ಬೆಂಗಳೂರು : ಕರ್ನಾಟಕ ಲಲಿತಕಲಾ ಅಕಾಡೆಮಿಯ ‘ಮನೆಗೊಂದು ಕಲಾಕೃತಿ’ ಪ್ರದರ್ಶನ ಮತ್ತು ಮಾರಾಟ

| Published : Jan 19 2025, 02:17 AM IST / Updated: Jan 19 2025, 08:47 AM IST

Happy Life Paintings Vastu Tips

ಸಾರಾಂಶ

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಒಟ್ಟು ಏಳು ಗ್ಯಾಲರಿಗಳಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಆಯೋಜಿಸಿರುವ ‘ಮನೆಗೊಂದು ಕಲಾಕೃತಿ’ ಶೀರ್ಷಿಕೆಯಡಿ ಪ್ರದರ್ಶನಗೊಳ್ಳುತ್ತಿದೆ. ಆರುನೂರಕ್ಕೂ ಹೆಚ್ಚು ವೈವಿಧ್ಯಮಯ   ಶೈಲಿಯ  ಕಲಾವಿದರ ಹಲವಾರು ಕಲಾಕೃತಿಗಳು ಈ ಪ್ರದರ್ಶನದಲ್ಲಿರುವುದು ವಿಶೇಷ.

ಬೆಂಗಳೂರು :  ಆಧುನಿಕ ವಿನ್ಯಾಸಗಳ ಮನೆಗಳ, ಕಚೇರಿಗಳ ಪರಿಕಲ್ಪನೆ ಒಳಾಂಗಣ ವಿನ್ಯಾಸದ ಪರಿಕಲ್ಪನೆ ಇಂದು ನಗರ ಪ್ರದೇಶಗಳಿಗೆ ಮಾತ್ರ ಸೀಮಿತಗೊಂಡಿಲ್ಲ ಗ್ರಾಮೀಣ ಪ್ರದೇಶಗಳಲ್ಲೂ ನವೀನ ಶೈಲಿಯ ಮನೆಗಳು ಹೊಸತಲ್ಲ. ಇಂತಹ ವಿನ್ಯಾಸಕ್ಕೊಪ್ಪುವ, ಆಯಾ ಅಭಿರುಚಿಗೆ ತಕ್ಕಂತಹ, ಗೋಡೆಗೆ ಬಣ್ಣಕ್ಕೆ ಸರಿ ಹೊಂದುವ ಕಲಾಕೃತಿಗಳನ್ನು ಗೋಡೆಗೆ ತೂಗು ಹಾಕಿ ಸಂಭ್ರಮಿಸುವ ಕಾಲ ಇದಾಗಿದೆ. 

ಅದಕ್ಕೆಂದೇ ಆಯೋಜನೆಗೊಂಡಿದೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ‘ಮನೆಗೊಂದು ಕಲಾಕೃತಿ’ ಪ್ರದರ್ಶನ ಮತ್ತು ಮಾರಾಟ. ಬೆಂಗಳೂರಿನಲ್ಲಿ ಈ ಬಾರಿಯ ಚಿತ್ರಸಂತೆಯಂತಹ ‘ಚಿತ್ರ ಜಾತ್ರೆ’ ಮುಗಿದು ಕೆಲವೇ ದಿನಗಳು ಕಳೆದಿವೆ ಅಷ್ಟೇ. ಅತ್ಯಂತ ಕಡಿಮೆ ದರದಿಂದ ಶುರುವಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಲಾಕೃತಿಗಳು ಹಲವರ ಮನೆ, ಕಚೇರಿ, ಸಂಗ್ರಹಾಲಯ ಸೇರ್ಪಡೆಗೊಂಡಿದ್ದೂ ಅಲ್ಲದೇ ಕೋಟ್ಯಾಂತರ ರುಪಾಯಿಗಳ ವಹಿವಾಟು ನಡೆದಿರುವುದು ಈಗ ಹಳೇ ಸುದ್ದಿ. 

ಇದೀಗ ಅಂತಹದ್ದೇ ಮತ್ತೊಂದು ಕಲಾ ಪ್ರದರ್ಶನ ಮತ್ತು ಮಾರಾಟ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಒಟ್ಟು ಏಳು ಗ್ಯಾಲರಿಗಳಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಆಯೋಜಿಸಿರುವ ‘ಮನೆಗೊಂದು ಕಲಾಕೃತಿ’ ಶೀರ್ಷಿಕೆಯಡಿ ಪ್ರದರ್ಶನಗೊಳ್ಳುತ್ತಿದೆ. 

ಆರುನೂರಕ್ಕೂ ಹೆಚ್ಚು ವೈವಿಧ್ಯಮಯ ತೈಲ, ಆಕ್ರಿಲಿಕ್, ಗ್ರಾಫಿಕ್‌ ಪ್ರಿಂಟ್ಸ್‌ ಮಾದರಿಯ ವಿವಿಧ ಶೈಲಿಯ ರಾಜ್ಯದ ಹೆಸರಾಂತ, ಉದಯೋನ್ಮುಖ ಕಲಾವಿದರ ಹಲವಾರು ಕಲಾಕೃತಿಗಳು ಈ ಪ್ರದರ್ಶನದಲ್ಲಿರುವುದು ವಿಶೇಷ. ಲಲಿತಕಲಾ ಅಕಾಡೆಮಿ ಆಗಿಂದಾಗ್ಗೆ ಕಲೆ ಮತ್ತು ಕಲಾವಿದರನ್ನು ಉತ್ತೇಜಿಸುವ ದೃಷ್ಟಿಯಿಂದ ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಕಲಾಶಿಬಿರಗಳನ್ನು, ಕಾರ್ಯಾಗಾರವನ್ನು, ಕಲಾಪ್ರದರ್ಶನವನ್ನು ಆಯೋಜಿಸುವ ಮೂಲಕ ಸದ್ದುಗದ್ದಲವಿಲ್ಲದೇ ಚಿತ್ರಕಲಾ ಸಂಸ್ಕೃತಿಯ ಜಾಗೃತಿಗಾಗಿ, ಉನ್ನತಿಗಾಗಿ ಮತ್ತು ಕಲೆಯ ನೈಪುಣ್ಯವನ್ನು ಹೆಚ್ಚಿಸುವ ಸಲುವಾಗಿ ಶ್ರಮಿಸುತ್ತಿದೆ. 

ತನ್ಮೂಲಕ ಪಟ್ಟಣ ಮಾತ್ರ ಅಲ್ಲದೇ ಗ್ರಾಮೀಣ ಪ್ರದೇಶದ ಕಲಾವಿದರ ಕಲಾಕೃತಿಗಳನ್ನೂ ಸಂಗ್ರಹಿಸಿಟ್ಟುಕೊಂಡಿದೆ. ಇಂತಹ ಹಲವಾರು ಶಿಬಿರಗಳಲ್ಲಿ ಸಂಗ್ರಹವಾದ ಕಲಾಕೃತಿಗಳು ಸಾವಿರಾರು. ಈ ಎಲ್ಲಾಾ ಕೃತಿಗಳಲ್ಲಿ ಆಯ್ದ ಅತ್ಯುತ್ತಮ ಕಲಾಕೃತಿಗಳು ‘ಮನೆಗೊಂದು ಕಲಾಕೃತಿ’ ಪ್ರದರ್ಶನದಲ್ಲಿಡಲಾಗಿದೆ. ಇದಕ್ಕಾಗಿ ಕೈಗೆಟಕುವ ಬೆಲೆಯನ್ನೂ ನಿಗದಿಪಡಿಸಲಾಗಿದೆ. ಇನ್ನೇಕೆ ತಡ, ನಿಮ್ಮ ಅಭಿರುಚಿಗೆ, ಮನ -ಮನೆಗೊಪ್ಪುುವ ಕಲಾಕೃತಿಗಳನ್ನು ತುಂಬಿಕೊಂಡು ನಿಮ್ಮ ಗೋಡೆಗೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿ, ಕಲಾವಿದರನ್ನು ಪ್ರೋತ್ಸಾಹಿಸಲು ಚಿತ್ರಕಲಾ ಪರಿಷತ್ತಿಗೆ ಮಿಸ್ ಮಾಡದೇ ಭೇಟಿ ಕೊಡಿ.

 ‘ಇದು ಕಲೆಯ ಜಾಗೃತಿ ಮತ್ತು ಮನೆಗೊಂದು ಕಲಾಕೃತಿಯ ಪರಿಕಲ್ಪನೆ’

- ಪ.ಸ. ಕುಮಾರ್,  ಅಧ್ಯಕ್ಷರು-ಕರ್ನಾಟಕ ಲಿಲಿತಕಲಾ ಅಕಾಡೆಮಿ, ಬೆಂಗಳೂರು.

ಗ್ಯಾಲರಿ: ಕುಮಾರಕೃಪಾ ರಸ್ತೆ, ಚಿತ್ರಕಲಾ ಪರಿಷತ್, ಬೆಂಗಳೂರುಪ್ರದರ್ಶನ: ಜನವರಿ 18ರಿಂದ 21ರವರೆಗೆ ಸಮಯ: ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ.