ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ : ಡಿ.1ಕ್ಕೆ ತೆರಿಗೆ ಕಟ್ಟದ ಆಸ್ತಿ ಹರಾಜ್‌

| Published : Nov 30 2024, 01:30 AM IST / Updated: Nov 30 2024, 05:18 AM IST

BBMP

ಸಾರಾಂಶ

ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ‘ಒನ್ ಟೈಮ್ ಸೆಟಲ್‌ಮೆಂಟ್‌’ (ಒಟಿಎಸ್‌) ಯೋಜನೆಯಡಿ ಬಡ್ಡಿ, ದಂಡ ಮನ್ನಾ ಮಾಡಿದರೂ ಬಾಕಿ ಪಾವತಿ ಮುಂದಾಗದ 2.32 ಲಕ್ಷ ಆಸ್ತಿಗಳನ್ನು ಡಿಸೆಂಬರ್‌ನಿಂದ ನಿಯಮಾನುಸಾರ ಕ್ರಮ ಕೈಗೊಂಡು ಹರಾಜು ಹಾಕಲು ಬಿಬಿಎಂಪಿ ತೀರ್ಮಾನಿಸಿದೆ.

 ಬೆಂಗಳೂರು : ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ‘ಒನ್ ಟೈಮ್ ಸೆಟಲ್‌ಮೆಂಟ್‌’ (ಒಟಿಎಸ್‌) ಯೋಜನೆಯಡಿ ಬಡ್ಡಿ, ದಂಡ ಮನ್ನಾ ಮಾಡಿದರೂ ಬಾಕಿ ಪಾವತಿ ಮುಂದಾಗದ 2.32 ಲಕ್ಷ ಆಸ್ತಿಗಳನ್ನು ಡಿಸೆಂಬರ್‌ನಿಂದ ನಿಯಮಾನುಸಾರ ಕ್ರಮ ಕೈಗೊಂಡು ಹರಾಜು ಹಾಕಲು ಬಿಬಿಎಂಪಿ ತೀರ್ಮಾನಿಸಿದೆ.

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಸುಸ್ತಿದಾರರಿಗೆ ಆಸ್ತಿ ತೆರಿಗೆ ಮೇಲೆ ವಿಧಿಸಲಾಗುತ್ತಿದ್ದ ದುಪ್ಪಟ್ಟು ದಂಡ ಹಾಗೂ ಬಡ್ಡಿಯನ್ನು ಈ ಯೋಜನೆಯಡಿ ರಿಯಾಯಿತಿಯನ್ನು 8 ತಿಂಗಳು ನೀಡಿತ್ತು. ನ.30ರ ಶನಿವಾರಕ್ಕೆ ಒನ್‌ಟೈಮ್‌ ಸೆಟಲ್‌ ಮೆಂಟ್‌ ಯೋಜನೆ ಅಂತ್ಯವಾಗಲಿದೆ.

ಡಿ.1ರಿಂದ ದುಪಟ್ಟು ದಂಡ ಹಾಗೂ ಬಡ್ಡಿ ವಿಧಿಸುವ ಕಾರ್ಯ ಆರಂಭಗೊಳ್ಳಲಿದೆ. ರಿಯಾಯಿತಿ ನೀಡಿದರೂ ಬಾಕಿ ಇರುವ ಆಸ್ತಿ ತೆರಿಗೆ ಪಾವತಿ ಮಾಡವರಿಂದ ಆಸ್ತಿ ತೆರಿಗೆ ವಸೂಲಿ ಮಾಡಲು ಹರಾಜು ಹಾಕಲಾಗುವುದು. ಬಿಬಿಎಂಪಿ ಕಾಯ್ದೆಯಡಿ ಹರಾಜು ಹಾಕುವುದಕ್ಕೆ ಅವಕಾಶವಿದೆ. ನೋಟಿಸ್‌ ನೀಡಿ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಹಂತ ಹಂತವಾಗಿ ಕಾರ್ಯಚರಣೆ: ಈಗಾಗಲೇ ಹೆಚ್ಚಿನ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 82 ಸಾವಿರ ಆಸ್ತಿ ಮಾಲೀಕರ ಬ್ಯಾಂಕ್‌ ಖಾತೆಯನ್ನು ಬಿಬಿಎಂಪಿಯ ಬ್ಯಾಂಕ್‌ ಖಾತೆಗೆ ಅಟ್ಯಾಚ್‌ ಮಾಡಲಾಗಿದೆ. 6 ಸಾವಿರಕ್ಕೂ ಅಧಿಕ ವಾಣಿಜ್ಯ ಮಳಿಗೆಗಳನ್ನು ನೋಟಿಸ್‌ ನೀಡಿ ಸೀಜ್‌ ಮಾಡುವ ಕಾರ್ಯ ಮಾಡಲಾಗಿದೆ. ಮುಂದಿನ ಹಂತದಲ್ಲಿ ಚರಾಸ್ತಿ ಹಾಗೂ ಸ್ಥಿರಾಸ್ತಿ ಹರಾಜು ಹಾಕಲು ಮಾತ್ರ ಅವಕಾಶವಿದೆ. ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಮೊದಲ ಹಂತದಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡಗಳನ್ನು ಹರಾಜು ಹಾಕುವ ಕಾರ್ಯ ನಡೆಸಲಾಗುವುದು. ವಾಣಿಜ್ಯ ಕಟ್ಟಡಗಳಿಗೆ ಹೆಚ್ಚಿನ ಗಮನ ನೀಡಲಾಗುವುದು ಎಂದು ತಿಳಿಸಿದರು.

ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 2 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಂದ ಬಿಬಿಎಂಪಿ ಸುಮಾರು ₹600 ಕೋಟಿ ಬಾಕಿ ಇದೆ. ಪ್ರಸ್ತಕ ಸಾಲಿನ ಆಸ್ತಿ ತೆರಿಗೆ ಸುಸ್ತಿದಾರರು ಸೇರಿ ಒಟ್ಟಾರೆ ಸದ್ಯ ನಗರದಲ್ಲಿ 5.12 ಲಕ್ಷ ಆಸ್ತಿ ಮಾಲಿಕರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.

ಈ ಪೈಕಿ 3.44 ಲಕ್ಷ ವಸತಿ ಕಟ್ಟಡ ಮಾಲೀಕರಿಂದ ₹ 295 ಕೋಟಿ ರು. ಬಾಕಿ ಇದೆ, ₹20 ಸಾವಿರ ವಸತಿ ಕಟ್ಟಡ ಮಾಲೀಕರಿಂದ ₹140 ಕೋಟಿ ಆಸ್ತಿ ತೆರಿಗೆ ಬಾಕಿ ಇದೆ. ಉಳಿದಂತೆ ವಸತಿ/ ವಾಣಿಜ್ಯ ಎರಡೂ ಇರುವ ಕಟ್ಟಡ ಮಾಲೀಕರಿಂದ ₹ 65.38 ಕೋಟಿ ಹಾಗೂ ನಿವೇಶನ ಮಾಲೀಕರಿಂದ 104.04 ಕೋಟಿ ರು. ಬಾಕಿ ವಸೂಲಿ ಆಗಬೇಕೆಂದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಟಿಎಸ್‌ ವಿಸ್ತರಣೆ ಇಲ್ಲ: ಕಳೆದ ಫೆಬ್ರವರಿಯಲ್ಲಿ ಒಟಿಎಸ್‌ ಯೋಜನೆ ಜಾರಿಗೊಳಿಸಲಾಗಿತ್ತು. ಸರ್ಕಾರ ಮೊದಲು ಜೂನ್‌ ಅಂತ್ಯದ ವರೆಗೆ ನೀಡಿತ್ತು. ಆ ನಂತರ ನವೆಂಬರ್ ಅಂತ್ಯದವರೆಗೆ ವಿಸ್ತರಣೆ ಮಾಡಿತ್ತು. ಮತ್ತೆ ವಿಸ್ತರಣೆ ಮಾಡುವ ಪ್ರಸ್ತಾವನೆ ಇಲ್ಲ. ಡಿಸೆಂಬರ್‌ 1 ರಿಂದ ಆಸ್ತಿ ತೆರಿಗೆ ಸುಸ್ತಿದಾರರಿಗೆ ದುಪಟ್ಟು ದಂಡ ಹಾಗೂ ಬಡ್ಡಿ ವಿಧಿಸಿ ವಸೂಲಿ ಮಾಡಲಾಗುವುದು ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಸ್ಪಷ್ಟಪಡಿಸಿದ್ದಾರೆ.