ಸಾರಾಂಶ
- ಮೈಸೂರು ವಿವಿ ನೌಕರ ಕಾಯಂ, ವಿದ್ಯಾರ್ಥಿಗಳ ಎಲ್ಲಾ ಶುಲ್ಕ ಕಡಿತಗೊಳಿಸಲು ಆಗ್ರಹಫೋಟೋ- 18ಎಂವೈಎಸ್10
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ನೌಕರರನ್ನು ಕಾಯಂಗೊಳಿಸಬೇಕು ಮತ್ತು ವಿದ್ಯಾರ್ಥಿಗಳ ಎಲ್ಲಾ ಶುಲ್ಕವನ್ನು ಕಡಿತಗೊಳಿಸಲು ಆಗ್ರಹಿಸಿ ಮಾನಸ ಗಂಗೋತ್ರಿಯ ಸಂಸ್ಕೃತ ವಿಭಾಗದ ಅತಿಥಿ ಉಪನ್ಯಾಸಕ ಡಾ. ರಾಚೋಟಿ ದೇವರು ಸಂಸ್ಕೃತ ವಿಭಾಗದ ಮುಂಭಾಗದಲ್ಲಿ ಸೋಮವಾರದಿಂದ ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು.
ಡಾ. ರಾಚೋಟಿ ದೇವರು ಗದಗ ಜಿಲ್ಲೆಯ ಮಠವೊಂದರ ಸ್ವಾಮೀಜಿಯಾಗಿದ್ದು, ಕಳೆದ 7 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.ವಿವಿ ಮುಖ್ಯ ಉದ್ದೇಶ ಜ್ಞಾನಾರ್ಜನೆ ಮತ್ತು ಸಂಶೋಧನೆ ಆಗಬೇಕು. ಆದರೆ, ಇಂದು ವಿವಿಗಳು ಕೇವಲ ಪ್ರಮಾಣ ಪತ್ರ ನೀಡುವ ಕೇಂದ್ರಗಳಾಗುತ್ತಿರುವುದು ವಿಷಾದನಿಯ. ಅಲ್ಲದೆ, ಜ್ಞಾನಾರ್ಜನೆ ಹಣವಂತರ ಸ್ವತ್ತಾಗಿ, ಬಡವರಿಗೆ ವಿದ್ಯೆ ಕನಸಾಗುವ ಸಂದರ್ಭ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ವಿವಿಗಳ ಸುತ್ತೋಲೆಗಳು ಎಂದು ಅವರು ದೂರಿದರು.
ಸದ್ಯದ ಸ್ಥಿತಿಯಲ್ಲಿ ವಿವಿಗಳಿಗೆ ಹಣ ಸಂಪಾದನೆ ಮಾಡುವ ವಿಭಾಗಗಳು ಮಾತ್ರ ಬೇಕು. ಆದಾಯ ಬಾರದಿರುವ ವಿಭಾಗಗಳನ್ನು ಮುಚ್ಚುವ ದುರುದ್ದೇಶದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಅಲ್ಲದೆ ಶುಲ್ಕ ಹೆಚ್ಚಳ ಮಾಡುತ್ತಿದ್ದು, ವಿದ್ಯಾರ್ಥಿ ವೇತನವನ್ನೂ ನೀಡುತ್ತಿಲ್ಲ. ಉಪನ್ಯಾಸಕರ ವೇತನವನ್ನೂ ಕಡಿತ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಬಡ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕಾದರೆ ಶುಲ್ಕ ಕಡಿತಗೊಳಿಸಬೇಕು. ಎಲ್ಲಾ ಉದ್ಯೋಗಿಗಳನ್ನು ಕಾಯಂಗೊಳಿಸಿ ಭ್ರಷ್ಟಾಚಾರ ಮುಕ್ತ ವಿಶ್ವವಿದ್ಯಾಲಯವನ್ನಾಗಿ ಮಾಡಬೇಕು. ಬೇಡಿಕೆ ಈಡೇರುವವರೆಗೂ ಸತ್ಯಾಗ್ರಹ ನಡೆಸಲಿದ್ದು, ನನ್ನ ಪ್ರಾಣಕ್ಕೆ ಅಪಾಯವಾದರೆ ಕುಲಪತಿ, ಕುಲಸಚಿವ, ಆಡಳಿತ ಮಂಡಳಿಯೇ ಕಾರಣ ಎಂದು ಅವರು ಎಚ್ಚರಿಸಿದರು.