಕತೆಯ ನಂತರ ಸರ್ವಸಮ್ಮತ ಆಯ್ಕೆ ನಡೆಯುವುದು ರೂಢಿ. ಆದರೆ ಈ ಬಾರಿ ಆ ಸರ್ವಸಮ್ಮತಿಯೇ ಕಷ್ಟವಾಗುತ್ತಿದೆ. 10 ವರ್ಷಗಳ ನಂತರ ಆರ್‌ಎಸ್‌ಎಸ್ ಸರ್ಕಾರದಲ್ಲಿ ಯಾರಿರಬೇಕು ಅನ್ನೋದೇನೂ ನಮ್ಮನ್ನು ಕೇಳಿ ಮಾಡಿಲ್ಲ, ಈಗ ಸಂಘಟನೆ ನಾವು ಹೇಳಿದವರ ಕೈಯಲ್ಲಿ ಕೊಡಬೇಕು ಎಂದು ಬಿಗಿಪಟ್ಟು ಹಾಕಿ ಕುಳಿತಿದೆ. ಆದರೆ ತಮ್ಮ ಹಿಡಿತದಲ್ಲಿರುವ ಮಾತು ಕೇಳದ ಅಧ್ಯಕ್ಷ ಬಂದು ಕುಳಿತರೆ ಪ್ರತಿಯೊಂದು ನಿರ್ಣಯಕ್ಕೂ ಉದಾಸೀನ ಆಶ್ರಮದಲ್ಲಿರುವ ಆರ್‌ಎಸ್‌ಎಸ್ ಕಾರ್ಯಾಲಯಕ್ಕೆ ದೌಡು ಮಾಡಬೇಕಾಗುತ್ತದೆ ಎನ್ನುವ ಸ್ಥಿತಿಯಲ್ಲಿ ಮೋದಿ ಮತ್ತು ಅಮಿತ್ ಶಾ ಇದ್ದಾರೆ. ಇದೊಂಥರಾ ಹೇಗಿದೆ ಅಂದ್ರೆ ಬಿಜೆಪಿ ಸಮಸ್ಯೆಗಳಿಗೆ ಸಂಘವೇ ಪರಿಹಾರ ಸೂತ್ರ ಎಂದು ಕೆಲವರು ಹೇಳಿದರೆ, ಬಿಜೆಪಿ ನಿರ್ಣಯಗಳಿಗೆ ಸಂಘವೇ ಸಮಸ್ಯೆಗಳ ಮೂಲ ಎಂದು ಇನ್ನು ಕೆಲವರ ಅಂಬೋಣ.
ಆರ್‌ಎಸ್‌ಎಸ್ ‘ವೀಟೊ’ ಅಧಿಕಾರ
ಕಾಂಗ್ರೆಸ್‌ನಲ್ಲಿ ಗಾಂಧೀ ಕುಟುಂಬಕ್ಕೆ ಹೇಗೆ ವೀಟೊ ಪವರ್ ಇದೆಯೋ, ಅದೇ ರೀತಿ ಬಿಜೆಪಿಯಲ್ಲೂ ಕೂಡ ಆರ್‌ಎಸ್ಎಸ್‌ಗೂ ಒಂದು ವೀಟೊ ಪವರ್ ಇದ್ದೇ ಇರುತ್ತದೆ. 2005ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ ಲಾಲ್ ಕೃಷ್ಣ ಅಡ್ವಾಣಿ ಮೊಹಮ್ಮದ್ ಅಲಿ ಜಿನ್ನಾರನ್ನು ಹೊಗಳಿ ಬಂದಾಗ ಸಿಟ್ಟಾಗಿದ್ದ ಆರ್‌ಎಸ್‌ಎಸ್, ಅಡ್ವಾಣಿ ಅವರಿಗೆ ಕೂಡಲೇ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಹೇಳಿತ್ತು. 2009ರಲ್ಲಿ ಸುಷ್ಮಾ ಸ್ವರಾಜ್ ಮತ್ತು ರಾಜನಾಥ್ ಸಿಂಗ್ ಒಂದು ಕಡೆ, \Bಜೈಟ್ಲಿ ಮತ್ತು ವೆಂಕಯ್ಯ \Bಇನ್ನೊಂದು ಕಡೆಯಾಗಿ ಬಿಜೆಪಿ ಒಳಜಗಳ ತಾರಕಕ್ಕೇರಿದಾಗ ನಾಗಪುರದಿಂದ ಸೀದಾ ತಂದು ದಿಲ್ಲಿಯನ್ನೇ ನೋಡಿರದ ನಿತಿನ್ ಗಡ್ಕರಿಯನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿತ್ತು. ತುಂಬಾ ಹಿಂದೆ 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಜಸ್ವಂತ್ ಸಿಂಗ್ ಹೆಸರನ್ನು ಹಣಕಾಸು ಇಲಾಖೆಗೆ ಅಖೈರು ಮಾಡಿ ರಾಷ್ಟ್ರಪತಿ ಭವನಕ್ಕೆ ಕಳುಹಿಸಿದ್ದರು. ಆಗ ಆರ್‌ಎಸ್‌ಎಸ್ ಸೂಚನೆ ಕಳುಹಿಸಿ ನೋ ಅಂದರೆ ನೋ, ಜಸ್ವಂತ್ ಸಿಂಗ್‌ಗೆ ಅಮೆರಿಕದ ನಂಟು ಜಾಸ್ತಿ, ನಾವು ಒಪ್ಪುವುದಿಲ್ಲ ಎಂದು ಹೇಳಿತು.
ಕೊನೆಗೆ ಅಡ್ವಾಣಿಗೆ ಆಪ್ತರಾಗಿದ್ದ ಯಶವಂತ್ ಸಿನ್ಹಾರನ್ನು ಹಣಕಾಸು ಇಲಾಖೆ ಕೊಡಲಾಯಿತು. ಅಟಲ್ ಬೇಸರಗೊಂಡು ನಾನೇ ರಾಜೀನಾಮೆ ಕೊಡುತ್ತೇನೆ ಅನ್ನುವಷ್ಟರ ಮಟ್ಟಿಗೆ ಕೋಪಗೊಂಡಿದ್ದರು. ಆದರೆ ಆರ್‌ಎಸ್‌ಎಸ್ ತನ್ನ ನಿರ್ಣಯದಿಂದ ಹಿಂದೇನೂ ಸರಿಯಲಿಲ್ಲ. 1970ರ ಆಸುಪಾಸು ಅಧ್ಯಕ್ಷರಾಗಿದ್ದ ಬಲರಾಜ್ ಮುಧೋಕ್‌ರನ್ನೇ ಕಿತ್ತೆಸೆಯುವಂತೆ ಆರ್‌ಎಸ್‌ಎಸ್ ಸೂಚನೆ ನೀಡಿತ್ತು. 2013ರಲ್ಲಿ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡಲು ಅಡ್ವಾಣಿ ತಯಾರಿರಲಿಲ್ಲ. ಆದರೆ ಆರ್‌ಎಸ್‌ಎಸ್ ರಾಜನಾಥ್ ಸಿಂಗ್ ಅವರಿಗೆ ಹೇಳಿ ಅಡ್ವಾಣಿ ಅವರನ್ನು ಪಕ್ಕಕ್ಕೆ ಸರಿಸಿ ಮೋದಿ ಅವರನ್ನು ಪ್ರಧಾನಿ ಕುರ್ಚಿ ಮೇಲೆ ಕೂರಿಸಿತು. ಆದರೆ, ಕಳೆದ 10 ವರ್ಷಗಳಲ್ಲಿ ಆರ್‌ಎಸ್‌ಎಸ್‌ಗೆ ಮೋದಿ ಮತ್ತು ಅಮಿತ್ ಶಾ ಅವರ ಕಾಲದಲ್ಲಿ ವೀಟೊ ಅಧಿಕಾರ ಇಲ್ಲ. ಏನಿದ್ದರೂ ಬರೀ ಸಲಹೆ ಕೊಡಬಹುದಷ್ಟೆ. ಅದಕ್ಕಾಗಿಯೂ ಏನೋ 2024ರ ಚುನಾವಣೆಯಲ್ಲಿ ಮೋದಿ ಸಾಹೇಬರಿಗೆ ಏಕಾಂಗಿ ಆಗಿ ಬಹುಮತ ಸಿಗದೇ ಇದ್ದಾಗ ಆರ್‌ಎಸ್‌ಎಸ್ \Bಪುನರಪಿ ಬಿಜೆಪಿಯನ್ನು ಕೈಗೆ ತೆಗೆದುಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಇತಿಹಾಸ ನೋಡಿದರೆ ಮುಧೋಕ್, ಅಟಲ್, ಅಡ್ವಾಣಿ ಮತ್ತು ಮೋದಿ ಎಲ್ಲರೂ ಕೂಡ ಆರ್‌ಎಸ್‌ಎಸ್‌ನಿಂದ ಬಂದವರೇ. ಆದರೆ ಒಂದಾನೊಂದು ಕಾಲಘಟ್ಟದಲ್ಲಿ ಬಿಜೆಪಿಯಲ್ಲಿ ಆರ್‌ಎಸ್‌ಎಸ್ ಪಾತ್ರ ಎಷ್ಟಿರಬೇಕು ಅನ್ನೋದರ ಬಗ್ಗೆ ಆಕ್ಷೇಪ ಎತ್ತಿದವರು ಇವರೇ. ವಿಪರ್ಯಾಸವಾದರೂ ಸತ್ಯ.
ಆರ್‌ಎಸ್‌ಎಸ್ ಏನು ಮಾಡುತ್ತದೆ?
ಇಂಗ್ಲಿಷ್‌ನಲ್ಲಿ ‘Whatever and whichever gets institutionalised it will decay’ ಅನ್ನುವ ಮಾತಿದೆ. ಅದನ್ನೇ ಅಣ್ಣ ಬಸವಣ್ಣ ‘ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ’ಎಂದು ಹೇಳಿದ್ದು. ಅದು ಕಾಂಗ್ರೆಸ್, ಬಿಜೆಪಿ, ಆರ್‌ಎಸ್‌ಎಸ್ ಆಮ್ ಆದ್ಮಿ ಪಕ್ಷದಿಂದ ಹಿಡಿದು ಜಗತ್ತಿನ ಎಲ್ಲಾ ಸಂಘಟನೆಗಳಿಗೂ ಅನ್ವಯಿಸುತ್ತದೆ. ಕಳೆದ 10 ವರ್ಷಗಳ ಅವ್ಯಾಹತ, ಅಪರಿಮಿತ ಅಧಿಕಾರ ಬಿಜೆಪಿಗಷ್ಟೇ ಸಮಸ್ಯೆ ತಂದಿಲ್ಲ, ಅದು ಸಂಘ ಪರಿವಾರದ ಒಳಗೂ ದ್ವಂದ್ವವನ್ನು ತಂದಿದೆ. ನಿಸ್ಸಂದೇಹವಾಗಿ ಸಂಘದ ವ್ಯಾಪ್ತಿ, ವಿಸ್ತಾರ, ಅಧಿಕಾರ, ಸಂಖ್ಯೆ ಹೆಚ್ಚಿದೆ. ಆದರೆ ಸಂಘದ ಹಿತೈಷಿಗಳಿಗೆ ಈಗ ಇರುವ ಚಿಂತೆ ಗುಣಾತ್ಮಕ ಶಿಥಿಲತೆಯದ್ದು. ಒಂದು ರೀತಿಯಲ್ಲಿ ಆರ್‌ಎಸ್‌ಎಸ್‌ನ ವ್ಯವಸ್ಥೆಗಳಿಗೆ ಬಿಜೆಪಿ ಸತತವಾಗಿ ಅಧಿಕಾರದಲ್ಲಿ ಇರಲೇಬೇಕು ಎನ್ನುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿಯೇ ಮೋದಿಯಂತೆ ಜನಪ್ರಿಯ ನಾಯಕರು ‘ನೀವು ಸಲಹೆ ಕೊಡಿ ಸಾಕು, ನಿರ್ಣಯ ನಮಗೆ ಬಿಡಿ’ ಅನ್ನುತ್ತಾರೆ.
ಅದು ಸಂಘದ ಕೆಲವರಿಗೆ ಪಥ್ಯ ಆಗುವುದಿಲ್ಲ. ಆಗ ತಿಕ್ಕಾಟಗಳು ಸಹಜ. 2017ರಲ್ಲಿ ನಾನು ಸಂಘದ ಹಿರಿಯರೊಬ್ಬರನ್ನು ಭೇಟಿ ಆಗಲು ದಿಲ್ಲಿಯ ಉದಾಸೀನ ಆಶ್ರಮಕ್ಕೆ ಹೋಗಿದ್ದೆ. ಹೊರಗಿನ ಹಾಲ್‌ನಲ್ಲಿ ದೇಶದ ಪ್ರತಿಷ್ಠಿತ ವಿವಿಗಳ ಕುಲಪತಿಗಳು ಸಾಲಾಗಿ ಕುಳಿತಿದ್ದರು. ನಾನು ಒಬ್ಬ ಪ್ರಚಾರಕಾರ ಬಳಿ ಇವರೆಲ್ಲ ಇಲ್ಲಿಗೆ ಯಾಕೆ ಬಂದಿದ್ದಾರೆ ಎಂದು ಕೇಳಿದೆ. ಅವರು ಹೇಳಿದರು- ‘ಎಲ್ಲರೂ ಆರ್‌ಎಸ್‌ಎಸ್ ಕಡೆಯಿಂದ ಬಿಜೆಪಿಯನ್ನು ನೋಡಿಕೊಳ್ಳುವ ಕೃಷ್ಣ ಗೋಪಾಲ್ ಜಿಯನ್ನು ಭೇಟಿಯಾಗಲು ಬಂದಿದ್ದಾರೆ.’ ಅದಾದ 20 ದಿನಕ್ಕೆ ಆರ್‌ಎಸ್‌ಎಸ್ ಪಟ್ಟು ಹಿಡಿದು ಶಿಕ್ಷಣ ಇಲಾಖೆಯಿಂದ ಸ್ಮೃತಿ ಇರಾನಿ ಅವರನ್ನು ಬದಲಿಸಿತು. ಯಾಕೆಂದರೆ,ಯಾರು ಭೇಟಿ ಆದರೂ ‘ನನ್ನದೇನೂ ನಡೆಯೋಲ್ಲ, ನೀವು ಕೃಷ್ಣ ಗೋಪಾಲ್‌ರನ್ನು ಭೇಟಿ ಆಗಿ ಫೋನ್ ಮಾಡಿಸಿ’ ಎಂದು ಸ್ಮೃತಿ ಹೇಳುತ್ತಿದ್ದರು. ಸರ್ಕಾರವನ್ನು ಆವರಿಸಿಕೊಳ್ಳಲು ಹೋಗಿಯೇ ಕಮ್ಯುನಿಷ್ಟರು ಬೆಳೆದರು. ಆದರೆ ಪ್ರಪಾತಕ್ಕೆ ಬೀಳಲು ಕಾರಣ ಕೂಡ ಅದೇ. 100ನೇ ವರ್ಷಕ್ಕೆ ಕಾಲಿಡುತ್ತಿರುವ ಆರ್‌ಎಸ್‌ಎಸ್‌ಗೆ ಬಿಜೆಪಿ ಸಾಮರ್ಥ್ಯವೂ ಹೌದು ದೌರ್ಬಲ್ಯವೂ ಹೌದು.
ಕರ್ನಾಟಕ ಬಿಜೆಪಿ ಭಿನ್ನಮತ ಶಮನಕ್ಕೆ ಆರೆಸ್ಸೆಸ್ ಕಸರತ್ತು
2023ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸೋಲಲು ರಾಜ್ಯದ ಬಿಜೆಪಿ ನಾಯಕರ ಪಾತ್ರ ಎಷ್ಟಿತ್ತೋ, ಬಿಜೆಪಿ ದಿಲ್ಲಿ ನಾಯಕರು ಮತ್ತು ರಾಜ್ಯದ ಆರ್‌ಎಸ್‌ಎಸ್ ನಾಯಕರ ಹಸ್ತ ಕ್ಷೇಪ ಕೂಡ ಅಷ್ಟೇ ಕಾರಣವಿತ್ತು. ಹೀಗಾಗಿ ಸೋಲಿನ ವಿಚಲತೆಯಿಂದ ಹೊರಗೆ ಬಂದು 6 ತಿಂಗಳ ನಂತರ ವಿಜಯೇಂದ್ರ ಅಧ್ಯಕ್ಷರಾದರು. ಆದರೆ ಆ ನಿರ್ಣಯ ತೆಗೆದುಕೊಳ್ಳುವಾಗ ಅಮಿತ್ ಶಾ ಹಾಗೂ ರಾಜ್ಯದ ಆರ್‌ಎಸ್‌ಎಸ್ ನಾಯಕರಿಗೆ ಕೇಳಿರಲಿಲ್ಲ, ಬರೀ ಕರೆದು ಹೇಳಿದ್ದರು ಅಷ್ಟೆ. ಹೀಗಾಗಿ ಕಳೆದ 1 ವರ್ಷ ಚುನಾವಣೆ, ಸಂಘಟನೆಯಿಂದೆಲ್ಲ ಅಂತರ ಕಾಯ್ದುಕೊಂಡಿದ್ದ ಆರ್‌ಎಸ್‌ಎಸ್ ಈಗ ಏಕಾಏಕಿ ರಾಜ್ಯ ಬಿಜೆಪಿಯ ಜಗಳ ಬಿಡಿಸಲು ಸಕ್ರಿಯವಾಗಿದೆ. ಅದು ಶುರುವಾಗಿದ್ದು ಸಿ.ಟಿ ರವಿ, ಅರವಿಂದ ಲಿಂಬಾವಳಿ, ಸುನೀಲ್ ಕುಮಾರ್ ಸಂಘದ ಸರ ಸಹಕಾರ್ಯವಾಹ ಮುಕುಂದರ ಬಳಿಗೆ ಹೋಗಿ ವಿಜಯೇಂದ್ರ ವಿರುದ್ಧ ದೂರು ನೀಡಿದ ತರುವಾಯ. ಆರ್‌ಎಸ್‌ಎಸ್ ನಡೆಸಿದ ಸಭೆಯಲ್ಲಿ ವಿಜಯೇಂದ್ರ ಒಬ್ಬಂಟಿಗರಾಗಿ, ಯತ್ನಾಳ್‌ರಿಂದ ಹಿಡಿದು 40ರಲ್ಲಿ 37 ಜನ ವಿಜಯೇಂದ್ರ ವಿರುದ್ಧ ಮಾತನಾಡಿದವರೇ. ವಿಜಯೇಂದ್ರ ಪರ ಇದ್ದದ್ದು ಸ್ವತಃ ವಿಜಯೇಂದ್ರ ಹಾಗೂ ಪಿ.ರಾಜೀವ್ ಮತ್ತು ಮುರುಗೇಶ್ ನಿರಾಣಿ ಮಾತ್ರ. ಆರ್‌ಎಸ್‌ಎಸ್ ಈ ಸಭೆ ನಡೆಸುವ ಮೊದಲು ಅಮಿತ್ ಶಾ ಜೊತೆ ಚರ್ಚೆ ಮಾಡಿತ್ತಾ ಅಥವಾ ದಿಲ್ಲಿಯಲ್ಲಿ ಸಂಘ ಮತ್ತು ಬಿಜೆಪಿ ಮಧ್ಯೆ ನಡೆದಿರುವ ತಿಕ್ಕಾಟಗಳ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಮಧ್ಯಪ್ರವೇಶ ಮಾಡಿತ್ತಾ ಅನ್ನೋದು ಸ್ಪಷ್ಟವಿಲ್ಲ. ಆರ್‌ಎಸ್‌ಎಸ್ ನಡೆಸಿದ ಸಭೆಯಿಂದ ಬಿಜೆಪಿಯಲ್ಲಿ ಬಣ ಗುದ್ದಾಟ ಜಾಸ್ತಿ ಆಗುತ್ತಾ ಅಥವಾ ಶಮನ ಆಗುತ್ತಾ ಅನ್ನೋದು ಮುಂದಿನ ಕುತೂಹಲದ ಪ್ರಶ್ನೆ.
ಇತಿಹಾಸದಲ್ಲಿ ಸಂಘ ಹೀಗೆ ಜಗಳ ಬಿಡಿಸಲು ಕುಳಿತಿದ್ದು ಕಡಿಮೆ. 2005ರಲ್ಲಿ ಇನ್ನೇನು ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಜೆಡಿಎಸ್ ಸೇರಿಕೊಂಡು ಬಿಡುತ್ತಾರೆ ಅಂದಾಗ ಅನಂತ್ ಕುಮಾರ್ ಕೈಯಲ್ಲಿದ್ದ ಪಾರ್ಟಿಯನ್ನು ತನ್ನ ಕಡೆ ತೆಗೆದುಕೊಳ್ಳಲು ಆಗಿನ ಆರ್‌ಎಸ್‌ಎಸ್‌ನ ಹಿರಿಯರಾಗಿದ್ದ ಮೈ.ಚ ಜಯದೇವ ಅನಂತ್ ಕುಮಾರ್‌ರಿಗೆ ನೀವು ಕರ್ನಾಟಕದಲ್ಲಿ ತಲೆ ಹಾಕಬೇಡಿ, ದಿಲ್ಲಿಯಲ್ಲೇ ಇರಿ ಎಂದರು. ಸದಾನಂದ ಗೌಡರನ್ನು ರಾಜ್ಯ ಅಧ್ಯಕ್ಷರಾಗಿ ಮಾಡಿ ಶಿವಮೊಗ್ಗ ವಿಭಾಗ ಪ್ರಚಾರಕರಾಗಿದ್ದ ಬಿ.ಎಲ್.ಸಂತೋಷ್‌ರನ್ನು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಅದಾಗಿ 19 ವರ್ಷಗಳ ಬಳಿಕ ಬಿಜೆಪಿಯೊಳಗಿನ ಜಗಳ ಬಿಡಿಸಲು ಆರ್‌ಎಸ್‌ಎಸ್ ಬಂದು ಕುಳಿತಿದೆ. ಆದರೆ ಜಗಳ ಬಗೆಹರಿಯುತ್ತದೆ ಎಂದು ಯಾಕೋ ಅನ್ನಿಸುತ್ತಿಲ್ಲ.
