ಸಾರಾಂಶ
ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಮಹಿಳೆ ಬಂಧಿಸದಿದ್ದರೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದಿರುವ ಬಿಎಂಟಿಸಿ ಇವಿ (ಎಲೆಕ್ಟ್ರಿಕ್ ವೆಹಿಕಲ್) ಬಸ್ ಚಾಲಕರು 110ಕ್ಕೂ ಹೆಚ್ಚು ಬಸ್‌ಗಳನ್ನು ಪೀಣ್ಯ ಡಿಪೋದಲ್ಲಿ ನಿಲ್ಲಿಸುವ ಮೂಲಕ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಮಹಿಳೆಯನ್ನು ಬಂಧಿಸದಿದ್ದರೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದಿರುವ ಬಿಎಂಟಿಸಿ ಇವಿ (ಎಲೆಕ್ಟ್ರಿಕ್ ವೆಹಿಕಲ್) ಬಸ್ ಚಾಲಕರು 110ಕ್ಕೂ ಹೆಚ್ಚು ಬಸ್‌ಗಳನ್ನು ಪೀಣ್ಯ ಡಿಪೋದಲ್ಲಿ ನಿಲ್ಲಿಸುವ ಮೂಲಕ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಲಕನ ಮೇಲೆ ಹಲ್ಲೆ ನಡೆದು ಒಂದು ದಿನ ಕಳೆದರೂ ಮಹಿಳೆಯನ್ನು ಇನ್ನೂ ಬಂಧಿಸಿಲ್ಲ. ಹಲ್ಲೆ ಮಾಡಿದ ಮಹಿಳೆಯ ವಿರುದ್ದ ಕಾನೂನು ರೀತ್ಯ ಕ್ರಮಕೈಗೊಳ್ಳುವವರೆಗೂ ಬಸ್‌ಗಳನ್ನು ತೆಗೆಯುವುದಿಲ್ಲ ಎಂದು ಚಾಲಕರು ಪಟ್ಟುಹಿಡಿದಿದ್ದಾರೆ. ಬಿಎಂಟಿಸಿ ಸಂಸ್ಥೆ ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಮನವೊಲಿಸುವ ಪ್ರಯತ್ನ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಬಿಎಂಟಿಸಿ ಅಧಿಕಾರಿಗಳು, ಪ್ರಯಾಣಿಕರಿಗೆ ತೊಂದರೆಯಾಗದಂತೆ ಬೇರೆ ಡಿಪೋಗಳ ಬಸ್‌ಗಳನ್ನು ಹೆಚ್ಚುವರಿಯಾಗಿ ಇವಿ ಬಸ್‌ಗಳು ಸಂಚರಿಸುವ ಮಾರ್ಗಕ್ಕೆ ನಿಯೋಜಿಸಿದೆ. ಎಲ್ಲ ಇವಿ ಬಸ್ ಚಾಲಕರು ಟಾಟಾ ಕನ್ಸಲ್ಟೆನ್ಸಿಯಿಂದ ಬಂದವರು. ಈ ಕುರಿತು ಆ ಸಂಸ್ಥೆಗೆ ಮಾಹಿತಿ ನೀಡಿಲಾಗಿದೆ ಎಂದು ತಿಳಿಸಿದರು.
ಘಟನೆ ಹಿನ್ನೆಲೆ: ಶನಿವಾರ ಜಾಲಹಳ್ಳಿ ಕ್ರಾಸ್ನಿಂದ ಕೆಆರ್ ಮಾರುಕಟ್ಟೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್, ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಬೈಕ್ವೊಂದಕ್ಕೆ ಟಚ್ ಆಗಿತ್ತು. ಆಗ ಕೋಪಗೊಂಡ ಬೈಕ್ ಓಡಿಸುತ್ತಿದ್ದ ಮಹಿಳೆ, ಡಿಪೋ 22ರ ಬಿಎಂಟಿಸಿ ಬಸ್ ಚಾಲಕ ಅಮರೇಶ್ ಎಂಬುವರಿಗೆ ಮನಬಂದಂತೆ ಥಳಿಸಿದ್ದರು. ಮಹಿಳೆಯ ಜೊತೆಗೆ ಮತ್ತೊಬ್ಬ ಹಲ್ಲೆ ಮಾಡಿದ್ದರಿಂದ ಬಸ್ನಲ್ಲಿಯೇ ಚಾಲಕ ಕುಸಿದು ಬಿದ್ದಿದ್ದ. ಈ ಕುರಿತು ಮಹಿಳೆ ಮತ್ತು ಬಸ್ ಚಾಲಕ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ನೀಡಿದ್ದಾರೆ.