ಮಾನವನ ಪ್ರತಿಭೆಯನ್ನು ರೊಬೋಟ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಸರಿಗಟ್ಟಲಾಗುವುದಿಲ್ಲ ಎಂದು ಗಗನಯಾನಿ ಶುಭಾಂಶು ಶುಕ್ಲಾ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾನವನ ಪ್ರತಿಭೆಯನ್ನು ರೊಬೋಟ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಸರಿಗಟ್ಟಲಾಗುವುದಿಲ್ಲ ಎಂದು ಗಗನಯಾನಿ ಶುಭಾಂಶು ಶುಕ್ಲಾ ಹೇಳಿದ್ದಾರೆ.ಮಂಗಳವಾರ ನಗರದಲ್ಲಿ ಜವಾಹರ್ ಲಾಲ್ ನೆಹರು ತಾರಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ, ರೊಬೋಟ್, ಎಐ ಇರುವಾಗ ಗಗನಯಾನಿ ಏಕೆ ಬಾಹ್ಯಾಕಾಶಕ್ಕೆ ಹೋಗಬೇಕು ಎಂದು ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಸಮಸ್ಯೆ ಎದುರಾದ ಕ್ಷಣದಲ್ಲೇ ಮನುಷ್ಯ 10 ರೀತಿಯಲ್ಲಿ ಯೋಚಿಸಿ ಪರಿಹಾರ ಕಂಡುಕೊಳ್ಳುತ್ತಾನೆ. ಆದರೆ, ರೊಬೋಟ್ ಅಥವಾ ಎಐನಿಂದ ಅದು ಸಾಧ್ಯವಿಲ್ಲ ಎಂದರು.
ಬಾಹ್ಯಾಕಾಶದಲ್ಲಿ ಆಮ್ಲಜನಕ ಹೇಗೆ ಉತ್ಪಾದಿಸಲಾಗುತ್ತದೆ? ಎಂಬ ಪ್ರಶ್ನೆಗೆ, ಬಾಹ್ಯಾಕಾಶ ನೌಕೆಯಲ್ಲಿ ಟ್ಯಾಂಕಿನಲ್ಲಿ ಸಂಗ್ರಹಿಸಿರುವ ಗಾಳಿ ಮತ್ತು ಆಮ್ಲಜನಕ ಬಳಸಲಾಗುತ್ತದೆ. ಹಾಲಿ ಫೈಟರ್ ಏರ್‌ಕ್ರಾಫ್ಟ್‌ಗಳಲ್ಲಿ ಆಮ್ಲಜನಕ ಉತ್ಪಾದನಾ ವ್ಯವಸ್ಥೆ ಇದೆ. ಅದನ್ನು ಬಾಹ್ಯಾಕಾಶ ನೌಕೆಗೆ ಅಳವಡಿಸಲು ಅಧ್ಯಯನ ನಡೆದಿದೆ ಎಂದರು.ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶ ಯೋಜನೆ ಕೈಗೊಳ್ಳುವ ಇಸ್ರೋಗೆ ಭವಿಷ್ಯದ ಯೋಜನೆಗಳಿಗೆ ಕಡಿಮೆ ವೆಚ್ಚ ತೊಡಕಾಗುವುದೇ ಎಂಬ ಪ್ರಶ್ನೆಗೆ, ವೆಚ್ಚ ಕಡಿಮೆ ಇದ್ದರೂ ಗುಣಮಟ್ಟ ಜಾಗತಿಕಮಟ್ಟದ್ದಾಗಿದೆ. ಬಾಹ್ಯಾಕಾಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸಲು ಬಹಳಷ್ಟು ತರಬೇತಿ ನೀಡಲಾಗುತ್ತದೆ. ಆದರೆ, ಹಲ್ಲಿನ ಚಿಕಿತ್ಸೆ ಮಾಡಲಾಗದು. ಹೀಗಾಗಿ, ನಿಮ್ಮ ಹಲ್ಲು ಉತ್ತಮವಾಗಿರಬೇಕು ಎಂದು ಶುಕ್ಲಾ ಹೇಳಿದರು.
ಚಂದ್ರನ ಮೇಲೆ ಇಳಿಯಲು ಸ್ಪರ್ಧಿಸಿ:ವಿದ್ಯಾರ್ಥಿಗಳು ಭಾರತದ ಬಾಹ್ಯಾಕಾಶ ಕೇಂದ್ರ ಸ್ಥಾಪಿಸಲು ಮತ್ತು ಚಂದ್ರನ ಮೇಲೆ ಇಳಿಯುವ ಮಹತ್ವಾಕಾಂಕ್ಷೆ ಹೊಂದಬೇಕು. 20240ರ ವೇಳೆಗೆ ಭಾರತೀಯರು ಚಂದ್ರನ ಮೇಲೆ ಇಳಿದು ವಾಪಸ್ ಭೂಮಿಗೆ ಮರಳುವ ಗುರಿ ಹೊಂದಲಾಗಿದೆ. ಚಂದ್ರನ ಮೇಲೆ ಕಾಲಿಡುವವರಲ್ಲಿ ನೀವೇ ಯಾರಾದರೂ ಒಬ್ಬರೂ ಆಗಿರಬಹುದು. ಭಾರತದ ಬಾಹ್ಯಾಕಾಶ ಭವಿಷ್ಯ ಉಜ್ವಲವಾಗಿದೆ ಎಂದು ಶುಕ್ಲಾ ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಎನ್.ಎಸ್. ಭೋಸರಾಜು, ಮಧು ಬಂಗಾರಪ್ಪ ಸರ್ಕಾರದ ಕಾರ್ಯದರ್ಶಿ ಎನ್. ಮಂಜುಳಾ, ತಾರಾಲಯದ ನಿರ್ದೇಶಕ ಗುರುಪ್ರಸಾದ್ ಉಪಸ್ಥಿತರಿದ್ದರು.