ಸಾರಾಂಶ
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಶಿಲ್ಪಾ ಮಂಟಗಣಿ ಎಂಬ ಗೃಹಿಣಿ 100 ರೊಟ್ಟಿಯಿಂದ ಶುರು ಮಾಡಿದ ವ್ಯಾಪಾರ ಈಗ ಜವಾರಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಆಗಿ ಬೆಳೆದು ನಿಂತಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಶಿಲ್ಪಾ ಮಂಟಗಣಿ ಎಂಬ ಗೃಹಿಣಿ 100 ರೊಟ್ಟಿಯಿಂದ ಶುರು ಮಾಡಿದ ವ್ಯಾಪಾರ ಈಗ ಜವಾರಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಆಗಿ ಬೆಳೆದು ನಿಂತಿದೆ.
ಆಸ್ಟ್ರೇಲಿಯಾ, ಸಿಂಗಾಪುರ, ಅಮೆರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಜಪಾನ್ ಸೇರಿದಂತೆ 10 ದೇಶಗಳಿಗೆ ರೊಟ್ಟಿ, ಚಟ್ನಿಪುಡಿ ಸೇರಿದಂತೆ 35 ಬಗೆಯ ತಿನಿಸುಗಳು ರಫ್ತಾಗುತ್ತಿದೆ. ಶಿಲ್ಪಾ ಮಂಟಗಣಿ ಅವರ ಪತಿ ಶಿವಲಿಂಗಪ್ಪ ಹಾಗೂ ಶಿಲ್ಪಾ ಅವರ ಸಹೋದ ಚನ್ನಯ್ಯ ಹಿರೇಮಠ ಅವರೂ ಜವಾರಿ ಫುಡ್ಸ್ನಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
ಮೊದ ಮೊದಲಿಗೆ ಊರಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಜೋಳದ ರೊಟ್ಟಿ ಪೂರೈಸುವ ಕೆಲಸ ಒಪ್ಪಿಕೊಳ್ಳುತ್ತಿದ್ದರು ಶಿಲ್ಪಾ. ಆರ್ಡರ್ ಹೆಚ್ಚಾದಾಗ ಗೆಳತಿಯೊಬ್ಬರನ್ನು ಸಹಾಯಕ ಕರೆದುಕೊಂಡು ಮಾಡುತ್ತಿದ್ದರು. ಹಾಗೇ ಕೆಲವು ಹೋಟೆಲ್ ಮತ್ತು ಡಾಬಾಗಳಿಂದಲೂ ಆರ್ಡರ್ ಬರತೊಡಗಿತು. ಅಗತ್ಯಕ್ಕೆ ತಕ್ಕಂತೆ ಮಹಿಳೆಯರನ್ನು ಕೆಲಸಕ್ಕೆ ಕರೆದುಕೊಂಡು ಶಿಲ್ಪಾ ರೊಟ್ಟಿ ವ್ಯಾಪಾರದಲ್ಲಿ ಬೆಳೆಯತೊಡಗಿದರು. ಪತಿ ಶಿವಲಿಂಗಪ್ಪ ಮಂಟಗಣಿ ಕೂಡ ಪತ್ನಿಗೆ ಹೆಗಲಾಗಿ ನಿಂತರು. ತಂಗಿಯ ಈ ಕೆಲಸ ನೋಡಿದ ಅವರ ಹಿರಿಯ ಸಹೋದರ ಚನ್ನಯ್ಯ ಆಷ್ಟರಲ್ಲಾಗಲೇ ವಿವಿಧ ವಸ್ತುಗಳ ವ್ಯಾಪಾರದಲ್ಲಿ ತೊಡಗಿದ್ದರು.
ಚನ್ನಯ್ಯ ಹಿರೇಮಠ ಸಹ ಮಾರ್ಕೆಟಿಂಗ್ಗೆ ಸಹಕರಿಸತೊಡಗಿದಾಗ ರೊಟ್ಟಿ ಮಷೀನು ಖರೀದಿಸುವ ತೀರ್ಮಾನಕ್ಕೆ ಬಂದರು. ಗೌರಿ ಶಂಕರ ಫುಡ್ ಇಂಡಸ್ಟ್ರೀಸ್ ಸ್ಥಾಪಿಸಿದರು. ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಮೂಲಕ ಸಾಲಕ್ಕೆ ಅರ್ಜಿ ಹಾಕಿದರು.
ಪಿಎಂಎಫ್ಎಂಇ ಯೋಜನೆ ಮೂಲಕ ಸಾಲ ಪಡೆದರು. ಸಬ್ಸಿಡಿಯೂ ಸಿಕ್ಕಿತು. ಜೊತೆಗೆ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ನಡೆದ ಆಹಾರ ಮೇಳಗಳಲ್ಲಿ ಮಳಿಗೆ ನೀಡಿದರು. ದುಬೈ ಮೇಳದಲ್ಲೂ ಮಳಿಗೆ ಹಾಕಲು ಅವಕಾಶ ಸಿಕ್ಕಿ ಜವಾರಿ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಯಾಯಿತು. ಟಿಯುವಿ ಲ್ಯಾಬ್ಸ್, ಯುಎಸ್ಎಫ್ಡಿಎ ಸರ್ಟಿಫಿಕೇಟ್ಗಳನ್ನು ಪಡೆಯಲು ಕಪೆಕ್ ಮಾರ್ಗದರ್ಶನ ಮಾಡಿತು. ಇದರಿಂದ ನಾವು ನಮ್ಮ ಉತ್ಪನ್ನಗಳ ರಫ್ತು ಮಾಡಲು ಮುಕ್ತ ಅವಕಾಶ ಸಿಕ್ಕಿತು.
ಬೆಂಗಳೂರು, ದೆಹಲಿ, ಚನ್ನೈ, ಅಹ್ಮದಾಬಾದ್, ಹೈದ್ರಾಬಾದ್ನ ಆರ್ಗ್ಯಾನಿಕ್ ಸ್ಟೋರ್ಗಳಲ್ಲೂ ನಮ್ಮ ಜವಾರಿ ಉತ್ಪನ್ನಗಳಿಗೆ ಬೇಡಿಕೆ ಇದೆ. ವಾರ್ಷಿಕ ವಿದೇಶಿ ವಹಿವಾಟು 1.35 ಕೋಟಿ ರೂಪಾಯಿ ಹಾಗೂ ದೇಶೀಯ ವಹಿವಾಟು 1 ಕೋಟಿ ರೂವರೆಗೆ ನಡೆಯುತ್ತಿದೆ. ಒಟ್ಟಾರೆ ವರ್ಷಕ್ಕೆ 2.35 ಕೋಟಿ ರೂ. ತಲುಪಿರುವ ವ್ಯವಹಾರವನ್ನು ಇನ್ನೆರಡು ವರ್ಷದಲ್ಲಿ ಐದು ಕೋಟಿಗೆ ಏರಿಸುವ ಗುರಿ ಹಾಕಿಕೊಂಡಿದ್ದೇವೆ. 10 ದೇಶದಿಂದ 20 ದೇಶಗಳಿಗೆ ನಮ್ಮ ರಫ್ತಿನ ವ್ಯಾಪ್ತಿಯನ್ನೂ ಹೆಚ್ಚಿಸುವುದಕ್ಕೆ ಯೋಜನೆ ಹಾಕಿಕೊಂಡಿದ್ದೇವೆ ಎಂದು ಜವಾರಿ ಫುಡ್ಸ್ ಸಿಇಓ ಚನ್ನಯ್ಯ ಎಮ್ಮೆಟ್ಟಿ ಹಿರೇಮಠ ಕನ್ನಡಪ್ರಭಕ್ಕೆ ವಿವರಿಸಿದರು.
ಶಿಗ್ಗಾಂವಿ ಕೈಗಾರಿಕಾ ಪ್ರದೇಶದಲ್ಲಿ 6 ಸಾವಿರ ಅಡಿ ವಿಸ್ತೀರ್ಣದಲ್ಲಿ ಉತ್ಪನ್ನಗಳು ತಯಾರುಗುತ್ತವೆ. ನನ್ನ ಗೆಳತಿ ಜೊತೆ ಸೇರಿ ಶುರು ಮಾಡಿದ ವ್ಯಾಪಾರ ಚನ್ನಾಗಿ ಕೈ ಹಿಡಿದಿದೆ. ಮಾರ್ಕೆಟಿಂಗ್ ಕೆಲಸವನ್ನು ಚನ್ನಯ್ಯ ನೋಡಿಕೊಳ್ತಾರೆ. ಪತಿ ಶಿವಲಿಂಗಪ್ಪ ಅವ್ರು ಅಗತ್ಯ ವಸ್ತುಗಳ ಖರೀದಿ ಮತ್ತು ಫ್ಯಾಕ್ಟರಿ ಕೆಲಸಕ್ಕೆ ಸಹಕರಿಸ್ತಾರೆ. ಮನೆಯಲ್ಲಿ ಸುಮ್ಮನೆ ಕಾಲ ಕಳೆಯಬಾರದೆಂದು ಶುರುಮಾಡಿದ ಕೆಲಸಕ್ಕೆ ಸರ್ಕಾರದ ಬೆಂಬಲ ಸಿಕ್ಕಿದ್ದರಿಂದ ದೊಡ್ಡದಾಗಿ ಬೆಳೆದಿದೆ ಎಂದು ಖುಷಿ ಹಂಚಿಕೊಂಡರು ಶಿಲ್ಪಾ ಮಂಟಗಣಿ. ಪ್ರಸ್ತುತ ಫ್ಯಾಕ್ಟರಿಯಲ್ಲಿ 35 ಜನ ಕೆಲಸ ಮಾಡುತ್ತಿದ್ದಾರೆ. 30 ಜನ ಮಹಿಳೆಯರಿಗೆ ಅವಕಾಶ ನೀಡಲಾಗಿದೆ.
ಆರ್ಡರ್ ಜಾಸ್ತಿ ಆದಾಗ ಹೆಚ್ಚು ಜನರನ್ನು ಕೆಲಸಕ್ಕೆ ಪಡೆಯುವುದೂ ಆಗಾಗ ನಡೆಯುತ್ತದೆ. ಆನ್ಲೈನ್ನಲ್ಲಿ ಮಾರುವುದೆಲ್ಲ ಖಡಕ್ ರೊಟ್ಟಿಗಳು. ಅನೇಕ ಬಗೆ ಬಗೆಯ ರೊಟ್ಟಿಗಳನ್ನು ಆರ್ಡರ್ಗೆ ತಕ್ಕಂತೆ ತಯಾರಿಸಿಕೊಡುತ್ತೇವೆ. ಹೋಳಿಗೆ ಸೇರಿದಂತೆ 10ಕ್ಕೂ ಹೆಚ್ಚು ಸಿಹಿ ತಿನಿಸುಗಳನ್ನು ಮಾಡುತ್ತೇವೆ. ಚಟ್ನಿಪುಡಿಗಳಿಗೂ ರೊಟ್ಟಿಯಷ್ಟೇ ಬೇಡಿಕೆ ಇದೆ. ಹೊಸ ಹೊಸ ತಿನಿಸು ಏನು ಮಾಡಬಹುದು ಎಂದು ನಮ್ಮಲ್ಲಿ ಆಗಾಗ ಪ್ರಯೋಗಗಳು ಆಗುತ್ತಲೇ ಇರುತ್ತವೆ. ರುಚಿ ಮತ್ತು ಆರೋಗ್ಯ ಎರಡನ್ನೂ ಗಮನದಲ್ಲಿಟ್ಟುಕೊಂಡು ಉತ್ಪನ್ನ ರೂಪಿಸಿ ಮಾರುಕಟ್ಟಿಗೆ ಬಿಡುತ್ತಿದ್ದೇವೆ ಎಂದರು ಶಿಲ್ಪಾ.
ರೊಟ್ಟಿ, ಸಿಹಿ ತಿನಿಸಿನಷ್ಟೇ ಸಿರಿಧಾನ್ಯ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಸಿರಿಧಾನ್ಯದ ಕಿಚಡಿ, ಸಿರಿಧಾನ್ಯದ ಉಪ್ಪಿಟ್ಟು ಮಿಕ್ಸ್, ಸಿರಿಧಾನ್ಯ – ಅರಿಶಿಣ ಮಿಶ್ರಿತ ಹಾಲಿನ ಪೇಯಕ್ಕೂ ಬೇಡಿಕೆ ಇದೆ. ಇವೆಲ್ಲಕ್ಕೂ ಅಗತ್ಯ ಪರೀಕ್ಷೆ, ಸರ್ಟಿಫಿಕೇಟ್ ಪಡೆದುಕೊಂಡಿದ್ದೇವೆ. ರುಚಿಯ ಜೊತೆಗೆ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡಿರುವುದೋ ನಮ್ಮ ಯಶಸ್ಸಿಗೆ ಕಾರಣ ಎಂದುಕೊಂಡಿದ್ದೇವೆ. ಅತ್ಯುತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ, ಅತ್ಯುತ್ತಮ ರಫ್ತು ಉದ್ಯಮಿ ಪ್ರಶಸ್ತಿ ಸೇರಿದಂತೆ ಈವರೆಗೆ ನಾಲ್ಕು ಅವಾರ್ಡ್ಗಳನ್ನು ನಮ್ಮ ಜವಾರಿ ಫುಡ್ಸ್ ಪಡೆದುಕೊಂಡಿದೆ ಎಂದರು ಚನ್ನಯ್ಯ ಎಮ್ಮೆಟಿ ಹಿರೇಮಠ.
ಜವಾರಿ ಉತ್ಪನ್ನಗಳಿಗೆ ಸಂಪರ್ಕಿಸಿ – 9591947855 ಅಥವಾ 9448341702 ಅಥವಾ www.jawarifoods.com ಲಾಗಿನ್ ಆಗಿ ನೇರವಾಗಿ ಖರೀದಿಸಿ.
15 ಲಕ್ಷ ರೂ. ಸಬ್ಸಿಡಿ ಪಡೆಯಿರಿ
ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.