ಪ್ರಯಾಣಿಕರ ವ್ಯಾಪಕ ಆಕ್ರೋಶ, ರಾಜಕೀಯ ಪಕ್ಷಗಳ ತೀವ್ರ ವಿರೋಧದ ಬೆನ್ನಲ್ಲೇ ಮೆಟ್ರೋ ದರ ಕೊಂಚ ಇಳಿಕೆ

| N/A | Published : Feb 14 2025, 02:04 AM IST / Updated: Feb 14 2025, 04:47 AM IST

ಸಾರಾಂಶ

ಪ್ರಯಾಣಿಕರ ವ್ಯಾಪಕ ಆಕ್ರೋಶ, ರಾಜಕೀಯ ಪಕ್ಷಗಳ ತೀವ್ರ ವಿರೋಧ ಹಾಗೂ ಮುಖ್ಯಮಂತ್ರಿ ಅವರ ಸೂಚನೆಗೆ ಮಣಿದ ಬೆಂಗಳೂರು ಮೆಟ್ರೋ ರೈಲು ನಿಗಮ ದರ ಇಳಿಸಲು ನಿರ್ಧರಿಸಿದೆ.  

 ಬೆಂಗಳೂರು : ಪ್ರಯಾಣಿಕರ ವ್ಯಾಪಕ ಆಕ್ರೋಶ, ರಾಜಕೀಯ ಪಕ್ಷಗಳ ತೀವ್ರ ವಿರೋಧ ಹಾಗೂ ಮುಖ್ಯಮಂತ್ರಿ ಅವರ ಸೂಚನೆಗೆ ಮಣಿದ ಬೆಂಗಳೂರು ಮೆಟ್ರೋ ರೈಲು ನಿಗಮ ದರ ಇಳಿಸಲು ನಿರ್ಧರಿಸಿದೆ. ಆದರೆ, ಈ ಇಳಿಕೆ ಶೇ.70ರಿಂದ ಶೇ.100ರವರೆಗೆ ಹೆಚ್ಚಾದ ದರದಲ್ಲಿ ಮಾತ್ರ ಶೇ. 30ರವರೆಗೆ ದರ ಕಡಿಮೆ ಮಾಡಲಾಗುವುದು, ಈ ದರ ಶುಕ್ರವಾರದಿಂದ ಜಾರಿಗೊಳಿಸುವುದಾಗಿ ತಿಳಿಸಿದೆ., ಗರಿಷ್ಠ ದರ ₹ 90 ಸೇರಿ ಒಟ್ಟು ಹೆಚ್ಚಳದಲ್ಲಿ ಇಳಿಕೆ ಮಾಡಲ್ಲ ಎಂದು ಸ್ಪಷ್ಟಪಡಿಸಿದೆ.

ನಿಗಮದ ಪ್ರಧಾನ ಕಚೇರಿಯಲ್ಲಿ ದಿಢೀರ್‌ ಸುದ್ದಿಗೋಷ್ಠಿ ನಡೆಸಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಮಹೇಶ್ವರ ರಾವ್ ಅವರು, ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ವೆಚ್ಚ ಹೆಚ್ಚಾಗಿದೆ ವಿವರಿಸಿ ದರರ ಏರಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ತಾಂತ್ರಿಕ ಕಾರಣಗಳಿಂದ ಶೇ.70ರಿಂದ ಶೇ. 100ರಷ್ಟು ದರ ಹೆಚ್ಚಳವಾದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಇಂತಹ ಕಡೆಗಳಲ್ಲಿ ಏರಿಕೆ ಮಾಡಲಾದ ದರದಲ್ಲಿ ಶೇ.10 ರಿಂದ 30ರವರೆಗೆ ಕಡಿಮೆ ಮಾಡಲಾಗುವುದು ಎಂದರಾದರೂ ನಿರ್ದಿಷ್ಟವಾಗಿ ಎಷ್ಟು ದರ ಕಡಿಮೆ ಮಾಡಲಾಗುತ್ತದೆ ಎಂಬುದನ್ನು ಅವರು ಸ್ಪಷ್ಟವಾಗಿ ತಿಳಿಸಿಲ್ಲ.

ಮೆಟ್ರೋ ಪ್ರಯಾಣ ಏರಿಕೆ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಒಟ್ಟಾರೆ ಹೆಚ್ಚಳದಲ್ಲಿ ಇಳಿಕೆಯೂ ಇರುವುದಿಲ್ಲ. ಕನಿಷ್ಠ ದರ ₹10 ,ಗರಿಷ್ಠ ದರ ₹90 ನಿಗದಿ ಮಾಡಿದ ಕಡೆ ಅದೇ ದರ ಮುಂದುವರಿಯಲಿದೆ. ದರ ಹೆಚ್ಚಳ ವೇಳೆ ಕೆಲವು ಸ್ಟೇಜ್‌ಗಳ ದರದಲ್ಲಿ ವ್ಯತ್ಯಾಸವಾಗಿದ್ದು, ಇದನ್ನು ಮಾತ್ರ ಸರಿಪಡಿಸಲಾಗುವುದು. ಇದರಿಂದ 2.5 ಲಕ್ಷ ಪ್ರಯಾಣಿಕರಿಗೆ ತುಸು ಇಳಿಕೆಯ ಅನುಕೂಲ ಸಿಗಲಿದೆ ಎಂದರು.

ಮೆಟ್ರೋ ದರ ಏರಿಕೆ ಕುರಿತು ಜನತೆ, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಪ್ರಯಾಣಿಕರ ಓಡಾಟದಲ್ಲಿ ಶೇ.8-10 ಇಳಿಕೆಯಾಗಿದ್ದು, ಗಮನಕ್ಕೆ ಬಂದಿದೆ. ಹೀಗಾಗಿ ದರ ಕಡಿಮೆಗಾಗಿ ರಚಿಸಿದ ಆಂತರಿಕ ತಂಡ 2 ದಿನಗಳಿಂದ ಪರಿಶೀಲನೆ ನಡೆಸಿದೆ. ದರ ಪರಿಷ್ಕರಣೆ ಸಮಿತಿಯ ವರದಿಯ ಮಿತಿಯಲ್ಲೇ ದರ ಕಡಿಮೆ ಮಾಡಬೇಕಾಗಿದೆ. ಸ್ಟೇಷನ್‌ಗಳ ನಡುವಿನ ಅಂತರಕ್ಕೆ ಅನುಗುಣವಾಗಿ ಎಲ್ಲ ಹಂತಗಳಲ್ಲೂ ದರ ಕಡಿಮೆ ಮಾಡಲಾಗುವುದು ಎಂದು ರಾವ್‌ ವಿವರಿಸಿದರು.

ದರ ಏರಿಕೆ ಸಮರ್ಥಿಸಿಕೊಂಡ ಮಹೇಶ್ವರ ರಾವ್, ‘ನಮ್ಮ ಮೆಟ್ರೊ’ ಪ್ರಯಾಣ ದರ ಏರಿಕೆ ಮತ್ತೆ ಪರಿಷ್ಕರಣೆ ಮಾಡುವುದಿಲ್ಲ. 2017ರ ನಂತರ ಮೆಟ್ರೊ ದರ ಹೆಚ್ಚಳವಾಗಿಲ್ಲ. 8 ವರ್ಷಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ವೇತನ ಶೇ 43ರಷ್ಟು ಹೆಚ್ಚಳವಾಗಿದೆ. ವಿದ್ಯುತ್ ವೆಚ್ಚ ಶೇ 40ರಷ್ಟು ಜಾಸ್ತಿಯಾಗಿದೆ. ನಮ್ಮ ಹಲವು ರೈಲುಗಳು, ನಿಲ್ದಾಣಗಳಿಗೆ 15 ವರ್ಷವಾಗುತ್ತಾ ಬಂದಿದ್ದು, ಅವುಗಳ ನಿರ್ವಹಣೆಯ ವೆಚ್ಚ ಶೇ 60ರಷ್ಟು ಹೆಚ್ಚಾಗಿದೆ. ಇವುಗಳನ್ನೆಲ್ಲ ಪರಿಶೀಲಿಸಿ, ಪರಿಗಣಿಸಿ ದರ ನಿಗದಿ ಸಮಿತಿ ವರದಿ ನೀಡಿದೆ ಎಂದರು.

ದರ ಇಳಿಸಲು ಸೂಚನೆ: ಸಿಎಂ

ಬಿಎಂಆರ್‌ಸಿಎಲ್ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ದುಪ್ಪಟ್ಟಾಗಿರುವುದು ಗಮನಿಸಿದ್ದು, ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ. ದರ ಪರಿಷ್ಕರಣೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇವೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧ ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ತಿಳಿಸಿದ್ದೇನೆ.

ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.