ಪುಸ್ತಕ ಪರಿಚಯ

| Published : Feb 18 2024, 01:30 AM IST / Updated: Feb 18 2024, 03:09 PM IST

ncert books

ಸಾರಾಂಶ

ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಕಣ್ಣು ಬಿಡುತ್ತಿರುವ ವಿವಿಧ ಕೃತಿಗಳ ಕುರಿತು ಪರಿಚಯಾತ್ಮಕ ಬರಹ.

ಗಟ್ಟಿಗಿತ್ತಿಯರ ದಿಟ್ಟ ಬದುಕಿನ ಅನಾವರಣ ಗಡಿದಾಟಿದ ಹೆಣ್ಣುಗಳ ಕಥನ
ಲೇ: ಡಾ. ಎಚ್.ಎಸ್. ಅನುಪಮಾ

ಪುಟ: 268 
ಬೆಲೆ: ರು.250
ಪ್ರ: ಲಡಾಯಿ 
ಪ್ರಕಾಶನ, ಗದಗ
ದೂ: 9480286844

25 ಜನ ಸಾಧಕಿಯರ ಜೀವನಗಾಥೆ ಈ ಕೃತಿ. ಕರ್ನಾಟಕದ ಸಾಧಕಿಯರೇ ಅಲ್ಲದೆ ಭಾರತದ ವಿವಿಧ ಮೂಲೆಯ ಸಾಧಕಿಯರನ್ನು ಹೆಕ್ಕಿ ತೆಗೆದು ನಮಗೆ ಪರಿಚಯಿಸಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಇತರರಿಗೆ ಮಾದರಿಯಾಗಿರುವ ಮಹಿಳೆಯರ ರೋಚಕ ಅನುಭವಗಾಥೆ ಇಲ್ಲಿದೆ.

ಮದುವೆಗೆ ಹುಡುಗಿಯ ಸಮ್ಮತಿಯೂ ಮುಖ್ಯ ಎಂದು ಸಾಧಿಸಿ ಗೆದ್ದ ಡಾ. ರುಕ್ಮಾ ಬಾಯಿ, ಸ್ವಾತಂತ್ರ್ಯ ಹೋರಾಟಗಾರ್ತಿ ಉಮಾಬಾಯಿ ಕುಂದಾಪುರ, ಮುಸ್ಲಿಂ ಹುಡುಗಿಯಾಗಿ ಹುಟ್ಟಿ ಹಿಂದೂ ಹುಡುಗನನ್ನು ಮದುವೆಯಾಗಿ ದೂರದ ಲಾಹೋರಿನಿಂದ ಮುಂಬೈಗೆ ಬಂದು ಯಶಸ್ವಿ ನಟಿಯಾದ ಜೋಹ್ರಾ ಸೈಗಲ್ ಕಥೆ, ಕೇರಳದ ಮೊದಲ ದಲಿತ ಪದವೀಧರೆ ದಾಕ್ಷಾಯಿಣಿ ವೇಲಾಯುಧನ್ ಸಾಹಸದ ಕಥೆ, ಮೂಢನಂಬಿಕೆ ಅಸ್ಪೃಶ್ಯತೆಗಳ ವಿರುದ್ಧ ಹೋರಾಡಿದ ಸರಸ್ವತಿ ಓರಾ ಅವರ ಕಥೆ, ಹೀಗೆ ವೃತ್ತಿಯಲ್ಲಿ ಯಶಸ್ವಿಯಾಗಿ ಕೌಟುಂಬಿಕವಾಗಿ ಪೆಟ್ಟುತಿಂದ ಅನೇಕ ಮಹಿಳೆಯರ ಕಥೆ, ನೋವು ನಲಿವು, ಸಾಹಸ ಈ ಕೃತಿಯಲ್ಲಿ ಅಡಗಿದೆ.

ವೈವಿಧ್ಯಮಯ ವಸ್ತು, ವಿಸ್ತಾರದ ಕವಿತೆಗಳುಜೋಗಿ ಜೋಳಿಗೆಯ ಕಾಳು

(ಇದು ಜೋಳಿಗೆ ಸಂತನ ಗಜಲ್‌)
ಲೇ: ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ
ಪ್ರ: ಹೆಕ್ಸಗಾನ್ ಪ್ರಕಾಶನ, ಬೆಂಗಳೂರುಪುಟ: 83 ಬೆಲೆ: ರು.150
ದೂ: 9731514051

‘ಮುಟ್ಟಿ ಕೆಡುವುದಕ್ಕಿಂತ ಮುಟ್ಟದೇ ಇರುವುದು ಸರಿಯೇನೋ ನಾಣಿ’.
ಎಂಬ ಗಟ್ಟಿದನಿಯ ಮೂಲಕ ಹತ್ತಿರವಾಗುವ ಗಜಲ್‌ಗಳು ಈ ಸಂಕಲನದಲ್ಲಿವೆ. ಲೋಕದಲ್ಲಿ ರೂಢಿಯಲ್ಲಿರುವ ಅನೇಕ ಅನಿಷ್ಟ, ಮೂಢನಂಬಿಕೆ, ಅಮಾನವೀಯ ಆಚರಣೆಗಳನ್ನು ಈ ಕವಿತೆಗಳು ಪ್ರಶ್ನೆ ಮಾಡುತ್ತವೆ. ಅಂಥಾ ಕೆಲವು ಸಾಲುಗಳು ಹೀಗಿವೆ

ದೇವರಿಗೂ ಕೇಳಿದೆ ನಾನು; ನೀನು ಯಾರ ಸಂತಾನವೆಂದು
ದೇವರು ಹೇಳಿತು ತಪ್ಪು ನನ್ನದಲ್ಲ ಮನುಷ್ಯನದೆಂದು
ಜೊತೆಯಲ್ಲಿ ಬಂದವರೆಷ್ಟೋ ಮಂದಿ ಜೊತೆಯಲ್ಲಿಲ್ಲ
ಬಣ್ಣ ಬಣ್ಣದ ಜಗತ್ತಿನಲ್ಲಿ ಬಣ್ಣಗಳಷ್ಟೆ ಮತ್ತೇನೂ ಇಲ್ಲ
ಇವುಗಳ ಜೊತೆಗೆ ಪ್ರೇಮ, ಬಾಂಧವ್ಯಕ್ಕೆ ಕನ್ನಡಿ ಹಿಡಿಯುವಂಥಾ ಸಾಲುಗಳೂ ಈ ಗಜಲ್‌ನಲ್ಲಿ ಅಲ್ಲಲ್ಲಿ ಎದುರಾಗುತ್ತವೆ.
ಹುಣ್ಣಿಮೆ ಚಂದಿರನ ಬೆಳದಿಂಗಳ ಬೆಳ್ಳಿಯ ಬೆಳಕಿವಳು
ರಗರಗಿಸೋ ಮಲ್ಲಿಗೆಯ ಮೊಗ್ಗಿನಂತಿವಳು ನನ್ನ ಮಗಳು

ಹಲವು ಧ್ವನಿಗಳು, ರೂಪಕಗಳು ಈ ಕವಿತೆಯ ಜೋಳಿಗೆಯಲ್ಲಿ ಸಮೃದ್ಧವಾಗಿವೆ. ಕೆಲವೊಮ್ಮೆ ಗಾಢವಾಗಿ ಆರಂಭವಾಗುವ ಸಾಲುಗಳು ವಾಚ್ಯದತ್ತ ಹೊರಳಿ ಹಗುರಾಗುವುದೂ ಇದೆ. ‘ತಂಬೂರಿ ಹಿಡಿದು ಹೊರಟ ಸಂತ ಜೋಗಿಯ ಜಾಳು/ ಬದುಕುವ ಜನಪದದ ಬೀದಿಯೊಳಗಿನ ಬೀದಿಯ ಗೋಳು/ ಜಗವೆಲ್ಲ ಎಕ್ಕಿ ನೋಡುವ ಹೊಕ್ಕಿ ನೋಡುವ ಹಸಿದವರ ಹಾಡು/ ರೆಪ್ಪೆಗೂಡಲಿ ಬಚ್ಚಿಟ್ಟ ಸಾವಿರ ನೋವಿನ ಕತೆಯ ಬಾಳು’ ಎಂಬಂಥಾ ಸಾಲುಗಳು ಮೇಲಿನ ಮಾತಿಗೆ ಉದಾಹರಣೆಯಾಗಿ ಸಿಗುತ್ತವೆ.

ಹೀಗೆ ವೈವಿಧ್ಯಮಯ ವಿಷಯ, ವಿಸ್ತಾರದ ಕವಿತೆಗಳ ಮೂಲಕ ಕಾವ್ಯ ಜಗತ್ತಿನಲ್ಲಿ ಹೆಜ್ಜೆ ಇಟ್ಟಿದ್ದಾರೆ ಕವಿ ಲಕ್ಷ್ಮೀನಾರಾಯಣ.