ಸಾರಾಂಶ
ಭ್ರಷ್ಟಾಚಾರ ತಡೆಯುವುದು ಧನಲೋಭಿ ಮನುಷ್ಯರಿಂದ ಸಾಧ್ಯವಿಲ್ಲವೆಂದೋ ಏನೋ, ಅಲ್ಬೇನಿಯಾದಲ್ಲಿ ಆ ಕೆಲಸಕ್ಕೆ ಎಐ ಸಚಿವೆಯನ್ನು ನೇಮಿಸಲಾಗಿದೆ.
ತಿರಾನೆ: ಭ್ರಷ್ಟಾಚಾರ ತಡೆಯುವುದು ಧನಲೋಭಿ ಮನುಷ್ಯರಿಂದ ಸಾಧ್ಯವಿಲ್ಲವೆಂದೋ ಏನೋ, ಅಲ್ಬೇನಿಯಾದಲ್ಲಿ ಆ ಕೆಲಸಕ್ಕೆ ಎಐ ಸಚಿವೆಯನ್ನು ನೇಮಿಸಲಾಗಿದೆ. ಈ ಮೂಲಕ ಸರ್ಕಾರಕ್ಕೆ ಎಐ ಸದಸ್ಯರನ್ನು ತಂದ ಮೊದಲ ದೇಶ ಎನಿಸಿಕೊಂಡಿದೆ.
ಎಐ ಸಚಿವೆ ‘ಡಿಯೆಲ್ಲಾ’ಳ ಸೇರ್ಪಡೆ ಬಗ್ಗೆ ಪ್ರಧಾನಿ ಎದಿ ರಾಮಾ ಘೋಷಣೆ ಮಾಡಿದ್ದಾರೆ. ಈಕೆ ಎಲ್ಲಾ ಟೆಂಡರ್‌ಗಳ ಮೇಲ್ವಿಚಾರಣೆ ನಡೆಸಲಿದ್ದು, ಅಲ್ಬೇನಿಯಾವನ್ನು ಶೇ.100ರಷ್ಟು ಭ್ರಷ್ಟಾಚಾರ ಮುಕ್ತವಾಗಿಸುತ್ತಾಳೆ’ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಟೆಂಡರ್ ಕೊಡಲು ಸಚಿವರು ಲಂಚಕ್ಕೆ ಕೈಚಾಚುವುದು ಮತ್ತು ತಮ್ಮ ಪರವಾಗಿರುವವರಿಗೆ ಅವಕಾಶ ನೀಡುವುದನ್ನು ಡಿಯೆಲ್ಲಾ ತಪ್ಪಿಸಲಿದ್ದಾಳೆ.
ಅಲ್ಬೇನಿಯಾದಲ್ಲಿ ಟೆಂಡರ್ ಹಂಚಿಕೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದನ್ನು ತಡೆಯುವ ಜವಾಬ್ದಾರಿಯನ್ನು ಈಗ ಡಿಯೆಲ್ಲಾಳ ಹೆಗಲಿಗೆ ಏರಿಸಲಾಗಿದೆ. ಆದರೆ ಆಕೆಯನ್ನು ಯಾರು ನಿಯಂತ್ರಿಸುತ್ತಾರೆ ಹಾಗೂ ಹ್ಯಾಕ್ ಅಥವಾ ದುರ್ಬಳಕೆ ಆಗುವುದರಿಂದ ಹೇಗೆ ತಡೆಯಬಹುದು ಎಂಬ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ.
ದೇಶದಲ್ಲಿ ಭ್ರಷ್ಟಾಚಾರ ನಿಗ್ರಹ ಆಗದ ಹೊರತೂ ಅದು ಯುರೋಪಿಯನ್ ಒಕ್ಕೂಟ ಸೇರುವುದು ಸಾಧ್ಯವಿಲ್ಲ. ಹೀಗಾಗಿ ಯುರೋಪಿಯನ್ ಒಕ್ಕೂಟ ಸೇರುವ ತನ್ನ ಆಶಯ ಈಡೇರಿಸಿಕೊಳ್ಳಲು ಅಲ್ಬೇನಿಯಾ ಸರ್ಕಾರ ಎಐ ಸಚಿವೆ ನೇಮಿಸಿ, ಭ್ರಷ್ಟಾಚಾರ ಕಡಿವಾಣಕ್ಕೆ ಮುಂದಾಗಿದೆ.