ಛಿನ್ನಮಸ್ತಾ: ಗುರು ಬಲಗೈಯನ್ನು ಖಡ್ಗದಂತೆ ಹಿರಿದು ತಮ್ಮ ತಲೆಯನ್ನು ಒಮ್ಮೆಗೇ ಕತ್ತರಿಸಿಕೊಂಡು ಬಿಟ್ಟರು

| Published : Sep 15 2024, 01:45 AM IST / Updated: Sep 15 2024, 09:04 AM IST

roshni
ಛಿನ್ನಮಸ್ತಾ: ಗುರು ಬಲಗೈಯನ್ನು ಖಡ್ಗದಂತೆ ಹಿರಿದು ತಮ್ಮ ತಲೆಯನ್ನು ಒಮ್ಮೆಗೇ ಕತ್ತರಿಸಿಕೊಂಡು ಬಿಟ್ಟರು
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀವಿದ್ಯಾ ಸಾಧನೆಯಲ್ಲಿ ತೊಡಗಿದ್ದ ಲೇಖಕಿಗೆ, ಅವರ ಗುರುಗಳು 'being with two Gurus at the same time is like being a harlot!' ಎಂಬ ಘಾಸಿ ಮಾತುಗಳನ್ನಾಡಿ ದೂರ ತಳ್ಳುತ್ತಾರೆ. ಬೇಸರದಿಂದ ಆಶ್ರಮದಲ್ಲಿ ಧ್ಯಾನ ಮಾಡುತ್ತಿದ್ದಾಗ, ಅಲ್ಲಿ ಒಂದು ಭೀಕರ ಘಟನೆ ನಡೆಯುತ್ತದೆ.

- ಸಕಲಮಾ 

ಬೆಳಿಗ್ಗೆ 5 ಗಂಟೆಯ ಸಮಯ. ಹೊರಗಡೆ ಇನ್ನೂ ಕತ್ತಲು.. ಕೂಗಿದರೂ ಕೇಳುವಷ್ಟು ಹತ್ತಿರದಲ್ಲಿ ಯಾರೂ ಇಲ್ಲ. ಹೊರಗೆ ನಿಲ್ಲಲೂ ಭಯ, ಒಳಹೋಗಲೂ ಭಯ. ಅಯ್ಯೋ ಬಾಬಾಗೆ ಏನಾಗಿ ಹೋಯ್ತು? ಅವರು ಯಾಕೆ ನನಗಾಗಿ ಸಾಯಬೇಕಾಗಿತ್ತು! ಒಳಹೋದರೆ ಅಲ್ಲಿ ರಕ್ತ! ಶವ! ಅದನ್ನೇನು ಮಾಡುವುದು? ಈಗ ಪೋಲೀಸರು ಬಂದು ನನ್ನ ಕೇಳಿದರೆ ಏನಂತ ಹೇಳೋದು?

*

ಶ್ರೀವಿದ್ಯೆಯಲ್ಲಿ ಸಮರ್ಥನಾದ ಗುರು ದೊರಕುವುದು ದುರ್ಲಭ. ದೊರಕಿದರೆ ಅದು ಅತ್ಯಂತ ಪುಣ್ಯದ, ಅದೃಷ್ಟದ ವಿಚಾರ. ಹಾಗೇ ಅಂಥ ಗುರುವಿನಿಂದ ಮಂತ್ರೋಪದೇಶ ದೊರಕಿತೆಂದರೆ ಜೀವನ ಸಾರ್ಥಕವಾಯಿತು, ಜೀವನ್ನೋದ್ದೇಶ ಪೂರ್ಣವಾಯಿತು ಅಂತಲೇ ಅರ್ಥ!

ಗುರು ಸ್ವಾಮಿ ರಾಮರು 1992ರಲ್ಲಿ ಮೊದಲಿಗೆ ನನಗೆ ಶ್ರೀವಿದ್ಯಾ ಮಂತ್ರೋಪದೇಶ ಮಾಡಿದ್ದು ಸಮಯಾಚಾರ ಪದ್ಧತಿಯಲ್ಲಿ. ಆಗ ಎರಡು ವಿಷಯಗಳನ್ನು ಹೇಳಿದ್ದರು.

ಮೊದಲನೆಯದು ‘ನಾನು ನಿನ್ನನ್ನು ನೇರವಾಗಿ ನಮ್ಮ ಪರಂಪರೆಯ ಋಷಿಗಳೊಡನೆ ಸಂಪರ್ಕದಲ್ಲಿ ಇರಿಸುತ್ತಿದ್ದೇನೆ ಹಾಗೂ ಋಷಿ ಪರಂಪರೆಯೊಡನೆ ಬೆಸೆಯುತ್ತಿದ್ದೇನೆ’ ಎಂಬುದು. ಎರಡನೆಯದಾಗಿ ನನಗೆ ಶ್ರೀವಿದ್ಯೆಯ ಪರಮೋತ್ಕೃಷ್ಟ ದೀಕ್ಷೆಯಾದ ಶಾಂಭವ ದೀಕ್ಷೆಯನ್ನು ಕೊಟ್ಟರು. ಶ್ರೀವಿದ್ಯಾ ತಂತ್ರದಲ್ಲಿ ಇದು ಪರಮೋನ್ನತ ದೀಕ್ಷೆ. ಆ ದೀಕ್ಷೆಯನ್ನು ಕೊಡುವಾಗ ಅವರು ಹೇಳಿದರು ‘ಸಾಕ್ಷಾತ್ ಶಿವನ ಉಪಸ್ಥಿತಿಯಲ್ಲಿ ನಿನಗೆ ಈ ದೀಕ್ಷೆಯನ್ನು ಕೊಡುತ್ತಿದ್ದೇನೆ’ ಎಂದು. ಅದು ನನ್ನ ಬದುಕಿನ ಪರಮ ಪವಿತ್ರ ಕ್ಷಣವಾಗಿತ್ತು ಎಂಬುದು ನನಗೆ ಆಗ ಅರಿವಾಗಿರಲಿಲ್ಲ.

ಆಮೇಲೆ 1996ರಲ್ಲಿ ಸ್ವಾಮಿ ರಾಮರು ದೇಹತ್ಯಾಗ ಮಾಡಿದ ನಂತರ ಮತ್ತೆ ಸೂಚನೆ ಕೊಟ್ಟು ದಕ್ಷಿಣಾಚಾರದ ಪದ್ಧತಿಯಲ್ಲಿ ಶ್ರೀವಿದ್ಯೆ ಕಲಿಯಲು ಮೈಸೂರಿನ ರಾ. ಸ ಗುರುಗಳಲ್ಲಿಗೆ ಕಳುಹಿಸಿದರು.

ಮೈಸೂರು ಗುರುಗಳ ಬಳಿ ದಕ್ಷಿಣಾಚಾರದಲ್ಲಿ ಹಲವು ವರ್ಷಗಳ ಸುವ್ಯವಸ್ಥಿತ ಸಾಧನೆಯ ನಂತರ ಒಂದು ದಿನ ಪಂಚದಶೀ ಮಂತ್ರ ಕೊಟ್ಟು ಹೇಳಿದರು, ‘ಇಲ್ಲಿಗೆ ನನ್ನ ಕಡೆಯಿಂದ ಕೊಡಬೇಕಾದ ವಿದ್ಯೆಯನ್ನೆಲ್ಲ ಕೊಟ್ಟಾಗಿದೆ. ಪಂಚದಶೀ ಮಂತ್ರದ ಬಳಿಕ ಉಪದೇಶಿಸಲು ಇನ್ನೇನೂ ಇಲ್ಲ. ಸಾಧನೆ ಮಾಡುತ್ತಾ ಸಾಗಬೇಕಷ್ಟೇ. ನೀನಿನ್ನು ನಿನ್ನ ಗುರುವಿನ ಬಳಿಗೆ ಹಿಂತಿರುಗಬಹುದು’ ಅಂದುಬಿಟ್ಟರು. ನನಗೆ ಆಕಾಶ ಕಳಚಿ ತಲೆಯ ಮೇಲೆ ಬಿದ್ದಂತಾಯ್ತು. ‘ಹಿಂತಿರುಗಬಹುದು ಅಂದರೆ?’ ಕೇಳಿದೆ. ‘ಅದೇ ನಿನ್ನ ಗುರು ಸ್ವಾಮಿ ರಾಮರ ಬಳಿ’ ಅಂದರು.

ನಾನು ಸಾವರಿಸಿಕೊಂಡು ಕೇಳಿದೆ ‘ಗುರುಗಳೇ ಇವತ್ತು ಯಾಕೆ ಹೀಗೆಲ್ಲಾ ಮಾತಾಡ್ತಿದ್ದೀರಿ? ಮಂತ್ರೋಪದೇಶಗಳು ಮುಗಿದರೆ ಗುರು ಶಿಷ್ಯ ಸಂಬಂಧ ಮುಗಿಯುತ್ತದೆಯೇ? ಇಷ್ಟೆಲ್ಲ ವರ್ಷಗಳ ಕಾಲ ನನ್ನ ಮೇಲೆ ಅದೆಷ್ಟು ಪ್ರೀತಿ ತೋರಿಸಿರುವಿರಿ. ಇವತ್ತು ಇದ್ದಕ್ಕಿದ್ದಂತೆ ಹೀಗ್ಯಾಕೆ ಮಾತಾಡ್ತಾ ಇದ್ದೀರಿ?’ ಅನುನಯಿಸಿ ಕೇಳಿದೆ. ‘ಬದುಕಿನಲ್ಲಿ ನನಗೆ ಅವಶ್ಯಕವಿರುವುದನ್ನೆಲ್ಲ ಗುರುವಾಗಿ ಕರುಣಿಸಿದ್ದೀರಿ. ನೀವು ಹಾಗೂ ಸ್ವಾಮಿರಾಮರು ಬೇರೆ ಬೇರೆ ಎಂದು ನಾನ್ಯಾವತ್ತೂ ಭಾವಿಸಿಲ್ಲ’ ಎಂದು ಅರಿಕೆ ಮಾಡಿಕೊಳ್ಳಲು ಯತ್ನಿಸಿದೆ. ಆದರೆ ಗುರುಗಳು ಪರಮ ಗಂಭೀರರಾಗಿದ್ದರು.

‘being with two Gurus at the same time is like being a harlot!’ ಅಂದುಬಿಟ್ಟರು.

ಬರಸಿಡಲು ಅಪ್ಪಳಿಸಿದ ಭಾವ! ಅಳು ಕಂಠಮಟ್ಟ ತುಂಬಿ ಬಂದರೂ ಅವರೆದುರು ಅಳಲಿಲ್ಲ. ಮೊದಲ ಬಾರಿಗೆ ಮತ್ತು ಅದೊಂದೇ ಬಾರಿ ‘ಹೊರಡುತ್ತಿದ್ದೇನೆ’ ಅಂತಲೂ ಹೇಳದೇ ಬಿಮ್ಮನೆ ಬ್ಯಾಗ್ ಎತ್ತಿಕೊಂಡು ದಡ ದಡ ದಡನೆ ನಡೆದು ಬಂದೆ. ಗುರುಗಳೂ ನನ್ನನ್ನೇನೂ ತಡೆಯಲೂ ಇಲ್ಲ. ಬೆಂಗಳೂರಿಗೆ ವಾಪಸ್ ಬರಬೇಕಿತ್ತು ನಾನು. ಆದರೆ ಮರಳಲು ಮನಸ್ಸಾಗಲಿಲ್ಲ. ಮಧ್ಯದಾರಿಯಲ್ಲೇ ಚನ್ನಪಟ್ಟಣದಲ್ಲಿ ಬಸ್ಸಿಳಿದು ಆಟೋ ಹಿಡಿದು ಊರಿನ ಹೊರಭಾಗದಲ್ಲಿದ್ದ ನಮ್ಮ ಆಶ್ರಮಕ್ಕೆ ಬಂದೆ. ಇಡೀ ರಾತ್ರಿ ನಿದ್ರೆ ಬರಲಿಲ್ಲ. ಮನಸ್ಸಿನಲ್ಲಿ ಆಳವಾದ ನೋವು, ಸಂಕಟ, ತೊಳಲಾಟ. ಗುರುಗಳು ಯಾಕೆ ಹಾಗೆಂದರು..

ಮರುದಿನ ಬೆಳಿಗ್ಗೆ ಬೇಗನೆ ಎಂದಿನಂತೆ ಧ್ಯಾನಕ್ಕೆಂದು ಎದ್ದೆ. ಗುರುಗಳು ಹೇಗೂ ಪಂಚದಶೀ ಸಾಧನೆ ಮಾಡು ಎಂದಿದ್ದಾರೆ, ಅದರ ಜಪವನ್ನಾದರೂ ಮಾಡೋಣ ಅಂತ ಗುರುನಿವಾಸದ ಕೋಣೆಯಲ್ಲಿ ಧ್ಯಾನಕ್ಕೆ ಕುಳಿತೆ.

ಐದು ಹತ್ತು ನಿಮಿಷಗಳು ಕಳೆದಿರಬಹುದು, ಇದ್ದಕ್ಕಿದ್ದಂತೇ ಅಳು ಉಕ್ಕಿಬರಲು ಶುರುವಾಯ್ತು. ‘ಬಾಬಾ ಗುರುಗಳು ಹೀಗೆ ಹೇಳಿಬಿಟ್ಟರು, ನಾನೆಂದೂ ನೀವು ಮತ್ತು ಗುರುಗಳಲ್ಲಿ ಭೇದವೆಣಿಸಿಲ್ಲ. ನನಗೆ ನೀವು ಬೇರೆ, ಅವರು ಬೇರೆ ಅಂತ ಯಾವತ್ತೂ ಅನ್ನಿಸಿಯೇ ಇಲ್ಲ. ಆದರೂ ನನ್ನನ್ನು ಯಾಕೆ ಹೀಗೆ ಗುರುಗಳು ದೂರ ತಳ್ಳುತ್ತಿದ್ದಾರೆ? ಅದೂ ಇಂಥ ಅಪಶಬ್ದ ಬಳಸಿ.. ನಾನೇನು ಮಾಡಬೇಕೆಂದು ನೀವೇ ದಾರಿತೋರಿಸಬೇಕು, ನನಗೇನೂ ಗೊತ್ತಾಗ್ತಾ ಇಲ್ಲ.. ಬಾಬಾ ನೀವಿದನ್ನು ಕೇಳಿಸಿಕೊಳ್ತಿದ್ದೀರಿ ಅಂತ ಖಚಿತವಾಗಿ ನನಗೆ ಗೊತ್ತಿದೆ’ ಗೋಡೆಯ ಮೇಲಿದ್ದ ಸ್ವಾಮಿ ರಾಮರ ಭಾವಚಿತ್ರದೊಡನೆ ಅಳುತ್ತಲೇ ಮಾತನಾಡತೊಡಗಿದೆ.

ಅದು ಚಳಿಗಾಲ. ಸಾಕಷ್ಟು ಥಂಡಿ ಇತ್ತು. ಗುರುನಿವಾಸದಲ್ಲಿ ನಾನೊಬ್ಬಳೇ, ಮತ್ಯಾರೂ ಇರಲಿಲ್ಲ. ಇಡೀ ಆಶ್ರಮ ಖಾಲಿ.

ಇದ್ದಕ್ಕಿದ್ದಂತೆ ಬಾಬಾ ಆ ಭಾವಚಿತ್ರದಲ್ಲಿದ್ದಂತೆ ಬಿಳಿ ಕುರ್ತಾ ಪೈಜಾಮ ಧರಿಸಿ ನನ್ನೆದುರು ನಿಂತುಬಿಟ್ಟರು. ನಾನು ನಿಬ್ಬೆರಗಾಗಿ ನೋಡ ನೋಡುತ್ತಿರುವಂತೇ, ಬಲಗೈಯನ್ನು ಖಡ್ಗದಂತೆ ಹಿರಿದು ತಮ್ಮ ತಲೆಯನ್ನು ಒಮ್ಮೆಗೇ ಕತ್ತರಿಸಿಕೊಂಡು ಬಿಟ್ಟರು! ಛಿಲ್ಲನೆ ರಕ್ತ ಚಿಮ್ಮಿತು! ಬಾಬಾ ಜೋರಾಗಿ ನಗತೊಡಗಿದರು! ಅದೆಷ್ಟು ಜೋರಾಗಿ ನಗುತ್ತಿದ್ದರೆಂದರೆ ಗಗನವೆಲ್ಲ ವ್ಯಾಪಿಸುವಷ್ಟು.. ‘ಹ್ಹಹ್ಹಹ್ಹಹ್ಹಾ...’

ನೋಡುತ್ತಿರುವಂತೆಯೇ ತುಂಡರಿಸಿದ ಅವರ ತಲೆ ಛಂಗನೆ ಹಾರಿ ನೆಲಕ್ಕೆ ಬಿದ್ದಿತು. ಆಗಲೂ ಆ ರುಂಡ ಹಾಗೇ ನಗುತ್ತಿತ್ತು! ಅವರ ದೇಹದಿಂದ ರಕ್ತ ಚಿಲುಮೆಯಂತೆ ಚಿಮ್ಮುತ್ತಲೇ ಇತ್ತು. ಕೆಲವೇ ಕ್ಷಣಗಳಲ್ಲಿ ಇಡೀ ಕೋಣೆ ರಕ್ತದಿಂದ ತುಂಬಿಹೋಯ್ತು. ಇಡೀ ದೃಶ್ಯ ರಣ ಭೀಕರವಾಗಿತ್ತು. ಹಳೆಯ ಕಾಲದ ಚಿತ್ರಗಳ ಖಳನಾಯಕರು ನಗುವಂತೆ ‘ಹ್ಹಹ್ಹಹ್ಹಹ್ಹಾ ’ ಅಟ್ಟಹಾಸ ಇಡೀ ಕೋಣೆಯಲ್ಲಿ ಮೊಳಗುತ್ತಿತ್ತು! ಎಡ ಬಲ ಮತ್ತು ನಡುವಿನಲ್ಲಿ ಮೂರು ಪ್ರಬಲ ಧಾರೆಗಳಾಗಿ ಬಾಬಾರ ದೇಹದಿಂದ ರಕ್ತ ಚಿಮ್ಮುತ್ತಿತ್ತು.

ತಡೆಯಲಾರದೇ ನೆಗೆದು ಹೇಗೋ ಬಾಗಿಲು ತೆಗೆದು ಕೋಣೆಯಿಂದ ಹೊರಗೋಡಿದೆ. ಅಂಥ ಚಳಿಯಲ್ಲೂ ಮೈ ಪೂರ ಬೆವರಿ ನೀರಿಳಿಯುತ್ತಿತ್ತು! ಅದು ಬೆಳಗಿನ ಬೆಳಿಗ್ಗೆ 5 ರಿಂದ 5.10 ರ ಸಮಯ. ಹೊರಗಡೆ ಇನ್ನೂ ಕತ್ತಲು. ಆಶ್ರಮದಲ್ಲಿ ಯಾರೂ ಇಲ್ಲ. ಕೂಗಿದರೂ ಕೇಳುವಷ್ಟು ಹತ್ತಿರದಲ್ಲಿ ಯಾರೂ ಇಲ್ಲ.

ನನಗೆ ಹೊರಗೆ ನಿಲ್ಲಲೂ ಭಯ, ಒಳಹೋಗಲೂ ಭಯ! ಅಯ್ಯೋ, ಬಾಬಾಗೆ ಏನಾಗಿ ಹೋಯ್ತು? ಅವರು ಯಾಕೆ ನನಗಾಗಿ ಸಾಯಬೇಕಾಗಿತ್ತು? ಒಳಹೋದರೆ ಅಲ್ಲಿ ರಕ್ತ, ಶವ.. ಅದನ್ನೇನು ಮಾಡುವುದು? ಈಗ ಪೋಲೀಸರು ಬಂದು ನನ್ನ ಕೇಳಿದರೆ ಏನಂತ ಹೇಳೋದು? ಹೇಳಿದರೂ ಇದನ್ನು ಯಾರಾದರೂ ನಂಬುತ್ತಾರಾ? ನಾನೇ ಕೊಲೆ ಮಾಡಿದ್ದೇನೆ ಅಂತ ಕೇಸು ಹಾಕುತ್ತಾರೆ. ಹೆದರಿಕೆ, ಅಳು. ಪ್ರಶ್ನೆಗಳೂ ಉಕ್ಕುತ್ತಿದ್ದವು. ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ಸ್ತಂಭೀಭೂತಳಾಗಿ ಕುಳಿತೇ ಇದ್ದೆ.

ಸ್ವಲ್ಪ ಬೆಳಕು ಹರಿಯಿತು. ಏನು ಮಾಡುವುದು? ಹಿಂತಿರುಗಿ ಮನೆಗೆ ಹೋಗಬೇಕೆಂದರೂ ನನ್ನ ಕೈ ಚೀಲ ಕೋಣೆಯೊಳಗಿದೆ. ಪರ್ಸು, ಹಣ ಎಲ್ಲವೂ ಅದರಲ್ಲೇ ಇದೆ. ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಸಾವರಿಸಿಕೊಂಡು ಧೈರ್ಯ ಒಗ್ಗೂಡಿಸಿಕೊಂಡು ಒಂದೊಂದೇ ಹೆಜ್ಜೆ ಇಡುತ್ತಾ ಆ ಭೀಭತ್ಸ ದೃಶ್ಯಕ್ಕೆ ಹೆದರುತ್ತಾ ಕೋಣೆಯ ಬಳಿ ಬಂದೆ. ಬಾಗಿಲು ಸರಿಸಿದರೆ.. ಅರೆ! ಏನೂ ಇಲ್ಲ. ರಕ್ತ, ರುಂಡ, ಮುಂಡ ಯಾವುದರ ಚಿಕ್ಕ ಕುರುಹೂ ಇಲ್ಲ! ಆದರೂ ಅಲ್ಲಿರಲು ಸಾಧ್ಯವಾಗಲಿಲ್ಲ. ಬೆಂಗಳೂರಿಗೆ ಹೊರಟುಬಿಟ್ಟೆ.

ಮನೆಗೆ ಬಂದು ಮೈಸೂರು ಗುರುಗಳಿಗೆ ಕರೆ ಮಾಡಿದೆ. ಅವರಾದರೂ ನನ್ನ ಕರೆಗಾಗಿಯೇ ಕಾಯುತ್ತಿದ್ದಂತಿತ್ತು! ತಕ್ಷಣ ಫೋನೆತ್ತಿಕೊಂಡರು. ಗುರುಗಳೇ ಈ ರೀತಿಯೆಲ್ಲಾ ನಡೆಯಿತು ಅಂತ ಎಲ್ಲವನ್ನೂ ವಿವರಿಸಿದೆ.

ಜತೆಗೆ ‘ಕ್ಷಮಿಸಿ ಗುರುಗಳೇ, ನಿನ್ನೆ ಕೋಪದಲ್ಲಿ ನಿಮ್ಮ ಮನೆಯಿಂದ ನಿಮಗೆ ಹೇಳದೇ ಹೊರಟುಬಂದೆ’ ಅಂದೆ. ಗುರುಗಳು ಈ ಘಟನೆ ಕೇಳಿ ಚೆನ್ನಾಗಿ ಬೈಯ್ಯಬಹುದು, ಇದೇನು? ಮತಿಭ್ರಮಣೆಗೊಳಗಾದವರಂತೆ ಮಾತಾಡ್ತಿದೀಯ ಅನ್ನಬಹುದು, ಅಂದುಕೊಂಡೇ ಎಲ್ಲ ವಿವರಿಸಿದೆ. ಆದರೆ ಇಡೀ ಘಟನೆ ಕೇಳಿ ಗುರುಗಳು ಜೋರಾಗಿ ನಗತೊಡಗಿದರು. ಸಾಕಷ್ಟು ಹೊತ್ತು ನಗುತ್ತಲೇ ಇದ್ದರು.

ನಂತರ ನಿಧಾನವಾಗಿ ಹೇಳಿದರು ‘ಓಕೇ...ಗುಡ್..ಪಂಚದಶೀ ಸಾಧನೆ ಮಾಡುತ್ತಿರು. ಇನ್ನು ಸ್ವಲ್ಪ ದಿನಗಳ ನಂತರ ಅಥವಾ ನಿನಗೆ ಬೇಕೆನ್ನಿಸಿದಾಗ ಇಲ್ಲಿಗೆ ಬಾ’ ಅಂದರು.

ಹ್ಮ್....ಈಗ ಇದೆಲ್ಲದರ ಅರ್ಥವೇನು?

ಇದು ಛಿನ್ನ ಮಸ್ತಾ!( ಗುರು ಸಕಲಮಾ ಅವರ ಆತ್ಮ ಕಥನ ‘ಹಿಮಾಲಯ ಋಷಿಗಳ ಸಂದೇಶಗಳು : ಸಕಾಲಿಕ ಮತ್ತು ಕಾಲಾತೀತ’ ಸೆ.22ಕ್ಕೆ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಗಾಯನ ಸಮಾಜದಲ್ಲಿ ಬಿಡುಗಡೆಯಾಗುತ್ತಿದೆ.)