ಸಾರಾಂಶ
ಕೆಂಗೇರಿ : ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಹಾಗೂ ಆದಿಚುಂಚನಗಿರಿ ಮಠ ಎರಡೂ ಒಂದೇ. ನಾವೆಲ್ಲಾ ಒಂದೇ ಗುರು ಪರಂಪರೆಯವರಾಗಿದ್ದು. ನಾಥ ಪರಂಪರೆ ಮೂಲಕ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಮೈಸೂರು ರಸ್ತೆ ಕೆಂಗೇರಿಯಲ್ಲಿರುವ ಮಠದ ಆವರಣದಲ್ಲಿ ಭಾನುವಾರ ಬೆಳಗ್ಗೆ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಅವರ ಪಟ್ಟಾಧಿಕಾರ ಮಹೋತ್ಸವದಲ್ಲಿ ಮಾತನಾಡಿದ ಅವರು, ಸಮುದಾಯ, ಸಮಾಜ ಕಾರ್ಯಗಳಿಗಾಗಿ ಮಠದ ಗುರುಗಳಾದ ಚಂದ್ರಶೇಖರನಾಥ ಸ್ವಾಮೀಜಿಯವರು ಬಹಳಷ್ಟು ಕೊಡುಗೆ ನೀಡಿದ್ದಾರೆ. ಸಮಾಜವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಈಗ ಡಾ.ಎಚ್.ಎಲ್.ನಾಗರಾಜ್ ಅವರು ಸನ್ಯಾಸತ್ವ ಸ್ವೀಕರಿಸಿದ್ದಾರೆ ಎಂದರು
ಹಾಲು ಜೇನಿನಂತೆ ಹೋಗೋಣಾ: ಹಾಲು ಜೇನಿನಂತೆ ನಾವೆಲ್ಲರೂ ಒಂದಾಗಿ ಸಂಸ್ಥಾನಗಳನ್ನು ನಡೆಸಿಕೊಂಡು ಹೋಗೋಣಾ. 2 ಮಠಗಳ ನಡುವೆ ಯಾವುದೇ ಸಮಸ್ಯೆ ಇಲ್ಲ. ಒಂದೇ ಗುರು, ಒಂದೇ ಸುಮುದಾಯ, ಒಂದೇ ತಾಯಿಯ ಮಕ್ಕಳಂತೆ ಮುಂದೆಯೂ ಕೂಡ ಯಾವುದೇ ರೀತಿ ಸಮಸ್ಯೆಗಳು ಬಾರದಂತೆ ಮಠದ ಕಾರ್ಯಗಳನ್ನು ನಡೆಸಿಕೊಂಡು ಹೋಗಬೇಕು ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ಪೀಠವನ್ನು ಹಸ್ತಾಂತರಿಸಿದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ನೂತನ ಪೀಠಾಧಿಪತಿಯವರು ಮಠದ ಕಾರ್ಯಗಳನ್ನು ಇನ್ನಷ್ಟು ಉತ್ತಮವಾಗಿ ನಡೆಸಿಕೊಡುವ ವಿಶ್ವಾಸವಿದೆ. ಸ್ವಾರ್ಥಿಯಾಗದೇ, ಪಕ್ಷಪಾತಿಯಾಗದೇ ಜನರ ಅನೂಕೂಲಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ಸಮಾರಂಭದಲ್ಲಿ ನಿಡುಮಾಮಿಡಿ ಜಗದ್ಗುರು ಮಠದ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಬೇಲಿಮಠದ ಶಿವಾನುಭವ ಚರಮೂರ್ತಿ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಬಸವಲಿಂಗ ಪಟ್ಟದೇವರು, ವಿನಯ್ ಗುರೂಜಿ, ಟ್ರಸ್ಟಿಗಳಾದ ದೊಡ್ಡಮನೆ ವೆಂಕಟೇಶ್, ಬಿ.ಕೃಷ್ಣಪ್ಪ, ಪಂಚಲಿಂಗಯ್ಯ, ನಂಜಪ್ಪ, ಕೈಲಾಶ್ ಗೌಡ, ಕೆಪಿ ಮುತ್ತಯ್ಯ, ಶಿವಲಿಂಗಯ್ಯ, ಉಮೇಶ್ ಇದ್ದರು.
ದೇವೆಗೌಡರ ಆಶೀರ್ವಾದ ಮಠದ ಮೇಲೆ ಸದಾ ಇರಲಿ:
ನಾನು ಇಂದು ಸಮಾಜಕ್ಕೆ ಅರ್ಪಣೆಯಾಗಲು ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶ್ರೀಗಳು ಕಾರಣ. ನಾನು ವೈಯಕ್ತಿಕವಾಗಿ ಬುದ್ಧ, ಬಸವೇಶ್ವರ, ಗಾಂಧಿಜೀ, ಸ್ವಾಮಿ ವಿವೇಕಾನಂದ ಅವರ ತತ್ವವನ್ನ ಅನುಸರಿಸಿದ್ದೇನೆ. ಸಮಾಜ ಸೇವೆಯೇ ವೃತ್ತಿ, ಪ್ರವೃತ್ತಿ, ಉಸಿರಾಗಿಸಿಕೊಂಡಿದ್ದೇನೆ. ನಾಡು ಕಂಡ ಮುತ್ಸದ್ಧಿ ರಾಜಕಾರಣಿ, ಮಾಜಿ ಪ್ರಧಾನಿ ದೇವೆಗೌಡರ ಆಶೀರ್ವಾದವು ನಮಗೆ ಸಿಕ್ಕಿದೆ. ಅವರ ಆಶೀರ್ವಾದ ಮಠದ ಮೇಲೆ ಸದಾ ಇರಲಿ. ಮಠದ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು ಎಂದು ನೂತನ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.