ಸಾರಾಂಶ
ಅಂದು ಆ ಪರೀಕ್ಷಾಕೊಠಡಿಯಲ್ಲಿ, ಕೆಲವೇ ಕ್ಷಣಗಳಲ್ಲಿ, ನನ್ನ ಐವತ್ತು ವರ್ಷಗಳ ಆಧ್ಯಾಪಕ ವೃತ್ತಿಯಲ್ಲಿ ಎಂದೂ ಕಾಣದಿದ್ದ, ಹೃದಯ ಕಲಕುವ ದೃಶ್ಯಾವಳಿಯೊಂದು ಘಟಿಸಿತ್ತು. ಆ ಅನಿರೀಕ್ಷಿತವಾದ ಮನಕಲಕುವ ಘಟನೆಗೆ ಸಾಕ್ಷಿಯಾಗಿದ್ದ ನಾನು ಅದಕ್ಕೆ ಕಾರಣಕರ್ತನೂ ಆಗಿದ್ದೆ.
ಕೆ. ಎನ್. ಗಣೇಶಯ್ಯ
ಜೂನ್ 22, 2025
ಅಂದು ಇರಾನಿನ ಪರ್ವತ ಪ್ರದೇಶದ ಅಂತರಾಳದಲ್ಲಿ ಹುದುಗಿದ್ದ ಅಣುಸ್ಥಾವರಗಳ ಮೇಲೆ ಅಮೆರಿಕದ B-2 ಬಾಂಬರ್ ವಿಮಾನಗಳು ಹಾರಾಡುತ್ತ, ಕೆಲವೇ ಕ್ಷಣಗಳಲ್ಲಿ ಹಲವಾರು ಬಂಕರ್ ಬಸ್ಟರ್ ಬಾಂಬುಗಳನ್ನು ಸುರಿದು ಹೋಗಿದ್ದವು. ಸುಮಾರು 30,000 ಪೌಂಡುಗಳ ತೂಕದ ಆ ಪ್ರತಿ ಬಾಂಬು ಕೂಡ ನೂರಾರು ಮೀಟರ್‌ಗಳ ಆಳದಲ್ಲಿದ್ದ ಅಣು ಸ್ಥಾವರದ ಎದೆ ಸೀಳಿ ಸ್ಪೋಟಗೊಳ್ಳುತ್ತಿದ್ದಂತೆ ಇಡೀ ಪ್ರಪಂಚದ ಕಣ್ಣು ಆ ಬಾಂಬುಗಳು ಕೊರೆದ ಕುಳಿಗಳ ಮೇಲೆ ಮತ್ತು ಆ ಸ್ಫೋಟಗಳಿಂದ ಭುಗಿಲೆದ್ದ ಧೂಳಿನ ಮೋಡದ ಮೇಲೆ ಕೇಂದ್ರೀಕೃತವಾಗಿತ್ತು. ಆದರೆ ಆ ಬಾಂಬುಗಳಿಂದ ಸಿಡಿದೆದ್ದ ಧೂಳು, ಇರಾನಿನಿಂದ ಸುಮಾರು 3000 ಕಿ. ಮೀ. ಗಳ ದೂರದಲ್ಲಿರುವ ಜರ್ಮನಿಯ ಒಂದು ಸಣ್ಣ ಪಟ್ಟಣದಲ್ಲಿನ ವಿಜ್ಞಾನದ ವಿಧ್ಯಾರ್ಥಿಗಳ ಪರೀಕ್ಷಾಕೊಠಡಿಯನ್ನೂ ಹೊಕ್ಕಿತ್ತು ಎಂದರೆ ಯಾರು ತಾನೆ ನಂಬುತ್ತಾರೆ? ಅಲ್ಲಿ ಹೊಕ್ಕ ಧೂಳಿನ ಕಣಗಳಿಂದಾಗಿ ಪರೀಕ್ಷಾಕೊಠಡಿಯ ಒಬ್ಬರ ಕಣ್ಣಲ್ಲಿ ದಾರಾಕಾರವಾಗಿ ನೀರು ಹರಿದಿತ್ತು ಎಂದರೆ ಟ್ರಂಪ್ ನಂಬುವುದಿಲ್ಲ. ವಿಚಿತ್ರವೆಂದರೆ ಆ ಧೂಳು ನನ್ನ ಕಣ್ಣಲ್ಲೂ ನೀರು ಜಿನುಗಿಸಿತ್ತು.
ಅಂದು ಆ ಪರೀಕ್ಷಾ ಕೊಠಡಿಯಲ್ಲಿ, ಕೆಲವೇ ಕ್ಷಣಗಳಲ್ಲಿ, ನನ್ನ ಐವತ್ತು ವರ್ಷಗಳ ಆಧ್ಯಾಪಕ ವೃತ್ತಿಯಲ್ಲಿ ಎಂದೂ ಕಾಣದಿದ್ದ, ಹೃದಯ ಕಲಕುವ ದೃಶ್ಯಾವಳಿಯೊಂದು ಘಟಿಸಿತ್ತು. ಆ ಅನಿರೀಕ್ಷಿತವಾದ ಮನಕಲಕುವ ಘಟನೆಗೆ ಸಾಕ್ಷಿಯಾಗಿದ್ದ ನಾನು ಅದಕ್ಕೆ ಕಾರಣಕರ್ತನೂ ಆಗಿದ್ದೆ. ಒಂದು ರೀತಿಯಲ್ಲಿ ನನಗರಿವಿಲ್ಲದೆಯೇ ಆ ಕೊಟಡಿಯಲ್ಲಿ ನಾನೇ ಟ್ರಂಪ್ ಆಗಿದ್ದೆ; ನೇತನ್ಯಾಹು ಆಗಿದ್ದೆ; ಖಮೇನಿ ಕೂಡ ಆಗಿಬಿಟ್ಟಿದ್ದೆ. ಪರಿಣಾಮವಾಗಿ ಅಂದಿನಿಂದ ನನ್ನಲ್ಲಿ ಹೆಪ್ಪುಗಟ್ಟಿರುವ ಪಾಪಪ್ರಜ್ಞೆಯ ಬಾರವನ್ನು ಕೆಳಗಿಳಿಸುವ ಒಂದು ಸ್ವಾರ್ಥ ಪ್ರಯತ್ನ ಈ ಲೇಖನ.
ಹಿನ್ನೆಲೆ:
ಸುಮಾರು ಒಂಬತ್ತು ವರ್ಷಗಳಿಂದ ನಾನು, ಪ್ರತಿ ಬೇಸಿಗೆಯಲ್ಲೂ (ಜೂನ್-ಜುಲೈ), Witzenhaussen ಎಂಬ ಸುಂದರವಾದ, ಚೊಕ್ಕದಾದ ಹಳ್ಳಿಯಂತಹ ಸಣ್ಣ ಪಟ್ಟಣದಲ್ಲಿರುವ ಜರ್ಮನಿಯ ಒಂದು ವಿಜ್ಞಾನ ಸಂಸ್ಥೆಗೆ, ಸ್ನಾತಕೋತ್ತರ ಅಧ್ಯಾಪಕನಾಗಿ ಹೋಗುತ್ತಿದ್ದೇನೆ. ಪರಿಸರ ಮತ್ತು ಕೃಷಿಯ ನಡುವಿನ ಸಂಕೀರ್ಣ ಸಂಬಂದಗಳ ಬಗ್ಗೆ ಅಲ್ಲಿನ Andreas Buerkert ಎಂಬ ಪ್ರೊಫೆಸರ್ ಜೊತೆಯಲ್ಲಿ ನಾನು ಬೋದಿಸುತ್ತಿರುವ ಈ ಕೋರ್ಸ್ ಗೆ ಘಾಟಿಂಜೆನ್ (Gottingen) ಮತ್ತು ಕ್ಯಾಸೆಲ್ (Kassel) ಎಂಬ ಎರಡು ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳೂ ನೋಂದಣಿ ಮಾಡಿಕೊಳ್ಳುತ್ತಾರೆ. ಕೇವಲ ಹತ್ತು-ಹನ್ನೆರಡು ದಿನಗಳಲ್ಲಿ ಮುಂಜಾನೆ ೮:೦೦ ರಿಂದ ಸಂಜೆ ೫:೦೦ ರವರೆಗೆ ಸತತವಾಗಿ ನಡೆಯುವ ಈ ಕೋರ್ಸ್ ನಲ್ಲಿ ದಿನವಿಡೀ ವಿದ್ಯಾರ್ಥಿಗಳ ಜೊತೆ ಬೋದನೆ ಮತ್ತು ಚರ್ಚೆಯಲ್ಲಿ ತೊಡಗಿಕೊಳ್ಳುವ ಕಾರಣದಿಂದ , ನಮ್ಮ ಮತ್ತು ವಿಧಾರ್ಥಿಗಳ ನಡುವೆ ಆತ್ಮೀಯತೆ ಮತ್ತು ಸ್ನೇಹಯುತವಾದ ಸಂಬಂಧ ಬೆಳೆಯುತ್ತದೆ. ದಿನದಿನಕ್ಕೂ ವಿದ್ಯಾರ್ಥಿಗಳ ಜೊತೆ ನಡೆಯುವ ಚರ್ಚೆಗಳು ಔಚಿತ್ಯಪೂರ್ಣವೂ, ಗಂಭೀರವೂ ಆಗುವುದರಿಂದ ನನಗಂತೂ ಆ ಹತ್ತುದಿನಗಳ ಬೋಧನೆಯಲ್ಲಿ ಸಾರ್ಥಕತೆ ಕಾಣುತ್ತದೆ. ಹಾಗೆಯೇ ಈ ವರ್ಷದ (2025) ಜೂನ್ ತಿಂಗಳಲ್ಲಿಯೂ ಆ ಕೋರ್ಸ್ ನ ಬೋಧಕನಾಗಿ ಹೋಗಿದ್ದೆ.
ಎಂದಿನಂತೆ ಈ ವರ್ಷವೂ ಕೂಡ ಹಲವಾರು ದೇಶಗಳಿಂದ, ಜರ್ಮನಿ, ಭಾರತ, ಶ್ರೀಲಂಕ, ರುಮೇನಿಯ, ಇರಾನ್, ಮೆಕ್ಸಿಕೊ, ಅಮೆರಿಕ, ಕೀನ್ಯ ಮುಂತಾದ ಕಡೆಯಿಂದ ಸುಮಾರು ಇಪ್ಪತ್ತು ವಿದ್ಯಾರ್ಥಿಗಳು ಆ ಕೋರ್ಸಿಗೆ ನೊಂದಣಿ ಮಾಡಿಕೊಂಡಿದ್ದರು. ಮೊದಲ ದಿನ ಎಲ್ಲರೂ ತಮ್ಮ ತಮ್ಮ ಪರಿಚಯ ಮಾಡಿಕೊಂಡರಾದರೂ ಪ್ರತಿಯೊಬ್ಬರ ಹೆಸರು, ದೇಶ ಸ್ಪಷ್ಟವಾಗಿ ನೆನಪಿನಲ್ಲಿ ಉಳಿದಿರಲಿಲ್ಲ.
ಬರಿಗೈಯ ವಿದ್ಯಾರ್ಥಿನಿ
ಹಾಗೆ ವಿವಿದ ದೇಶಗಳಿಂದ ಬರುವ ಆ ವಿದ್ಯಾರ್ಥಿಗಳ ವರ್ತನೆಗಳೂ ವಿಚಿತ್ರ ಮತ್ತು ವೈವಿಧ್ಯವಾಗಿರುತ್ತವೆ. ಉದಾಹರಣೆಗೆ ಭಾರತಕ್ಕೆ ಬಂದು, ಎರಡು ವರ್ಷ ಇಲ್ಲಿ ಬದುಕಿ, ಯೋಗ ಕಲಿತು ಹಿಂದಿರುಗಿರುವ ಒಬ್ಬ ಜರ್ಮನಿಯ ಹುಡುಗ, ತನ್ನ ಮೇಜಿನ ಮೇಲೆ ಪದ್ಮಾಸನದಲ್ಲಿ ಕುಳಿತು ಪಾಠ ಕೇಳುತ್ತಿದ್ದರೆ, ಮೆಕ್ಸಿಕೋದ ಹುಡುಗಿ ತನ್ನ ಮುಂದಿನ ಕುರ್ಚಿಯ ಮೇಲೆ ಸದಾ ಕಾಲು ಚಾಚಿಯೇ ಕೂತಿರುತ್ತಿದ್ದಳು. ಪಾಠ ಕೇಳುತ್ತಿರುವಾಗಲೆ ಕೆಲವರು ಕಾಫಿ ಕುಡಿಯುವುದು, ಕ್ರೋಚೆ ಹಾಕುವುದು, ಊಟ ತಿಂಡಿ ತಿನ್ನುವುದು ಮುಂತಾದ ನಡೆಗಳು ಅತೀ ಸಾಮಾನ್ಯ. ಆದರೆ ಇವಾವ ನಡೆಗಳೂ ಪಾಠದಲ್ಲಿನ ಅವರ ಗಮನ ಮತ್ತು ದಕ್ಷತೆಯನ್ನು ಬಿಂಬಿಸುವುದಿಲ್ಲ ಎನ್ನುವುದು ನನಗೆ ಈ ಹತ್ತು ವರ್ಷಗಳಲ್ಲಿ ಸ್ಪಷ್ಟವಾಗಿತ್ತು.
ಈ ವರ್ಷವಂತೂ ಒಬ್ಬ ವಿದ್ಯಾರ್ಥಿನಿಯ ವರ್ತನೆ ಅತೀ ವಿಚಿತ್ರವಾಗಿತ್ತು. ಆಕೆ ತರಗತಿಗೆ ಬರಿಗೈಲಿ ಬರುತ್ತಿದ್ದಳು. ಪಾಠ ಕೇಳುವಾಗ ಯಾವುದೇ ಶರಾ ಬರೆದುಕೊಳ್ಳತ್ತಿರಲಿಲ್ಲ . ಕೈಯಲ್ಲಿ ಒಂದು ಮೊಬೈಲ್ ಮಾತ್ರ. ಅದರ ತೆರೆಯ ಮೇಲೆ ಆಗಾಗ ಕಣ್ಣಾಡಿಸುತ್ತಲೇ ಪಾಠ ಕೇಳುತ್ತಿದ್ದಳು. ಏಕೆ ಎಂದು ಆಗ ತಿಳಿದಿರಲಿಲ್ಲ. ತಿಳಿದಾಗ ನನ್ನೆದೆ ಮರುಗಿತ್ತು. ಹಾಗೆಂದು ಪಾಠ ಕಲಿಯುವಲ್ಲಿ ಆಕೆ ಬೇಜವಾಬ್ದಾರಿ ತೋರುತ್ತಿದ್ದಳು ಎಂದಲ್ಲ. ಬದಲಿಗೆ ಗಂಭೀರವಾಗಿಯೇ ಕೇಳುತ್ತ, ನನ್ನ ಪ್ರಶ್ನೆಗಳಿಗೆ ತಟ್ಟನೆ ಉತ್ತರ ನೀಡುತ್ತ, ಕೆಲವೊಮ್ಮೆ ಅತೀ ಔಚಿತ್ಯಪೂರ್ಣ ಪ್ರಶ್ನೆಗಳನ್ನೂ ಕೇಳುತ್ತ, ಚರ್ಚೆಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಿದ್ದು ಆ ಮೂಲಕ ಗಮನ ಸೆಳೆದಿದ್ದ ಹಲವು ವಿಧ್ಯಾರ್ಥಿಗಳಲ್ಲಿ ಒಬ್ಬಳಾಗಿದ್ದಳು. ಪ್ರೊಪೆಸರ್ ಆಂಡ್ರಿಯಾಸ್ ಕೂಡ ಆಕೆಯ ಬಗ್ಗೆ ಅಂತದೇ ಅಭಿಪ್ರಾಯ ಬೆಳೆಸಿಕೊಂಡಿದ್ದರು. ಆದರೆ ಆ ಹುಡುಗಿ ಪರೀಕ್ಷೆಗೆ ಬಂದಾಗ ನಮ್ಮ ಅನಿಸಿಕೆಗೆ ಅನಿರೀಕ್ಷಿತ ಪೆಟ್ಟು ಬಿದ್ದಿತ್ತು ಮತ್ತು ಆಕೆಯ ವಿಚಿತ್ರ ವರ್ತನೆಯ ಕಾರಣ ನನ್ನನ್ನು ಮೂಖನನ್ನಾಗಿಸಿತ್ತು.
ಪರೀಕ್ಷೆಗೆ ನುಗ್ಗಿದ ಯುದ್ದ
ಜೂನ್ 22
ಕೋರ್ಸ್ ನ ಕೊನೆಯ ದಿನ. ಪರೀಕ್ಷೆಯ ಸಮಯ.
ಒಬ್ಬೊಬ್ಬರನ್ನೇ ಕೋಣೆಯೊಳಗೆ ಕರೆದು, ಸುಮಾರು 10 - 15 ನಿಮಿಷಗಳ ಕಾಲ ನಾವಿಬ್ಬರೂ ಹಲವು ರೀತಿಯ ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದು, ನಂತರ ವಿದ್ಯಾರ್ಥಿಯನ್ನು ಹೊರಗೆ ಕಳುಹಿಸಿ, ಎಷ್ಟು ಅಂಕ ಕೊಡಬಹುದೆಂದು ನಮ್ಮಲ್ಲಿಯೇ ಚರ್ಚಿಸಿ, ಸಮ್ಮತಿ ಮೂಡಿದಮೇಲೆ, ಮತ್ತೆ ವಿದ್ಯಾರ್ಥಿಯನ್ನು ಒಳ ಕರೆದು ಕೊಟ್ಟಿರುವ ಅಂಕ ತಿಳಿಸುವುದು ರೂಡಿ. ಅದಕ್ಕೆ ವಿದ್ಯಾರ್ಥಿ ಅಸಮಾಧಾನ ತೋರಿದರೆ ಅವರ ಸರಿತಪ್ಪುಗಳನ್ನು ತಿಳಿಸಿ ಒಪ್ಪಿಸುತ್ತಿದ್ದೆವು. ಆದರೆ ಸಾಮಾನ್ಯವಾಗಿ ಅಂಕ ತಿಳಿದಮೇಲೆ ಬಹುಪಾಲು ವಿದ್ಯಾರ್ಥಿಗಳು ನಗುತ್ತ ಧನ್ಯವಾದ ಹೇಳಿ ಹೋಗುತ್ತಿದ್ದರು. ಅಂದೂ ಹಾಗೆಯೇ ಸಾಗಿತ್ತು. ಸುಮಾರು ಎಂಟ್ಹತ್ತು ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿದ್ದರು.
ಮೊಬೈಲ್ ಹುಡುಗಿಯ ಸರದಿ ಬಂತು. ಆಕೆ ಆರೋಗ್ಯವಾಗಿದ್ದಂತೆ ಕಾಣಲಿಲ್ಲ. ಆದ್ದರಿಂದ ಬೇಕಿದ್ದರೆ ಮತ್ತೊಂದು ದಿನ ಪರೀಕ್ಷೆ ತೆಗೆದುಕೊಳ್ಳಲು ಸೂಚಿಸಿದೆವು. ಮೌನವಾಗಿಯೇ ನಿರಾಕರಿಸಿ, ದೃಡ ನಿಶ್ಚಯಮಾಡಿದಂತೆ ಅಂದೇ ಮುಗಿಸುತ್ತೇನೆ ಎಂದಳು. ಪ್ರಶ್ನಾವಳಿ ಪ್ರಾರಂಭವಾಯಿತು.
ನಾನು ತರಗತಿಯಲ್ಲಿ ಆಕೆಯ ಚಾಕಚಕ್ಯತೆಯನ್ನು ಕಂಡಿದ್ದೆನಾಗಿ ಕೆಲವು ಸಂಕೀರ್ಣವಾದ ಪ್ರಶ್ನೆಗಳಿಂದಲೇ ಪ್ರಾರಂಭಿಸಿದೆ. ಆಕೆ ಕೊಟ್ಟ ಉತ್ತರಗಳು ತೃಪ್ತಿಕರ ಎನಿಸಲಿಲ್ಲ. ಅದು ಆಕೆಗೂ ತಿಳಿಯಿತು. ಕ್ರಮೇಣ ಆಕೆಯ ಉತ್ತರಗಳನ್ನೇ ಆಧರಿಸಿ ಸರಳ ಪ್ರಶ್ನೆಗಳನ್ನು ಮುಂದಿಡತೊಡಗಿದೆ. ಅಷ್ಟರಲ್ಲಿ ತಾನು ಸೋಲುತ್ತಿದ್ದೇನೆ ಎಂಬ ಅರಿವು ಮೂಡಿ ಆಕೆ ಇನ್ನೂ ಗಾಬರಿಗೊಂಡಳು. ಸರಳ ಪ್ರಶ್ನೆಗಳಿಗೂ ತಡವರಿಸಿದಳು. ನಾನು ಅಸಮಾಧಾನ ತೋರಿಸುತ್ತ,
“ನಿಮ್ಮಿಂದ ಇನ್ನೂ ಹೆಚ್ಚಿನ Performance ನಿರೀಕ್ಷಿಸಿದ್ದೆ” ಎಂದು ಹೇಳಿ, Prof Andreas ಕೈಗೆ ವರ್ಗಾಯಿಸಿದೆ. ಅಷ್ಟರಲ್ಲಿ ನನ್ನ ಅಭಿಪ್ರಾಯದಿಂದ ಗಾಬರಿಗೊಂಡಿದ್ದ ಆಕೆ ಅವರ ಬಳಿಯೂ ತಡವರಿಸಿದಳು. ಅವರಿಗೂ ಸಮಾಧಾನವಾಗಲಿಲ್ಲ. ನಂತರ ಹೊರಗೆ ಕಳುಹಿಸಿ, ನಮ್ಮಲ್ಲಿಯೇ ಚರ್ಚಿಸಿದೆವು. ಸರಳವಾಗಿ ‘ಪಾಸ್’ ಮಾಡುವ ತೀರ್ಮಾನ ಕೈಗೊಂಡು ಒಳಗೆ ಕರೆದೆವು.
ಒಳಗೆ ಬಂದವಳು ನಮ್ಮ ತೀರ್ಮಾನಕ್ಕೂ ಕಾಯದೆ, “ನಾನು ಫ಼ೈಲ್ ಆಗಿರುವುದು ನನಗೆ ಬೇಸರವಿಲ್ಲ ಆದರೆ ನಿಮ್ಮಿಬ್ಬರಿಗೂ ನಿರಾಶೆ ಮಾಡಿದ್ದಕ್ಕೆ ನಿಜಕ್ಕೂ ಕ್ಷಮೆ ಕೋರುತ್ತೇನೆ. By performing so bad I have insulted the wonderful teaching by both of you. ಅದಕ್ಕೆ ಬೇಸರವಾಗಿದೆ ಕ್ಷಮಿಸಿ.” ಎಂದು ಹೊರಗೆ ಹೊರಡಲು ಅನುವಾಗುತ್ತಿದ್ದಂತೆ Prof Andreas ನಗುತ್ತ ಆಕೆಗೆ ಬಂದು ಕೂರಲು ಹೇಳಿ, ಆಕೆ ಪಾಸ್ ಆಗಿರುವುದಾಗಿ ತಿಳಿಸಿದರು. ಆಕೆಯ ಮುಖದಲ್ಲಿ ನಗು ಮೂಡಲಿಲ್ಲ. ಬದಲಿಗೆ ಸಪ್ಪೆ ಮುಖ ಮಾಡಿಕೊಂಡು, ಏನೂ ಹೇಳದೆ ಎದ್ದು ಹೊರಡಲು ಅನುವಾದಳು. ಇನ್ನೇನು ಬಾಗಿಲು ದಾಟಬೇಕು ಎಂದಿದ್ದಾಗ Prof Andreas ಅವರು,
“ನಮ್ಮಿಬ್ಬರಿಗೂ ಕೂಡ ನಿನ್ನಲ್ಲಿ ಇದಕ್ಕಿಂತ ಹೆಚ್ಚಿನ ಅಂಕ ಗಳಿಸುವ ಸಾಮರ್ಥ್ಯ ಇದೆ ಎಂಬ ಅರಿವಿದೆ. ಆ ದಿಕ್ಕಿನಲ್ಲಿ ನಮ್ಮಿಂದ ಬೇರೆ ಯಾವ ರೀತಿಯ ಸಹಾಯ ಬೇಕಿದ್ದರೂ ಹಿಂಜರಿಯದೆ ಹೇಳು.” ಎಂದರು- ಮತ್ತೊಮ್ಮೆ ಪರೀಕ್ಷೆ ತೆಗೆದುಕೊಳ್ಳಲು ಸೂಚಿಸುವಂತೆ. ಆಗ ಆಕೆ, ಇದ್ದಕ್ಕಿದ್ದಂತೆ,
“ದಯವಿಟ್ಟು ಯುದ್ದ ನಿಲ್ಲಿಸಿ. ನಾನು ಚೆನ್ನಾಗಿಯೇ ಸ್ಕೋರ್ ಮಾಡಬಲ್ಲೆ”
ಎಂದು ಬಿಗಿದ ಗಂಟಲಲ್ಲಿ ಅಳುತ್ತ ಬಾಗಿಲು ತೆರೆದು ಹೊರಟೇಬಿಟ್ಟಳು. ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ನಿಯಂತ್ರಿಸುತ್ತಲೇ ಹೊರಗೆ ಹೋದದ್ದು ಸ್ಪಷ್ಟವಾಗಿ ನಮ್ಮಿಬ್ಬರ ಗಮನಕ್ಕೂ ಬಂದಿತ್ತು. ಇಬ್ಬರಿಗೂ ಎದೆ ಧಸಕ್ಕೆಂದಿತು. ನಾನು ‘ಆ ಹುಡುಗಿ ಅಳುತ್ತ ಹೋಗುತ್ತಿದ್ದಾಳೆ’ ಎಂದು ಹೇಳುತ್ತಿದ್ದಂತೆ Prof Andreas ಛಂಗನೆ ಎದ್ದು ಹೊರಹೋದರು.ಅಷ್ಟರಲ್ಲಿ ಆಕೆ ಕಣ್ಣೀರಕೋಡಿಯಲ್ಲಿ ಮುಳುಗಿ ಬಿರಬಿರನೆ ಹೋಗುತ್ತಿದ್ದಳು.
Prof Andreas ಹೇಗೋ ಒಳಗೆ ಕರೆತಂದು ಕುಳ್ಳಿರಿಸುವಷ್ಟರಲ್ಲಿ ಇಬ್ಬರಿಗೂ ಅರಿವಾಗಿತ್ತು- ಆ ಹುಡುಗಿ ಇರಾನಿನವಳು ಎಂದು. ಬಂದು ಕೂತವಳು, “ನಾನು ಪಾಸು ಅಥವ ಫ಼ೈಲ್ ಆಗಿದ್ದೇನೆ ಎಂಬ ಬಗ್ಗೆ ನೋವಿಲ್ಲ ಪ್ರೊಫೆಸರ್ ಗಳೆ, ನನ್ನ ಸಾಮರ್ಥ್ಯವನ್ನು ಸಂಪೂರ್ಣ ತೋರಿಸಲಾಗಲಿಲ್ಲ ಎಂದು ದುಃಖವಾಗುತ್ತಿದೆ ಅಷ್ಟೆ” ಎಂದಳು. ಆಗ ನಾನು, “ಪಾಠ ಮಾಡುವಾಗ ನೀನು ಯಾಕೆ ಶರಾ ತೆಗೆದುಕೊಳ್ಳುತ್ತಿರಲಿಲ್ಲ. ಬಹುಶಃ ಅದರಿಂದ ನಿನಗೆ ಸಹಾಯವಾಗುತ್ತಿತ್ತು. ಅಲ್ಲದೆ ಏಕೆ ಸದಾ ಮೊಬೈಲ್ ನೋಡುತ್ತ ಕೂತಿರುತ್ತಿದ್ದೆ” ಎಂದೆ.
“ನಾನು ನೋಡುತ್ತಿದ್ದದ್ದು ಮೊಬೈಲ್ ಅಲ್ಲ ಪ್ರೊಫೆಸರ್; ಇರಾನಿನಲ್ಲಿ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ನನ್ನ ತಾಯಿ ಏನಾದಳೋ ಹೇಗಿದ್ದಾಳೋ ಎಂಬ ಬಗ್ಗೆ ಯಾರಾದರೂ ಸುದ್ದಿ ಕೊಟ್ಟಿರಬಹುದೆ ಎಂದು ಪ್ರತಿಕ್ಷಣವೂ ಆತಂಕದಿಂದ ಮೊಬೈಲ್ ನೋಡುತ್ತಿದ್ದೆ. ಇರಾನಿನ ಒಂದು ಪ್ರಮುಖ ಸ್ಥಳದ ಅದಿಬದಿಯಲ್ಲೇ ನಮ್ಮ ಮನೆ. ಅಲ್ಲೆಲ್ಲ ಅತಿಯಾದ ನಿಷಿದ್ಧವಿರುವ ಕಾರಣ ತಾಯಿಯನ್ನು ಆಸ್ಪತ್ರೆಗೂ ಕರೆದೊಯ್ಯುವಂತಿಲ್ಲ” ಸುರಿಯುತ್ತಿದ್ದ ಕಣ್ಣೀರು ಒರೆಸಿಕೊಳ್ಳುತ್ತಲೇ ಮುಂದುವರಿಸಿದಳು.
”ನಿಮಗೆ ಗೊತ್ತಿರುವಂತೆ ಇರಾನಿನಲ್ಲಿ ಸಂಪೂರ್ಣವಾಗಿ ಅಂತರ್ಜಾಲವನ್ನು ಕತ್ತರಿಸಲಾಗಿದೆ. ಹಾಗಾಗಿ ತಾಯಿಯನ್ನು ಸಂಪರ್ಕಿಸಲೂ ನನಗೆ ಸಾದ್ಯವಿಲ್ಲ. ಆಕೆಯ ಸ್ಥಿತಿಯ ಬಗ್ಗೆ ನನ್ನಲ್ಲಿ ಹತ್ತುದಿನಗಳಿಂದ ದುಗುಡ ಕಾಡುತ್ತಿತ್ತು. ನಿಮ್ಮ ಪಾಟದ ಬಗ್ಗೆ ಅರ್ದಂಬರ್ಧ ಶರಾ ತೆಗೆದುಕೊಳ್ಳುವುದಕ್ಕಿಂತ ಆಕೆಯ ಬಗ್ಗೆ ಯಾರಾದರೂ ಎಂದಾದರೂ ಹೇಗಾದರೂ ಏನಾದರೂ ಸುದ್ದಿ ಕಳುಹಿಸುತ್ತಾರೇನೋ ಎಂದು ಸದಾ ಅದರ ತೆರೆ ಸರಿಸಿ ಹುಡುಕಾಡುತ್ತಲೇ ಇದ್ದೆ. ಕೊನೆಗೂ ನಿನ್ನೆ ಸುದ್ದಿ ಬಂತು ಟ್ರಂಪ್ ಆ ಬಾಂಬುಗಳನ್ನು ಸುರಿಸಿದ ಎಂದು. ಅದೇ ಸಮಯದಲ್ಲಿ, ಎಲ್ಲೆಲ್ಲೂ ಬೀಳುತ್ತಿರುವ ಬಾಂಬುಗಳ ಶಬ್ದದ ಆಘಾತಕ್ಕೋ, ನಡುಗಿದ ಭೂಮಿಯಿಂದ ಹೆದರಿಯೋ ಏನೂ ತಿಳಿಯದು ಆಕೆಗೆ ಹೆರಿಗೆಯಾಗಿದೆ ಎಂದು ಮಾತ್ರ ಸುದ್ದಿ ಬಂತು. ಆದರೆ ಹೇಗಿದ್ದಾಳೆ ಎಂದು ತಿಳಿಯದು. ಬಾಂಬ್ ಗಳಿಂದಾಗಿ ಸುತ್ತಲೂ ಹರಡಿರಬಹುದಾದ ಅಣುಗಾಳಿಯ ಹೆದರಿಕೆಯೂ ನನ್ನನ್ನು ನಡುಗಿಸಿದೆ. ಅದಕ್ಕಾಗಿ ನಿನ್ನೆ ನಾನು ನಿಮ್ಮ ppt ಗಳನ್ನು ವೀಕ್ಷಿಸಲೂ ಆಗಲಿಲ್ಲ. ಯುದ್ದ ನಿಲ್ಲುವವರೆಗೆ ಈ ಆತಂಕದಲ್ಲಿ ಓಲಾಡುತ್ತಿರುವ ದುಃಸ್ಥಿತಿ ನನ್ನದಾಗಿರುವಾಗ ಕೆಲವು ದಿನಗಳ ನಂತರ ನನ್ನ ಮನಸ್ಥಿತಿ ಉತ್ತಮಗೊಳ್ಳುತ್ತದೆ ಎಂದು ಹೇಗೆ ಹೇಳಲಿ. ಯುದ್ದ ಯಾವಾಗ ನಿಲ್ಲುತ್ತದೆ ಎಂದು ಯಾರುತಾನೆ ಹೇಳಲು ಸಾದ್ಯ? ಹಾಗೆಂದೆ ನೀವು ಮತ್ತೊಮ್ಮೆ ಪರೀಕ್ಷೆ ತೆಗೆದುಕೊ ಎಂದಾಗ ಪ್ರಯೋಜನ ಇಲ್ಲವೆಂದು ಇಂದೇ ಮುಗಿಸಲು ತೀರ್ಮಾನಿಸಿದೆ. ಆ ಕಾರಣದಿಂದಲೇ ದುಃಖ ತಡೆಯಲಾರದೆ ‘ಯುದ್ದ ನಿಲ್ಲಿಸಿ . ನಾನು ಚೆನ್ನಾಗಿ ಸ್ಕೋರ್ ಮಾಡುತ್ತೇನೆ’ ಎಂದು ಕೂಗಿಕೊಂಡೆ. ಅದು ನಿಮ್ಮ ಜವಾಬ್ದಾರಿಯಲ್ಲ ಎಂದು ತಿಳಿದಿದೆ. ಆದರೆ ನಾನು ಯಾರಲ್ಲೂ ಮೊರೆಯಿಡದಾದಾಗ ನಿಸ್ಸಹಾಯಕಳಾಗಿ ಎದುರಿಗೆ ಸಿಕ್ಕ ನಿಮಗೆ ಆ ಸವಾಲು ಎಸೆದೆ- ದುಃಖ ತಡೆಯಲಾರದೆ” ಎಂದು ತನ್ನ ಸುರಿಯುತ್ತಿರುವ ಕಣ್ಣೀರನ್ನು ಒರೆಸಿಕೊಳ್ಳುತ್ತ, ಗಂಟಲಿನ ದುಃಖವನ್ನು ನಿಗ್ರಹಿಸುತ್ತ ತನ್ನನ್ನು ತಾನು ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತ ಮುಂದುವರಿಸಿದಳು.
“ನಂಬಿ ಪ್ರೊಫ಼ೆಸರ್. ನಾನು ಕೇವಲ ಪಾಸ್ ಗಾಗಿ ಮಾತ್ರ ತೃಪ್ತಿ ಪಡುವವಳಲ್ಲ. ನನ್ನ ವಿದ್ಯಾಬ್ಯಾಸದ ಉದ್ದಕ್ಕೂ ಮೇಲಿನ ಸ್ತರದಲ್ಲಿಯೇ ಸ್ಕೋರ್ ಮಾಡಿದ್ದೇನೆ. ಆದರೆ ಈ ಖಮೇನಿ, ಈ ನೇತನ್ಯಾಹು, ಈ ಟ್ರಂಪ್… ಅವರ ಬಾಂಬುಗಳ ಸಿಡಿತಕ್ಕೆ ಛಿದ್ರಗೊಂಡಿದ್ದ ನನ್ನ ಮನಸ್ಸಿಗೆ ಪ್ರೊಫೆಸರ್ ಗಣೇಶಯ್ಯನವರ ಪ್ರಶ್ನೆಗಳೂ ಬಾಂಬುಗಳಾಗಿಯೇ ಹೆದರಿಸಿದವು.” ಎಂದು ನನ್ನತ್ತ ತಿರುಗಿ,
" Please Professor, ದಯವಿಟ್ಟು ತಪ್ಪಾಗಿ ತಿಳಿಯಬೇಡಿ. ನನ್ನ ಸಂಕಷ್ಟಕ್ಕೆ ನೀವು ಕಾರಣರಲ್ಲ” ಎಂದು ಸಮಾದಾನ ಹೇಳಿದರೂ ಆಕೆಯ ಮಾತುಗಳಿಂದ ನನ್ನ ಪ್ರಜ್ಞೆ ಕದಡಿತ್ತು. ನಾನೂ ಟ್ರಂಪ್ ಆದೆನೆ ಎಂದು.
ಕೊನೆಗೆ ಮತ್ತೊಂದು ಅವಕಾಶ ತೆಗೆದುಕೊಳ್ಳಲು ಎಷ್ಟೆ ಒತ್ತಾಯಿಸಿದರೂ ನಿರಾಕರಿಸಿ,
“ನನ್ನ ದುಃಸ್ತಿತಿಯನ್ನು ಒಂದು ಅವಕಾಶವಾಗಿ ದುರುಪಯೋಗಪಡಿಸಿಕೊಳ್ಳಲು ಇಷ್ಟವಿಲ್ಲ. ನೀವಿಬ್ಬರೂ ನನ್ನ ಬಗ್ಗೆ ಇಷ್ಟು ಕಾಳಜಿ ತೋರಿದ್ದೇ ನನಗೆ ಸಮಾಧಾನ ತಂದಿದೆ. ಒಂದು ಕೋರಿಕೆ. ಇಂದಿನ ನನ್ನ performance ನಿಜಕ್ಕೂ ನನ್ನದಲ್ಲ ಎಂದು ಇಬ್ಬರೂ ನಂಬಿದರೆ ಅಷ್ಟೆ ನನಗೆ ತೃಪ್ತಿ” ಎಂದಳು. ಆಕೆಯ ಕಣ್ಣೀರು ಹರಿಯುತ್ತಲೇ ಇತ್ತು.
ನನ್ನ ಕಣ್ಣೂ ತೇವಗೊಡಿತ್ತು; Prof Andreas ಅವರ ಕಣ್ಣುಗಳೂ ಕೂಡ.
ಅಂದು ನನ್ನನ್ನು ಕಾಡಿದ ಒಂದು ದುರದೃಷ್ಟವೆಂದರೆ ಎದ್ದು ಹೋಗಿ ಆ ಹುಡುಗಿಯ ಕಣ್ಣೀರು ಒರೆಸುವ ಸ್ವಾತಂತ್ರ್ಯ ಇಬ್ಬರಿಗೂ ಇರಲಿಲ್ಲ ಎನ್ನುವುದು. ಕಾರಣ, ನಾವು ಪ್ರಾಧ್ಯಾಪಕರು; ಅದು ಪರೀಕ್ಷಾಕೊಠಡಿ; ಮಿಗಿಲಾಗಿ ಅದು ಪಾಶ್ಚಾತ್ಯ ಚಿಂತನೆಗಳನ್ನು ಹೊತ್ತ ಜರ್ಮನಿ! ಮಧ್ಯ ಏಷ್ಯದ ಯುದ್ದಭೂಮಿಯ ಒಂದು ಕಿಡಿ ಜರ್ಮನಿಯ ಆ ಕೊಠಡಿಯಲ್ಲಿ ಆಕೆಯ ಮತ್ತು ನಮ್ಮ ಎದೆಗಳಲ್ಲಿ ನೋವಿನ ಬೆಂಕಿ ಹತ್ತಿಸಿ ಕಣ್ಣೀರು ಹರಿಸಿತ್ತು. ಇನ್ನು ಆ ಎಲ್ಲ ಬಾಂಬುಗಳ ಬೆಂಕಿಯ ಮೋಡಗಳ ಜ್ವಾಲೆಗಳು ಪ್ರಪಂಚದಾಧ್ಯಂತ ಅದೆಷ್ಟು ಎದೆ-ಚಿಟ್ಟೆಗಳನ್ನು ಸುಡುತ್ತಿದೆಯೋ ಹೇಳಬಲ್ಲವರಾರು?
ಆಕೆಯ ಕಣ್ಣು ಒರೆಸಲು ಸಾದ್ಯವಾಗದ ನಿಸ್ಸಹಾಯಕತೆ ಮತ್ತು ಆ ಇರಾನಿ ಹುಡುಗಿಗೆ ಪರೀಕ್ಷೆಯಲ್ಲಿ ನಾನು ಟ್ರಂಪ್ ಆಗಿ ಕಂಡೆ ಎಂಬ ಪಾಪಪ್ರಜ್ಞೆ ಆ ಕ್ಷಣದಿಂದ ನನ್ನನ್ನು ಗಾಡವಾಗಿ ಕಾಡತೊಡಗಿದವು.