‘ಲೂಟಿ ಖಾದರ್‌’ ಆರೋಪ ಮನಸ್ಸಿಗೆ ಹಚ್ಕೊಂಡಿಲ್ಲ - ಕಾಗೇರಿ ಬಗ್ಗೆ ನಾನು ಆರೋಪ ಮಾಡಲ್ಲ, ನನಗೆ ಅವರ ಮೇಲೆ ಪ್ರೀತಿ ಇದೆ । ಯಾರು ಬೇಕಾದ್ರೂ ಸಿಎಂ ಆಗಲಿ, ಸಂವಿಧಾನ ಬದ್ಧವಾಗಿ ನಡೆಯಲಿ: ಸ್ಪೀಕರ್‌

 ‘ಲೂಟಿ ಖಾದರ್‌’ ಆರೋಪ ಮನಸ್ಸಿಗೆ ಹಚ್ಕೊಂಡಿಲ್ಲ - ಕಾಗೇರಿ ಬಗ್ಗೆ ನಾನು ಆರೋಪ ಮಾಡಲ್ಲ, ನನಗೆ ಅವರ ಮೇಲೆ ಪ್ರೀತಿ ಇದೆ । ಯಾರು ಬೇಕಾದ್ರೂ ಸಿಎಂ ಆಗಲಿ, ಸಂವಿಧಾನ ಬದ್ಧವಾಗಿ ನಡೆಯಲಿ: ಸ್ಪೀಕರ್‌

ಯು.ಟಿ.ಖಾದರ್‌, ಸ್ಪೀಕರ್‌

ಸಂದರ್ಶನ - ಶ್ರೀಕಾಂತ್‌ ಗೌಡಸಂದ್ರ

ರಾಜ್ಯ ವಿಧಾನಸಭೆಯ ಮೊದಲ ಮುಸ್ಲಿಂ ಸ್ಪೀಕರ್‌ ಯು.ಟಿ. ಖಾದರ್‌ ಅವರು ಸಭಾಧ್ಯಕ್ಷರಾದ ದಿನದಿಂದಲೂ ವಿವಾದ, ಆರೋಪ ಅವರನ್ನು ಹಿಂಬಾಲಿಸಿವೆ. ಕನ್ನಡ ಉಚ್ಚಾರ, ಮೃದು ಸ್ವಭಾವ ಮತ್ತಿತರ ಕಾರಣ ಮುಂದಿಟ್ಟು ಖಾದರ್‌ ಸ್ಪೀಕರ್‌ ಹುದ್ದೆಗೆ ಸೂಕ್ತವಲ್ಲ ಎಂದೇ ಬಿಂಬಿಸಲಾಗಿತ್ತು. ಇದೀಗ ಖಾದರ್‌ ಆ ಆರೋಪಗಳನ್ನು ಯಶಸ್ವಿಯಾಗಿ ದಾಟಿ ಬಂದಿದ್ದಾರೆ. ಸಭಾಧ್ಯಕ್ಷರ ಹೊಸ ಪೀಠ ಅಳವಡಿಕೆ, ಅನುಭವ ಮಂಟಪ ತೈಲಚಿತ್ರ ಅನಾವರಣ, ಗಣ್ಯರ ಪ್ರತಿಮೆ ಅನಾವರಣ, ಬೆಂಗಳೂರು ವಿಧಾನಸೌಧದಲ್ಲಿ ಪುಸ್ತಕ ಸಂತೆಯಂಥ ಸಾಲು ಸಾಲು ಹೊಸತುಗಳಿಗೆ ಮುನ್ನುಡಿ ಬರೆದಿದ್ದಾರೆ. ಈ ಸಂದರ್ಭದಲ್ಲಿ ಖಾದರ್‌ ಹಣ ಮಾಡಲು ಹೊಸ ಹೊಸ ದಾರಿ ಹುಡುಕುತ್ತಿದ್ದಾರೆ. ‘ಯು.ಟಿ. ಖಾದರ್‌ ಅಲ್ಲ, ಲೂಟಿ ಖಾದರ್‌’ ಎಂಬ ಆರೋಪವೂ ಕೇಳಿಬಂತು. ಖಾದರ್‌ ಏಕಪಕ್ಷೀಯ ನಿರ್ಧಾರ ಬಗ್ಗೆ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಯೂ ಧ್ವನಿಯೆತ್ತಿದ್ದರು. ಬೆಳಗಾವಿ ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಖಾದರ್‌ ಅವರು ತಮ್ಮ ಮೇಲಿನ ಆರೋಪ, ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿನ ಹೊಸತುಗಳು, ಸಂಪುಟ ಪುನರ್‌ರಚನೆ, ಅಧಿಕಾರ ಹಸ್ತಾಂತರ, ಮುಸ್ಲಿಂ ಮುಖ್ಯಮಂತ್ರಿ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.

- ಮಾಜಿ ಸಭಾಧ್ಯಕ್ಷ ಕಾಗೇರಿ ಅವರು ನಿಮ್ಮನ್ನು ಲೂಟಿ ಖಾದರ್‌ ಎಂದಿದ್ದಾರಲ್ಲ?

ಅಸೂಯೆಯಿಂದ ಯಾರೇ ಟೀಕಿಸಿದರೂ ನಾನು ಗಮನ ನೀಡಲ್ಲ. ಎಲ್ಲವೂ ದಾಖಲೆಯಲ್ಲಿ ಇರುತ್ತದೆ. ಸುಳ್ಳು ಸೃಷ್ಟಿಗಳ ಬಗ್ಗೆ ಚರ್ಚೆಯ ಅಗತ್ಯವಿಲ್ಲ. ಅದರ ಬಗ್ಗೆ ಪ್ರತ್ಯೇಕ ವೇದಿಕೆಯಲ್ಲಿ ಚರ್ಚೆಗೆ ಸಿದ್ಧ. ಯಾರೇ ಟೀಕೆ ಮಾಡಿದರೂ ಅಭಿವೃದ್ಧಿ, ಜನಪರವಾದ ಬದಲಾವಣೆಗಳನ್ನು ನಿಲ್ಲಿಸುವುದಿಲ್ಲ. ನಾನು ಸಚಿವನಾಗಿದ್ದಾಗಲೂ ಅವುಗಳನ್ನು ಎದುರಿಸಿದ್ದೇನೆ.

- ಹಾಗಾದರೆ ಕಾಗೇರಿ ಅವರ ಆರೋಪ ಸುಳ್ಳೇ?

ಶೇ.1ರಷ್ಟು ಮಂದಿ ಸುಳ್ಳು ಆರೋಪ ಮಾಡಿದರೆ ಶೇ.99ರಷ್ಟು ಮಂದಿ ಬೆನ್ನು ತಟ್ಟುತ್ತಾರೆ. ನಾನು ಎರಡನೆಯವರಿಗಾಗಿ ಕೆಲಸ ಮಾಡುತ್ತೇನೆ. ಕಾಗೇರಿ ಅವರ ಬಗ್ಗೆ ನಾನು ಆರೋಪ ಮಾಡಲ್ಲ. ನನಗೆ ಅವರ ಮೇಲೆ ಪ್ರೀತಿ ಇದೆ.

- ಶಾಸಕರಿಗೆ ಊಟ ಹಾಕಿದ್ದೂ ಯಾಕೆ ವಿವಾದ ಆಯಿತು?

ಅದನ್ನು ವಿವಾದ ಮಾಡಿದವರು ಹೇಳಬೇಕು, ಶಾಸಕರು ಹೇಳಬೇಕು. ಸ್ಪೀಕರ್‌ ಆಗಿ ಎಲ್ಲವನ್ನೂ ನಾನೇ ಮಾತನಾಡಲು ಆಗಲ್ಲ. ಶಾಸಕರು ಮಾತನಾಡಿಲ್ಲ ಎಂದು ನಾವು ನಿಲ್ಲಿಸಲೂ ಹೋಗಲ್ಲ.

- ನಿಮ್ಮ ಶಾಸಕರೇ ನಿಮ್ಮ ಪರ ಧ್ವನಿ ಎತ್ತಲಿಲ್ಲ ಎಂಬ ಅಸಮಾಧಾನವೇ?

ನನ್ನ ಪರ ಪ್ರತಿಕ್ರಿಯೆ ನೀಡಬೇಡಿ ಎಂದು ನಾನೇ ಹೇಳಿದ್ದೇನೆ. ಸುಳ್ಳು ಆರೋಪಕ್ಕೆ ಮಹತ್ವವಿಲ್ಲ. ಮಹತ್ವವಿಲ್ಲದ ವಿಚಾರಕ್ಕೆ ಪ್ರತಿಕ್ರಿಯಿಸಬೇಡಿ ಎಂದು ತಿಳಿಸಿದ್ದೇನೆ. ಎಲ್ಲರನ್ನೂ ಪ್ರೀತಿ-ವಿಶ್ವಾಸದಿಂದ ಜತೆಗೆ ಕರೆದೊಯ್ಯಬೇಕು ಎಂಬುದು ನಮ್ಮ ಉದ್ದೇಶ.

- ಮುಸ್ಲಿಂ ಸ್ಪೀಕರ್‌ ಆಗಿರುವುದಕ್ಕೆ ಟಾರ್ಗೆಟ್‌ ಆಗುತ್ತಿದ್ದೀರಾ?

ಈ ಸ್ಥಾನವನ್ನು ನಾನು ಒಂದು ಜಾತಿ, ಧರ್ಮಕ್ಕೆ ಸೀಮಿತ ಮಾಡುವುದಿಲ್ಲ. ಕಾಗೇರಿ ಆರೋಪವನ್ನು ನಾನು ಮನಸ್ಸಿಗೂ ತೆಗೆದುಕೊಂಡಿಲ್ಲ.

- ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರೂ ನಿಮ್ಮ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಏಕಪಕ್ಷೀಯ ನಿರ್ಧಾರ ಮಾಡುತ್ತಿದ್ದೀರಿ ಎಂದಿದ್ದರು?

ಅದೆಲ್ಲ ಮುಗಿದ ಅಧ್ಯಾಯ. ನಾವೆಲ್ಲ ಒಟ್ಟಾಗಿ ಕೂತು ಮಾತನಾಡಿ ಗೊಂದಲ ಬಗೆಹರಿಸಿಕೊಂಡಿದ್ದೇವೆ.

- ತಡರಾತ್ರಿವರೆಗೆ ಅಧಿವೇಶನ ನಡೆಸುತ್ತೀರಿ. ಆದರೆ, ಶಾಸಕರೇ ಬರುವುದಿಲ್ಲವಲ್ಲ?

ಅಂತಹ ನಿರಾಸಕ್ತಿ ಈಗ ಕಡಿಮೆಯಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಬೇಕು. ಕ್ಷೇತ್ರದ ಜನರೂ ಇದಕ್ಕೆ ಸಹಕಾರ ನೀಡಬೇಕು. ಕೆಲಸಕ್ಕೆ ಬನ್ನಿ, ಕಾರ್ಯಕ್ರಮಗಳಿಗೆ ಬನ್ನಿ ಎಂದು ಅಧಿವೇಶನದ ಸಮಯದಲ್ಲಿ ಕರೆದುಕೊಂಡು ಹೋಗಬಾರದು.

- ಶಾಸಕರು ಬಂದರೂ ಸಚಿವರು ಇರುವುದಿಲ್ಲ. ಹಾಗಾದರೆ ಶಾಸಕರು ಬಂದು ಏನು ಪ್ರಯೋಜನ?

ಮಂತ್ರಿಗಳು ಅಧಿವೇಶನಕ್ಕೆ ಬಂದರೆ ಶಾಸಕರೂ ಬರುತ್ತಾರೆ. ಮಂತ್ರಿಗಳು ಸರಿಯಾದ ಸಮಯಕ್ಕೆ ಬಾರದಿದ್ದರೆ ಅವರನ್ನು ಹುಡುಕಿಕೊಂಡು ಶಾಸಕರು ಹೋಗುತ್ತಾರೆ. ಇದನ್ನು ತಪ್ಪಿಸಲು ಸೂಚಿಸುತ್ತೇನೆ.

- ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಬೇಗುದಿ ಕುದಿಯುತ್ತಿದೆ. ಅಧಿವೇಶನದ ಮೇಲೆ ಇದು ಪರಿಣಾಮ ಬೀರಲ್ಲವೇ?

ರಾಜಕೀಯವಾಗಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಆಡಳಿತ ಹಾಗೂ ಪ್ರತಿಪಕ್ಷ ಎಲ್ಲವೂ ಸಮಾನ. ಎಲ್ಲರಿಗೂ ಗೌರವ ಬರುವ ರೀತಿಯಲ್ಲಿ ಅಧಿವೇಶನ ನಡೆಯಬೇಕು.

- ಸರ್ಕಾರದಲ್ಲಿ ಬಣ ಕಿತ್ತಾಟ ನಡೆಯುತ್ತಿದೆ. ಯಾರು ಸಿಎಂ ಎಂದು ನಿರ್ಧರಿಸಿಕೊಂಡು ಅಧಿವೇಶನಕ್ಕೆ ಬನ್ನಿ ಎಂದು ವಿಜಯೇಂದ್ರ ಹೇಳಿದ್ದಾರೆ?

ಅವರು ಪ್ರತಿಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷರು. ನಾನು ಸ್ಪೀಕರ್ ಆಗಿ ರಾಜಕೀಯ ಹೇಳಿಕೆ ನೀಡುವುದಿಲ್ಲ. ಸ್ಪೀಕರ್‌ ಆಗಿ ನಮ್ಮ ಜವಾಬ್ದಾರಿ ಮಾತ್ರ ನಿಭಾಯಿಸಬಹುದು.

- ಸಿಎಂ ಸ್ಥಾನಕ್ಕಾಗಿ ತಿಕ್ಕಾಟ ಜೋರಾಗಿದೆ. ದಲಿತ, ಅಹಿಂದ, ಒಕ್ಕಲಿಗ ಸಿಎಂ ಆಗ್ರಹ ಕೇಳಿ ಬರುತ್ತಿದೆ. ಮುಸ್ಲಿಂ ಸಿಎಂ ಆಗ್ರಹ ಯಾಕೆ ಇಲ್ಲ?

ಮುಖ್ಯಮಂತ್ರಿ ಇಡೀ ರಾಜ್ಯಕ್ಕೆ ಸೇರಿದವರು. ಆ ಹುದ್ದೆಯನ್ನು ಒಂದು ಧರ್ಮಕ್ಕೆ ಸೀಮಿತ ಮಾಡಿ ಮಾತನಾಡಲೇಬಾರದು. ಯಾರು ಬೇಕಾದರೂ ಮುಖ್ಯಮಂತ್ರಿ ಆಗಲಿ. ಆದರೆ, ಸಂವಿಧಾನ ಬದ್ಧವಾಗಿ ನಡೆಯಬೇಕು ಅಷ್ಟೆ.

- ಸಂಪುಟ ಪುನರ್‌ ರಚನೆ ಚರ್ಚೆಯಾಗುತ್ತಿದೆ. ನೀವೂ ಸಚಿವ ಸ್ಥಾನದ ಆಕಾಂಕ್ಷಿಯೇ?

ನನ್ನ ರಾಜಕೀಯ ಚಾನೆಲ್‌ ಬಂದ್‌ ಆಗಿದೆ. ಹೀಗಾಗಿ ರಾಜಕೀಯ ವಿಷಯಗಳು ಏನೂ ತಿಳಿಯುವುದಿಲ್ಲ. ನಿಮ್ಮ ಮೂಲಕವೇ (ಮಾಧ್ಯಮ) ಏನಾದರೂ ತಿಳಿಯಬೇಕು. ನಾನು ಸ್ಪೀಕರ್‌ ಆಗಿ ಹೇಗೆ ಅಧಿವೇಶನ ನಡೆಸಬೇಕು ಎಂಬ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ.

- ಹಾಗಾದರೆ ಸಚಿವ ಸ್ಥಾನಕ್ಕಿಂತ ಸ್ಪೀಕರ್‌ ಸ್ಥಾನವೇ ತೃಪ್ತಿ ತಂದಿದೆಯೇ?

ಸಚಿವನಾಗಿದ್ದಾಗ ಆ ಸ್ಥಾನ ತೃಪ್ತಿ ತಂದಿತ್ತು. ಈಗ ಸ್ಪೀಕರ್‌ ಆಗಿ ತೃಪ್ತಿ ಕಂಡುಕೊಂಡಿದ್ದೇನೆ.

- ಸರ್ಕಾರದ ಜೊತೆಗೆ ನೀವೂ ಸ್ಪೀಕರ್ ಆಗಿ ಎರಡೂವರೆ ವರ್ಷ ಆಯ್ತು. ಸ್ಥಾನ ತೃಪ್ತಿ ತಂದಿದೆಯೇ?

ಖಂಡಿತ ತೃಪ್ತಿ ಇದೆ. ಸಂವಿಧಾನದ ಅಡಿ ನನ್ನ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ ಎಂಬ ವಿಶ್ವಾಸವಿದೆ.

- ಬೆಳಗಾವಿ ಚಳಿಗಾಲದ ಅಧಿವೇಶನದ ಸಿದ್ಧತೆ ಹೇಗಿದೆ?

ಅಧಿವೇಶನಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆ ಮಾಡುತ್ತಿದ್ದೇವೆ. ಅಧಿವೇಶನದಲ್ಲಿ ಭಾಗವಹಿಸಲು ಬರುವ ಸಚಿವರು, ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಎಲ್ಲರಿಗೂ ಮೂಲ ಸೌಕರ್ಯ, ಊಟ, ವಸತಿ ವ್ಯವಸ್ಥೆ. ಜತೆಗೆ ಕಲಾಪ ನೋಡಲು ಬರುವ ಜನರಿಗೆ, ಅಲ್ಲಿನ ಸ್ಥಳೀಯರಿಗೆ ಕೂಡ ತೊಂದರೆ ಆಗದಂತೆ ಸಿದ್ಧತೆ ಮಾಡಲು ಸಮಿತಿಗಳನ್ನು ರಚಿಸಿ, ಜವಾಬ್ದಾರಿ ಹಂಚಲಾಗಿದೆ.

- ಅಧಿವೇಶನದ ಮುಖ್ಯ ಅಜೆಂಡಾ ಏನು?

ವಿಧೇಯಕಗಳನ್ನು ಪಾಸು ಮಾಡುವುದೇ ಅಧಿವೇಶನದ ಮುಖ್ಯ ಅಜೆಂಡಾ. ಸರ್ಕಾರ ಅಭಿವೃದ್ಧಿ, ಸುಧಾರಣೆಗೆ ಪೂರಕವಾದ ಬಿಲ್‌ ತರುತ್ತಾರೆ. ಅದರ ಬಗ್ಗೆ ಚರ್ಚೆಯಾಗಿ ಪಾಸಾಗಬೇಕು ಅಥವಾ ಸಮಿತಿಗೆ ವಹಿಸಬೇಕು. ಉಳಿದಂತೆ ಬೇರೆ ಅಜೆಂಡಾ ಇದ್ದರೆ ಸರ್ಕಾರ ನಿಗದಿಪಡಿಸುತ್ತದೆ. ಅದನ್ನು ನಡೆಸುವುದು ಸ್ಪೀಕರ್‌ ಜವಾಬ್ದಾರಿ.

- ಬೆಳಗಾವಿ ಅಧಿವೇಶನದಲ್ಲಿ ಪ್ರತಿ ಬಾರಿ ಉ-ಕ ಚರ್ಚೆಗೆ ಆದ್ಯತೆ ಎನ್ನುತ್ತೀರಿ. ಆದರೂ ಅದು ಕೊನೆಯ ಆಯ್ಕೆಯಾಗಿಯೇ ಉಳಿಯುತ್ತದೆ?

ಸುವರ್ಣಸೌಧ ರಾಜ್ಯದ ಹೆಮ್ಮೆಯ ಸೌಧ. ಬೆಳಗಾವಿಯಲ್ಲಿ ಅಧಿವೇಶನ ನಡೆಯುವುದರಿಂದ ಹೆಚ್ಚಿನ ಮಹತ್ವ, ಒತ್ತು ಉತ್ತರ ಕರ್ನಾಟಕಕ್ಕೆ ಕೊಡಬೇಕು. ಕಳೆದ ಬಾರಿಯೂ ಉತ್ತರ ಕರ್ನಾಟಕಕ್ಕೆ ಒತ್ತು ನೀಡಿದ್ದು, 37 ಮಂದಿ ಚರ್ಚಿಸಿದ್ದಾರೆ.

- ಆದರೆ, ಕೊನೆಯಲ್ಲಿ ಚರ್ಚೆ ಮಾಡಿ ತರಾತುರಿಯಲ್ಲಿ ಉ-ಕ ಚರ್ಚೆಗೆ ತೆರೆ ಎಳೆಯುತ್ತೀರಿ ಎಂಬ ಆರೋಪವಿದೆಯಲ್ವಾ?

ಯಾವ ರೀತಿ ಚರ್ಚೆಯಾಗಬೇಕು ಎಂಬುದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸುತ್ತೇವೆ. ಸಭೆಯಲ್ಲಿ ಉ-ಕ ಚರ್ಚೆ ಮೊದಲೇ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದರೆ ಅದರಂತೆಯೇ ನಡೆಸುತ್ತೇವೆ.

- ಪ್ರತಿ ಬಾರಿ ಅಧಿವೇಶನ ನಡೆದಾಗಲೂ ಎಂಇಎಸ್‌ ಪುಂಡಾಟಿಕೆ ಸೇರಿ ಒಂದಲ್ಲಾ ಒಂದು ಗಲಾಟೆ ಆಗುತ್ತದೆಯಲ್ಲಾ?

ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮವಾಗಿ ನಿಗಾವಹಿಸಬೇಕು. ಸೂಕ್ತ ಭದ್ರತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್‌ ಮುಖ್ಯಸ್ಥರಿಗೆ ಸೂಚಿಸಲಾಗಿದೆ.

- ಎಲ್ಲಾ ವ್ಯವಸ್ಥೆ ಮಾಡಿ ಅಧಿವೇಶನ ನಡೆಸುತ್ತೀರಿ. ಆದರೆ, ಕಳೆದ ಅಧಿವೇಶನದ ಪ್ರಶ್ನೆಗಳಿಗೇ ಉತ್ತರ ಬಂದಿಲ್ಲವಲ್ಲಾ?

ಬಹುತೇಕ ಉತ್ತರ ಬಂದಿದೆ. ಉಪಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದ್ದೇವೆ. ಪ್ರಶ್ನೆಗೆ ಉತ್ತರ ನೀಡದ ಅಧಿಕಾರಿಗಳನ್ನು ಕರೆಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುತ್ತಾರೆ.

- ಈ ಬಾರಿಯ ಅಧಿವೇಶನಕ್ಕೆ ವಿಶೇಷವಾಗಿ ಏನು ಪ್ಲಾನ್‌ ಮಾಡಿದ್ದೀರಿ?

ಕೈಯಲ್ಲಿ ನೇಯ್ದಿರುವ ವಿಶ್ವ ದಾಖಲೆಯ ಖಾದಿ ರಾಷ್ಟ್ರಧ್ವಜ ಪ್ರದರ್ಶಿಸುತ್ತಿದ್ದೇವೆ. ವಿಶ್ವದಲ್ಲೇ ಅದು ಎರಡನೇ ಅತಿ ದೊಡ್ಡ ರಾಷ್ಟ್ರಧ್ವಜ. ಅದನ್ನು ಪ್ರದರ್ಶಿಸಿ ಸಾರ್ವಜನಿಕರಿಗೆ ನೋಡಲು ಅವಕಾಶ ಕಲ್ಪಿಸುತ್ತೇವೆ. ಜತೆಗೆ ಪ್ರತಿ ನಿತ್ಯ ಒಂದೊಂದು ಜಿಲ್ಲೆಯ ಸಂಸ್ಕೃತಿಯ ಅನಾವರಣ ಮಾಡುತ್ತೇವೆ. ಸಜ್ಜಾಗಿರುವ ಸುಂದರ ಉದ್ಯಾನ ಉದ್ಘಾಟನೆ ಮಾಡುತ್ತಿದ್ದೇವೆ.