ಟಾಪ್‌ 15 ನ್ಯೂಸ್‌ ವೆಬ್‌ನಲ್ಲಿ ಏಷ್ಯಾನೆಟ್‌ ನ್ಯೂಸ್‌ ನಂ.1

| Published : May 24 2024, 12:54 AM IST / Updated: May 24 2024, 06:29 AM IST

ಟಾಪ್‌ 15 ನ್ಯೂಸ್‌ ವೆಬ್‌ನಲ್ಲಿ ಏಷ್ಯಾನೆಟ್‌ ನ್ಯೂಸ್‌ ನಂ.1
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಮುಂಚೂಣಿ 15 ಡಿಜಿಟಲ್ ನ್ಯೂಸ್ ಸಂಸ್ಥೆಗಳ ಪೈಕಿ ಏಷ್ಯಾನೆಟ್ ನ್ಯೂಸ್.ಕಾಂ ನಂಬರ್ 1 ಆಗಿ ಹೊರಹೊಮ್ಮುವ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಿದೆ. ವರ್ಷದಿಂದ ವರ್ಷಕ್ಕೆ ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಶೇ.110ರಷ್ಟು ಪ್ರಗತಿ ಕಂಡಿದೆ.

 ಬೆಂಗಳೂರು :  ದೇಶದ ಮುಂಚೂಣಿ 15 ಡಿಜಿಟಲ್ ನ್ಯೂಸ್ ಸಂಸ್ಥೆಗಳ ಪೈಕಿ ಏಷ್ಯಾನೆಟ್ ನ್ಯೂಸ್.ಕಾಂ ನಂಬರ್ 1 ಆಗಿ ಹೊರಹೊಮ್ಮುವ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಿದೆ. ವರ್ಷದಿಂದ ವರ್ಷಕ್ಕೆ ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಶೇ.110ರಷ್ಟು ಪ್ರಗತಿ ಕಂಡಿದೆ.

ಕಾಮ್‌ಸ್ಕೋರ್ ವರದಿಯು ಏಷ್ಯಾನೆಟ್ ನ್ಯೂಸ್.ಕಾಂ 2024ರ ಆರ್ಥಿಕ ವರ್ಷದಲ್ಲಿ ಶೇ.110ರಷ್ಟು ಓದುಗರ ಪ್ರಗತಿ ಸಾಧಿಸಿದೆ ಎಂದು ತಿಳಿಸಿದೆ. ಈ ಮೂಲಕ ದೇಶದ ಟಾಪ್ 15 ರಾಷ್ಟ್ರೀಯ ಡಿಜಿಟಲ್ ನ್ಯೂಸ್‌ನಲ್ಲಿ ಏಷ್ಯಾನೆಟ್ ನ್ಯೂಸ್.ಕಾಂ ಮೊದಲ ಸ್ಥಾನ ಪಡೆದಿದೆ. ಇದು ನೇರ ದಿಟ್ಟ ನಿರಂತರ ಸುದ್ದಿ ಮೂಲಕ ಓದುಗರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿರುವುದಕ್ಕೆ ಸಾಕ್ಷಿಯಾಗಿದೆ.

ಏಷ್ಯಾನೆಟ್ ನ್ಯೂಸ್.ಕಾಂ ಸುದ್ದಿ ವೆಬ್‌ಸೈಟ್ ಏಷ್ಯಾನೆಟ್‌ ಡಿಜಿಟಲ್ ಟೆಕ್ನಾಲಜೀಸ್‌ನ ಅಂಗವಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಮಲೆಯಾಳಂ, ಬಾಂಗ್ಲಾ, ಮರಾಠಿ ಸೇರಿ ಎಂಟು ಭಾಷೆಗಳಲ್ಲಿ ಜನತೆಗೆ ಸುದ್ದಿಗಳನ್ನು ತಲುಪಿಸುತ್ತಿದೆ. ಪ್ರತಿನಿತ್ಯದ ರಾಜಕೀಯ, ಸಾಮಾಜಿಕ, ಮಾನವೀಯ ಸೇರಿ ಹತ್ತು ಹಲವು ವಿಭಾಗಗಳ ದೇಶ ವಿದೇಶಗಳ ಸುದ್ದಿಗಳನ್ನು ವಿಸ್ತೃತವಾಗಿ ಬಿತ್ತರಿಸುತ್ತಿದೆ.

ಈ ಸಾಧನೆಯ ಮೂಲಕ ಏಷ್ಯಾನೆಟ್ ನ್ಯೂಸ್.ಕಾಂ ದೇಶದ ಮುಂಚೂಣಿ ಡಿಜಿಟಲ್ ನ್ಯೂಸ್ ಪಬ್ಲಿಷರ್ ಎನ್ನುವ ಹಿರಿಮೆಗೆ ಪಾತ್ರವಾಗಿದೆ. ಪುಟ ವೀಕ್ಷಣೆಯಲ್ಲಿ ಮಾಸಿಕ ಸಕ್ರಿಯ ಓದುಗರ ಸಂಖ್ಯೆಯಲ್ಲಿ ಶೇ.80ರಷ್ಟು ಏರಿಕೆ ಸಾಧಿಸಿದೆ. ಈ ವಿಭಾಗದಲ್ಲಿ ಎರಡನೇ ಅತಿ ಗರಿಷ್ಠ ಎಂಬ ಹೆಗ್ಗಳಿಕೆಗೂ ಸಂಸ್ಥೆ ಪಾತ್ರವಾಗಿದೆ.

ಈ ಯಶಸ್ಸಿನ ಹಿಂದಿರುವ ಏಷ್ಯಾನೆಕ್ಸ್‌ ಟೆಕ್ನಾಲಜೀಸ್ ಸಿಒಒ ಸಮರ್ಥ್ ಶರ್ಮಾ, ‘ಪ್ರಬಲ ಪ್ರಾದೇಶಿಕ ಡಿಜಿಟಲ್ ನ್ಯೂಸ್‌ನಿಂದ ಇದೀಗ ಪ್ರಮುಖ ರಾಷ್ಟ್ರೀಯ ಡಿಜಿಟಲ್ ನ್ಯೂಸ್‌ನತ್ತ ದಾಪುಗಾಲು ಇಡಲಾಗಿದೆ. ನಮ್ಮ ಮಾಧ್ಯಮ ಸಂಸ್ಥೆಯು ವರ್ಷದಿಂದ ವರ್ಷದ ಬೆಳವಣಿಗೆಯಲ್ಲಿ ಅಸಾಧಾರಣ ಸಾಧನೆ ಮಾಡುತ್ತಿರುವುದಕ್ಕೆ ಈ ಸಾಧನೆಯ ಗರಿ ಕೈಗನ್ನಡಿಯಾಗಿದೆ’ ಎಂದಿದ್ದಾರೆ.

‘ಈ ಯಶಸ್ಸಿನ ಶ್ರೇಯಸ್ಸು ನಮ್ಮ ಎಲ್ಲಾ ಓದುಗರು, ತಂಡದ ಸದಸ್ಯರು, ಪಾಲುದಾರರಿಗೆ ಸಲ್ಲಲಿದೆ. ಹಲವು ಸವಾಲು, ಮಾರುಕಟ್ಟೆಯಲ್ಲಿನ ಪರಿಸ್ಥಿತಿ, ಆಲ್ಗರಿದಮ್‌ನಲ್ಲಿನ ಮಹತ್ವದ ಬದಲಾವಣೆ, ಹಲವು ನವೀಕರಣಗಳ ನಡುವೆಯೂ ಸಂಸ್ಥೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಈ ಮೈಲಿಗಲ್ಲು ಸ್ಥಾಪಿಸಿದೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಸಮರ್ಥ್ ಶರ್ಮಾ ತಿಳಿಸಿದ್ದಾರೆ.

ಏಷ್ಯಾನೆಕ್ಸ್‌ ಟೆಕ್ನಾಲಜೀಸ್ ಸಿಇಒ ನೀರಜ್ ಕೊಹ್ಲಿ, ‘ಡಿಜಿಟಲ್ ವ್ಯವಹಾರದಲ್ಲಿ ಮತ್ತೊಂದು ವರ್ಷವನ್ನು ನಾವು ಯಶಸ್ಸಿಯಾಗಿ ಪೂರೈಸಿದ್ದೇವೆ. ಇದು ಸಂಸ್ಥೆಯ ಪ್ರತಿಯೊಬ್ಬರ ಅಚಲ ಬದ್ಧತೆಗೆ ಸಾಕ್ಷಿ. ಸವಾಲು, ಬದಲಾಗುತ್ತಿರುವ ಅಗತ್ಯತೆಗಳಿಗೆ ತಕ್ಕಂತೆ ಪೂರೈಕೆಯ ಬದ್ಧತೆಯನ್ನು ಈ ಸಾಧನೆ ಹೇಳುತ್ತಿದೆ. ದೇಶಾದ್ಯಂತ ನಮ್ಮ ಮಾಧ್ಯಮ ಸಂಸ್ಥೆಯ ಪ್ರೇಕ್ಷಕರು ಬೆಳೆಯುತ್ತಿದ್ದಾರೆ. ಇದರೊಂದಿಗೆ ಡಿಜಿಟಲ್ ನ್ಯೂಸ್ ಪಬ್ಲಿಷರ್‌ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದೇವೆ. ಈ ಮೂಲಕ ಡಿಜಿಟಲ್ ಜಗತ್ತಿನಲ್ಲಿ ಮುಂಚೂಣಿಯ ನ್ಯೂಸ್ ಪಬ್ಲಿಷರ್‌ ಆಗಿ ನಮ್ಮ ಸಾಮರ್ಥ್ಯವನ್ನು ಬಲಪಡಿಸಿಕೊಂಡಿದ್ದೇವೆ’ ಎಂದು ಹೇಳಿದ್ದಾರೆ.

ಏಷ್ಯಾನೆಕ್ಸ್ ಡಿಜಿಟಲ್ ಟೆಕ್ನಾಲಜೀಸ್ ಸಂಸ್ಥೆ ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಓದುಗರು ಹಾಗೂ ವೀಕ್ಷಕರನ್ನು ಹೊಂದಿದ ತಂತ್ರಜ್ಞಾನ ಸಂಸ್ಥೆಯಾಗಿ ಬೆಳೆದು ನಿಂತಿದೆ. ಡಿಜಿಟಲ್, ಟಿವಿ ಮಾಧ್ಯಮ, ಪತ್ರಿಕೆ ಹಾಗೂ ಮ್ಯೂಸಿಕ್ ಪ್ಲಾಟ್‌ಫಾರ್ಮ್ ಮೂಲಕ ಪ್ರತಿ ತಿಂಗಳು 11 ಕೋಟಿ ಪ್ರೇಕ್ಷಕರನ್ನು ತಲುಪುತ್ತಿದೆ. ಕನ್ನಡ, ಇಂಗ್ಲಿಷ್‌, ಹಿಂದಿ, ತೆಲುಗು, ಬಾಂಗ್ಲಾ, ತಮಿಳು, ಮಲೆಯಾಳಂ, ಮರಾಠಿ ಸೇರಿದಂತೆ 8 ಭಾಷೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏಷ್ಯಾನೆಕ್ಸ್ 30 ದಶಲಕ್ಷದಷ್ಟು ಸಾಮಾಜಿಕ ಮಾಧ್ಯಮ ಫಾಲೋವರ್ಸ್ ಹೊಂದಿದೆ.